ಶುಕ್ರವಾರ, ಡಿಸೆಂಬರ್ 13, 2019
17 °C

ಮುಖ್ಯಮಂತ್ರಿಗಳೇ ನಿಮಗೆ ಇನ್ನೆಷ್ಟು ಬಲಿ ಬೇಕು: ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿಗಳೇ ನಿಮಗೆ ಇನ್ನೆಷ್ಟು ಬಲಿ ಬೇಕು: ಶೋಭಾ ಕರಂದ್ಲಾಜೆ

ಕಲಬುರ್ಗಿ: ‘ರಾಜ್ಯದಲ್ಲಿ ಆರ್‌ಎಸ್‌ಎಸ್‌ ಸೇರಿದಂತೆ ಹಿಂದೂ ಸಂಘಟನೆ ಮತ್ತು ಬಿಜೆಪಿಯ 30 ಯುವಕರನ್ನು ಕೊಲೆ ಮಾಡಲಾಗಿದೆ. ಈ ಎಲ್ಲ ಕೊಲೆಗಳು ಒಂದೇ ಮಾದರಿಯಲ್ಲಿ ನಡೆದಿವೆ. ಮುಖ್ಯಮಂತ್ರಿಗಳೇ ನಿಮಗೆ ಇನ್ನೆಷ್ಟು ಬಲಿ ಬೇಕು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಸೋಮವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ದಿನಗಳಿಂದ ನಿಷೇಧಾಜ್ಞೆ ಏಕೆ ಜಾರಿಯಲ್ಲಿದೆ ಎಂಬುದನ್ನು ಬಹಿರಂಗಪಡಿಸಬೇಕು. ಕೋಮು ಗಲಭೆಗೆ ಕುಮ್ಮಕ್ಕು ನೀಡುವುದನ್ನು ಕೈಬಿಡಬೇಕು. ಯುವಕರ ಕೊಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಆರ್‌ಎಸ್‌ಎಸ್ ಕಾರ್ಯಕರ್ತ ಶರತ್‌ ಮಡಿವಾಳ ಶವಯಾತ್ರೆ ವೇಳೆ ಕಲ್ಲು ತೂರಾಟ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ಫೋರಂ ಫಾರ್ ಡಿಗ್ನಿಟಿ (ಪಿಎಫ್‌ಡಿ) ಹಾಗೂ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ (ಎಸ್‌ಡಿಪಿಐ) ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಾ?

‘ಜಿಲ್ಲೆಯಲ್ಲಿ ಏನೇ ಆದರೂ ನೋಡಿಕೊಂಡು ಸುಮ್ಮನಿರಲು ದಕ್ಷಿಣ ಕನ್ನಡದವರೇನು ಷಂಡರಾ’ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ಭರಿತರಾಗಿ ಪ್ರಶ್ನಿಸಿದರು.

‘ನ್ಯಾಯಕ್ಕೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ತಪ್ಪಾ? ನಿಷೇಧಾಜ್ಞೆ ಜಾರಿಯಾಗಿ 45 ದಿನ ಕಳೆದಿದೆ. ಆದಾಗ್ಯೂ ನಾವು ಸುಮ್ಮನಿದ್ದೆವು. ಆದರೆ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾದಾಗ ಧರಣಿ ಮಾಡಿದೆವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರಣಿ ಮಾಡಬಾರದಾ’ ಎಂದು ಕೇಳಿದರು.

ಪ್ರತಿಕ್ರಿಯಿಸಿ (+)