ಬುಧವಾರ, ಡಿಸೆಂಬರ್ 11, 2019
20 °C
ವರ್ಷದ ನಂತರ ಮತ್ತೆ ಕಾರ್ಯಾಚರಣೆ ಆರಂಭ, ಕುದುರೆಗಳಿಗಿಲ್ಲ ಈ ಬಾರಿಯೂ ನಿಯಂತ್ರಣ

ಬಿಡಾಡಿ ದನ ಹಿಡಿಯಲು ಬೀದಿಗಿಳಿದ ಪಾಲಿಕೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಬಿಡಾಡಿ ದನ ಹಿಡಿಯಲು ಬೀದಿಗಿಳಿದ ಪಾಲಿಕೆ

ಶಿವಮೊಗ್ಗ: ರಸ್ತೆಗಳಲ್ಲಿ ಅಲೆಯುತ್ತಾ ಸಂಚಾರ ವ್ಯವಸ್ಥೆಗೆ ಅಡ್ಡಿಪಡಿಸುವ, ಸಾರ್ವಜನಿಕರಿಗೆ ಕಿರಿಕಿರಿ ಮಾಡುವ ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯಾಚರಣೆಗೆ ನಗರಪಾಲಿಕೆ ವರ್ಷದ ನಂತರ ಮತ್ತೆ ಚಾಲನೆ ನೀಡಿದೆ.

ಬಿಡಾಡಿ ದನ, ಕುದುರೆಗಳನ್ನು ನಿಯಂತ್ರಿಸಿ, ಅವುಗಳನ್ನು ಕ್ಷೇಮವಾಗಿ ಗೋಶಾಲೆಗೆ ತಲುಪಿಸಲು ಈ ಹಿಂದೆಯೇ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಒಂದು ಬಾರಿ ಕಾರ್ಯಾಚರಣೆ ನಡೆಸಿದ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು. ವರ್ಷದ ಹಿಂದೆ 6 ಜನರ ತಂಡ ಹಲವು ದಿನ ಕಾರ್ಯಾಚರಣೆ ನಡೆಸಿ, ಬೀದಿಗಳಲ್ಲಿ ಅಲೆಯುವ 25 ಹಸು, ಎಮ್ಮೆಗಳು ಹಾಗೂ 6 ಕುದುರೆಗಳನ್ನು ಹಿಡಿದು ಸಾಗಿಸಿತ್ತು. ಕೆಲವೇ ದಿನಗಳಲ್ಲಿ ಹಿಡಿದ ಎಲ್ಲ ಹಸು, ಕುದುರೆಗಳೂ ಮತ್ತೆ ರಸ್ತೆ ಮೇಲೆ ಪ್ರತ್ಯಕ್ಷವಾಗಿದ್ದವು. ಅವುಗಳನ್ನು ಹಿಡಿಯಲು ನಿಯೋಜಿಸಿದ್ದ ವಾಹನವೂ ಮೂಲೆ ಸೇರಿತ್ತು. ಈಗ ಮತ್ತೆ 4 ಸಿಬ್ಬಂದಿಯ ತಂಡ ಕಾರ್ಯಾಚರಣೆ ಆರಂಭಿಸಿದೆ.

ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ನೂರಾರು ಬಿಡಾಡಿ ದನಗಳಿವೆ. ವಾಹನ ದಟ್ಟಣೆಯ ರಸ್ತೆಗಳಲ್ಲೇ ಹೆಚ್ಚಾಗಿ ಅಲೆಯುವ ಕಾರಣ ಈಚಿನ ದಿನಗಳಲ್ಲಿ ಸಾಕಷ್ಟು ಅಪಘಾತಗಳಾಗುತ್ತಿವೆ. ಸಾರ್ವಜನಿಕರು ಹಾಗೂ ಪೊಲೀಸರು ಈ ಕುರಿತು ಪಾಲಿಕೆಗೆ ಹಲವು ಬಾರಿ ದೂರು ನೀಡಿದ್ದರು. ಹಾಗಾಗಿ, ಬಿಡಾಡಿ ದನಗಳ ನಿಯಂತ್ರಣಕ್ಕೆ ಮತ್ತೆ ಪ್ರತ್ಯೇಕ ತಂಡವನ್ನೇ ರಚಿಸಿ, ಕಾರ್ಯಾಚರಣೆ ಆರಂಭಿಸಲಾಗಿದೆ.

8 ಹಸು, ಕರುಗಳು ವಶ: ಮೊದಲ ದಿನವೇ 8 ಹಸು, ಕರುಗಳನ್ನು ಹಿಡಿದು ಮಹಾವೀರ ಹಾಗೂ ಜ್ಞಾನೇಶ್ವರಿ ಗೋಶಾಲೆಗಳಿಗೆ ಸಾಗಿಸಲಾಯಿತು. ಅಲ್ಲಿ ಅವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಲಾಗಿದೆ.

‘ಬೀದಿಗಳಲ್ಲಿ ಬಿಡುವ ಶೇ 60ರಷ್ಟು ದನಗಳಿಗೆ, ಶೇ 99ರಷ್ಟು ಕುದುರೆಗಳಿಗೆ ಮಾಲೀಕರು ಇದ್ದಾರೆ. ಅವರಿಗೆ ಬೀದಿಗಳಲ್ಲಿ ಬಿಡುವುದು ಅಭ್ಯಾಸ ವಾಗಿದೆ. ಬೆಳಿಗ್ಗೆ ಬೀದಿಗೆ ಬಿಟ್ಟರೆ ಮತ್ತೆ ಅವು ಸಂಜೆ ಮಾಲೀಕರ ಮನೆ ಸೇರುತ್ತವೆ.

ಕೆಲವು ಬಿಡಾಡಿ ದನಗಳು ರಸ್ತೆ ಯಲ್ಲೇ ರಾತ್ರಿ ಮಲಗುತ್ತವೆ. ಅವುಗಳನ್ನು ಹಿಡಿದು ಗೋಶಾಲೆಗಳಿಗೆ ಕಳುಹಿಸಲಾ ಗುತ್ತದೆ. ಜಾನುವಾರುಗಳ ಮಾಲೀಕರು ಬಂದರೆ ದಂಡ ವಿಧಿಸಿ ವಾಪಸ್‌ ನೀಡುವಂತೆ ಗೋಶಾಲೆಗಳಿಗೆ ಸೂಚಿಸ ಲಾಗಿದೆ’ ಎಂದು ಪಾಲಿಕೆ ಆರೋಗ್ಯಾಧಿ ಕಾರಿ ಶಿವಯೋಗಿ ಮಾಹಿತಿ ನೀಡಿದರು.

ಬಿಡಾಡಿ ದನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಮತ್ತೆ ಬೀದಿಗೆ ಬಿಡುವುದಿಲ್ಲ. ಸುಗಮ ಸಂಚಾರಕ್ಕೂ ಅನುಕೂಲವಾಗುತ್ತದೆ. ದನಗಳೂ ಗೋಶಾಲೆಯಲ್ಲಿ ಕ್ಷೇಮವಾಗಿ ಇರುತ್ತವೆ. ಹಾಗಾಗಿ, ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ವಿವರ ನೀಡಿದರು.

ಕುದುರೆ ಸಂಚಾರಕ್ಕಿಲ್ಲ ತಡೆ: ಮೊದಲ ದಿನ ಮಹಾನಗರ ಪಾಲಿಕೆ ದನಗಳ ನಿಯಂತ್ರಣದತ್ತ ಮಾತ್ರ ಚಿತ್ತ ಹರಿಸಿದೆ. ಈಚಿನ ದಿನಗಳಲ್ಲಿ ಹೆಚ್ಚಾಗಿರುವ ಕುದುರೆಗಳ ಉಪಟಳಕ್ಕೆ ಕಡಿವಾಣ ಹಾಕುವ ಗೋಜಿಗೆ ಹೋಗಿಲ್ಲ.

‘ನಗರದಲ್ಲಿ ದನಗಳ ಹಾವಳಿಗಿಂತಲೂ ಕುದುರೆಗಳ ಹಾವಳಿ ಮಿತಿ ಮೀರಿದೆ. ವಾಹನಗಳು ಹೋಗುವಾಗ ಕುದುರೆಗಳು ಒಮ್ಮೆಗೇ ಓಡಿ ಬರುತ್ತವೆ. ಇದರಿಂದ ಹಲವು ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ಮೊದಲು ಕುದುರೆಗಳಿಗೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ನಾಗರಿಕ ಅಶೋಕ್.

ಕುದುರೆಗಳನ್ನು ವಾಹನಗಳಲ್ಲಿ ಹಿಡಿದು ಸಾಗಿಸುವುದು ಅಸಾಧ್ಯ.  ಹಿಡಿಯಲು ಹೋದರೆ ಓಡಿ ಹೋಗುತ್ತವೆ. ಕಚ್ಚುತ್ತವೆ. ಹಾಗಾಗಿ, ಸದ್ಯ ಅವುಗಳನ್ನು ಹಿಡಿಯುವುದಿಲ್ಲ ಎನ್ನುವುದು ಪಾಲಿಕೆ ಸಿಬ್ಬಂದಿ ವಾದ.

ಬಿಡಾಡಿ ಜಾನುವಾರು ಉಪಳದ ಪರಿಣಾಮ ನಡೆದ ಹಲವು ಅಪಘಾತ ಗಳಲ್ಲಿ ಜನ, ಜಾನುವಾರುಗಳ ಪ್ರಾಣಕ್ಕೂ ಹಾನಿಯಾಗಿದೆ. ವಿನೋಬನಗರ, ಸವಲಂಗ ರಸ್ತೆ, ನೆಹರೂ ರಸ್ತೆ, ಬಿ.ಎಚ್‌. ರಸ್ತೆ, ಬಾಲರಾಜ ಅರಸು ರಸ್ತೆ, ದುರ್ಗಿಗುಡಿ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.

***

ಬಿಡಾಡಿ ದನಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗು ವುದು. ಸಂಚಾರಕ್ಕೆ ಅಡ್ಡಿಯಾಗದಂತೆ ಜಾಗ್ರತೆ ವಹಿಸಲಾಗುವುದು.

–ಮುಳೈ ಮುಹಿಲನ್, ಆಯುಕ್ತ, ನಗರ ಪಾಲಿಕೆ

ಪ್ರತಿಕ್ರಿಯಿಸಿ (+)