ಸೋಮವಾರ, ಡಿಸೆಂಬರ್ 9, 2019
24 °C
ಬೆಂಗಳೂರು ಗ್ರಾಮಾಂತರದ 11 ಗ್ರಾಮ ಭಾಗಶಃ ಸ್ಥಳಾಂತರ

ಏಳು ಗ್ರಾಮಗಳ ಆಪೋಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಳು ಗ್ರಾಮಗಳ ಆಪೋಶನ

ಬೆಂಗಳೂರು: ಎತ್ತಿನಹೊಳೆ ಯೋಜನೆಗಾಗಿ ಭೈರಗೊಂಡ್ಲು ಎಂಬಲ್ಲಿ ನಿರ್ಮಾಣವಾಗುವ ಜಲಾಶಯಕ್ಕಾಗಿ ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು ಏಳು ಗ್ರಾಮಗಳು ಸಂಪೂರ್ಣ ಹಾಗೂ 21 ಗ್ರಾಮಗಳು ಭಾಗಶಃ ಮುಳುಗಡೆ ಆಗಲಿವೆ.

ವಿಶ್ವೇಶ್ವರಯ್ಯ ಜಲ ನಿಗಮವು ಜೂನ್‌ 30ರಂದು  ಸಲ್ಲಿಸಿರುವ ವರದಿಯ ಪ್ರಕಾರ, ಕುಡಿಯುವ ನೀರಿನ ಸಂಗ್ರಹಕ್ಕೆ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲುವಿನಲ್ಲಿ 5.78 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯವನ್ನು  ನಿರ್ಮಿಸಲಾಗುತ್ತದೆ. ಈ ಜಲಾಶಯವು 5,360 ಎಕರೆ 8 ಗುಂಟೆ ಪ್ರದೇಶದಲ್ಲಿ ವ್ಯಾಪಿಸಲಿದೆ.

ಈ ಪೈಕಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೊಳಾಲ ಹೋಬಳಿಯಲ್ಲಿ 2,681 ಎಕರೆ 24 ಗುಂಟೆ  ಜಾಗ ಸೇರಿದೆ. ಇಲ್ಲಿ ಐದು ಗ್ರಾಮಗಳು (ಒಟ್ಟು  1,574 ಎಕರೆ 36 ಗುಂಟೆ ಜಾಗ ) ಪೂರ್ತಿ ಮುಳುಗಡೆಯಾಗಲಿವೆ. 11 ಗ್ರಾಮಗಳು ಭಾಗಶಃ ಮುಳುಗಡೆ ಆಗಲಿದ್ದು, ಇಲ್ಲಿ ಒಟ್ಟು 1,106 ಎಕರೆ 15 ಗುಂಟೆ ಜಾಗ ಜಲಾವೃತಗೊಳ್ಳಲಿವೆ.

ಈ ಜಲಾಶಯಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ  ಒಟ್ಟು 2,678 ಎಕರೆ 24 ಗುಂಟೆ ಜಾಗ  ಮುಳುಗಡೆಯಾಗಲಿದೆ. ಎರಡು ಗ್ರಾಮಗಳು ಸಂಪೂರ್ಣ (859 ಎಕರೆ 31 ಗುಂಟೆ)  ಹಾಗೂ 9 ಗ್ರಾಮಗಳು   ಭಾಗಶಃ  (1,818 ಎಕರೆ 33 ಗುಂಟೆ) ಮುಳುಗಡೆ ಆಗಲಿವೆ.

‘ಸಾಮಾಜಿಕ ಪರಿಣಾಮಗಳ ಅಧ್ಯಯನ ವರದಿಯನ್ನು ಜಲಸಂಪನ್ಮೂಲ ಇಲಾಖೆಗೆ  ಸಲ್ಲಿಸಿದ್ದೇವೆ. ಈ ಅಧ್ಯಯನ ನಡೆಸಿದ ಸಂಸ್ಥೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡುವಂತೆ ಸೂಚಿಸಿದ್ದೇವೆ. ಈ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಕೊರಟಗೆರೆ ತಾಲ್ಲೂಕಿನಲ್ಲಿ ಒಟ್ಟು 1,053 ಎಕರೆ ಜಾಗವನ್ನು ಗುರುತಿಸಲಾಗಿದೆ. ಇವೆಲ್ಲವೂ ಸರ್ಕಾರಿ ಜಾಗಗಳು. ಕೃಷ್ಣಾ ಮೇಲ್ದಂಡೆ ಯೋಜನೆಯ ಮಾದರಿಯಲ್ಲೇ ಇಲ್ಲೂ ಪುನರ್ವಸತಿ  ಕಲ್ಪಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ಯೋಜನೆಯ  ಪುನರ್ವಸತಿ ಕಾರ್ಯಕ್ಕೆ  ಜುಲೈ  3 ರಂದು ಟೆಂಡರ್‌ ಆಹ್ವಾನಿಸಲಾಗಿದೆ.   ಟೆಂಡರ್‌ಗಳ ತಾಂತ್ರಿಕ ಬಿಡ್‌ಗಳನ್ನು ಆಗಸ್ಟ್‌ 8ರಂದು  ತೆರೆಯಲಾಗುತ್ತದೆ. ಅರ್ಹ ಟೆಂಡರ್‌ದಾರರ ಆರ್ಥಿಕ ಬಿಡ್‌ಗಳನ್ನು ಆಗಸ್ಟ್‌ 1ರಂದು ತೆರೆಯಲಾಗುತ್ತದೆ. 

ಕೊರಟಗೆರೆ ತಾಲ್ಲೂಕಿನಲ್ಲಿ ಸ್ಥಳಾಂತರಗೊಳ್ಳಲಿರುವ ಕುಟುಂಬಗಳ ಪೈಕಿ 355 ಕುಟುಂಬಗಳು (1,343 ಸದಸ್ಯರಿದ್ದಾರೆ) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದವು.

ಪ್ರತಿಕ್ರಿಯಿಸಿ (+)