ಶುಕ್ರವಾರ, ಡಿಸೆಂಬರ್ 6, 2019
20 °C

ಬತ್ತಿಹೋದ ಕೆರೆ–ಕಟ್ಟೆಗಳಿಗೂ ಕುತ್ತು?

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬತ್ತಿಹೋದ ಕೆರೆ–ಕಟ್ಟೆಗಳಿಗೂ ಕುತ್ತು?

ಬೆಂಗಳೂರು: ‘ಡೀಮ್ಡ್ ಅರಣ್ಯ’ ಪ್ರದೇಶದ ಐದು ಲಕ್ಷ ಹೆಕ್ಟೇರ್‌ಗಳಷ್ಟು ವಿಶಾಲ ಕಾಡನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡುವ ತೀರ್ಮಾನವನ್ನು  ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡ ಬೆನ್ನಲ್ಲೇ  ಜಲಮೂಲಗಳಾದ ಕೆರೆ, ಕಟ್ಟೆ, ಕುಂಟೆ ಮತ್ತು ಹಳ್ಳಗಳಿಗೂ ಕುತ್ತು ತರಲು ಸರ್ಕಾರ ಯತ್ನ ನಡೆಸಿದೆ.

ನೀರಿಲ್ಲದೇ ಬತ್ತಿಹೋಗಿರುವ, ಮೂಲ ಸ್ವರೂಪ, ಗುಣಲಕ್ಷಣಗಳನ್ನು ಕಳೆದುಕೊಂಡಿರುವ ಸರ್ಕಾರಿ ಕೆರೆ, ಕಟ್ಟೆ, ಹಳ್ಳಗಳ ಮೇಲೆ ಸರ್ಕಾರಕ್ಕೆ ಇದ್ದ ಹಕ್ಕನ್ನು ರದ್ದುಪಡಿಸುವುದಕ್ಕಾಗಿ ‘ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ  ತರಲು ಕಂದಾಯ ಇಲಾಖೆ ನಡೆಸಿದೆ.

ಈ ಸಂಬಂಧ ಅಭಿಪ್ರಾಯ ನೀಡುವಂತೆ ಕೋರಿ,  ಹಣಕಾಸು, ನಗರಾಭಿವೃದ್ಧಿ, ಸಣ್ಣ ನೀರಾವರಿ, ಅರಣ್ಯ ಮತ್ತು ಪರಿಸರ, ಕಾನೂನು ಮತ್ತು ಸಂಸದೀಯ, ಪಂಚಾಯತ್‌ರಾಜ್‌ ಇಲಾಖೆಗಳಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ  ಇದೇ ವರ್ಷದ ಏಪ್ರಿಲ್ 22ರಂದು ಪತ್ರ ಬರೆದಿದ್ದಾರೆ.

‘ಹಣಕಾಸು ಮತ್ತು ಕಾನೂನು ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಪಂಚಾಯತ್‌ರಾಜ್‌ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಉಳಿದ ಇಲಾಖೆಗಳ ಅಭಿ

ಪ್ರಾಯ ಬಂದ ಬಳಿಕ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು’ ಎಂದು ಕಂದಾಯ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ನಗರ ಬೆಳೆದಂತೆ ಮೂಲ ಸ್ವರೂಪ ಕಳೆದುಕೊಂಡ ಕೆರೆ, ಕಟ್ಟೆಗಳ ಜಾಗದಲ್ಲಿ ಬಡಾವಣೆಗಳು, ಬಸ್‌ ನಿಲ್ದಾಣ, ಕ್ರೀಡಾಂಗಣಗಳು ತಲೆ ಎತ್ತಿವೆ. ಸರ್ಕಾರಿ ದಾಖಲೆಗಳಲ್ಲಿ ಕೆರೆ, ಸರೋವರಗಳು ಎಂದು ಉಲ್ಲೇಖವಾಗಿರುವ ಪ್ರದೇಶಗಳ ಒತ್ತುವರಿ ತೆರವುಗೊಳಿಸಿ, ಜಲಮೂಲ

ಗಳನ್ನು ಪುನರುಜ್ಜೀವನಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶಿಸಿದೆ. ಈಗ ಅವನ್ನು ತೆರವುಗೊಳಿಸಲು ಸಾಧ್ಯವಿಲ್ಲದೇ ಇರುವುದರಿಂದ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ’ ಎಂದೂ  ಮೂಲಗಳು ಹೇಳಿವೆ.

ಕಾಯ್ದೆ ಹೇಳುವುದೇನು?: ‘ಎಲ್ಲ ಸಾರ್ವಜನಿಕ ರಸ್ತೆಗಳು, ಬೀದಿಗಳು, ಓಣಿಗಳು, ಹಾದಿಗಳು,  ಹಳ್ಳಗಳು, ಒಡ್ಡುಗಳು, ಸಮುದ್ರ ಮತ್ತು ಬಂದರು, ನದಿ ದಂಡೆಗಳು, ತೊರೆಗಳು, ನಾಲೆಗಳು, ಸರೋವರಗಳು, ಕೆರೆಗಳು, ಕಾಲುವೆಗಳು, ಸಣ್ಣ ಹೊಳೆಗಳು ಖಾಸಗಿ ವ್ಯಕ್ತಿಯ ಒಡೆತನ

ದಲ್ಲಿ ಇಲ್ಲದಿದ್ದರೆ ಅವು ರಾಜ್ಯ ಸರ್ಕಾರದ ಸ್ವತ್ತಾಗಿರುತ್ತವೆ. ಅದನ್ನು  ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ಇರುವುದಿಲ್ಲ’ ಎಂದು ಕಾಯ್ದೆ ಹೇಳಿದೆ.

ಈ ಹಿಂದೆಯೇ ಕಾಯ್ದೆಯ ಕಲಂ 68ಕ್ಕೆ  ತಿದ್ದುಪಡಿ ತಂದು, ಮೂಲಸ್ವರೂಪ ಕಳೆದುಕೊಂಡ ರಸ್ತೆ, ಬೀದಿ, ಓಣಿ, ಹಾದಿ ಇವುಗಳನ್ನು ಖಾಸಗಿ

ಯವರಿಗೆ ಅಥವಾ ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳಲಾಗಿತ್ತು.

‘ಕಂದಾಯ ಇಲಾಖೆಯ ದಾಖಲೆ ಗಳಲ್ಲಿ ಇರುವಂತಹ ಸರ್ಕಾರಿ ಕೆರೆ, ಕಟ್ಟೆ, ಕುಂಟೆ, ಹಳ್ಳಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ನೀರು ಹರಿಯುತ್ತಿಲ್ಲ. ಇವೆಲ್ಲವೂ ಮೂಲ ಸ್ವರೂಪ ಕಳೆದುಕೊಂಡು ಪುನರುಜ್ಜೀವನ ಮಾಡದ ಸ್ಥಿತಿ ತಲುಪಿವೆ. ಇಂತಹ ಕಡೆ ಅನಧಿಕೃತವಾಗಿ ಬಡಾವಣೆ ನಿರ್ಮಾಣವಾಗುತ್ತಿದ್ದು, ಸಮಸ್ಯೆ ಸೃಷ್ಟಿಯಾಗುತ್ತಿವೆ ಎಂದು ವಿವಿಧ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಹೇಳಲಾಗಿದೆ’ ಎಂದು ಇಲಾಖೆ ಸಿದ್ಧಪಡಿಸಿದ ಟಿಪ್ಪಣಿ ವಿವರಿಸಿದೆ.

ಪಂಚಾಯತ್‌ ರಾಜ್‌ ಇಲಾಖೆ ವಿರೋಧ 

‘ಕೆರೆ, ಕಟ್ಟೆಗಳ ಮೇಲಿನ ಹಕ್ಕು ಗಳನ್ನು ಕೈಬಿಡುವ ಕ್ರಮ ಸರಿಯಾದುದಲ್ಲ’ ಎಂದು ಪಂಚಾಯತ್‌ ರಾಜ್‌ ಸಚಿವ ಎಚ್.ಕೆ. ಪಾಟೀಲ, ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.

‘ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ತೀವ್ರ ಬರಗಾಲವಿದ್ದು, ಕುಡಿಯುವ ನೀರು ಇಲ್ಲದೇ ತತ್ತರಿಸುವ ಸ್ಥಿತಿ ಇದೆ. ರೈತರು ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ.  ಇದಕ್ಕೆ ಅವಕಾಶ ನೀಡಿದರೆ ಜಲ ಮರುಪೂರಣ ಮಾಡಲು ಸಾಧ್ಯವಾಗದೇ ಹಲವಾರು ಅಕ್ರಮ ಬಡಾವಣೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗಾಗಿ ಇಲಾಖೆ ಇದಕ್ಕೆ ಸಹಮತ ವ್ಯಕ್ತಪಡಿಸುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)