ಶನಿವಾರ, ಡಿಸೆಂಬರ್ 7, 2019
24 °C

ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಭಾರತದ ಅಥ್ಲೀಟ್‌ಗಳಿಗೆ ಸನ್ಮಾನ

Published:
Updated:
ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಭಾರತದ ಅಥ್ಲೀಟ್‌ಗಳಿಗೆ ಸನ್ಮಾನ

ಭುವನೇಶ್ವರ: ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಸೋಮವಾರ ನಗದು ಬಹುಮಾನ ನೀಡಿ ಗೌರವಿಸಿದರು.

ಚಿನ್ನದ ಪದಕ ಗೆದ್ದವರಿಗೆ ತಲಾ ₹ 10 ಲಕ್ಷ, ಬೆಳ್ಳಿ ಗೆದ್ದವರಿಗೆ ತಲಾ ₹ 7.5 ಲಕ್ಷ ಹಾಗೂ ಕಂಚಿನ ಪದಕ ಗಳಿಸಿದ ವರಿಗೆ ತಲಾ ₹ 5 ಲಕ್ಷ ವಿತರಿಸಲಾಯಿತು.

ಚಾಂಪಿಯನ್‌ಷಿಪ್‌ನಲ್ಲಿ ಭಾರತ 12 ಚಿನ್ನ, ಐದು ಬೆಳ್ಳಿ ಮತ್ತು 12 ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಮೂಲಕ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿ ಅಗ್ರಸ್ಥಾನಕ್ಕೆ ಏರಿತ್ತು. ಚೀನಾದ ಪ್ರಾಬಲ್ಯವನ್ನು ಮುರಿದಿತ್ತು.

‘ಪದಕ ಗೆದ್ದವರಿಗೆ, ಭಾರತ ತಂಡ ದಲ್ಲಿದ್ದ ಇತರ ಅಥ್ಲೀಟ್‌ಗಳಿಗೆ ಮತ್ತು ಭಾರತ ಅಥ್ಲೆಟಿಕ್‌ ಫೆಡರೇಷನ್‌ ಪದಾಧಿಕಾರಿಗಳಿಗೆ ಅಭಿನಂದನೆಗಳು’ ಎಂದು ಪಟ್ನಾಯಕ್‌ ಹೇಳಿದರು.

ಮುಖ್ಯಮಂತ್ರಿಗಳು ಸನ್ಮಾನಿಸಿದ್ದರಿಂದ ನಾನು ರೋಮಾಂಚನ ಗೊಂಡಿದ್ದೇನೆ. ಚಿನ್ನ ತಂದುಕೊಟ್ಟ ಕಳಿಂಗ ಕ್ರೀಡಾಂಗಣವನ್ನು ನಾನು ಎಂದಿಗೂ ಮರೆಯಲಾರೆ. ಒಡಿಶಾ ಸರ್ಕಾರ ನೀಡಿದ ನಗದು ಬಹುಮಾನ ನನಗೆ ಅನೇಕ ರೀತಿಯಲ್ಲಿ ನೆರವಾಗಲಿದೆ’ ಎಂದು ಜಾವೆಲಿನ್‌ ಥ್ರೋದಲ್ಲಿ ಚಿನ್ನ ಗಳಿಸಿದ ನೀರಜ್ ಚೋಪ್ರಾ ಹೇಳಿದರು.

‘ಕಳಿಂಗ ಕ್ರೀಡಾಂಗಣದಲ್ಲಿ ಸಾಕಷ್ಟು ಪ್ರೇಕ್ಷಕರು ಸೇರಿದ್ದು ಖುಷಿಯಾಗಿತ್ತು. ಭಾರತದ ಅಥ್ಲೀಟ್‌ಗಳಿಗೆ ಅವರು ನೀಡಿದ ಸಹಕಾರವನ್ನು ಎಂದಿಗೂ ಮರೆಯಲಾರೆ. ಸರ್ಕಾರ ಬಹುಮಾನದ ರೂಪದಲ್ಲಿ ನೀಡಿರುವ ನಗದು ಮೊತ್ತ ಉತ್ತಮವಾಗಿದೆ’ ಎಂದು 5,000 ಮೀಟರ್ಸ್‌ ಹಾಗೂ 10,000 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಜಿ.ಲಕ್ಷ್ಮಣನ್‌ ನುಡಿದರು.

ಪ್ರತಿಕ್ರಿಯಿಸಿ (+)