ಶನಿವಾರ, ಡಿಸೆಂಬರ್ 7, 2019
24 °C

ಹಣವಿದ್ದ ಲಾಕರ್ ತೆರೆಯಲು ಪೇಚಾಡಿ, ಹೊತ್ತೊಯ್ದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣವಿದ್ದ ಲಾಕರ್ ತೆರೆಯಲು ಪೇಚಾಡಿ, ಹೊತ್ತೊಯ್ದರು

ಬೆಂಗಳೂರು: ಬಿಟಿಎಂ ಲೇಔಟ್‌ ಬಳಿ ಭಾನುವಾರ ರಾತ್ರಿ ‘ಮಧುಲೋಕ ಬ್ಯೂಟೆಕ್’ ಮದ್ಯದಂಗಡಿಯ ಷಟರ್ ಮುರಿದು ಒಳನುಗ್ಗಿದ ದುಷ್ಕರ್ಮಿಗಳು  ಹಣವಿದ್ದ ಲಾಕರ್ ತೆಗೆಯಲು ಪೇಚಾಡಿ, ಅದು ಸಾಧ್ಯವಾಗದಿದ್ದಾಗ ಲಾಕರ್‌ ಅನ್ನೇ ಹೊತ್ತೊಯ್ದಿದ್ದಾರೆ.

‘ರಾತ್ರಿ 2.30 ಗಂಟೆಯ ಸುಮಾರಿಗೆ ಅಂಗಡಿಯ ಒಳ ನುಗ್ಗಿದ್ದ ದುಷ್ಕರ್ಮಿಗಳು ಲಾಕರ್ ಅನ್ನು ಹೊಡೆದು ಅದರಲ್ಲಿದ್ದ ಹಣ ದೋಚಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಲಾಕರ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಸೋಮವಾರ ಬೆಳಿಗ್ಗೆ ಮದ್ಯದ ಅಂಗಡಿಗೆ ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಲಾಕರ್‌ನಲ್ಲಿ ₹ 4 ಲಕ್ಷ ಇತ್ತು ಎಂದು  ವ್ಯವಸ್ಥಾಪಕ ಚನ್ನೇಗೌಡ ದೂರು ಕೊಟ್ಟಿದ್ದಾರೆ’ ಎಂದು  ಹೇಳಿದರು.

‘ದುಷ್ಕರ್ಮಿಗಳ ಕೃತ್ಯ ಅಂಗಡಿಯಲ್ಲಿದ್ದ  ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದೇವೆ’ ಎಂದರು.

ನಂದಿನಿ ಪಾರ್ಲರ್‌ನಲ್ಲೂ ಕಳವು: ‘ಮಧುಲೋಕ’ದ ಪಕ್ಕದಲ್ಲಿರುವ ನಂದಿನಿ ಪಾರ್ಲರ್‌ ಮಳಿಗೆಯಲ್ಲೂ  ಕಳ್ಳತನವಾಗಿದೆ. ಎರಡು ಕಡೆ ಒಂದೇ ತಂಡದ ದುಷ್ಕರ್ಮಿಗಳು ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)