ಶನಿವಾರ, ಡಿಸೆಂಬರ್ 7, 2019
24 °C
ಈ ತಿಂಗಳಲ್ಲೇ ಬಿಬಿಎಂಪಿಗೆ ಸಲ್ಲಿಕೆ?

ಸಿಡಿಪಿ ಕರಡು: ಅಂತಿಮ ಸ್ಪರ್ಶ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಸಿಡಿಪಿ ಕರಡು: ಅಂತಿಮ ಸ್ಪರ್ಶ

ಬೆಂಗಳೂರು: ನಗರದ  ಪರಿಷ್ಕೃತ ಮಹಾ ಯೋಜನೆ 2031ರ ಕರಡು ರೂಪಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.

ಈ ತಿಂಗಳ ಅಂತ್ಯದಲ್ಲೇ ಕರಡನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಲ್ಲಿಸಿ ಅಂಗೀಕಾರ ಪಡೆಯಲು  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಗರ ಯೋಜನಾ ಶಾಖೆ ಸಿದ್ಧತೆ ನಡೆಸಿದೆ.

ಸಿಡಿಪಿ  ಕರಡು ಸಿದ್ಧಪಡಿಸುವ ಸಲುವಾಗಿ ಬಿಡಿಎ 2017ರ ಜನವರಿಯಲ್ಲಿ ನಗರದ ಎಂಟು ವಲಯಗಳಲ್ಲಿ  ಸಭೆಗಳನ್ನು ನಡೆಸಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಅಲ್ಲದೇ ಜನರಿಂದ ನೇರವಾಗಿಯೂ ಸಲಹೆಗಳನ್ನು ಆಹ್ವಾನಿಸಿತ್ತು.

‘ನಗರ ಇನ್ನಷ್ಟು ವಿಸ್ತಾರವಾಗಿ ಬೆಳೆಯದಂತೆ ಕಡಿವಾಣ ಹಾಕಬೇಕು, ಭೂಬಳಕೆಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕು. ನಗರದ ಆಡಳಿತದ ಹೊಣೆ ಹೊತ್ತಿರುವ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು.  ವಾಹನ ದಟ್ಟಣೆಗೆ ಕಡಿವಾಣ ಹಾಕಬೇಕು. ಸೈಕಲ್‌ ಪಥಗಳನ್ನು ಅಭಿವೃದ್ಧಿಪಡಿಸಬೇಕು, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.

480 ಸಲಹೆ: ‘2031ರ ವೇಳೆಗೆ ನಗರದ ಬೆಳವಣಿಗೆಯ ಸ್ಥಿತಿಗತಿ ಹೇಗಿರುತ್ತದೆ, ಅದಕ್ಕೆ ಪೂರಕವಾಗಿ ನಗರದ ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗಬೇಕಾಗುತ್ತದೆ. ಇದಕ್ಕೆ ಏನೆಲ್ಲ ಸಿದ್ಧತೆ ಅಗತ್ಯ ಇದೆ ಎಂಬುದನ್ನು ಪಟ್ಟಿ ಮಾಡಿ ಜನರ ಮುಂದಿಟ್ಟಿದ್ದೆವು. ಬಂದಿರುವ 480 ಸಲಹೆಗಳನ್ನು ಪರಿಗಣಿಸಿ  ಸಿಡಿಪಿ ಕರಡಿಗೆ ಅಂತಿಮ ರೂಪ ನೀಡುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಕರಡಿಗೆ ಬಿಬಿಎಂಪಿಯ ಅಂಗೀಕಾರ ಸಿಗಬೇಕು. ಈ ಬಗ್ಗೆ ಚರ್ಚಿಸಲು 45 ದಿನ ಕಾಲಾವಕಾಶ ನೀಡಬೇಕು. ಬಳಿಕ  ಕರಡನ್ನು ನಗರಾಭಿವೃದ್ಧಿ ಇಲಾಖೆಗೆ  ಕಳುಹಿಸುತ್ತೇವೆ.  ಅಲ್ಲಿಂದ ಅಂಗೀಕಾರವಾಗಿ ಬಂದ ಕರಡನ್ನು ಸಾರ್ವಜನಿಕರ ಮುಂದಿಟ್ಟು ಮತ್ತೆ ಸಲಹೆ ಸ್ವೀಕರಿಸಲಾಗುತ್ತದೆ. ಇದಕ್ಕೆ ಮತ್ತೆ ಎರಡು ತಿಂಗಳು ಕಾಲಾವಕಾಶ ನೀಡಲಿದ್ದೇವೆ’ ಎಂದು ಅವರು ವಿವರಿಸಿದರು.

‘ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕನಿಷ್ಠ ನಾಲ್ಕು ತಿಂಗಳುಗಳು ತಗಲುತ್ತವೆ.  ಈ ವರ್ಷದ ಡಿಸೆಂಬರ್‌ ಅಂತ್ಯದೊಳಗೆ ನಗರ ಮಹಾ ಯೋಜನೆ ಸಿದ್ಧಪಡಿಸುವ ಗುರಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘2031ರ ವೇಳೆಗೆ ನಗರದ ಜನಸಂಖ್ಯೆ 2 ಕೋಟಿಗೆ ತಲುಪುವ ನಿರೀಕ್ಷೆಯನ್ನು ಇಟ್ಟುಕೊಂಡು ನಗರ ಮಹಾಯೋಜನೆ ಸಿದ್ಧಪಡಿಸಲಾಗುತ್ತಿದೆ.  ಇಷ್ಟೊಂದು ಜನಸಂಖ್ಯೆಗೆ ಎಷ್ಟು ಕುಡಿಯುವ ನೀರು ಬೇಕಾಗುತ್ತದೆ,  ರಸ್ತೆ ಹಾಗೂ ಸಾರಿಗೆ  ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ತರಬೇಕಾಗುತ್ತದೆ ಎಂಬುದನ್ನೆಲ್ಲ  ಗಮನದಲ್ಲಿಟ್ಟುಕೊಂಡು  ಸಿಡಿಪಿ ಕರಡು ರಚಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಕೆರೆ, ರಾಜಕಾಲುವೆ ಮೀಸಲು ಪ್ರದೇಶ  ಎನ್‌ಜಿಟಿ ಆದೇಶ ಪಾಲನೆ

‘ಸಿಡಿಪಿ ರೂಪಿಸುವಾಗ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ತೀರ್ಪಿನ ಅನುಸಾರ ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶ ನಿಗದಿಪಡಿಸಲಾಗುತ್ತಿದೆ ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಹಸಿರು ನ್ಯಾಯಮಂಡಳಿ ತೀರ್ಪನ್ನು ಪೂರ್ವಾನ್ವಯಗೊಳಿಸಿದರೆ ಬಿಡಿಎ ಈ ಹಿಂದೆ ಹಂಚಿಕೆ ಮಾಡಿದ್ದ ನಿವೇಶನಗಳಿಗೂ ಕುತ್ತು ಬರಲಿದೆ. ಸದ್ಯಕ್ಕೆ ಈ ಕುರಿತು ರಾಜ್ಯ  ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಆದರೂ ನಾವು ಸದ್ಯಕ್ಕೆ ಎನ್‌ಜಿಟಿ

ಆದೇಶದನ್ವಯವೇ ಮೀಸಲು ಪ್ರದೇಶ ನಿಗದಿ ಮಾಡಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

ಪ್ರತಿಕ್ರಿಯಿಸಿ (+)