ಗುರುವಾರ , ಡಿಸೆಂಬರ್ 12, 2019
17 °C
ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದಿದ್ದ ಪೊಲೀಸರು

ಕಾಡುಗೋಡಿ ಇನ್‌ಸ್ಪೆಕ್ಟರ್‌ ಜೀಪು ಟೋಯಿಂಗ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡುಗೋಡಿ ಇನ್‌ಸ್ಪೆಕ್ಟರ್‌ ಜೀಪು ಟೋಯಿಂಗ್‌!

ಬೆಂಗಳೂರು: ಕಬ್ಬನ್‌ ಉದ್ಯಾನದ ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾಡುಗೋಡಿ ಇನ್‌ಸ್ಪೆಕ್ಟರ್‌ ಅವರ ಜೀಪನ್ನು ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆಯ ಪೊಲೀಸರು ಸೋಮವಾರ ಟೋಯಿಂಗ್‌ ಮಾಡಿದರು. ಗಾಂಜಾ ಮಾರಾಟ ಪ್ರಕರಣ ಸಂಬಂಧ ಇತ್ತೀಚೆಗೆ ಬಂಧಿಸಿದ್ದ ಆರೋಪಿಗಳನ್ನು ಕಾಡುಗೋಡಿ ಪೊಲೀಸರು, ಹಡ್ಸನ್‌ ವೃತ್ತ ಬಳಿಯ ಎಸಿಎಂಎಂ ನ್ಯಾಯಾಲಯಕ್ಕೆ ಸೋಮವಾರ ಬೆಳಿಗ್ಗೆ ಕರೆತಂದಿದ್ದರು.

ಈ ವೇಳೆ  ಕಬ್ಬನ್‌ ಉದ್ಯಾನದ ನೋ ಪಾರ್ಕಿಂಗ್‌ ಜಾಗದಲ್ಲಿ ಜೀಪು ನಿಲ್ಲಿಸಿ ನ್ಯಾಯಾಲಯದೊಳಗೆ ಹೋಗಿದ್ದರು.

ಇದರಿಂದ ವಕೀಲರು ಹಾಗೂ ಕಕ್ಷಿದಾರರ ಓಡಾಟಕ್ಕೆ  ತೊಂದರೆಯಾಗಿತ್ತು. ಆಗ, ಕೆಲ  ವಕೀಲರು ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಆಗ ‘ಟೈಗರ್‌’ ವಾಹನ ಸಮೇತ ಸ್ಥಳಕ್ಕೆ ಬಂದ ಸಿಬ್ಬಂದಿಯು ಜೀಪನ್ನು ಟೋಯಿಂಗ್‌ ಮಾಡಿಕೊಂಡು ಹೋಗಿ ಠಾಣೆಯ ಎದುರು ನಿಲ್ಲಿಸಿದ್ದರು.

ಎಚ್ಚರಿಕೆ ನೀಡಿ ಬಿಟ್ಟುಕಳುಹಿಸಿದರು: ನ್ಯಾಯಾಲಯದಿಂದ ಹೊರಬಂದ ಇನ್‌ಸ್ಪೆಕ್ಟರ್‌, ಜೀಪು ಇಲ್ಲದಿರುವುದನ್ನು ಕಂಡು ಕೆಲ ಸಮಯ ಗಾಬರಿಗೊಂಡರು. ಈ ಬಗ್ಗೆ ಠಾಣೆಯನ್ನು ವಿಚಾರಿಸಿದಾಗಲೇ ಟೋಯಿಂಗ್‌ ಮಾಡಿದ್ದ ವಿಷಯ ಗೊತ್ತಾಯಿತು.

‘ಆರೋಪಿಗಳು ತಪ್ಪಿಸಿಕೊಳ್ಳುವ ಆತಂಕವಿತ್ತು. ಇನ್‌ಸ್ಪೆಕ್ಟರ್‌ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ ಸಮೇತ ಎಲ್ಲರೂ ಸೇರಿಯೇ ಆರೋಪಿಗಳನ್ನು ನ್ಯಾಯಾಲಯದೊಳಗೆ ಕರೆದೊಯ್ದಿದ್ದೆವು.  ಜೀಪು ನಿಲ್ಲಿಸಿದ್ದ ಜಾಗದ ಕಡೆ ಗಮನ ಕೊಡಲು ಸಾಧ್ಯವಾಗಲಿಲ್ಲ.  ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ’ ಎಂದು  ಚಾಲಕ ಹೇಳಿದ್ದ ಬಳಿಕವೇ ಜೀಪನ್ನು ಬಿಟ್ಟುಕಳುಹಿಸಲಾಗಿದೆ.

‘ನೋ ಪಾರ್ಕಿಂಗ್‌ನಲ್ಲಿ ಯಾರೇ ವಾಹನ ನಿಲ್ಲಿಸಿದರೂ ಕ್ರಮ ಕೈಗೊಳ್ಳುತ್ತೇವೆ. ಅದೇ ರೀತಿ ಕರೆ ಬಂದ ಕೂಡಲೇ ಸಿಬ್ಬಂದಿಯು ಪೊಲೀಸ್‌ ಜೀಪು ಟೋಯಿಂಗ್‌ ಮಾಡಿಕೊಂಡು ಬಂದಿದ್ದರು. ಅಲ್ಲಿನ ಪೊಲೀಸರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರತಿಕ್ರಿಯಿಸಿ (+)