ಶುಕ್ರವಾರ, ಡಿಸೆಂಬರ್ 13, 2019
17 °C
ಪಾದಯಾತ್ರೆಯಲ್ಲಿ ಸುಮಾರು 300ಕ್ಕೂ ಅಧಿಕ ಜನರು ಭಾಗಿ; ಇಂದು ಕಲಬುರ್ಗಿಗೆ

ರೈತರಿಂದ ಸೇಡಂ–ಕಲಬುರ್ಗಿ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರಿಂದ ಸೇಡಂ–ಕಲಬುರ್ಗಿ ಪಾದಯಾತ್ರೆ

ಸೇಡಂ: ರಾಜಶ್ರೀ ಸಿಮೆಂಟ್ ಕಂಪೆನಿಯು ಸರ್ಕಾರಿ ಜಮೀನಿಗೆ ನೀಡಿದ ಬೆಲೆಯಂತೆ ರೈತರ ಪ್ರತಿ ಎಕರೆಗೆ ₹8 ಲಕ್ಷ ಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಹಂಗನಳ್ಳಿ, ಊಡಗಿ ಮತ್ತು ನೃಪತುಂಗ ನಗರ ಗ್ರಾಮಗಳ ರೈತರು ಸೋಮವಾರ ಮಾಜಿ ಸಚಿವ ಎಸ್‌.ಕೆ.ಕಾಂತಾ ನೇತೃತ್ವದಲ್ಲಿ ಸೇಡಂನಿಂದ ಕಲಬುರ್ಗಿ ವರೆಗೆ ಪಾದಯಾತ್ರೆ ಆರಂಭಿಸಿದರು.

ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಿಂದ ರೈತರು ಬೆಳಿಗ್ಗೆ 11 ಗಂಟೆಗೆ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಕಪ್ಪು ಧ್ವಜ ಹಿಡಿದು ಪಾದಯಾತ್ರೆ ಹೊರಟರು.

ಪಟ್ಟಣದಾದ್ಯಂತ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಹಲಗೆ ವಾದ್ಯದ ಸದ್ದಿನ ಜೊತೆ ಹೆಜ್ಜೆ ಹಾಕಿದ ರೈತರೊಂದಿಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಪಟ್ಟಣದ ಕಿರಾಣ ಬಜಾರ, ರೈಲ್ವೆ ನಿಲ್ದಾಣ ಮುಖ್ಯರಸ್ತೆ, ಬಸ್‌ನಿಲ್ದಾಣ, ಕಲಬುರ್ಗಿ ವೃತ್ತದವರೆಗೆ ಘೋಷಣೆ ಕೂಗಿ, ತಮಗಾದ ಅನ್ಯಾಯ ಸರಿಪಡಿಸಲು ಆಗ್ರಹಿಸಿದರು.

ಕಂಪೆನಿಗೆ ಭೂಮಿ ನೀಡಿದ ಸುಮಾರು 150 ರೈತರ ಮನೆಯಿಂದ ಇಬ್ಬರಿಂದ–ಮೂವರು ಸದಸ್ಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಪಾದಯಾತ್ರೆಯಲ್ಲಿ 300ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಮಂಗಳವಾರ ಮಧ್ಯಾಹ್ನದವರೆಗೆ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ಮಳಖೇಡ ತಲುಪಿದ ರೈತರು, ಕಾಗಿಣಾ ನದಿ ಪಾತ್ರದಲ್ಲಿರುವ ಉತ್ತರಾಧಿ ಮಠದ ಆವರಣದಲ್ಲಿ ಊಟ ಮಾಡಿದರು. ದಾರಿ ಮಧ್ಯದಲ್ಲಿ ನೀರಿನ ಪಾಕೆಟ್‌ ಮತ್ತು ಬಾಟಲಿಗಳನ್ನು ರೈತರಿಗೆ ನೀಡಲಾಗುತ್ತಿತ್ತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ರೈತರು ಅನ್ನಸಂಬಾರು ಊಟ ಮಾಡಿ ಮಧ್ಯಾಹ್ನ 3.30ಕ್ಕೆ ಪಾದಯಾತ್ರೆ ಮುಂದುವರಿಸಿದರು.

ಮಾರ್ಗಮಧ್ಯೆ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ 15ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಪಿಎಸ್‌ಐ ನಟರಾಜ ಲಾಡೆ ಅವರು ರೈತರ ಜೊತೆಯಲ್ಲಿ ವಾಹನದಲ್ಲಿ ತೆರಳುತ್ತಿದ್ದಾರೆ.

‘ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ಕುಳಿತು 700ಕ್ಕೂ ಅಧಿಕ ದಿನಗಳು ಕಳೆದಿವೆ. ರೈತರಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ನ್ಯಾಯ ಸಿಕ್ಕಿಲ್ಲ. ಕಾರಣ ರೈತರ ನೋವನ್ನು ಸರ್ಕಾರಕ್ಕೆ ತಲುಪಿಸಲು ಪಾದಯಾತ್ರೆ ಕೈಗೊಳ್ಳಲಾಗಿದೆ’ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಹೇಳಿದರು. ಅಶೋಕ ಶೀಲವಂತ, ಶ್ರೀಶೈಲ್ ಎಂ.ಜಿ, ಪ್ರಶಾಂತ ಕೇರಿ, ಚಂದ್ರಶೇಖರ ಕಟ್ಟಿಮನಿ, ಬಸವರಾಜ ಕಾಳಗಿ, ವರದಾ ಸ್ವಾಮಿ, ಉಮೇಶ ಚವಾಣ್ ಇದ್ದಾರೆ.

***

ರೈತರ ಬೇಡಿಕೆಗಳು

* 2010ರ ನವೆಂಬರ್‌ 27 ಮತ್ತು 2011ರ ಜನವರಿ 25ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಗಳು, ಭೂಸುಧಾರಣೆಗಳು ಅಧಿನಿಯಮ 1961ರ ಕಲಂ 109 (1) ಎ ಉಲ್ಲಂಘನೆಯಾಗಿದ್ದು, ಅಧಿಸೂಚನೆಗಳನ್ನು ರದ್ದುಪಡಿಸಬೇಕು.

* ಹಂಗನಳ್ಳಿ ಮತ್ತು ನೃಪತುಂಗ ನಗರ ಗ್ರಾಮಗಳ ರೈತರ ಜಮೀನು ಪ್ರತಿ ಎಕರೆಗೆ ₹3.50 ಲಕ್ಷಕ್ಕೆ ಖರೀದಿಸಲಾಗಿದೆ. ಆದರೆ, ಸರ್ಕಾರಿ ಜಮೀನಿಗೆ ₹8 ಲಕ್ಷ ಕೊಡಲಾಗಿದೆ. ಕಾರಣ ರೈತರಿಗೆ ಇನ್ನುಳಿದ ₹4.50 ಲಕ್ಷ 6 ವರ್ಷಗಳ ಬಡ್ಡಿ ಸಮೇತ ಕೊಡಬೇಕು.

* ಪ್ರತಿ ಎಕರೆಗೆ ₹8 ಲಕ್ಷದಂತೆ ಕಂಪೆನಿ ಪುನರ್ ನೋಂದಣಿ ಮಾಡಬೇಕು.

* ಸರೋಜಿನಿ ಮಹಿಷಿ ವರದಿ ಮೇಲೆ ಸರ್ಕಾರ ನೀಡಿದ ಆದೇಶದಂತೆ ಭೂಮಿ ಕಳೆದುಕೊಂಡ ಪ್ರತಿ ರೈತ ಕುಟಂಬಕ್ಕೆ ಕಂಪೆನಿಯು ಒಂದು ಕಾಯಂ ಉದ್ಯೋಗ ನೀಡಬೇಕು ಮತ್ತು ಕಂಪೆನಿಗಳಲ್ಲಿ ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಯಾಗಬೇಕು.

***

ಸೇಡಂ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ಕುಳಿತು 700ಕ್ಕೂ ಅಧಿಕ ದಿನಗಳು ಕಳೆದರೂ ನ್ಯಾಯ ಸಿಕ್ಕಿಲ್ಲ. ಪಾದಯಾತ್ರೆ ಮೂಲಕ ಹೋರಾಟದ ಮಾರ್ಗ ಬದಲಿಸಲಾಗಿದೆ.

ಅಶೋಕ ಶೀಲವಂತ, ಧರಣಿ ನಿರತ ರೈತ

ಪ್ರತಿಕ್ರಿಯಿಸಿ (+)