ಮಂಗಳವಾರ, ಡಿಸೆಂಬರ್ 10, 2019
17 °C
ರೈತ ಮುಖಂಡರ ಒತ್ತಾಯ, ಜಿಲ್ಲಾಧಿಕಾರಿಗೆ ಮನವಿ, ‘ಪತ್ರ ಚಳವಳಿ’

ಮೋಸದ ಸಾಲ; ಸರ್ಕಾರವೇ ಮನ್ನಾ ಮಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಸದ ಸಾಲ; ಸರ್ಕಾರವೇ ಮನ್ನಾ ಮಾಡಲಿ

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಸಾಲಮನ್ನಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಶಾಖೆಯಿಂದ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸೋಮವಾರ ಸಾವಿರಾರು ರೈತರು ಸೇರಿ ಬೃಹತ್ ‘ಪತ್ರ ಚಳವಳಿ’ ನಡೆಸಿದರು.

ರೈತ ಮುಖಂಡ ಎಚ್.ಆರ್.ಬಸವ ರಾಜಪ್ಪ ‘ಪತ್ರ ಚಳವಳಿ’ ಹಾಗೂ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ‘ದೇಶಕ್ಕೆ ಅನ್ನ ನೀಡುವ ರೈತನಿಗೆ ಕೊಟ್ಟು ಅಭ್ಯಾಸವಿದೆಯೇ ಹೊರತು, ಬೇಡಿ ಅಭ್ಯಾಸವಿಲ್ಲ. ಹಾಗಾಗಿ ರೈತ ಎಂದಿಗೂ ಸಾಲಗಾರನಲ್ಲ. ಸರ್ಕಾರವೇ ರೈತನಿಗೆ ಬಾಕಿ ಕೊಡಬೇಕು’ ಎಂದರು.

‘ರಾಜಕೀಯ ಬೆಳವಣಿಗೆಗಾಗಿ ಸರ್ಕಾರ ಸಾಲ ನೀಡಿ ರೈತರನ್ನು ಸಾಲಗಾರರನ್ನಾಗಿ ಮಾಡಿದೆ. ಎತ್ತು, ಟ್ರ್ಯಾಕ್ಟರ್, ಬೀಜ, ಗೊಬ್ಬರ, ಕೃಷಿ ಪರಿಕರಗಳನ್ನು ಸಾಲವಾಗಿ ನೀಡಿ ಕೊನೆಗೆ ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡದ ಕಾರಣ ಇಂದು ನಾವು ಸಾಲಗಾರರಾಗಿದ್ದೇವೆ. ಸರ್ಕಾರ ನಮಗೆ ಯಾವ ಸಾಲವನ್ನೂ ಕೊಡುವುದು ಬೇಡ. ನೀರು ಮತ್ತು ಬೆಳೆಗೆ ನಿಗಿದಿತ ಬೆಲೆ ನೀಡಿದರೆ ಸಾಕು. ಸರ್ಕಾರಕ್ಕೆ ನಾವು ಸಾಲ ಕೊಡುತ್ತೇವೆ’ ಎಂದು ಸವಾಲು ಹಾಕಿದರು.

‘ಜೆಡಿಎಸ್, ಬಿಜೆಪಿ ಸರ್ಕಾರಗಳು ಕಾಂಗ್ರೆಸ್ ವಿರುದ್ದ ಹೋರಾಟ ನಡೆಸುತ್ತಿವೆಯೇ ವಿನಾ ಸಂಪೂರ್ಣ ಸಾಲಮನ್ನಾಕ್ಕಾಗಿ ಒತ್ತಾಯಿಸಲಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳ ಹಿಂದೆ ಬಿದ್ದು ಜೀವನ ಹಾಳು ಮಾಡಿಕೊಳ್ಳ ಬೇಡಿ. ರೈತ ಪರವಾಗಿರುವ ಯೋಗ್ಯ ರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ’ ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜಡಿಯಪ್ಪ ದೇಸಾಯಿ, ‘ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪಕ್ಷಗಳಿಗೆ ರೈತ ಪರ ಕಾಳಜಿಯಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ರೈತನ ಮೇಲೆ ಸವಾರಿ ಮಾಡಲು ಹೊರಟಿವೆ. ತಕ್ಕ ಪಾಠ ಕಲಿಸಬೇಕಾದರೆ ಚುನಾವಣೆಯೊಂದೇ ನಮಗಿರುವ ಅಸ್ತ್ರ. ಅದನ್ನು ಸರಿಯಾಗಿ ಬಳಸಿ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ, ‘ಈ ಚಳವಳಿ, ಹೋರಾಟಕ್ಕೆ ಬೇಕಾದ ವ್ಯವಸ್ಥೆ, ಅರ್ಜಿ, ಕರಪತ್ರ, ಜಾಥಾ ಸುತ್ತಾಟ ನಿಮ್ಮ ಹಣದಲ್ಲೇ ಆಗಿದೆ. ಇದು ಸ್ವಾಭಿಮಾನದ ಹೋರಾಟ. ಸಂಪೂರ್ಣ ಸಾಲ ಮನ್ನಾ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಜಿಲ್ಲೆಗೆ ಮಹಾರಾಜರು ಕೊಟ್ಟ ವಿವಿ ಸಾಗರ ಅಣೆಕಟ್ಟು ಹೊರತುಪಡಿಸಿದರೆ, ಒಂದೇ ಒಂದು ಎಕರೆಗೆ ನೀರಾವರಿ ವ್ಯವಸ್ಥೆಯಾಗಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯತನ. ಈಗಲೂ ಭದ್ರಾ ಮೇಲ್ದಂಡೆ ಯೋಜನೆಯಿಂದ ಈ ವರ್ಷದೊಳಗೆ ಜಿಲ್ಲೆಗೆ ನೀರು ಹರಿಸುತ್ತೇವೆಂದು ಸುಳ್ಳು ಭರವಸೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಚಿಕ್ಕಬ್ಬಿಗೆರೆ ನಾಗರಾಜ, ರಾಜಶೇಖಪರಪ್ಪ, ಮಲ್ಲಿಕಾರ್ಜುನ ಡಿ.ಎಸ್.ಹಳ್ಳಿ, ಬಿ.ಇ.ಮಂಜುನಾಥ, ಶ್ರೀನಿವಾಸ್ ಲಿಂಗದಹಳ್ಳಿ ಸೇರಿದಂತೆ ರೈತ ಮುಖಂಡರು ವೇದಿಕೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)