ಶನಿವಾರ, ಡಿಸೆಂಬರ್ 7, 2019
16 °C
ವಕಾಲತ್ ನಾಮೆಗಳಿಗೆ ಹೊಸ ಸ್ಟ್ಯಾಂಪ್‌

ವಕೀಲರ ಪರಿಷತ್‌ಗೆ ಹೈಕೋರ್ಟ್‌ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಕೀಲರ ಪರಿಷತ್‌ಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: ‘ವಕಾಲತ್‌ ನಾಮೆ ಹಾಗೂ ಜ್ಞಾಪನಾ ಪತ್ರಗಳಿಗೆ (ಮೆಮೊ) ಲಗತ್ತಿಸಬೇಕಾದ ಸ್ಟ್ಯಾಂಪ್‌ಗಳ ಶುಲ್ಕ ಏರಿಕೆ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ಮಂಡ್ಯದ ವಕೀಲ ಎಚ್‌.ಎಲ್‌.ವಿಶಾಲರಘು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದೆ.

ಪ್ರತಿವಾದಿಗಳಾದ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಭಾರತೀಯ ವಕೀಲರ ಪರಿಷತ್‌ ಹಾಗೂ ರಾಜ್ಯ ವಕೀಲರ ಪರಿಷತ್‌ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ಅರ್ಜಿದಾರರ ಆಕ್ಷೇಪ ಏನು?: ‘ಕಕ್ಷಿದಾರರ ಮೇಲೆ ಹೊರೆ ಹಾಕಿ ವಕೀಲರ ಕಲ್ಯಾಣ ನಿಧಿಗೆ ಹಣ ಕ್ರೋಡೀಕರಣ ಮಾಡುವುದು ಅಸಾಂವಿಧಾನಿಕ.  ಆದ್ದರಿಂದ ಸರ್ಕಾರದ ಈ ಆದೇಶ ಜಾರಿಗೆ ಮಧ್ಯಂತರ ತಡೆ ನೀಡಬೇಕು’ ಎಂಬುದು ಅರ್ಜಿದಾರರ ಆಕ್ಷೇಪ.

ಹೊಸ ಅಧಿಸೂಚನೆ: ವಕೀಲರ ಕಲ್ಯಾಣ ನಿಧಿ ಅಧಿನಿಯಮ–1983ಕ್ಕೆ ತರಲಾಗಿರುವ ತಿದ್ದುಪಡಿ ಅನುಸಾರ ರಾಜ್ಯದ ಎಲ್ಲಾ ಕೋರ್ಟ್‌ಗಳಲ್ಲಿ ಸಲ್ಲಿಸಲಾಗುವ ವಕಾಲತ್‌ ನಾಮೆ ಹಾಗೂ ಮೆಮೊಗಳಿಗೆ ₹30 ಮೊತ್ತದ ಹೊಸ ಸ್ಟ್ಯಾಂಪ್‌ ಅಂಟಿಸಬೇಕಿದೆ. ಕಳೆದ ತಿಂಗಳ 12 ರಿಂದ  ಈ ಕುರಿತ ಆದೇಶವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.

ಹೈಕೋರ್ಟ್‌ಗಳ ವಕಾಲತ್‌ ನಾಮೆಗಳಿಗೆ ₹50ರ ಸ್ಟ್ಯಾಂಪ್‌, ಮಧ್ಯಂತರ ಅರ್ಜಿಗೆ ₹ 30 ಮೊತ್ತದ ಸ್ಟ್ಯಾಂಪ್‌ ಅಂಟಿಸಬೇಕು.

ಅಧೀನ ನ್ಯಾಯಾಲಯ, ಅರೆ ನ್ಯಾಯಿಕ ಪ್ರಾಧಿಕಾರ, ಗ್ರಾಹಕ  ನ್ಯಾಯಾಲಯ ಹಾಗೂ ವಿವಿಧ ಸಕ್ಷಮ ಪ್ರಾಧಿಕಾರಗಳ ಮುಂದೆ ಸಲ್ಲಿಸಲಾಗುವ ವಕಾಲತ್ತು ಅಥವಾ ಹಾಜರಾತಿ ಮೆಮೊಗಳಿಗೆ ₹ 30 ಮೊತ್ತದ ಸ್ಟ್ಯಾಂಪ್‌, ಈ ಕೋರ್ಟ್‌ಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ಮಧ್ಯಂತರ ಅರ್ಜಿ ಮತ್ತು ಮೆಮೊಗಳಿಗೆ ₹ 20 ಮೊತ್ತದ ಸ್ಟ್ಯಾಂಪ್‌ ಲಗತ್ತಿಸಬೇಕಿದೆ.

ಈ ಮುನ್ನ ₹5 ಮತ್ತು ₹10 ಮೊತ್ತದ ಸ್ಟ್ಯಾಂಪ್‌ ಅಂಟಿಸಲಾಗುತ್ತಿತ್ತು. ವಕೀಲರ ಕಲ್ಯಾಣ ನಿಧಿಯನ್ನು ₹ 4 ಲಕ್ಷದಿಂದ ₹ 8 ಲಕ್ಷಕ್ಕೆ ಹೆಚ್ಚಿಸಿರುವ ಪರಿಣಾಮ ಆದಾಯ ಸಂಗ್ರಹಣೆಗಾಗಿ ಸ್ಟ್ಯಾಂಪ್‌ಗಳ ಮೊತ್ತವನ್ನು ಏರಿಸಲಾಗಿದೆ.

ಅರ್ಜಿದಾರರ ಪರ ಎಚ್‌.ಪವನಚಂದ್ರ ಶೆಟ್ಟಿ ವಕಾಲತ್ತು ವಹಿಸಿದ್ದಾರೆ. ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.

**

ಸ್ಟ್ಯಾಂಪ್‌ ಹಣವನ್ನು ಸಂತ್ರಸ್ತ ವಕೀಲರ ಕಲ್ಯಾಣ ನಿಧಿಗೆ ಬಳಸಲಾಗುತ್ತದೆ. ಆದರೆ ಇದು ಪ್ರಮಾಣ ಬದ್ಧವಾಗಿಲ್ಲ

-ಎಸ್‌.ಎಂ.ಚಂದ್ರಶೇಖರ್, ಅರ್ಜಿದಾರರ ಹಿರಿಯ ವಕೀಲ

ಪ್ರತಿಕ್ರಿಯಿಸಿ (+)