ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ–ಉತ್ತರ

Last Updated 25 ಜುಲೈ 2017, 16:19 IST
ಅಕ್ಷರ ಗಾತ್ರ

ಸೂರ್ಯನಾರಾಯಣ. ಎನ್‌.ಕೆ., ತುಮಕೂರು
ನಾನು ನನ್ನ ಶ್ರೀಮತಿ ಖಾಸಗಿ ಶಾಲೆಯಲ್ಲಿ ಅಧ್ಯಾಪಕರು ನಮ್ಮ ವಾರ್ಷಿಕ ಆದಾಯ ₹ 8 ಲಕ್ಷ. ನಾವು 2013 ರಲ್ಲಿ ಮನೆಸಾಲ ಎಸ್‌.ಬಿ.ಎಂ.ನಲ್ಲಿ ಶೇ. 9.8 ರಂತೆ ₹ 15 ಲಕ್ಷ ಪಡೆದಿದ್ದೇವೆ. ನನ್ನ ಹಾಗೂ ಹೆಂಡತಿಯ ಸಂಬಳದಲ್ಲಿ ಕಡಿತ–ಖರ್ಚು ಹೀಗಿದೆ. ನಮಗೆ ನಿಮ್ಮ ಆರ್ಥಿಕ ಸಲಹೆ ಬೇಕಾಗಿದೆ, ಜೊತೆಗೆ ಮನೆಸಾಲ ಇನ್ನು 4 ವರ್ಷಗಳಲ್ಲಿ ತೀರಿಸಬಹುದೇ, ದಯಮಾಡಿ ತಿಳಿಸಿರಿ?

ಉತ್ತರ: ನಿಮ್ಮಿರ್‍ವರ ಒಟ್ಟು ವಾರ್ಷಿಕ ಆದಾಯ ₹ 8 ಲಕ್ಷ ಖರ್ಚು ₹ 5.49 ಲಕ್ಷ ಇನ್ನು ಉಳಿಯುವ ₹ 2.51 ಲಕ್ಷ ಏನು ಮಾಡುತ್ತಿದ್ದೀರಿ ಎಂದು ತಿಳಿಯಲಿಲ್ಲ ಹಾಗೂ ನಿಮಗೆ ಒಂದೇ ಹೆಣ್ಣುಮಗು ಇರಬೇಕು ಎಂದು ಭಾವಿಸುತ್ತೇನೆ. ನಿಮ್ಮ ವಿಚಾರದಲ್ಲಿ ನನ್ನ ಸಲಹೆಗಳು:

ಆರೋಗ್ಯ ವಿಮೆ ಪ್ಲೋಟರ್‌ ಪಾಲಿಸಿಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಪ್ಲೋಟರ್‌ ಪಾಲಿಸಿಯಾದಲ್ಲಿ, ಗಂಡ–ಹೆಂಡತಿ–ಮಗು ಎಲ್ಲರೂ ಇದರ ಉಪಯೋಗ ಪಡೆಯಬಹುದು. ಸುಕನ್ಯಾ ಯೋಜನೆ ಹಾಗೆ ಮುಂದುವರಿಸಿರಿ. ಪ್ರಾಯಶ ನಿಮಗೀರ್‍ವರಿಗೂ ಪಿಂಚಣಿ ಸೌಲತ್ತು ಇರುತ್ತದೆ ಎಂದು ತಿಳಿಯುತ್ತೇನೆ. ನಿಮ್ಮ ಮಗಳ ಸಲುವಾಗಿ ಕನಿಷ್ಠ 10 ಗ್ರಾಮ್‌ ಬಂಗಾರ ವಾರ್ಷಿಕವಾಗಿ ನಾಣ್ಯದ ರೂಪದಲ್ಲಿ ಕೊಂಡು ಬ್ಯಾಂಕ್‌ ಲಾಕರಿನಲ್ಲಿ ಇರಿಸಿರಿ. ವರ್ಷಂತ್ಯದಲ್ಲಿ ಒಮ್ಮೆಲೇ ಈ ಹಣ ಒದಗಿಸಲು ಬ್ಯಾಂಕಿನಲ್ಲಿ ₹ 2500 ದ, ಒಂದು ವರ್ಷದ ಆರ್‌.ಡಿ. ಮಾಡಿರಿ. ನೀವು ಆದಾಯ ತೆರಿಗೆ ಒಳಗಾಗುವುದರಿಂದ, ಗೃಹಸಾಲ ಮುಂಚಿತವಾಗಿ ತೀರಿಸುವುದು ಜಾಣತನವಲ್ಲ. ಗೃಹಸಾಲದ ಕಂತು, ಬಡ್ಡಿಯಿಂದ ತೆರಿಗೆ ಉಳಿಸಬಹುದು. 2013 ರಲ್ಲಿ ಗೃಹಸಾಲದ ಬಡ್ಡಿದರ ಶೇ. 9.8 ಇದ್ದು, ಈಗ ತುಂಬಾ ಕಡಿಮೆ ಆಗಿದೆ. ಈ ವಿಚಾರ ಬ್ಯಾಂಕಿಗೆ ತಿಳಿಸಿ ಇಎಂಐ ಕಡಿಮೆ ಮಾಡಿಕೊಳ್ಳಿ. ನೀವಿಬ್ಬರೂ ಪಿಪಿಎಫ್‌ ಖಾತೆ ತೆರೆದು ಇಬ್ಬರಿಂದ (ತಲಾ ₹ 1.25 ಲಕ್ಷ) ₹ 2.50 ಲಕ್ಷ ಹಣ ವಾರ್ಷಿಕವಾಗಿ ಉಳಿಸಿರಿ. ನಿವೃತ್ತಿಯಲ್ಲಿ ದೊಡ್ಡ ಮೊತ್ತ ಕೈ ಸೇರುತ್ತದೆ ಹಾಗೂ ಇಲ್ಲಿ ಹೂಡಿದ ಹಣದ ಬಡ್ಡಿ ಸೆಕ್ಷನ್‌ 10(11) ಆಧಾರದ ಮೇಲೆ ಸಂಪೂರ್ಣ ವಿನಾಯತಿ ಪಡೆದಿದೆ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಶಿವಲಿಂಗಯ್ಯ, ಬೆಂಗಳೂರು
ಕಣ್ವಾ ಸೌಹಾರ್ದ ಕೋ–ಅಪರೇಟಿವ್‌ ಸೊಸೈಟಿಯವರು, 63 ತಿಂಗಳು ₹ 1000 ದಂತೆ ತುಂಬಿದರೆ (ಒಟ್ಟು ₹ 63,000) 4 ವರ್ಷಗಳ ನಂತರ ₹ 1.20 ಲಕ್ಷ ಕೊಡುತ್ತಾರೆ. ಹೀಗೆ ಎರಡು ಪಟ್ಟು ಆಗಲು ಸಾಧ್ಯವೇ ತಿಳಿಸಿರಿ?

ಉತ್ತರ: ನನಗೆ ತಿಳಿದಂತೆ ಕಣ್ವಾ ಗ್ರೂಪ್‌ ಆಫ್‌ ಕಂಪೆನಿಯವರು ಒಳ್ಳೆ ಹೆಸರುಗಳಿಸಿದ್ದಾರೆ. ಈ ಸಹಕಾರಿ ಸಂಘ ಇವರಿಗೆ ಸೇರಿದ್ದಾಗಿರಬೇಕು. ₹ 1000 ದಂತೆ 63 ತಿಂಗಳು ಬ್ಯಾಂಕ್‌ ಆರ್‌.ಡಿ. ಮಾಡಿದಲ್ಲಿ ಶೇ 8ರ ಬಡ್ಡಿ ದರದಲ್ಲಿ– ಅವಧಿ ಮುಗಿಯುತ್ತಲೇ ₹ 78,378 ಕೈಗೆ ಸಿಗುತ್ತದೆ. ನೀವು ತಿಳಿಸಿದಂತೆ, ಕಣ್ವಾ ಸಹಕಾರಿ ಸಂಘದಲ್ಲಿ ₹ 1.20 ಲಕ್ಷ ಬರುವ ವಿಚಾರದ ಲೆಕ್ಕಾಚಾರ ಏನು ಎಂಬುದು ಅವರ ಯೋಜನೆ ಸಂಪೂರ್ಣ ಅಧ್ಯಯನ ಮಾಡದೆ ನಾನು ಹೇಳುವಂತಿಲ್ಲ. ಈ ಯೋಜನೆಗೆ ಸಂಬಂಧಿಸಿದ ಪಾಂಪ್‌ಲೆಟ್‌ ಅಥವಾ ಇನ್ನಿತರ ಪುರಾವೆಗಳನ್ನು ಮತ್ತೊಮ್ಮೆ ಓದಿನೋಡಿ. ಹಾಗೂ ನೀವೇ ಸ್ವತಃ ಅವರ ಕಚೇರಿಗೆ ಹೋಗಿ ವಿವರಣೆ ಪಡೆಯಿರಿ.

ವಿದ್ಯಾ ತಮ್ಮಿನಿಧಿ, ಊರುಬೇಡ
ನಾನು 2013 ರಲ್ಲಿ ಶಿಕ್ಷಣ ಸಾಲ ಪಡೆದಿದ್ದೆ. ಈ ವರ್ಷ ನನ್ನ ಓದು ಮುಗಿಯುತ್ತದೆ. ನನ್ನ ಕಂತು ಬಡ್ಡಿಯಾವಾಗ ಪ್ರಾರಂಭವಾಗುತ್ತದೆ?

ಉತ್ತರ: ಶಿಕ್ಷಣ ಸಾಲದ ಮರುಪಾವತಿಯು, ಕೋರ್ಸು ಮುಗಿದು ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿ ಆರು ತಿಂಗಳು, ಇವುಗಳಲ್ಲಿ ಯಾವುದು ಮೊದಲೇ ಅದನ್ನು ಆರಿಸಿಕೊಳ್ಳಬೇಕು. ಶಿಕ್ಷಣ ಸಾಲದ ಬಡ್ಡಿ ಸಾಲ ಪಡೆದ ತಾರೀಕಿನಿಂದಲೇ ಪ್ರಾರಂಭವಾಗುತ್ತದೆ. ಒಬ್ಬ ವಿದ್ಯಾರ್ಥಿ ಮಾದರಿ ಶಿಕ್ಷಣದ ಯೋಜನೆಯ ಅಂಗವಾಗಿ, ಕುಟುಂಬದ ಆದಾಯ ವಾರ್ಷಿಕವಾಗಿ ₹ 4.50 ಲಕ್ಷ ದೊಳಗಿದ್ದು, ಶಿಕ್ಷಣ ಸಾಲ ಪಡೆಯುವಾಗಲೇ ವಿಚಾರ ತಿಳಿಸಿ, ತಹಸೀಲ್ದಾರ್‌ರಿಂದ ಸರ್ಟಿಫಿಕೇಟ್‌ ಪಡೆದು, ಅರ್ಜಿ ಸಲ್ಲಿಸಿರುವಲ್ಲಿ ಇಂತಹ ಸಾಲಕ್ಕೆ ಮಾತ್ರ ಅನುದಾನಿತ ಬಡ್ಡಿ ಸೌಲತ್ತು ಇರುತ್ತದೆ. ಆದರೆ ಉಳಿದ ಶಿಕ್ಷಣ ಸಾಲದಲ್ಲಿ ಶಿಕ್ಷಣ ಮುಗಿದು ಸಾಲ ಮರುಪಾವತಿರುವ ಕ್ರಮ ಮೇಲೆ ವಿವರಿಸಿದಂತಿದ್ದು, ಅಂದಿನಿಂದ ಬಡ್ಡಿ–ಕಂತು (ಇಎಂಐ) ಪ್ರಾರಂಭಿಸಬೇಕು.

ವೀಣಾ, ಕೊಪ್ಪಳ
ನಾನು ವಕೀಲ ವೃತ್ತಿ ಮಾಡುತ್ತೇನೆ ಹಾಗೂ ಗೃಹಿಣಿ. ಬಿರ್ಲಾ ಸನ್‌ ಮ್ಯೂಚುವಲ್‌ ಫಂಡ್‌ನಲ್ಲಿ ₹ 2000 ತಿಂಗಳಿಗೆ ವಿನಿಯೋಗಿಸುವ ವಿಚಾರದಲ್ಲಿ ನಿಮ್ಮ ಸಲಹೆ ಬೇಕಾಗಿದೆ.Good Equity traded Fund ಎಂದರೇನು. ಇದು ಹೇಗೆ ಕಾರ್ಯ ನಿರ್ವಯಿಸುತ್ತದೆ. ಇಲ್ಲಿ ಎಷ್ಟು ಹಣ ಹೂಡಬೇಕು ತಿಳಿಸಿರಿ. ನಾನು ಎಸ್‌ಬಿಐ ₹ 2000 ಆರ್‌.ಡಿ. 3 ವರ್ಷಗಳಿಗೆ ಮಾಡಿದ್ದೆ. ಅವಧಿ ಮುಗಿಯುತ್ತಲೇ ₹ 82000 ಬರುತ್ತದೆ. ಈ ಮೊತ್ತಕ್ಕೆ ತೆರಿಗೆ ಇದೆಯೇ?

ಉತ್ತರ: ಬಿರ್ಲಾ ಸನ್‌ ಮ್ಯೂಚುವಲ್‌ ಫಂಡ್‌ ಒಂದು ಉತ್ತಮ ಮ್ಯೂಚುವಲ್‌ ಫಂಡ್‌ ಕಂಪೆನಿಯಾಗಿದೆ. ನೀವು ಇಲ್ಲಿ ನೀವು ಬಯಸಿದಂತೆ ₹ 2000 ತಿಂಗಳಿಗೆ ಸಿಪ್‌ (ಎಸ್‌ಐಪಿ) ಮುಖಾಂತರ, ಒಂದು ವರ್ಷದ ಅವಧಿಗೆ ತುಂಬುತ್ತಾ ಬನ್ನಿ. ನೀವು ಈ ಯೋಜನೆಯಲ್ಲಿ ಉತ್ತಮ ವರಮಾನ ಗಳಿಸಿದರೆ, ಹಾಗೆಯೇ ಮುಂದುವರಿಸಿರಿ. Good Equity traded Fund ಎಂದರೆ, ಮ್ಯೂಚುವಲ್‌ ಫಂಡ್‌ ಕಂಪೆನಿಯವರು, ನಿಮ್ಮಿಂದ ಪಡೆದ ಹಣವನ್ನು, A Grade Company ಯಲ್ಲಿ ಹೂಡುತ್ತಾರೆ. A Grade ಎಂದರೆ ತುಂಬಾ ಉತ್ತಮ ಫಲಿತಾಂಶ ಹಾಗೂ ಹೆಸರು ಪಡೆದ ಕಂಪೆನಿಗಳು ಎಂದರ್ಥ. ಇಲ್ಲಿ ಕೂಡಾ ನೀವು ಕನಿಷ್ಠ ₹ 1000 ದಿಂದ ತಿಂಗಳಿಗೆ ಸಿಪ್‌ (ಎಸ್‌ಐಪಿ) ಮಾಡಬಹುದು. ಆರ್‌.ಡಿ. ಖಾತೆ ಅವಧಿ ಮುಗಿದು ಹಣ ಪಡೆಯುವಾಗ ಬರುವ ಬಡ್ಡಿಗೆ ತೆರಿಗೆ ಇರುತ್ತದೆ. ಆದರೆ, ನಿಮ್ಮ ವಾರ್ಷಿಕ ಒಟ್ಟು ಆದಾಯ ₹ 2.50 ಲಕ್ಷ ದಾಟಿದಲ್ಲಿ ಮಾತ್ರ ತೆರಿಗೆ ಅನ್ವಯವಾಗುತ್ತದೆ. ಆರ್‌.ಡಿ.ಯಲ್ಲಿ ಒಮ್ಮೆಲೇ ಬಡ್ಡಿ ಬಂದರೂ, ಆಯಾ ವರ್ಷ ಬಂದಿರುವ ಬಡ್ಡಿ ಆಯಾ ವರ್ಷದ ಆದಾಯಕ್ಕೆ ಸೇರಿಸಿ ತೆರಿಗೆ ಲೆಕ್ಕ ಹಾಕಬಹುದು. ಮುಂದೆ ನೀವು ಪ್ರಶ್ನೆ ಕೇಳುವ ಸಂದರ್ಭದಲ್ಲಿ ದೂರವಾಣಿ ಸಂಖ್ಯೆ ನಮೂದಿಸಿರಿ.


ಅಜಯ್‌, ಬೆಂಗಳೂರು
ನನ್ನ ತಂದೆಗೆ 58 ವರ್ಷ. ಅವರಿಗೆ ಬಿಡಿಎದಿಂದ ಒಂದು ನಿವೇಶನ ಮಂಜೂರಾಗಿದೆ ಹಾಗೂ ಸಾಲ ಪಡೆಯುವ ನಿರ್ಧಾರ ಮಾಡಿದ್ದೇನೆ. ಹೀಗೆ ಮಾಡುವ ಮುನ್ನ ನಿವೇಶನವನ್ನು ನನ್ನ ಹೆಸರಿಗೆ ದಾನ ಪತ್ರದಿಂದ ಪಡೆದು ನನ್ನ ಹೆಸರಿನಲ್ಲಿ ಬ್ಯಾಂಕ್ ಸಾಲ ಪಡೆಯ ಬೇಕೆಂದಿದ್ದೇನೆ. ಹೀಗೆ ಮಾಡಿದಲ್ಲಿ ಖರ್ಚು ಎಷ್ಟು ಬೀಳಬಹುದು ಹಾಗೂ ಇದು ಸರಿಯಾದ ದಾರಿಯೇ?

ಉತ್ತರ: ನಿಮ್ಮ ತಂದೆಗೆ 58 ವರ್ಷವಾಗಿದ್ದು, ಅವರಿಗೆ ಈಗ ಬ್ಯಾಂಕಿನಲ್ಲಿ ಸಾಲ ದೊರೆಯಲಾರದು. ಈ ಕಾರಣದಿಂದ ನೀವು ನಿವೇಶನ ದಾನ ಪತ್ರದಿಂದ (By Gift Deed) ಪಡೆದು, ಬ್ಯಾಂಕ್ ಸಾಲ ಪಡೆಯುವ ಉದ್ದೇಶ ಹೊಂದಿರಬೇಕು ಎಂದು ಭಾವಿಸುವೆ. ನಿಮ್ಮ ತಂದೆಯವರಿಗೆ ಸಾಲ ಮರು ಪಾವತಿಸಲು, ಸೇವಾವಧಿ ಇಲ್ಲವಾದ್ದರಿಂದ, ಬ್ಯಾಂಕುಗಳಲ್ಲಿ ಸಾಲ ಸಿಗದಿರುವುದು ಸತ್ಯದ ಸಂಗತಿ. ಆದರೆ ನಿವೇಶನ ಅವರ ಹೆಸರಿನಲ್ಲಿ ನೋಂದಾಯಿಸುವ ತನಕ, ಅಂತಹ ನಿವೇಶನ ಬಿಡಿಎ ಸೊತ್ತು ಆಗಿದ್ದು ಅವರಿಗೆ ನಿವೇಶನವನ್ನು ಬೇರೆಯವರಿಗೆ ದಾನ ಪತ್ರ ಮುಖಾಂತರ ಅಥವಾ ಇನ್ನಿತರ ವಿಧಾನಗಳಿಂದ ವರ್ಗಾಯಿಸಲು ಬರುವುದಿಲ್ಲ. ನಿಮ್ಮ ತಂದೆ, ನಿಮ್ಮನ್ನು ಸಹ ಸಾಲಗಾರರಾಗಿ (Co borrow) ಮಾಡಿಕೊಂಡು, ನೀವು ಬ್ಯಾಂಕಿಗೆ ಸಾಲ ತೀರಿಸುವ ಭರವಸೆ ಪತ್ರ ಕೊಟ್ಟಲ್ಲಿ ನಿಮ್ಮ ತಂದೆಯವರಿಗೆ ನಿವೇಶನ ಕೊಳ್ಳಲು ಸಾಲ ಸಿಗಬಹುದು. ಪ್ರಯತ್ನ ಮಾಡಿರಿ.

ಪ್ರದೀಪ್ ಬಾಲಾರ್, ದಾವಣಗೆರೆ
ನಾನು 5 ತಿಂಗಳ ಹಿಂದೆ ‘ಡಿ’ ಗ್ರೂಫ್ ನೌಕರನಾಗಿ ರೈಲ್ವೆಯಲ್ಲಿ ಕೆಲಸಕ್ಕೆ ಸೇರಿದ್ದೇನೆ. ಸಂಬಳ ಬೇಸಿಕ್ 18,000. ಅಲೋವೆನ್ಸ್ ₹ 20,000 (ಒಟ್ಟಿನಲ್ಲಿ ₹ 38,000) ಎನ್‌ಪಿಎಸ್ ₹ 1,800 ಕಡಿತವಾಗುತ್ತದೆ. ನನಗೆ ಈಗ ರಾಜ್ಯ ಸರ್ಕಾರದಲ್ಲಿ ‘ಸಿ’ ಗ್ರೂಪ್‌ನಲ್ಲಿ ಕೆಲಸ ಸಿಕ್ಕಿದೆ. ನಾನು ರೈಲ್ವೆ ನೌಕರಿ ಬಿಟ್ಟರೆ, ಕಟ್ಟಿದ ಎನ್‌ಪಿಎಸ್ ಹಣ ಸಿಗಬಹುದೇ? 

ಉತ್ತರ: ಒಂದು ಉದ್ಯೋಗದಿಂದ ಮತ್ತೊಂದು ಉದ್ಯೋಗಕ್ಕೆ ಬದಲಾಯಿಸುವಾಗ ಮೊದಲು ಕಟ್ಟುತ್ತಿದ್ದ ಎನ್‌ಪಿಎಸ್ ಕೂಡಾ ಮುಂದೆ ಬದಲಾಯಿಸುವ ಉದ್ಯೋಗದ ಜೊತೆ ಬದಲಾಯಿಸಿಕೊಳ್ಳಬಹುದು ಹಾಗೂ ಉದ್ಯೋಗದಾತರಿಂದ ಸಂಬಳದಲ್ಲಿ ಕಡಿತ ಮಾಡಿ ಹಣ ರವಾನಿಸಬಹುದು. ನೀವು ತೆರಿಗೆಗೆ ಒಳಗಾಗುವುದರಿಂದ ತಕ್ಷಣ ಪಿಪಿಎಫ್ ಖಾತೆ ಪ್ರಾರಂಭಿಸಿ, ಸಾಧ್ಯವಾದಷ್ಟು ಹಣ (ಗರಿಷ್ಠ ₹ 1.50 ಲಕ್ಷ) ತುಂಬುತ್ತಾ ಬನ್ನಿ. ನೀವು ಅವಿವಾಹಿತರೆಂದು ಭಾವಿಸುತ್ತೇನೆ. ಮದುವೆ ಖರ್ಚಿಗೆ ಸರಿ ಹೋಗುವಂತೆ ಕನಿಷ್ಠ ₹ 5,000 ಆರ್.ಡಿ., 3 ವರ್ಷ ಅವಧಿಗೆ ಮಾಡಿರಿ. ಪಿಎಲ್‌ಐ ಅಥವಾ ಎಲ್‌ಐಸಿ ಯಲ್ಲಿ ಕನಿಷ್ಠ ₹ 25,000 ವಾರ್ಷಿಕವಾಗಿ ತುಂಬಿರಿ. ಉಳಿತಾಯದ ಗೀಳು ಪ್ರಾರಂಭದಿಂದಲೇ ಇರುವಲ್ಲಿ ಮುಂದಿನ ಜೀವನ ಹಸನಾಗುತ್ತದೆ.

ಹೆಸರು–ಊರು ಬೇಡ
ನನ್ನ ವಯಸ್ಸು 67, 2007 ಹಾಗೂ 2009ರಲ್ಲಿ ಅಂಚೆ ಕಚೇರಿಯಲ್ಲಿ ಕಿಸಾನ್ ವಿಕಾಸ್‌ ಪತ್ರ ಪಡೆದಿದ್ದೆ ಹಾಗೂ ₹  6,000 ಆರ್.ಡಿ ಮಾಡಿದ್ದೆ. ಇವುಗಳಲ್ಲಿ ಕೆಲವು  ಅವಧಿ  ಪೂರ್ಣಗೊಂಡಿವೆ. ನಾನು ಅಂಚೆ ಕಚೇರಿಗೆ ಹಣ ಪಡೆಯಲು ಹೋದಾಗ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮತ ಚಲಾವಣೆಯ ಗುರುತಿನ ಚೀಟಿ, ವಿಳಾಸದ ಪುರಾವೆ ಕೇಳಿದರು. ನಾನು ಅಮೆರಿಕದ ಪಾಸ್ ಪೋರ್ಟ್ ಹೊಂದಿದ್ದು, ಅಲ್ಲಿಯ ಪ್ರಜೆಯಾಗಿದ್ದೇನೆ. ಅಲ್ಲಿಂದ ಬರುವಾಗ ಪಿಟಿಓ ಕಾರ್ಡ್ ಮಾಡಿಸಿಕೊಂಡು ಬಂದಿರುತ್ತೇನೆ. ಇವೆಲ್ಲ ನನ್ನ ಮಗನನ್ನು ಅಲ್ಲಿಗೆ Sponser ಮಾಡುವುದಕ್ಕಾಗಿ ಅಲ್ಲಿ ನೆಲೆಸಿರುವ ನನ್ನ ಅಕ್ಕನ ಮೂಲಕ ಆಗಿದೆ. ನಾನು ಕೈಗೊಂಡ ಕ್ರಮಗಳು ಸರಿಯೇ?

ಉತ್ತರ: ನಿಮ್ಮ ಪತ್ರವನ್ನು ಭಾರತದಲ್ಲಿ ಪೋಸ್ಟ್ ಮಾಡಿದ್ದೀರಿ. ಪ್ರಾಯಶಃ ನೀವು ಭಾರತದಲ್ಲಿ ವಾಸವಾಗಿದ್ದೀರಿ ಎಂದು ತಿಳಿಯುತ್ತೇನೆ. ಒಂದು ವೇಳೆ ಅಮೆರಿಕದಲ್ಲಿ ಇರುವುದಾದಲ್ಲಿ ಇಂಟರ್‌ನೆಟ್ ಮುಖಾಂತರ ಈ ಉತ್ತರ ನೋಡಿರಿ. ನಿಮ್ಮ ಇಡೀ ಪತ್ರ ಓದಿದಾಗ ನೀವು ಹೆಚ್ಚಿನ ಪಕ್ಷ ಅಮೆರಿಕದ ಪ್ರಜೆ ಇರಲಿಕ್ಕಿಲ್ಲ ಎಂದು ನನ್ನ ಅಭಿಪ್ರಾಯ. ಬರೇ ಪಾಸ್‌ ಪೋರ್ಟ್ ಹೊಂದಿದಾಕ್ಷಣ ಅಲ್ಲಿಯ ಪ್ರಜೆಯಾಗಲು ಸಾಧ್ಯವಿಲ್ಲ. ಪತ್ರದಲ್ಲಿ ದೂರವಾಣಿ ಸಂಖ್ಯೆ ತಿಳಿಸಿದ್ದರೆ ತಕ್ಷಣ ನಿಮ್ಮೊಡನೆ ಮಾತನಾಡಬಹುದಿತ್ತು. ನನ್ನ ಪ್ರಕಾರ ನಿಮಗೆ ಅಂಚೆ ಕಚೇರಿಯಿಂದ ಹಣ ಪಡೆಯಲು ತೊಂದರೆ ಇಲ್ಲ, ಆದರೆ ಅವರು ತಿಳಿಸಿದಂತೆ, ಪ್ಯಾನ್, ಆಧಾರ್ ಗುರುತಿನ ಕಾರ್ಡು ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ದೂರವಾಣಿ ಸಂಖ್ಯೆಯೊಂದಿಗೆ ನನಗೆ uppuranik@gmail.comಗೆ ಇ–ಮೇಲ್ ಮಾಡಿರಿ.

ಶಾಂತಾ ನಾಗರಾಜ್
7–8 ವರ್ಷಗಳ ಹಿಂದೆ ಒಂದು ಫ್ಲ್ಯಾಟ್‌ ಅನ್ನು ನನ್ನ ಮಗಳು ತಂದೆ ಹೆಸರಿಗೆ ಕೊಂಡು ಕೊಂಡಿದ್ದಳು. ಸ್ವಲ್ಪ ಸಮಯದ ನಂತರ ಅದೇ ಫ್ಲ್ಯಾಟ್‌ ಅನ್ನು ಅವಳ ತಂದೆ ಮಗಳಿಗೆ ಗಿಫ್ಟ್ ಡೀಡ್ ಮುಖಾಂತರ ಕೊಟ್ಟರು. ನಮ್ಮ ಮಗಳು ಅಮೆರಿಕದಲ್ಲಿದ್ದಾಳೆ ಹಾಗೂ ಫ್ಲ್ಯಾಟ್‌ ಅನ್ನು ಮಾರಾಟ ಮಾಡಬೇಕೆಂದಿದ್ದಾಳೆ. ಗಿಫ್ಟ್ ಮಾಡಿರುವ ಆಸ್ತಿ ಮಾರಾಟ ಮಾಡಲು ತೊಂದರೆ ಇದೆಯೇ ತಿಳಿಸಿರಿ. ಪ್ಯಾನ್ ಕಾರ್ಡು ಅವಶ್ಯವಿದೆಯೇ ಹಾಗೂ ಪವರ್ ಆಫ್ ಆಟಾರ್ನಿ ಮೇಲೆ ಮಾರಾಟ ಮಾಡಬಹುದೇ? 

ಉತ್ತರ: Transfer of Property Act ನಂತೆ, ಸ್ಥಿರ ಆಸ್ತಿ (ಮನೆ, ಫ್ಲ್ಯಾ ಟ್, ನಿವೇಶನ) ಯನ್ನು ಗಿಫ್ಟ್ ಡೀಡ್ ಮುಖಾಂತರ ಒಬ್ಬರಿಂದೊಬ್ಬರಿಗೆ ವರ್ಗಾಯಿಸಬಹುದು. ಇದರಿಂದ ದಾನವಾಗಿ ಪಡೆದವರು ಯಾವಾಗ ಬೇಕಾದರೂ ಮಾರಾಟ ಮಾಡಬಹುದು. ದಾನ ಪಡೆದ ಆಸ್ತಿಯಾದ್ದರಿಂದ ಏನೂ ತೊಂದರೆ ಇರುವುದಿಲ್ಲ. ನಿಮ್ಮ ಮಗಳು ಫ್ಲ್ಯಾಟ್ ಮಾರಾಟ ಮಾಡುವ ಉದ್ದೇಶಕ್ಕೋಸ್ಕರ ಭಾರತಕ್ಕೆ ಬರುವ ಅವಶ್ಯವಿಲ್ಲ. ಅವರು ನೀವು ಬರೆದು ಕಳಿಸುವ ಫವರ್ ಆಫ್ ಅಟಾರ್ನಿ, ಅಮೆರಿಕದ ಎಂಬೆಸಿಯಲ್ಲಿ, ಸಮಕ್ಷಮ ಸಹಿ ಹಾಕಿ, ಎಂಬೆಸಿಯ ಸೀಲು ಹಾಕಿಸಿ ಕಳುಹಿಸಿದರೆ, ಅಂತಹ ಫವರ್ ಆಫ್ ಅಟಾರ್ನಿ ಹೊಂದಿದವರು ಭಾರತದಲ್ಲಿ ಸ್ಥಿರ ಆಸ್ತಿ ಮಾರಾಟ ಮಾಡಬಹುದು. ಇಂತಹ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಅವಶ್ಯವಿದೆ. ಪ್ಯಾನ್ ಕಾರ್ಡ್ ವಿಚಾರದಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT