ಶುಕ್ರವಾರ, ಡಿಸೆಂಬರ್ 13, 2019
20 °C

ಡಬ್‌ಸ್ಮ್ಯಾಶ್ ಜೋಡಿ, ಮೋಡಿ

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಡಬ್‌ಸ್ಮ್ಯಾಶ್ ಜೋಡಿ, ಮೋಡಿ

ಅವರಿಬ್ಬರೂ ಫೇಸ್‌ಬುಕ್‌ನಲ್ಲೋ, ಇನ್‌ಸ್ಟಾಗ್ರಾಂನಲ್ಲೋ ಸುಮ್ಮನೆ ಒಂದು ಡಬ್‌ಸ್ಮ್ಯಾಶ್ ವಿಡಿಯೊ ತೇಲಿಬಿಟ್ಟರೆ ಸಾಕು, ಲಕ್ಷಾಂತರ ಮಂದಿ ಲೈಕ್ ಒತ್ತುತ್ತಾರೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡುವಂತೆ ಮಾಡುವ ಈ ಜೋಡಿ ಫೇಸ್‌ಬುಕ್‌ನಲ್ಲಿ ಸಖತ್ ಫೇಮಸ್‌. ಅವರು ಯಾರು ಅಂತೀರಾ?

ಅವನು ಅಲ್ಲು ಅರ್ಜುನ್ ಅಲ್ಲಲ್ಲ ಅಲ್ಲು ರಘು, ಅವಳು ಸುಷ್ಮಿತಾ ಸೇನ್‌ ಅಲ್ಲಲ್ಲ ಸುಷ್ಮಿತಾ ಶೇಷಗಿರಿ...

ಇಬ್ಬರೂ ಯಾವ ಸಿನಿಮಾ ನಟ–ನಟಿಗಿಂತಲೂ ಕಡಿಮೆ ಇಲ್ಲದಷ್ಟು ಜನಪ್ರಿಯರು. ಡಬ್‌ಸ್ಮ್ಯಾಶ್ ಎಂಬ ಸ್ಮಾರ್ಟ್ ಅಪ್ಲಿಕೇಷನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಪ್ರಸಿದ್ಧರಾಗಿರುವ ಅಲ್ಲು ರಘು–ಸುಷ್ಮಿತಾ ಕಥೆ ಇದು.

ಯುವಜನರಲ್ಲಿ ಟ್ರೆಂಡ್ ಆಗಿ ಬೆಳೆದಿರುವ ಡಬ್‌ಸ್ಮ್ಯಾಶ್ ಮೂಲಕ ಇಬ್ಬರೂ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿದ್ದಾರೆ. ಹಂಪಿ ಹುಡುಗ ರಾಘವೇಂದ್ರ, ಬೆಂಗಳೂರು ಹುಡುಗಿ ಸುಷ್ಮಿತಾ ಶೇಷಗಿರಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರು. ಇಬ್ಬರಿಗೂ ಸಿನಿಮಾ ಅಂದರೆ ಪ್ರಾಣ. ಅದರಲ್ಲೂ ರವಿಚಂದ್ರನ್ ಸಿನಿಮಾಗಳೆಂದರೆ ಪಂಚಪ್ರಾಣ. ಬೇರೆ ಊರುಗಳಲ್ಲಿದ್ದರೂ ಇಬ್ಬರೂ ಹಾಡುಗಳ ವಿಡಿಯೊ ಮಾಡಿಕೊಂಡು ಒಬ್ಬರಿಗೊಬ್ಬರು ಹಂಚಿಕೊಂಡು ಅದನ್ನು ಡಬ್‌ಸ್ಮ್ಯಾಶ್ ಅಪ್ಲಿಕೇಷನ್ ಮೂಲಕ ಕೊಲಾಜ್ ಮಾಡಿ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಈ ವಿಡಿಯೊಗಳನ್ನು ಡಬ್‌ಸ್ಲ್ಯಾಶ್ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸುತ್ತಾರೆ. ಸಾಮಾಜಿಕ ಜಾಲತಾಣ ನೋಡೋದು ಬರೀ ಟೈಮ್‌ಪಾಸ್‌ಗೆ ಅಲ್ಲ ಅದರಿಂದಲೂ ಜನಪ್ರಿಯತೆ ಗಳಿಸಬಹುದು ಎಂಬುದನ್ನು ರಘು–ಸುಷ್ಮಿತಾ ಜೋಡಿ ತೋರಿಸಿದೆ.

ಹಂಪಿಯಲ್ಲಿ ಎಂಬಿಎ ಓದುತ್ತಿರುವ ರಾಘವೇಂದ್ರ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ಸುಷ್ಮಿತಾ ಕನ್ನಡ ಹಾಡುಗಳಿಗೆ, ಸಿನಿಮಾದ ಸನ್ನಿವೇಶಗಳಿಗೆ ಅಭಿನಯದ ಮೂಲಕ ಡಬ್‌ಸ್ಮ್ಯಾಶ್ ಮಾಡುವ ಮೂಲಕ ಸಾವಿರಾರು ಅಭಿಮಾನಿಗಳು, ಫಾಲೋವರ್‌ಗಳನ್ನು ಹೊಂದಿದ್ದಾರೆ.

ರಘು ಮತ್ತು ಸುಷ್ಮಿತಾ ಅವರ ಸ್ನೇಹ ಮೂಡಿದ್ದು ಇನ್‌ಸ್ಟಾಗ್ರಾಂ ಮೂಲಕ. ಮೂರು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ಡಬ್‌ಸ್ಮ್ಮಾಶ್ ಮೂಲಕ ಒಬ್ಬರು ಜನಪ್ರಿಯರಾಗಿದ್ದರು. ಅದನ್ನು ನೋಡಿದ್ದ ಅಲ್ಲು ರಘು ತಮ್ಮ ನೆಚ್ಚಿನ ನಟ ಅಲ್ಲು ಅರ್ಜುನ್ ಅಭಿನಯದ ಚಿತ್ರದ ಹಾಡು ಮತ್ತು ಸನ್ನಿವೇಶಗಳಿಗೆ ಡಬ್‌ಸ್ಮ್ಯಾಶ್ ಮಾಡುತ್ತಿದ್ದರು.

ಕನ್ನಡದಲ್ಲೂ ಇಂಥ ಪ್ರಯತ್ನ ಮಾಡಬಾರದೇಕೆ ಎಂದು ಸ್ನೇಹಿತರು ಮತ್ತು ಅಭಿಮಾನಿಗಳು ನೀಡಿದ ಸಲಹೆಯನ್ನೇ ಗಂಭೀರವಾಗಿ ಪರಿಗಣಿಸಿದ ರಘು ಕನ್ನಡದಲ್ಲೂ ಇಂಥದ್ದೊಂದು ಪ್ರಯೋಗ ಮಾಡಿದರು. ಸಿನಿಮಾ ಕ್ಷೇತ್ರದಲ್ಲಿದ್ದ ಆಸಕ್ತಿ ಇಲ್ಲಿ ನೆರವಿಗೆ ಬಂತು ಅನ್ನುತ್ತಾರೆ ಅಲ್ಲು ರಘು.

ಮೊದಲಿನಿಂದಲೂ ಸಿನಿಮಾ ನಿರ್ದೇಶಿಸಬೇಕೆಂಬ ಹುಚ್ಚು ನನ್ನದು. ಆಗಾಗ ಒಂದು ಅಥವಾ ಎರಡು ನಿಮಿಷದ ಸನ್ನಿವೇಶಗಳ ತುಣುಕುಗಳನ್ನು ತಯಾರಿಸಿ ಯೂಟ್ಯೂಬ್‌ಗೆ ಹಾಕುತ್ತಿದ್ದೆ. ಅದನ್ನು ತುಂಬಾ ಮಂದಿ ಇಷ್ಟಪಟ್ಟಿದ್ದರು. ಮುಂದೆ ಡಬ್‌ಸ್ಮ್ಯಾಶ್ ಮಾಡಿದಾಗಲೂ ಅದರಲ್ಲೂ ಯಶಸ್ವಿಯಾದೆ ಎನ್ನುತ್ತಾರೆ ಅವರು.

ರಘು ಮತ್ತು ಸುಷ್ಮಿತಾ ಒಂದು ಹಾಡನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಭಾವ ತುಂಬಿ ಅಭಿನಯಿಸಿ, ಆ ವಿಡಿಯೊವನ್ನು ಕೊಲಾಜ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ. ತೆಲುಗು ನಟ ಅಲ್ಲು ಅರ್ಜುನ್ ಅವರ ಹೋಲಿಕೆ ಇರುವ ಅಲ್ಲು ರಘು ಅವರ ವಿಡಿಯೊಗಳನ್ನು ವೀಕ್ಷಿಸಿ, ಇಷ್ಟಪಟ್ಟ ಅಭಿಮಾನಿಗಳು ಅವರಿಗಾಗಿಯೇ ಅಲ್ಲು ರಘು ಅಂಡ್ ಸುಷ್ಮಿತಾ ಫ್ಯಾನ್ ಕ್ಲಬ್ ಎನ್ನುವ ಪುಟವೊಂದನ್ನು ಫೇಸ್‌ಬುಕ್‌ನಲ್ಲಿ ಆರಂಭಿಸಿದ್ದಾರೆ. ರಘು ಹೆಸರಿನಲ್ಲಿ ಪ್ರತ್ಯೇಕ ಪುಟವೂ ಇದೆ. ಈ ಫೇಸ್‌ಬುಕ್ ಪುಟಗಳನ್ನು 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಡಬ್‌ಸ್ಮ್ಯಾಶ್ ಮೂಲಕ ಜನಪ್ರಿಯವಾಗಿರುವ ರಘು–ಸುಷ್ಮಿತಾ ಜೋಡಿ ಇದೀಗ ಬೆಳ್ಳಿತೆರೆಯ ಮೇಲೂ ಮೋಡಿ ಮಾಡಲು ಹೊರಟಿದೆ. ’ಆರ್ಯಶಿವ’ ಸಿನಿಮಾಕ್ಕೆ ನಾಯಕ–ನಾಯಕಿಯಾಗಿ ಅಭಿನಯಿಸುತ್ತಿರುವ ಈ ಜೋಡಿ ನಿಜಜೀವನದಲ್ಲಿ ನಡೆದ ಪ್ರೇಮಕಥೆಗೆ ಜೀವತುಂಬಲಿದೆ. ಎರಡು ವರ್ಷಗಳಿಂದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ಡಬ್‌ಸ್ಮ್ಯಾಶ್ ಮಾಡುತ್ತಿರುವ ಅಲ್ಲುರಘು ಮತ್ತು ಸುಷ್ಮಿತಾಗೆ ಸಿನಿರಂಗದಲ್ಲಿ ಬೆಳಗಬೇಕೆಂಬ ಆಸೆ.

ಫೇಸ್‌ಬುಕ್ ಕೊಂಡಿ: https://www.facebook.com/search/top/?q=allu%20raghu%20and%20susmitha%20f...

                       https://www.facebook.com/dubstaralluraghufanskarnataka/

ಪ್ರತಿಕ್ರಿಯಿಸಿ (+)