ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಚ್‌. ಕಲಾಸೌಧಕ್ಕೆ ‘ರಂಗ ಸೂತಕ’

ಬಿಬಿಎಂಪಿಯಿಂದ ಕಲೆಯ ನಿರ್ಲಕ್ಷ್ಯ– ಕಲಾವಿದರ ಆರೋಪ
Last Updated 10 ಜುಲೈ 2017, 19:27 IST
ಅಕ್ಷರ ಗಾತ್ರ

ಬೆಂಗಳೂರು: ನಾಟಕ, ನೃತ್ಯ, ಸಂಗೀತ... ಹೀಗೆ ಪ್ರತಿನಿತ್ಯವೂ ಕಾರ್ಯಕ್ರಮಗಳಿಂದ ರಂಗೇರುತ್ತಿದ್ದ ಹನುಮಂತನಗರದ ಕೆಂಗಲ್‌ ಹನುಮಂತಯ್ಯ ಕಲಾಸೌಧ ಈಗ ಸ್ತಬ್ಧವಾಗಿದೆ. ಆರು ತಿಂಗಳಿಂದ ರಂಗ ಚಟುವಟಿಕೆಯ ಹಂಗಿಲ್ಲದೆ ಇದು ಪಾಳು ಬಿದ್ದಿದೆ.

ಟೆಂಡರ್‌ ಸಮಸ್ಯೆಯಿಂದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಇದಕ್ಕೆ ಬೀಗ ಹಾಕಿದೆ.

ಪಿ.ಡಿ. ಸತೀಶ್‌ಚಂದ್ರ ಎಂಬುವರು 2009ರಲ್ಲಿ ಕೆ.ಎಚ್‌. ಕಲಾಸೌಧ ನಿರ್ವಹಣೆಯ ಟೆಂಡರ್‌ ಪಡೆದಿದ್ದರು. 2014ರಲ್ಲಿ ಟೆಂಡರ್‌ ಅವಧಿ ಮುಕ್ತಾಯವಾಗಿತ್ತು. ಆ ನಂತರ ಬಿಬಿಎಂಪಿ ಟೆಂಡರ್‌ ಅವಧಿಯನ್ನು ವಿಸ್ತರಣೆ ಮಾಡುತ್ತಾ  ಬಂದಿತ್ತು.  2017ರ ಫೆಬ್ರುವರಿಯ  ನಂತರ ಟೆಂಡರ್‌ ವಿಸ್ತರಣೆ ಆಗಿಲ್ಲ.

‘2014ರಲ್ಲಿ ಟೆಂಡರ್‌ ಅವಧಿ ಮುಗಿದಾಗ ನಾವು ಅರ್ಜಿ ಸಲ್ಲಿಸಿದ್ದೆವು. ಆಗ ಬಿಬಿಎಂಪಿ ನಮಗೆ ಟೆಂಡರ್‌ ನೀಡಲಿಲ್ಲ. ನಂತರ  ನಾಲ್ಕು ಬಾರಿ ಟೆಂಡರ್‌ ಕರೆದರೂ ಯಾರೂ ಅರ್ಜಿ ಸಲ್ಲಿಸಲಿಲ್ಲ. ಹಾಗಾಗಿ 2017ರ ಫೆಬ್ರುವರಿವರೆಗೆ ನಮ್ಮ ಗುತ್ತಿಗೆಯನ್ನು ವಿಸ್ತರಿಸಿದ್ದರು’ ಎಂದು ಸತೀಶ್‌ಚಂದ್ರ ತಿಳಿಸಿದರು.

‘ಫೆಬ್ರುವರಿ 5ರಿಂದ ಯಾವುದೇ ಕಾರ್ಯಕ್ರಮಕ್ಕೂ ಸೌಧವನ್ನು  ಒದಗಿಸಿಲ್ಲ. ಈ ಹಿಂದೆ ಗುತ್ತಿಗೆ ಮೊತ್ತ ತಿಂಗಳಿಗೆ ₹10 ಸಾವಿರ ಇತ್ತು. ಈಗ ಅದನ್ನು ₹40 ಸಾವಿರಕ್ಕೆ ಹೆಚ್ಚಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.’

‘ಸೌಧಕ್ಕೆ ವಾರಾಂತ್ಯದಲ್ಲಿ ದಿನವೊಂದಕ್ಕೆ ₹ 5,000 ಹಾಗೂ ಇತರ ದಿನಗಳಲ್ಲಿ ₹ 3,000 ಬಾಡಿಗೆ ವಿಧಿಸುತ್ತಿದ್ದೆವು.  ಗುತ್ತಿಗೆ ಮೊತ್ತ ಹೆಚ್ಚಿಸಿದರೆ ಸಮಸ್ಯೆ ಆಗಲಿದೆ. ನಗರದಲ್ಲಿ ಕಡಿಮೆ ಬಾಡಿಗೆಗೆ ಸಿಗುವ ಕಲಾಮಂದಿರಗಳ ಕೊರತೆ ಇದೆ. ಇಲ್ಲಿಯೂ ಬಾಡಿಗೆ ಹೆಚ್ಚಿಸಿದರೆ ಹೊಸ ಕಲಾತಂಡಗಳು ಎಲ್ಲಿಗೆ ಹೋಗಬೇಕು’ ಎಂದು ಅವರು ಪ್ರಶ್ನಿಸಿದರು.

‘ಸುಮಾರು 40 ಕಲಾತಂಡಗಳು ಈ ರಂಗಮಂದಿರದ ಮೂಲಕ ಗುರುತಿಸಿಕೊಂಡಿವೆ. 5 ವರ್ಷಗಳ ಹಿಂದೆ ಈ ಕಲಾಮಂದಿರ ನಿರ್ವಹಣೆಯ ಗುತ್ತಿಗೆ ಪಡೆದಾಗ ಇದು ಪಾಳು ಬಿದ್ದ ಮನೆಯಂತಿತ್ತು. 22 ದಿನಗಳ ಕಾಲ ಇದನ್ನು ಸ್ವಚ್ಛಗೊಳಿಸಿ ಒಂದು ರೂಪ ನೀಡಿದ್ದೆವು. ಎಲ್ಲಾ ರಂಗ ಪರಿಕರಗಳನ್ನು ಹೊಸದಾಗಿ ಅಳವಡಿಸಿದ್ದೆವು.’

‘ಆರಂಭದಲ್ಲಿ ಉಚಿತವಾಗಿ ನಾಟಕ ಪ್ರದರ್ಶನಗಳನ್ನು ಏರ್ಪಡಿಸಿ  ಜನರನ್ನು ಕಲಾಸೌಧದತ್ತ ಸೆಳೆದಿದ್ದೇವೆ. ಹಾಸ್ಯ ನಾಟಕಗಳಿಗೆ ಜನರು ಬರುತ್ತಾರೆ ಎಂಬ ಕಾರಣಕ್ಕೆ, ಇಂತಹ ನಾಟಕ ಪ್ರದರ್ಶನಗಳನ್ನು  ನಿರಂತರವಾಗಿ  ಏರ್ಪಡಿಸಿದ್ದೆವು’ ಎಂದು ಅವರು ಮೆಲುಕು ಹಾಕಿದರು.

‘ಇಲ್ಲಿಯವರೆಗೆ ಸುಮಾರು 2,500 ನಾಟಕಗಳು ಇಲ್ಲಿ ಪ್ರದರ್ಶನಗೊಂಡಿವೆ. ಶಾಲಾ ವಾರ್ಷಿಕೊತ್ಸವ, ಸಂಗೀತ, ನೃತ್ಯ ಕಾರ್ಯಕ್ರಮಗಳಿಗೂ ಇದು ವೇದಿಕೆ ಕಲ್ಪಿಸಿದೆ. ನಿರಂತರ ಕಾರ್ಯಕ್ರಮಗಳು ನಡೆಯುತ್ತಿರುವುದು ಬಿಬಿಎಂಪಿ ಅಧಿಕಾರಿಗಳ ಕಣ್ಣು ಕುಕ್ಕಿದೆ. ಅದಕ್ಕೆ ಈ ರೀತಿ ಅಡ್ಡಿಪಡಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೋರಾಟ ಮಾಡಿ ಪಡೆಯುತ್ತೇವೆ’: ‘ಕಲಾಮಂದಿರ ಕಟ್ಟಿದ ಬಳಿಕ  ಸಮರ್ಪಕ ನಿರ್ವಹಣೆ ಮಾಡದ ಬಿಬಿಎಂಪಿ, ಅದು ಪಾಳು ಬೀಳುವಂತೆ   ಮಾಡಿತ್ತು.  ಅಲ್ಲಿ  ರಂಗ ಚಟುವಟಿಕೆ  ಹೆಚ್ಚಿದ ಬಳಿಕ  ಅದಕ್ಕೆ ಅಡ್ಡಿಪಡಿಸುತ್ತಿದೆ. ಹೀಗೆ ಮಾಡುವುದರ ಹಿಂದೆ ಯಾವುದೋ ಹುನ್ನಾರ ಇರಬೇಕು. ನಾಟಕ ಪ್ರದರ್ಶನಕ್ಕೆ ಅನುವು ಮಾಡಿಕೊಡದಿದ್ದರೆ, ಹೋರಾಡಿ  ಅದನ್ನು ಪಡೆಯುತ್ತೇವೆ’ ಎಂದು ನಟ ಅಚ್ಯುತ್‌ ಕುಮಾರ್‌ ತಿಳಿಸಿದರು.

**

‘ಮದುವೆಗೆ ಕಲ್ಯಾಣ ಮಂಟಪ ನಿರ್ಮಿಸಲಿ’
‘ಒಳ್ಳೊಳ್ಳೆ ನಾಟಕಗಳು ನಡೆಯುತ್ತಿದ್ದ ಜಾಗವನ್ನು ಇಂದು ಮುಚ್ಚಿಸಿದ್ದಾರೆ. ರಂಗಶಂಕರದಲ್ಲಿ ಅನೇಕ ಹವ್ಯಾಸಿ ಕಲಾತಂಡಗಳಿಗೆ ಅವಕಾಶ ಸಿಗುವುದಿಲ್ಲ. ಅವರಿಗೆಲ್ಲ ಇದು ಆಶಾಕಿರಣವಾಗಿತ್ತು. ಅನೇಕ ಯುವ ತಂಡಗಳು ಉತ್ತಮ ನಾಟಕಗಳು ರೂಪಿಸುತ್ತಿವೆ. ಆದರೆ, ಅವರಿಗೆ ಪ್ರದರ್ಶನಕ್ಕೆ ರಂಗಮಂದಿರಗಳೇ ದೊರೆಯುತ್ತಿಲ್ಲ’ ಎಂದು ನಿರ್ದೇಶಕ ಟಿ.ಎನ್. ಸೀತಾರಾಮ್ ಬೇಸರ ವ್ಯಕ್ತಪಡಿಸಿದರು.

‘ಕಲಾ ಮಂದಿರವನ್ನು ಕಟ್ಟಿ ಅದನ್ನು ಕಲ್ಯಾಣ ಮಂಟಪಗಳನ್ನಾಗಿ ಮಾಡುತ್ತಿದ್ದಾರೆ. ಪ್ರಖ್ಯಾತ ನಾಟಕಕಾರರಾದ ವರದಾಚಾರ್ಯ ಅವರ ಹೆಸರಿನಲ್ಲಿ ಕಟ್ಟಿರುವ ಸ್ಮರಣಾ ಭವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಕಲಾ ಮಂದಿರ ನಿರ್ವಹಣೆ ಎಂದರೆ, ಕೇವಲ ಶೌಚಾಲಯಗಳ ನಿರ್ವಹಣೆ ಎಂದು ಅವರು ತಿಳಿದಂತಿದೆ. ಇನ್ನಾದರೂ ಬಿಬಿಎಂಪಿ ಕಲಾಮಂದಿರಗಳ ಅಗತ್ಯವನ್ನು ಅರಿತುಕೊಳ್ಳಬೇಕು’ ಎಂದರು.

**

ಅಭಿಯಾನ ಆರಂಭ
‘ಕಲಾಸೌಧ ಉಳಿಸಿ’ ಎಂಬ ಹೆಸರಿನಲ್ಲಿ  ‘ಚೇಂಜ್‌ ಆರ್ಗ್‌ (change.org)’ ವೆಬ್‌ಸೈಟ್‌ನಲ್ಲಿ ಅಭಿಯಾನ ಆರಂಭವಾಗಿದೆ. ಇದಕ್ಕೆ 737 ಮಂದಿ ಬೆಂಬಲ ನೀಡಿದ್ದಾರೆ.

**

ಕೆ.ಎಚ್‌.ಕಲಾಸೌಧಕ್ಕೆ ಹೊಸದಾಗಿ ಟೆಂಡರ್‌ ಕರೆಯಲಾಗಿದೆ. ಸಭಾಂಗಣವು ಕಾರ್ಯಕ್ರಮಗಳಿಗೆ ಶೀಘ್ರವೇ ಲಭ್ಯವಾಗಲಿದೆ
–ಎನ್‌.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT