ಶುಕ್ರವಾರ, ಡಿಸೆಂಬರ್ 6, 2019
19 °C
ಕಾತರಕಿ ಸುತ್ತಮುತ್ತಲಿನ ಹತ್ತಾರು ರೈತರ ಯಶೋಗಾಥೆ, 50 ಕೆ.ಜಿ ತೂಗುವ ಗೊನೆಗಳು

ಮಳೆಯ ಹಂಗಿಲ್ಲದೆ ಬೆಳೆದ ಬಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಯ ಹಂಗಿಲ್ಲದೆ ಬೆಳೆದ ಬಾಳೆ

ಕೊಪ್ಪಳ: ಮಳೆ ಹಿನ್ನಡೆಯ ನಡುವೆಯೂ ಅಂಗಾಂಶ ಬಾಳೆ ಕೃಷಿ ಮಾಡಿ ಸುಮಾರು 9ಕ್ಕೂ ಹೆಚ್ಚು ರೈತರು ಕಾತರಕಿ ಗ್ರಾಮದಲ್ಲಿ ಯಶಸ್ವಿಯಾಗಿದ್ದಾರೆ.

ಒಬ್ಬೊಬ್ಬರದು ಎರಡರಿಂದ ಮೂರು ಎಕರೆ ಎಂದು ಲೆಕ್ಕಹಾಕಿದರೂ ಬಾಳೆ ಕೃಷಿ ಸುಮಾರು 50 ಎಕರೆ ಮೀರುತ್ತದೆ. ಬಾಳೆ ತೋಟಗಳಲ್ಲಿ ಸುಮಾರು ನಾಲ್ಕು ಅಡಿಯಷ್ಟು ಉದ್ದದ 45ರಿಂದ 50 ಕೆಜಿ ತೂಕದ ಗೊನೆಗಳು ನೇತಾಡುತ್ತಿವೆ.

ಸೋಮವಾರ ಬಾಳೆ ತೋಟದ ಸಮೀಪವೇ ಕಾಯಿಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ ಟ್ರಕ್‌ಗೆ ತುಂಬಲಾಗುತ್ತಿತ್ತು. ರೈತರಿಗೆ ಬೆಳೆ ಸರಿಯಾದ ಬೆಲೆಯಲ್ಲಿ ಸಕಾಲದಲ್ಲಿ ಮಾರುಕಟ್ಟೆಗೆ ಹೋಗುತ್ತಿರು ವುದು ಒಂದು ಖುಷಿಯಾದರೆ, ಗೊನೆ ಕೊಯ್ಯುವವರಿಗೆ ಬಿಡುವಿಲ್ಲದ ಕೆಲಸ. ತುಂಬಿದ ತೋಟ ನೋಡಲು ಬರುವವರು ಹತ್ತಾರು ಮಂದಿ.

ಕಾತರಕಿ ಗ್ರಾಮದ ಹೇಮಾವತಿ ಸುಭಾಷ್‌ ಬೈರಣ್ಣನವರ್‌ ಅವರ ತೋಟಕ್ಕೆ ಸೋಮವಾರ ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡಿದಾಗ ಮೇಲಿನ ದೃಶ್ಯ ಕಂಡು ಬಂದಿತು.

ಹೇಮಾವತಿ ಅವರ ಪತಿ ಸುಭಾಷ್‌ ತಮ್ಮ ಬಾಳೆ ಕೃಷಿಯ ಕುರಿತು ವಿವರ ನೀಡಿದರು.

ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಜೀನೇನ್‌ ತಳಿಯ 3 ಸಾವಿರ ಬಾಳೆ ಸಸಿ ಹಾಕಿದ್ದೆ. ಈಗ 1,900 ಸಸಿಗಳಲ್ಲಿ ಗೊನೆ ಬೆಳೆದು ಕಟಾವಿಗೆ ಸಿದ್ಧವಾಗಿದೆ.  ಎಲ್ಲ ಸೇರಿ ನನಗೆ ₹ 2 ಲಕ್ಷ ಖರ್ಚಾಗಿದೆ. ಈಗ ಫಸಲನ್ನು ₹ 9 ಲಕ್ಷಕ್ಕೆ ಗುತ್ತಿಗೆ ಆಧಾರದಲ್ಲಿ ಮಾರಾಟ ಮಾಡಿದ್ದೇನೆ. ಹಾಕಿದ ಅಸಲಿನ ಮೇಲೆ ಒಳ್ಳೆಯ ಲಾಭ ಬಂದಿದೆ. ಇನ್ನು ಮುಂದಿನ ವರ್ಷ ಇದರ ಮರಿ (ಕೂಳೆ ಸಸಿ) ಬೆಳೆಯುತ್ತವೆ. ಒಮ್ಮೆ ನೆಟ್ಟರೆ ಮೂರು ಬಾರಿ ಫಸಲು ತೆಗೆಯಬಹುದು ಎಂದು ಅವರು ಹೇಳಿದರು.

ಜಿನೇನ್‌ ತಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇದೆ. ಹಾಗಾಗಿ ಇದಕ್ಕೆ ಕೀಟ ಬಾಧೆ ಇಲ್ಲ ಎನ್ನಬಹುದು. ತೋಟಗಾರಿಕೆ ಇಲಾಖೆಯವರು ನೀಡಿದ ಬಾಳೆ ಸ್ಪೆಷಲ್‌ ಎಂಬ ಲಘು ಪೋಷಕಾಂಶ, ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ ಬಳಸಿದ್ದೇವೆ. ಇಲಾಖೆಯವರೇ ನೀಡಿದ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದೇವೆ. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ವಿಷಯ ತಜ್ಞ ವಾಮನ ಮೂರ್ತಿ ಹೀಗೆ ಹಲವರು ಮಾರ್ಗದರ್ಶನ ನೀಡಿದ್ದಾರೆ ಎಂದರು ಅವರು.

ಯಶಸ್ವಿಯಾದ ರೈತರು: ಇದೇ  ಪ್ರದೇಶದಲ್ಲಿ ಈ ಮಾದರಿಯಲ್ಲೇ ಬಾಳೆ ಬೆಳೆದು ಶ್ರೀನಿವಾಸ ಹೊಳಿಯಪ್ಪನವರ್‌, ನಿಂಗಪ್ಪ ಹ್ಯಾಟಿ, ಪರಶನಗೌಡ ಹಿರೇಗೌಡರ್‌, ಈಶ್ವರಗೌಡ ಹಿರೇಗೌಡರ್‌, ಶಿವಲಿಂಗಮ್ಮ, ವಿರೂಪಣ್ಣ ಅಗಡಿ, ನಾಗರಾಜ್‌ ಹುರಕಡ್ಲಿ,  ಶಿವಾನಂದಯ್ಯ ಅಬ್ಬಿಗೇರಿಮಠ, ಅಕ್ಷತಾ ಸಿದ್ದಲಿಂಗಪ್ಪ ಉಳ್ಳಾಗಡ್ಡಿ ಯಶಸ್ವಿಯಾಗಿದ್ದಾರೆ.

***

ಕಾತರಕಿ ರೈತರ ಮಾದರಿಯಲ್ಲಿ ಇನ್ನೂ 50 ಎಕರೆ ಜಮೀನಿನ ರೈತರು ಬಾಳೆ ಕೃಷಿಗೆ ಆಸಕ್ತಿ ವಹಿಸಿದ್ದಾರೆ

ವಾಮನಮೂರ್ತಿ, ತೋಟಗಾರಿಕೆ ಇಲಾಖೆ ವಿಷಯ ತಜ್ಞ

ಪ್ರತಿಕ್ರಿಯಿಸಿ (+)