ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆತಾಯಿಯರನ್ನು ಪ್ರೀತಿಸು

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

‘ಮಾತೃ ದೇವೋಭವ’, ‘ಪಿತೃ ದೇವೋಭವ’. ಈ ಲೋಕದಲ್ಲಿ ನಮಗೆ ಕಣ್ಣಿಗೆ ಕಾಣಿಸೋ ದೇವರುಗಳು ನಮ್ಮ ತಂದೆ ತಾಯಿಗಳು. ಅವರ ಶ್ರೇಷ್ಠತೆಯನ್ನು  ಒಪ್ಪಿಕೊಳ್ಳಲು ಯಾವ ಜ್ಞಾನ ಹಾಗೂ ಬೋಧನೆಯ ಅಗತ್ಯವೂ ಇಲ್ಲ. ಕಾರಣ ಬಾಲ್ಯದಿಂದ ಅವರ ಪ್ರೀತಿ, ಆರೈಕೆಯನ್ನು ಅನುಭವಿಸಿ ಬಾಳಿದವರು ನಾವು. ಇದೇ ಕಾರಣದಿಂದ, ಸಮಾಜಕ್ಕೆ ದೊಡ್ಡ ವ್ಯಕ್ತಿಯಾದರೂ ತಂದೆ ತಾಯಿಗೆ ಮಕ್ಕಳಾಗಿಯೇ ಇರುವುದು. ನಮ್ಮನ್ನು ಹೊತ್ತು, ಹೆತ್ತು, ಸಾಕಿ ಸಲಹಿದ ಮಾತಾಪಿತೃಗಳಿಗೆ ವಾತ್ಸಲ್ಯ, ಕೃತಜ್ಞತೆ, ನಮ್ರತೆ ಹಾಗೂ ವಿಧೇಯತೆಯನ್ನು ತೋರುವುದು ಅತ್ಯಂತ ಸ್ವಾಭಾವಿಕ. ಬೆಳೆದ ಮಕ್ಕಳು ತಮ್ಮ ಜನ್ಮದಾತರ ಕಷ್ಟ-ಸಂಕಟ, ರೋಗ-ರುಜಿನ, ಒಂಟಿತನಗಳಲ್ಲಿ ಅವರ ಜೊತೆಗಿದ್ದು ಅವರ ಆರೈಕೆ ಮಾಡುವುದು ಅಷ್ಟೇ ಸ್ವಾಭಾವಿಕ.

ದೇವರ ಈ ಆಜ್ಞೆಯಲ್ಲಿ ಮಕ್ಕಳಿಗಾಗಿ ಮಾತಾಪಿತೃರ ಪ್ರೀತಿ ಮತ್ತು ಜವಾಬ್ದಾರಿ ಹಾಗೂ ತಂದೆತಾಯಿಗಳಿಗಾಗಿ ಮಕ್ಕಳ  ಕರ್ತವ್ಯ ಇವೆರಡೂ ಸೇರಿವೆ. ತಂದೆತಾಯಿಗಳ ಪ್ರೀತಿ ಅಸೀಮ­ವಾದುದು. ಆದರೂ ಮಕ್ಕಳನ್ನು ಹೆತ್ತು, ಅವರ ಬೆಳವಣಿಗೆಯ ಕಾಲದಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡದೆ, ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡುವ ತಂ­ತಾಯಿಗಳು ಇಲ್ಲದಿಲ್ಲ. ಮಕ್ಕಳನ್ನು ತಿದ್ದಿದರೆ ಅವರು ಕೋಪಗೊಳ್ಳುತ್ತಾರೆ, ಜೀವಹಾನಿ ಮಾಡಿ­ಕೊಳ್ಳುತ್ತಾರೆ, ಮನೆಬಿಟ್ಟು ಓಡಿ­­ಹೋಗುತ್ತಾರೆ ಎಂದು ಹಲವು ತಂದೆ­ತಾಯಿ­ಗಳು ತಮ್ಮ ಮಕ್ಕಳ ಬೆಳವಣಿಗೆಯಲ್ಲಿ ಧನಾತ್ಮಕವಾದ ಪಾತ್ರ­ವನ್ನು ವಹಿಸದೆ ಮಕ್ಕಳ ದುರ್ನಡತೆಗೆ ಕಾರಣರಾಗುತ್ತಾರೆ.

ಮಕ್ಕಳು ತಂದೆತಾಯಿಗಳಿಗೆ ಭಯಪಡದೆ ಇದ್ದು, ತಂದೆತಾಯಿಗಳು ಮಕ್ಕಳಿಗೆ ಭಯಪಡುವುದು ಇಂದಿನ ವಿಪ­ರ್ಯಾಸವಾಗಿದೆ. ತಾವು ಹೆತ್ತ ಮಕ್ಕಳನ್ನು ಸಜ್ಜನರನ್ನಾಗಿಸುವುದು ತಂದೆತಾಯಿಗಳಿಗೆ ದೇವರು ನೀಡಿರುವ ಮಹತ್ತರ ಜವಾಬ್ದಾರಿಯಾಗಿದೆ. ಇಳಿ­ವಯಸ್ಸಿನಲ್ಲಿ ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳುವರು ಎಂಬುದಕ್ಕಾಗಿ ಅಲ್ಲ; ಮಕ್ಕಳ ಮಾತಾಪಿತೃರಾಗುವ ಭಾಗ್ಯವನ್ನು ನೀಡಿದ ಭಗವಂತನ ಇಚ್ಛೆಯದು.

ಶ್ರೀಗ್ರಂಥದ ಯಾಜಕಕಾಂಡವು ‘ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತಂದೆಗೂ, ತಾಯಿಗೂ ಭಯಪಟ್ಟು ನಡೆಯಬೇಕು’ ಎಂದು ಆದೇಶಿಸಿದರೆ, ಧರ್ಮೋಪದೇಶ ಕಾಂಡವು ‘ತನ್ನ ತಂದೆತಾಯಿಗಳನ್ನು ನಿರ್ಲಕ್ಷಿಸುವವನು ಶಾಪಗ್ರಸ್ತನು’ ಎಂದು ಉದ್ದರಿಸಿ ‘ತನ್ನ ತಂದೆ ತಾಯಿಯನ್ನು ಶಪಿಸುವವನಿಗೆ ಮರಣ ದಂಡನೆ­ಯಾಗಬೇಕು’ ಎಂದು ಬೋಧಿಸುತ್ತದೆ. ತಂದೆ ತಾಯಿಗಳನ್ನು ಎಲ್ಲರೂ ಪ್ರೀತಿಸುತ್ತಾರಾದರೂ, ಮಕ್ಕಳು ಬೆಳೆದು ತಮ್ಮದೇ ಕುಟುಂಬವನ್ನು ರೂಪಿಸುವಾಗ, ಇಳಿವಯಸ್ಸಿನ ತಂದೆತಾಯಿಗಳನ್ನು ವೃದ್ಧಾಶ್ರಮಕ್ಕೋ, ಅನಾಥಾಲಯಕ್ಕೋ ಸೇರಿಸಿ, ಅವರ ಖರ್ಚಿಗೆ ಒಂದಿಷ್ಟು ದುಡ್ಡನ್ನು ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಹಲವಾರು ಕುಟುಂಬಗಳಲ್ಲಿ ವೃದ್ಧ ತಂದೆತಾಯಿಗಳ ಮಾತಿಗೆ ಚಿಕ್ಕಾಸೂ ಬೆಲೆ ಇಲ್ಲದೆ, ಅವರು ಮನೆಯ ಮೂಲೆಗೆ ಸೀಮಿತವಾಗಿರುತ್ತಾರೆ. ವೃದ್ಧ ತಂದೆತಾಯಂದಿರ ಆನಂದ ತಮ್ಮ ಮಕ್ಕಳೊಡನೆ ಇದ್ದು, ಅಲ್ಲಿಯೇ ಕೊನೆಯುಸಿರೆಳೆಯುವುದು. ಮಾತಾಪಿತೃರನ್ನು  ಪ್ರೀತಿಸು ಎಂಬ ದೈವಾಜ್ಞೆಯೂ ಪ್ರತಿಯೊಬ್ಬರ ಅಸ್ತಿತ್ವದಲ್ಲೇ ಅಡಕವಾಗಿರಬೇಕು.      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT