ಶುಕ್ರವಾರ, ಡಿಸೆಂಬರ್ 6, 2019
19 °C

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಗೆ ಹೊರಗಿನವರ ಬಳಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಗೆ ಹೊರಗಿನವರ ಬಳಕೆ

ಶ್ರೀನಗರ: ಲಷ್ಕರ್‌ ಎ ತಯಬಾ (ಎಲ್‌ಇಟಿ) ಉಗ್ರರ ಹೊಸ ಕಾರ್ಯವಿಧಾನವೊಂದನ್ನು ಭೇದಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಉತ್ತರಪ್ರದೇಶ ನಿವಾಸಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಹೊರಗಿನ ಜನರನ್ನು ಬಳಸಿ ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳನ್ನು ಉಗ್ರರು ಎಸಗುತ್ತಿದ್ದಾರೆ ಎಂಬುದು ಇದರಿಂದ ಬಹಿರಂಗವಾಗಿದೆ.

ದಕ್ಷಿಣ ಕಾಶ್ಮೀರದಲ್ಲಿ ಈ ಗುಂಪು ಕನಿಷ್ಠ ಆರು ಪೊಲೀಸರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದನೆ ಸೇರಿ ಹಲವು ಅಪರಾಧ ಕೃತ್ಯಗಳನ್ನು ಈ ಗುಂಪು ಎಸಗಿದೆ.

ಉತ್ತರ ಪ್ರದೇಶ ನಿವಾಸಿಯನ್ನು ಸಂದೀಪ್‌ ಕುಮಾರ್‌ ಶರ್ಮಾ ಅಲಿಯಾಸ್‌ ಆದಿಲ್‌ ಎಂದು ಗುರುತಿಸಲಾಗಿದೆ. ಇನ್ನೊಬ್ಬ ದಕ್ಷಿಣ ಕಾಶ್ಮೀರದ ಕುಲ್ಗಾಂ ನಿವಾಸಿ ಮುನೀಬ್‌ ಷಾ.

ಸಂದೀಪ್‌ ಸ್ಥಳೀಯನಲ್ಲ ಎಂಬ ಕಾರಣಕ್ಕೆ ಆತನನ್ನು ಲಷ್ಕರ್‌ ಉಗ್ರರು ವ್ಯಾಪಕವಾಗಿ ಬಳಸಿಕೊಂಡಿದ್ದಾರೆ. ಉಗ್ರರ ಈ ಕಾರ್ಯತಂತ್ರದಿಂದ ಭಯೋತ್ಪಾದನೆ ಮತ್ತು ಅಪರಾಧ ಚಟುವಟಿಕೆ ಮಿಶ್ರಗೊಂಡಿದೆ ಎಂದು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ಮುನೀರ್‌ ಖಾನ್‌ ಹೇಳಿದ್ದಾರೆ.

ಎಟಿಎಂ ಮತ್ತು ಬ್ಯಾಂಕುಗಳ ದರೋಡೆ ಪ್ರಕರಣದ ತನಿಖೆಯಿಂದ ಹಲವು ಹೊಸ ಅಂಶಗಳು ಬಹಿರಂಗವಾಗಿವೆ. ಅಪರಾಧಿಗಳನ್ನು ಬಳಸಿಕೊಂಡು ಬ್ಯಾಂಕ್‌ ಮತ್ತು ಎಟಿಎಂಗಳನ್ನು ಉಗ್ರರು ಲೂಟಿ ಮಾಡಿಸಿದ್ದಾರೆ. ಈ ಮೂಲಕ ಉಗ್ರಗಾಮಿ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿದ್ದಾರೆ.

ಈ ತಿಂಗಳ ಒಂದರಂದು ಎಲ್‌ಇಟಿ ಕಮಾಂಡರ್‌ ಬಷೀರ್ ಲಷ್ಕರಿಯನ್ನು ಹತ್ಯೆ ಮಾಡಿದ ಮನೆಯಿಂದಲೇ ಸಂದೀಪ್‌ನನ್ನು ಸೆರೆ ಹಿಡಿಯಲಾಗಿದೆ. ಸಂದೀಪ್‌ ನೀಡಿದ ಮಾಹಿತಿಯ ಆಧಾರದಲ್ಲಿ ಮುನೀಬ್‌ ಷಾನನ್ನು ಬಂಧಿಸಲಾಯಿತು.

2012ರಲ್ಲಿ ಕಾಶ್ಮೀರಕ್ಕೆ ಬಂದ ಸಂದೀಪ್‌ ಬೇಸಿಗೆಯಲ್ಲಿ ಅಲ್ಲಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ. ಚಳಿಗಾಲದಲ್ಲಿ ಪಟಿಯಾಲಕ್ಕೆ ಹೋಗಿ ಅಲ್ಲಿರುತ್ತಿದ್ದ. ಪಟಿಯಾಲದಲ್ಲಿದ್ದಾಗ ಆತನಿಗೆ ಕಾಶ್ಮೀರದ ಶಾಹಿದ್‌ ಅಹ್ಮದ್‌ ಎಂಬಾತನ ಪರಿಚಯವಾಗಿತ್ತು. ಮುನೀಬ್‌ ಷಾ ಮತ್ತು ಮುಜಫ್ಫರ್‌ ಅಹ್ಮದ್‌ ಎಂಬವರೊಂದಿಗೆ ಸೇರಿದ ಇವರು ಬ್ಯಾಂಕ್‌ ಮತ್ತು ಎಟಿಎಂ ದರೋಡೆಯ ಸಂಚು ರೂಪಿಸಿದ್ದರು.

ಆ ಸಂದರ್ಭದಲ್ಲಿ ಎಲ್‌ಇಟಿ ಉಗ್ರ ಶಕೂರ್‌ ಅಹ್ಮದ್‌ ಎಂಬಾತನ ಪರಿಚಯವಾಗಿತ್ತು. ನಂತರ, ಸಂದೀಪ್‌ ನನ್ನು ಬಳಸಿಕೊಂಡು ಎಲ್‌ಇಟಿ

ಉಗ್ರರು ದರೋಡೆಯ ಷಡ್ಯಂತ್ರ ರೂಪಿಸಿದ್ದರು.

ದರೋಡೆ ಮಾತ್ರವಲ್ಲದೆ, ಮೂರು ಭಯೋತ್ಪಾದಕ ಕೃತ್ಯಗಳಲ್ಲಿ ಸಂದೀಪ್‌ ಉಗ್ರರ ಜತೆಗೆ ಭಾಗಿಯಾಗಿದ್ದ. ದರೋಡೆ ಕೃತ್ಯಗಳಲ್ಲಿ ಈತ ನಿಸ್ಸೀಮ.  ಮಾರ್ಚ್‌ನಲ್ಲಿ ಈತನನ್ನು ದರೋಡೆ ಕೃತ್ಯದ ಆರೋಪದಲ್ಲಿ ಬಂಧಿಸಲಾಗಿತ್ತು. ನಂತರ ಆತ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಉತ್ತರಪ್ರದೇಶ ಪೊಲೀಸರ ಸಹಕಾರದೊಂದಿಗೆ ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೊಸ ಸಮಸ್ಯೆ

ಹೊರಗಿನ ಜನರನ್ನು ಬಳಸಿಕೊಂಡು ಉಗ್ರರು ವಿಧ್ವಂಸಕ ಕೃತ್ಯ ಎಸಗುತ್ತಿರುವುದು ಹೊಸ ಸಮಸ್ಯೆ ಸೃಷ್ಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ವಿವಿಧ ಕೆಲಸ ಮಾಡುತ್ತಿರುವ ಸ್ಥಳೀಯರಲ್ಲದ ಎಲ್ಲರ ಬಗ್ಗೆಯೂ ತನಿಖೆ ಮಾಡಬೇಕಾದ ಅನಿವಾರ್ಯ ಪೊಲೀಸರಿಗೆ ಎದುರಾಗಿದೆ.

ಪ್ರತಿಕ್ರಿಯಿಸಿ (+)