ಭಾನುವಾರ, ಡಿಸೆಂಬರ್ 8, 2019
24 °C
ನಿರಂತರ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ: ಫಲವತ್ತತೆ ಕಳೆದುಕೊಂಡ ಕೃಷಿ ಭೂಮಿ

ಜಮೀನು ಮಣ್ಣು ಪರೀಕ್ಷೆಯತ್ತ ರೈತರ ಚಿತ್ತ

ಎಲ್‌.ಮಂಜುನಾಥ Updated:

ಅಕ್ಷರ ಗಾತ್ರ : | |

ಜಮೀನು ಮಣ್ಣು ಪರೀಕ್ಷೆಯತ್ತ ರೈತರ ಚಿತ್ತ

ದಾವಣಗೆರೆ: ಜಿಲ್ಲಾ ಮಣ್ಣು ಆರೋಗ್ಯ ಕೇಂದ್ರವು ಎಂದಿನಂತೆ 2017–18ನೇ ಸಾಲಿನ ಮಣ್ಣು ಆರೋಗ್ಯ ಸಂರಕ್ಷಣೆ ಅಭಿಯಾನವನ್ನು ಆರಂಭಿಸಿದೆ. ಏಪ್ರಿಲ್‌ನಲ್ಲಿ ಆರಂಭವಾಗಿರುವ ಎರಡನೇ ಹಂತದ ಈ ಅಭಿಯಾನದಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ 10,083 ಮಣ್ಣು ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳ ಪರೀಕ್ಷೆ ನಡೆಯುತ್ತಿದೆ.

ಕೃಷಿ ಇಲಾಖೆ ಹಾಗೂ ಮಣ್ಣು ಆರೋಗ್ಯ ಕೇಂದ್ರದ ಅಧಿಕಾರಿಗಳು ದಾವಣಗೆರೆ ಸೇರಿದಂತೆ ಹರಿಹರ, ಹರಪನಹಳ್ಳಿ, ಜಗಳೂರು, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕಿನ ಕೆಲ ಹಳ್ಳಿಗಳ ಕೃಷಿ ಜಮೀನಿನ ಮಣ್ಣು ಸಂಗ್ರಹಿಸಿ, ಮಾದರಿ ಪರೀಕ್ಷಿಸಿ ಮಣ್ಣಿನ ಗುಣಕ್ಕೆ ಅನುಗುಣವಾಗಿ ಗೊಬ್ಬರದ ಬಳಕೆ ಮಾಡುವಂತೆ ರೈತರಿಗೆ ಸೂಚಿಸಿದ್ದಾರೆ.

ಮಣ್ಣು ಮಾದರಿ ಸಂಗ್ರಹ ಗುರಿ: ‘ಜಿಲ್ಲೆಯಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡುವ ರೈತರ ಸಂಖ್ಯೆ ಕಡಿಮೆಯಾಗಿದ್ದು, ಕೃಷಿ ಮಣ್ಣು ಪರೀಕ್ಷೆ ಮಾಡಿಸುವಲ್ಲಿ ರೈತರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ರಾಷ್ಟ್ರೀಯ ಸುಸ್ಥಿರ ಯೋಜನೆಯಡಿ ಎಲ್ಲಾ ಕೃಷಿ ಹಿಡುವಳಿ ದಾರರಿಗೆ ಮೂರು ವರ್ಷಗಳಿಗೊಮ್ಮೆ ಮಣ್ಣು ಆರೋಗ್ಯ ಕಾರ್ಡ್‌ ವಿತರಿಸಲಾಗುತ್ತದೆ.

ಅಂತೆಯೇ ಪ್ರಸಕ್ತ ಸಾಲಿನ ಮಣ್ಣು ಪರೀಕ್ಷೆ ಅಭಿಯಾನ ಆರಂಭಿಸಲಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 56,210 ಮಣ್ಣು ಮಾದರಿ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ 24 ರೈತ ಸಂಪರ್ಕ ಕೇಂದ್ರಗಳಿಂದ 10,083 ಮಣ್ಣು ಮಾದರಿಗಳನ್ನು ಸಂಗ್ರಹಿಸ ಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಮಣ್ಣು ಆರೋಗ್ಯ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಜಿ.ಎಸ್‌.ಮಂಜುನಾಥ.

‘ನಿರಂತರ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಯಿಂದಾಗಿ ಕೃಷಿ ಭೂಮಿಯು ಫಲವತ್ತತೆ ಕಳೆದುಕೊಂಡಿದೆ. ಮಣ್ಣಿನಲ್ಲಿ ಶೇ 5ರಷ್ಟು ರಂಜಕ ಹಾಗೂ ಪೊಟ್ಯಾಸಿಯಂ ಪ್ರಮಾಣ ಕಡಿಮೆಯಾಗಿದೆ. ಬರಗಾಲದ ನಡುವೆಯೂ ಮಣ್ಣಿನ ಆರೋಗ್ಯ ಪರೀಕ್ಷಾ ಅಭಿಯಾನ ಹಮ್ಮಿಕೊಳ್ಳುವ ಮೂಲಕ ರೈತರಲ್ಲಿ ಕೃಷಿ ಭೂಮಿಯ ಮಣ್ಣಿನ ಫಲವತ್ತತೆಯ ಬಗ್ಗೆ ಅರಿವು ಮೂಡಿಸುವ ಅಭಿಯಾನ ನಡೆಯುತ್ತಿದೆ’ ಎಂದು ಹೇಳುತ್ತಾರೆ ಅವರು.

2.6 ಲಕ್ಷ ಮಣ್ಣು ಆರೋಗ್ಯ ಕಾರ್ಡ್‌ ವಿತರಣೆ ಗುರಿ: ಪ್ರಸಕ್ತ ಸಾಲಿನ ಅಭಿಯಾನದಲ್ಲಿ 2.6 ಲಕ್ಷ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ 50 ಸಾವಿರಕ್ಕೂ ಅಧಿಕ ಕಾರ್ಡ್‌ಗಳು ಸಿದ್ಧವಾಗಿದ್ದು, ಆಯಾ ರೈತ ಸಂಪರ್ಕ ಕೇಂದ್ರಗಳಿಂದ ಸಂಬಂಧಪಟ್ಟ ರೈತರಿಗೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

***

ಕೃಷಿ ವಿಜ್ಞಾನ ಕೇಂದ್ರದಿಂದಲೂ ಅಭಿಯಾನ

ಕೃಷಿ ಭೂಮಿಯ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣ ತಿಳಿಯುವ ಉದ್ದೇಶದಿಂದ ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಸಹ ಜಮೀನಿನ ಮಣ್ಣು ಪರೀಕ್ಷಾ ಅಭಿಯಾನ ಆರಂಭಿಸಿದ್ದಾರೆ.

‘ಕೃಷಿ ಭೂಮಿಯಲ್ಲಿ ಫಲವತ್ತತೆ ಕಾಯ್ದುಕೊಳ್ಳುವ ಅವಶ್ಯವಿದೆ. ರೈತರು ಬೆಳೆನಷ್ಟದಿಂದ ಪಾರಾಗಲು ಅವರಿಗೆ ಅಂತರ ಬೆಳೆ ಬೆಳೆಯುವಂತೆ ಸೂಚಿಸಲಾಗಿದ್ದು, ಈ ಕುರಿತು ನಮ್ಮ ಕೇಂದ್ರದ ಹಿರಿಯ ಕೃಷಿ ವಿಜ್ಞಾನಿಗಳು ಜಿಲ್ಲೆಯ 6 ತಾಲ್ಲೂಕುಗಳ 6 ಹಳ್ಳಿಗಳಲ್ಲಿ ಕೃಷಿ ಅಭಿಯಾನ ಆರಂಭಿಸಿದ್ದಾರೆ’ ಎಂದು ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪಿ.ಎನ್‌.ದೇವರಾಜ್‌ ಮಾಹಿತಿ ನೀಡಿದರು.

‘ಈಗಾಗಲೇ ದಾವಣಗೆರೆ ತಾಲ್ಲೂಕಿನ ಪರಶುರಾಮಪುರ, ಚನ್ನಗಿರಿಯ ದೊಡ್ಡಬ್ಬಿಗೆರೆ, ಹೊನ್ನಾಳಿಯ ರಾಮೇಶ್ವರ, ಹರಿಹರದ ಬಾನುವಳ್ಳಿ, ಹರಪನಹಳ್ಳಿಯ ಹಳ್ಳಿಕೆರೆ ಹಾಗೂ ಜಗಳೂರಿನ ಕಾಟೇನಹಳ್ಳಿ ಕೆಲ ಜಮೀನುಗಳಲ್ಲಿ ಮಣ್ಣು ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷಾ ಹಂತದಲ್ಲಿವೆ. ಜೊತೆಗೆ ರೈತರಿಗೆ ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಕೂಡ ನೀಡಲಾಗಿದೆ’ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಮಲ್ಲಿಕಾರ್ಜುನ ಮಾಹಿತಿ ನೀಡಿದರು.

***

ಮಣ್ಣು ಆರೋಗ್ಯ ಕಾರ್ಡ್‌ನಲ್ಲಿ ಸೂಚಿಸಿದಂತೆ ರೈತರು ಯೋಚಿಸಿ ರಸಗೊಬ್ಬರ ಬಳಕೆ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ.

–ಜಿ.ಎಸ್‌.ಮಂಜುನಾಥ, ಸಹಾಯಕ ಕೃಷಿ ನಿರ್ದೇಶಕ, ಮಣ್ಣು ಆರೋಗ್ಯ  ಕೇಂದ್ರ

ಪ್ರತಿಕ್ರಿಯಿಸಿ (+)