ಸೋಮವಾರ, ಡಿಸೆಂಬರ್ 16, 2019
17 °C

ಮೊಬೈಲ್‌ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಬೈಲ್‌ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?

ವಾಲ್‌ ಪೇಪರ್ ಬಗ್ಗೆ ಎಚ್ಚರವಿರಲಿ

ನಿಮ್ಮ ಮೊಬೈಲ್ ಪರದೆಯಲ್ಲಿ ಮೀನು ಓಡಾಡುತ್ತಿರುವ, ಗಾಳಿಪಾಟ, ಪಕ್ಷಿಗಳು ಹಾರಾಡುತ್ತಿರುವ, ನೀರು ಹರಿಯುತ್ತಿರುವಂತಹ ಲೈವ್‌ ವಾಲ್‌ಪೇಪರ್‌ಗಳು ಇದ್ದರೆ ಅಂತಹುಗಳನ್ನು ಬಳಸದೇ ಇರುವುದು ಉತ್ತಮ. ಏಕೆಂದರೆ ಇವು ಮೊಬೈಲ್‌ ವೇಗವನ್ನು ಕುಗ್ಗಿಸುತ್ತವೆ. ಕಡಿಮೆ ಸಾಮರ್ಥ್ಯದ ರ‍್ಯಾಮ್‌, ಹಳೆಯ ಪ್ರೊಸೆಸರ್‌ಗಳಿರುವ ಮೊಬೈಲ್‌ಗಳಲ್ಲಾದರೆ ಇನ್ನೂ ಕಷ್ಟ. ಇಂತಹ ಲೈವ್‌ ವಾಲ್‌ಪೇಪರ್‌ಗಳು ಮೊಬೈಲ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಕ್ರಿಯಾಶೀಲವಾಗಿರುತ್ತವೆ. ಇದರಿಂದ ಮೊಬೈಲ್‌ ವೇಗಕ್ಕೆ ಪೆಟ್ಟು ಬೀಳುತ್ತದೆ.

ಇನ್ನು ಕ್ರೋಮ್‌ನಂತಹ ಸರ್ಚ್‌ ಎಂಜಿನ್‌ ಆ್ಯಪ್‌ ಸಹ  ರ‍್ಯಾಮ್‌ ಅನ್ನು ಹೆಚ್ಚಾಗಿ ಬಳಸಿಕೊಳ್ಳುತ್ತವೆ. ಇದನ್ನು ಹೆಚ್ಚು ಹೊತ್ತು ಬಳಸಿದ ನಂತರ ನಿಲ್ಲಿಸಿದರೂ ಈ ಮೊಬೈಲ್‌ ಯಥಾಸ್ಥಿತಿಗೆ ಬರಲು ಸ್ವಲ್ಪಹೊತ್ತು ಹಿಡಿಯುತ್ತದೆ.

ಉತ್ತಮ ಲಾಂಚರ್‌ ಬಳಸಿನೀವು ಕೊಳ್ಳುವ ಪ್ರತಿ ಸ್ಮಾರ್ಟ್‌ಫೋನ್‌ನಲ್ಲೂ ಒಂದು ಲಾಂಚರ್‌ ಅನ್ನು ಅಳವಡಿಸಲಾಗಿರುತ್ತದೆ. ಮೊಬೈಲ್‌ ಪರದೆ ಮೇಲೆ ಕಾಣುವ ಮೆನು ವಿಧಾನ, ಐಕಾನ್‌ಗಳು, ಸೂಚನೆಗಳು...ಇವೆಲ್ಲವೂ ಇದರಲ್ಲೇ ಇರುತ್ತವೆ. ಆದರೆ ಕೆಲವು ಲಾಂಚರ್‌ಗಳು ಮೊಬೈಲ್‌ ವೈಶಿಷ್ಟ್ಯಗಳನ್ನು ತೋರಿಸುವಂತೆ ಹೆಚ್ಚಿನ ಗಾತ್ರದಲ್ಲಿ ಇರುತ್ತವೆ. ಇವು  ರ‍್ಯಾಮ್‌ ಅನ್ನು ಹೆಚ್ಚಾಗಿ ಬಳಸುತ್ತವೆ.

ಹೀಗಾಗಿ ಕಡಿಮೆ ಅನಿಮೇಷನ್‌ನೊಂದಿಗೆ, ರ‍್ಯಾಮ್‌ ಅನ್ನು ಮಿತವಾಗಿ ಬಳಸುವ ಲಾಂಚರ್‌ಗಳನ್ನು ಅಳವಡಿಸಿಕೊಳ್ಳಿ. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಈಗಾಗಲೇ ಈವ್‌, ಗೂಗಲ್ ನೌ,  ಅಂತಹ ಕೆಲವು ಅತ್ಯುತ್ತಮ ಲಾಂಚರ್‌ಗಳು ಲಭ್ಯವಿವೆ.

ಬ್ರೌಸರ್‌ ಬಳಕೆ ಹೀಗಿರಲಿ

ಪ್ರತಿ ಮೊಬೈಲ್‌ನಲ್ಲೂ ಒಂದು ಬ್ರೌಸರ್‌ ಅನ್ನು ಸಂಸ್ಥೆಯವರು ಅಳವಡಿಸಿರುತ್ತಾರೆ. ಇವು ಉತ್ತಮವಾಗಿದ್ದರೂ, ರ‍್ಯಾಮ್‌ ಅನ್ನು ಹೆಚ್ಚಾಗಿ ಬಳಸುತ್ತವೆ. ಆದ್ದರಿಂದ ಒಪೆರಾ, ಫೈರ್‌ಫಾಕ್ಸ್‌ನಂತಹ ಬ್ರೌಸರ್‌ಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಒಪೆರಾದಲ್ಲಿ ಪಾಪ್‌ಅಪ್‌ ಬ್ಲಾಕರ್ ಮತ್ತು ಡೇಟಾ ಸೇವರ್‌ ಆಯ್ಕೆಗಳು ಬ್ರೌಸರ್‌ ವೇಗವನ್ನು ಹೆಚ್ಚಿಸಲು ನೆರವಾಗುತ್ತವೆ.

ಫೇಸ್‌ಬುಕ್‌ ಲೈಟ್‌ ಒಳ್ಳೆಯದು

ಮನೆಯಲ್ಲಿ ಕಂಪ್ಯೂಟರ್‌ ಇದ್ದವರು ಮೊಬೈಲ್‌ನಲ್ಲಿ ಫೇಸ್‌ಬುಕ್‌ ಲೈಟ್ ತಂತ್ರಾಂಶವನ್ನು ಅಳವಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಫೇಸ್‌ಬುಕ್‌ ತಂತ್ರಾಂಶ ಇರುವ ಮೊಬೈಲ್‌ ಫೋನ್‌ಗಳ ವೇಗ ಶೇ 15ರಷ್ಟು ಕಡಿಮೆಯಾಗುತ್ತದೆ ಎಂಬುದು ಸೈಬರ್‌ ತಂತ್ರಜ್ಞರ ಅಭಿಪ್ರಾಯ.

ಸ್ನ್ಯಾಪ್‌ ಚಾಟ್‌ ತಂತ್ರಾಂಶದಲ್ಲೂ ಇದೇ ಸಮಸ್ಯೆ ಇದೆ. ಫೇಸ್‌ಬುಕ್ ಲೈಟ್‌ನಲ್ಲಿ ಫೇಸ್‌ಬುಕ್‌ನಲ್ಲಿರುವ ಬಹುತೇಕ ಸೌಲಭ್ಯಗಳು ಇರುತ್ತವೆ. ಇದರ ರ‍್ಯಾಮ್‌ ಬಳಕೆ ಪ್ರಮಾಣವೂ ಕಡಿಮೆ.

ಆ್ಯಂಟಿ ವೈರಸ್ಗಳ ಬಗ್ಗೆ ಎಚ್ಚರವಿರಲಿ

ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಂಟಿವೈರಸ್‌ ತಂತ್ರಾಂಶಗಳನ್ನು ಬಳಸುವ ಬಗ್ಗೆ ಹಲವು ಭಿನ್ನಾಭಿಪ್ರಾಯಗಳಿವೆ. ಈ ರೀತಿಯ ತಂತ್ರಾಂಶಗಳು ಮೊಬೈಲ್‌ ವೇಗವನ್ನು ಕಡಿಮೆ ಮಾಡುತ್ತವೆ ಎಂಬುದು ಹಲವರ ಅಭಿಪ್ರಾಯ.

ಪ್ರತಿ ಮೊಬೈಲ್‌ನಲ್ಲೂ ಡಿಫಾಲ್ಟ್‌ ಆಗಿ ಯಾವುದಾದರೂ ಒಂದು ಆ್ಯಂಟಿ ವೈರಸ್‌ ತಂತ್ರಾಂಶ ಇರುತ್ತದೆ. ಇದು ಮೊಬೈಲ್‌ನ ರ‍್ಯಾಮ್‌ಗೆ ತಕ್ಕಂತೆ ಕೆಲಸ ಮಾಡುತ್ತದೆ. ಇದಲ್ಲದೆ ಮತ್ತೊಂದು ತಂತ್ರಾಂಶವನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ.

ಪ್ಲೇಸ್ಟೋರ್‌ನಲ್ಲಿ ಈಗಾಗಲೇ ಹಲವು ಆ್ಯಂಟಿವೈರಸ್ ತಂತ್ರಾಂಶಗಳು ಲಭ್ಯವಿವೆ. ಆದರೆ ಇವು ಕಂಪ್ಯೂಟರ್‌ನಲ್ಲಿ ಉಪಯೋಗವಾದಷ್ಟು ಮೊಬೈಲ್‌ನಲ್ಲಿ ಉಪಯೋಗವಾಗುತ್ತಿಲ್ಲ.

ಹೊಸ ತಂತ್ರಾಂಶಗಳ ಬಗ್ಗೆ ಎಚ್ಚರವಿರಲಿ

ಮೊಬೈಲ್‌ ವೇಗ ಹೆಚ್ಚಿಸಿಕೊಳ್ಳಲು ಈ ಆ್ಯಪ್‌ ಉತ್ತಮ, ಆ ತಂತ್ರಾಂಶ ಉತ್ತಮ. ಎಂಬ ಜಾಹೀರಾತುಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುತ್ತವೆ. ಇವು ನಿಮ್ಮ ಮೊಬೈಲ್‌ ವೇಗವನ್ನು ಒಂದೇ ಬಾರಿಗೆ ಹೆಚ್ಚಿಸುತ್ತವೆ ಎಂಬ ಸಂದೇಶಗಳೂ ಬರುತ್ತವೆ. ಇವುಗಳ ಬಗ್ಗೆ ಎಚ್ಚರವಿರಲಿ.

ಏಕೆಂದರೆ ಇವುಗಳನ್ನು ಅಳವಡಿಸಿಕೊಳ್ಳಬೇಕೆಂದರೆ ನಿಮ್ಮ ಮೊಬೈಲ್‌ಫೋನ್‌ ಅನ್ನು ರೂಟ್‌ ಮಾಡಬೇಕು ಎಂದು ಸೂಚಿಸಲಾಗುತ್ತದೆ.ಇಂತಹ ತಂತ್ರಾಂಶಗಳು ಸೈಬರ್‌ ನಿಪುಣರಿಗೆ, ತಂತ್ರಜ್ಞರಿಗೆ ಉಪಯೋಗವಾಗುವಷ್ಟು ಸಾಮಾನ್ಯ ಬಳಕೆದಾರರಿಗೆ ಉಪಯೋಗವಾಗುವುದಿಲ್ಲ. ಡೆವಲಪರ್ ಮೋಡ್‌, ರ‍್ಯಾಮ್‌ ಬೂಸ್ಟರ್, ಎಸ್‌ಡಿ ಕಾರ್ಡ್‌ ಸ್ಪೀಡರ್‌ನಂತಹ ತಂತ್ರಾಂಶಗಳ ಬಗ್ಗೆ ಅಂತರ್ಜಾಲದಲ್ಲಿ ಹೆಚ್ಚು ಜಾಹೀರಾತುಗಳು ಪ್ರಕಟವಾಗುತ್ತವೆ. ಇವನ್ನು ಬಳಸುವ ಬದಲು ಈ ಮೇಲಿನ ಕ್ರಮಗಳನ್ನು ಅನುಸರಿಸಿದರೂ ಸಾಕು.

ಪ್ರತಿಕ್ರಿಯಿಸಿ (+)