ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮುಜುಗರ ತಂದ ಸಂವಹನದ ಎಡವಟ್ಟು

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಭಾರತಕ್ಕೆ  ಚೀನಾದ ರಾಯಭಾರಿ ಲುವೊ ಜೌಹುಯಿ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿಯ ಬಗ್ಗೆ ನೀಡಿದ ವಿವಿಧ ಸ್ಪಷ್ಟೀಕರಣಗಳು ಆ ಪಕ್ಷಕ್ಕೆ ಭಾರಿ ಮುಜುಗರ ಉಂಟು ಮಾಡಿದೆ.

ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ಸ್ಥಿತಿ ನಿರ್ಮಾಣವಾಗಿರುವುದರ ನಡುವೆಯೇ ಈ ಭೇಟಿ ನಡೆದಿದೆ. ಈ ಭೇಟಿ ನಡೆದೇ ಇಲ್ಲ ಎಂದು ಆರಂಭದಲ್ಲಿ ಕಾಂಗ್ರೆಸ್‌ ಹೇಳಿತು. ಸುದ್ದಿ ಪ್ರಸಾರ ಮಾಡಿದ ಸುದ್ದಿ ವಾಹಿನಿಯ ವಿರುದ್ಧವೂ ಹರಿಹಾಯ್ದಿತು. ಕೊನೆಗೆ ರಾಹುಲ್‌ ಅವರೇ ಭೇಟಿ
ಯನ್ನು ದೃಢಪಡಿಸಿದರು.

‘ರಾಹುಲ್‌ ಅವರನ್ನು ಭೇಟಿ ಮಾಡಿ ಸದ್ಯದ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ಮಾಡಲಾಗಿದೆ’ ಎಂದು ಚೀನಾ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು ಕಾಂಗ್ರೆಸ್‌ ಪಕ್ಷದ ಗಮನಕ್ಕೆ ಬಂದಿರಲಿಲ್ಲ.

ಹಾಗಾಗಿ ಈ ಬಗ್ಗೆ ಸುದ್ದಿ ಪ್ರಕಟವಾದ ಕೂಡಲೇ, ‘ಭೇಟಿ ನಡೆದಿಲ್ಲ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೆವಾಲಾ ಟ್ವೀಟ್‌ ಮಾಡಿದರು.

‘ಚೀನಾ ರಾಯಭಾರಿಯನ್ನು ಕಾಂಗ್ರೆಸ್‌ ಉಪಾಧ್ಯಕ್ಷ ಭೇಟಿಯಾಗಿದ್ದರೂ ಅದರಲ್ಲಿ ಯಾವುದೇ ವಿವಾದ ಕಾಣಿಸುತ್ತಿಲ್ಲ’ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಟ್ವೀಟ್‌ ಮಾಡಿ ಮತ್ತಷ್ಟು ಗೊಂದಲಕ್ಕೆ ಕಾರಣವಾದರು.

ಬಳಿಕ ಸುರ್ಜೆವಾಲಾ ಅವರು ಟ್ವೀಟ್‌ ಮಾಡಿ ‘ಇದೊಂದು ಸಹಜ ಪ್ರಕ್ರಿಯೆ’ ಎಂದು ಹೇಳಿದರು. ಅದಾಗಿ ಕೆಲವೇ ನಿಮಿಷಗಳ ಬಳಿಕ ಚೀನಾ ರಾಯಭಾರಿಯನ್ನು ಭೇಟಿಯಾಗಿದ್ದನ್ನು ರಾಹುಲ್‌ ದೃಢಪಡಿಸಿದರು.

ಆದರೆ ಅದಕ್ಕೂ ಮೊದಲು ಟ್ವೀಟ್‌ ಮಾಡಿದ್ದ ಸುರ್ಜೆವಾಲಾ ಅವರು, ‘ಕೇಂದ್ರದ ಮೂವರು ಸಚಿವರು ಚೀನಾಕ್ಕೆ ಭೇಟಿ ನೀಡುತ್ತಿರುವುದು ಅಥವಾ ಜಿ20 ಶೃಂಗ ಸಭೆಯಲ್ಲಿ ಚೀನಾ ಅಧ್ಯಕ್ಷರನ್ನು ಪ್ರಧಾನಿ ಹೊಗಳಿದ್ದನ್ನು ಭಕ್ತವರ್ಗಕ್ಕೆ (ಬಿಜೆಪಿ ಪರ) ಸೇರಲು ಬಯಸುತ್ತಿರುವ ಸುದ್ದಿ ವಾಹಿನಿ ಪ್ರಶ್ನಿಸುವುದಿಲ್ಲ’ ಎಂದಿದ್ದರು.

‘ಪ್ರಮುಖ ವಿಚಾರಗಳ ಬಗ್ಗೆ ನಾನು ಮಾಹಿತಿ ಹೊಂದಿರಲೇಬೇಕು. ಹಾಗಾಗಿ ಚೀನಾ ರಾಯಭಾರಿ, ರಾಷ್ಟ್ರೀಯ ಭದ್ರತೆಯ ಮಾಜಿ ಸಲಹೆಗಾರ, ಈಶಾನ್ಯ ರಾಜ್ಯಗಳ ಕಾಂಗ್ರೆಸ್‌ ಮುಖಂಡರು ಮತ್ತು ಭೂತಾನ್‌ ರಾಯಭಾರಿಯನ್ನು ಭೇಟಿಯಾಗಿದ್ದೇನೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದರು.
ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಆನಂದ್‌ ಶರ್ಮಾ, ‘ಸಂವಹನದ ಸಮಸ್ಯೆಯಿಂದ ಹೀಗಾಯಿತು. ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳಲಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT