ಸೋಮವಾರ, ಡಿಸೆಂಬರ್ 16, 2019
25 °C

ನೈಸ್‌ ಕಂಪೆನಿಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೈಸ್‌ ಕಂಪೆನಿಗೆ ನೋಟಿಸ್‌

ಬೆಂಗಳೂರು: ಏಳು ದಿನದೊಳಗೆ ಟೋಲ್‌ ದರ ಏರಿಕೆ ಹಿಂತೆಗೆದುಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ‘ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌’ಗೆ  (ನೈಸ್‌) ಲೋಕೋಪಯೋಗಿ ಇಲಾಖೆ ನೋಟಿಸ್‌ ಜಾರಿ ಮಾಡಿದೆ.

ನೈಸ್‌ ಕಂಪೆನಿ ಜುಲೈ 1 ರಿಂದ ಶೇ 33 ರಷ್ಟು ಟೋಲ್‌ ದರ ಹೆಚ್ಚಳ ಮಾಡಿರುವುದಕ್ಕೆ  ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವು

ದರಿಂದ ಈ ಕಂಪೆನಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ  ಮುಂದಾಗಿದೆ.

‘ಕ್ರಿಯಾ ಒಪ್ಪಂದ (ಫ್ರೇಮ್‌ ವರ್ಕ್‌ ಅಗ್ರಿಮೆಂಟ್‌) ಜಾರಿಗೊಳಿಸದೇ ಕರ್ತವ್ಯ ಲೋಪ ಎಸಗಿರುವ  ಸಂಬಂಧ  ಹೈಕೋರ್ಟ್‌ನಲ್ಲಿ ಸಲ್ಲಿಸಿರುವ  ರಿಟ್‌ ಅರ್ಜಿ ಇನ್ನೂ ಇತ್ಯರ್ಥ ಆಗಿಲ್ಲ. ಅಷ್ಟರಲ್ಲೇ ಟೋಲ್‌ ದರ  ಹೆಚ್ಚಿಸಿರುವುದು ಅಕ್ರಮ.  ಕೂಡಲೇ ಈ ತೀರ್ಮಾನ ಹಿಂದಕ್ಕೆ ಪಡೆಯಬೇಕು’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಕ್ರಿಯಾ ಒಪ್ಪಂದದ ಅನ್ವಯ ನಿರ್ದಿಷ್ಟ ಅವಧಿಯೊಳಗೆ ಡಾಂಬರ್‌ ರಸ್ತೆಯನ್ನು ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸುವುದಾಗಿ ನೈಸ್‌ ಕಂಪೆನಿ 2002 ರ ಜೂನ್‌ 4 ರಂದು ಮುಚ್ಚಳಿಕೆ ಬರೆದುಕೊಟ್ಟಿತ್ತು.

ಅದರಂತೆ, ಕಂಪೆನಿಯು ಪೆರಿಫರಲ್‌ ಮತ್ತು ಲಿಂಕ್‌ ರಸ್ತೆಯನ್ನು 2012 ರ ಮಾರ್ಚ್‌ 29 ರೊಳಗೆ ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸಬೇಕಿತ್ತು.  ಇದುವರೆಗೂ ರಸ್ತೆ ಪರಿವರ್ತನೆ  ಆಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಲೋಕೋಪಯೋಗಿ ಇಲಾಖೆ  2016 ರ ಫೆಬ್ರುವರಿ 5 ರಂದು  ಕರ್ತವ್ಯಲೋಪದ ನೋಟಿಸ್‌ ನೀಡಿದೆ.

‘ಈ ನೋಟಿಸ್‌ ಪ್ರಶ್ನಿಸಿ ನೈಸ್‌  ಕಂಪೆನಿ  ಹೈಕೋರ್ಟ್‌ನಲ್ಲಿ ದಾಖಲಿಸಿರುವ ರಿಟ್‌ ಅರ್ಜಿ ವಿಚಾರಣೆ ಬಾಕಿ ಇದೆ. ಈ ಸಂದರ್ಭದಲ್ಲಿ  ಟೋಲ್‌ ದರ ಹೆಚ್ಚಿಸುವುದಕ್ಕೆ ಅವಕಾಶವಿಲ್ಲ. 2000 ಇಸವಿಯಲ್ಲಿ ಆಗಿರುವ ಟೋಲ್‌ ರಿಯಾಯ್ತಿ ಒಪ್ಪಂದದಂತೆ ದರ ಪರಿಷ್ಕರಣೆ ಮತ್ತು ಏರಿಕೆ ರಾಜ್ಯ ಸರ್ಕಾರದ ಅಧಿಸೂಚನೆ ಮೂಲಕವೇ ಆಗಬೇಕು. ಆಗ ಮಾತ್ರ ಅದಕ್ಕೆ ಮಾನ್ಯತೆ ಇರುತ್ತದೆ’ ಎಂದು  ಸ್ಪಷ್ಟಪಡಿಸಲಾಗಿದೆ.

‘ರಾಜ್ಯ ಸರ್ಕಾರ 2008 ರ ಡಿಸೆಂಬರ್‌ನಲ್ಲಿ  ಅಧಿಸೂಚನೆ ಹೊರಡಿಸಿ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡಿದೆ. 10––08–2009, 12–01–2010 ಮತ್ತು 13–12–2010 ರಲ್ಲಿ ಟೋಲ್‌ ದರ ಏರಿಕೆ ಮಾಡಲು ಸರ್ಕಾರ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿತ್ತು. ನೀವು ಡಾಂಬರ್‌ ರಸ್ತೆಯನ್ನು ಕಾಂಕ್ರೀಟ್‌ ಆಗಿ ಪರಿವರ್ತಿಸುತ್ತೀರಿ ಎಂದು ಮುಚ್ಚಳಿಕೆ ಪತ್ರ  ಕೊಟ್ಟಿದ್ದರಿಂದಲೇ ಟೋಲ್‌ ಸಂಗ್ರಹಿಸಲು ಮತ್ತು ದರ ಏರಿಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು’ ಎಂದು  ಲೋಕೋಪಯೋಗಿ ಇಲಾಖೆ ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)