ಶುಕ್ರವಾರ, ಡಿಸೆಂಬರ್ 6, 2019
21 °C
ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಸಭೆ; ಕಾರ್ಯಕರ್ತರ ಒಕ್ಕೊರಲ ಒತ್ತಾಯ

ಹೊರಗಿನವರಿಗೆ ಕಾಂಗ್ರೆಸ್‌ ಟಿಕೆಟ್‌ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊರಗಿನವರಿಗೆ ಕಾಂಗ್ರೆಸ್‌ ಟಿಕೆಟ್‌ ಬೇಡ

ಶ್ರೀರಂಗಪಟ್ಟಣ: ‘ಚುನಾವಣೆ ಹೊಸ್ತಿಲಲ್ಲಿ ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬರುವವರಿಗೆ ಟಿಕೆಟ್‌ ನೀಡದೆ, ಪಕ್ಷಕ್ಕಾಗಿ ದುಡಿದಿರುವವರಿಗೆ ಟಿಕೆಟ್‌ ನೀಡಬೇಕು’ ಎಂದು ಪಕ್ಷದ ವರಿಷ್ಠರ ಎದುರು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಒಕ್ಕೊರಲ ಒತ್ತಾಯ ಮಾಡಿದರು.

ಇಲ್ಲಿನ ಪ್ರವಾಸಿ ಮಂದಿರ ಆವರಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟೇಗೌಡ, ಕೆಪಿಪಿಸಿಸಿ ಸದಸ್ಯ ಎಂ.ಭಾಸ್ಕರ್‌, ಮಾಜಿ ಪ್ರಧಾನ ನಗುವನಹಳ್ಳಿ ರಾಮಸ್ವಾಮಿಗೌಡ, ಅರಕೆರೆ ನಾಗೇಂದ್ರ, ಬೆಳಗೊಳ ಮಂಜುನಾಥ್‌, ಮುಂಡುಗದೊರೆ ಮೋಹನ್‌, ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಗಾಯತ್ರಿ, ಹನುಮಂತು ಈ ಒತ್ತಾಯ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಎಐಸಿಸಿ ಕಾರ್ಯದರ್ಶಿ ವಿಶ್ವನಾಥನ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ ಅವರ ಎದುರು ಮನವಿ ಸಲ್ಲಿಸಿದರು.

‘ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಾಂಗ್ರೆಸ್ಸಿಗರೇ ಸೋಲಿಸುವ ಪರಿಪಾಠ ಕ್ಷೇತ್ರದಲ್ಲಿ ನಡೆಯುತ್ತಿದೆ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಒಂದು ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಎರಡೆರಡು ‘ಬಿ’ ಫಾರಂಗಳನ್ನು ನೀಡಲಾಗುತ್ತದೆ.

ಕೆಪಿಸಿಸಿಯ ಈ ಪ್ರಮಾದದಿಂದ ಸ್ಥಳೀಯ ನಾಯಕರ ನಡುವೆ ಭಿನ್ನಾಪ್ರಾಯ ಮತ್ತು ದ್ವೇಷಕ್ಕೆ ಕಾರಣವಾಗುತ್ತಿದೆ. ಪಕ್ಷದ ಸಂಘಟನೆಗೆ ಇಂತಹ ಬೆಳವಣಿಗೆ ತೊಡಕಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಬೆಳಗೊಳ ಮಂಜುನಾಥ್‌ ಆಗ್ರಹಿಸಿದರು.

‘ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡಲು ಮಾನದಂಡ ಇಟ್ಟುಕೊಳ್ಳಬೇಕು. ಚುನಾವಣೆಗೆ 3 ತಿಂಗಳು ಇರುವಾಗಲೇ ಅಭ್ಯರ್ಥಿಯನ್ನು ಘೋಷಿಸಬೇಕು’ ಎಂದು ಎಂ.ಪುಟ್ಟೇಗೌಡ ಒತ್ತಾಯಿಸಿದರು. ಕೆಪಿಸಿಸಿ ಸದಸ್ಯ ಎಂ.ಭಾಸ್ಕರ್‌ ಕೂಡ ಇದೇ ಒತ್ತಾಯ ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ ಮುಖಂಡ ದರಸಗುಪ್ಪೆ ಹನುಮಂತು, ‘ಅಂಬರೀಷ್‌ ಅವರ ಸಚಿವ ಸ್ಥಾನ ಹೋದ ಬಳಿಕ ಅವರ ಬೆಂಬಲಿಗರ ಕಷ್ಟ ಕೇಳುವವರೇ ಇಲ್ಲವಾಗಿದೆ. ಸ್ಥಳೀಯ ಮುಖಂಡರು ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ಇದು ಗೊಂದಲಕ್ಕೆ ಕಾರಣವಾಗಿ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಎರಡೂ ಕಡೆಯವರನ್ನು ದಿನೇಶ್‌ ಗುಂಡೂರಾವ್‌ ಸಮಾಧಾನಪಡಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌.ಲಿಂಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎನ್‌.ಗಂಗಾಧರ್‌, ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್‌ಗೌಡ, ಕ್ಷೇತ್ರಾಧ್ಯಕ್ಷ ಗುಣವಂತ, ಉಪಾಧ್ಯಕ್ಷ ದಿಲೀಪ್‌, ಚಿದಂಬರ್‌ ಇದ್ದರು.

***

ಕಾರ್ಯಕರ್ತರ ಅಸಮಾಧಾನ

ಪಾಂಡವಪುರ: ‘ಪಕ್ಷದ ಕಾರ್ಯಕರ್ತರನ್ನು ಸಮಾನಾಂತರ ವಾಗಿ ಕರೆದುಕೊಂಡು ಹೋಗುವ ಸಮರ್ಥ ನಾಯಕ ಈ ಕ್ಷೇತ್ರದಲ್ಲಿ ಇಲ್ಲವಾಗಿದೆ. ಆ ಕಾರಣಕ್ಕಾಗಿಯೇ ಕಳೆದ ಬಾರಿ ಬೇರೊಂದು ಪಕ್ಷದ ಅಭ್ಯರ್ಥಿಯನ್ನು ಕಾರ್ಯಕರ್ತರು ಬೆಂಬಲಿಸಿದರು. ಚುನಾವಣೆ ಬಂದಾಗ ಮಾತ್ರ ನಾಯಕರು ಪ್ರತ್ಯಕ್ಷರಾಗುತ್ತಾರೆ. ಕಾರ್ಯಕರ್ತರ ದುಃಖ– ದುಮ್ಮಾನಗಳಿಗೆ ಸ್ಪಂದಿಸುವ ನಾಯಕ ಇಲ್ಲಿಲ್ಲ’ ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು.

ಅಹಿಂದ ನಾಯಕರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಸಭೆಗೆ ಕೂಡ ನಮ್ಮನ್ನು ಕರೆದಿಲ್ಲ ಎಂದು ಪುರಸಭೆ ಸದಸ್ಯ ಡಿ.ಹುಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಮುಖಂಡರ ಗುಂಪುಗಾರಿಕೆಯಿಂದ ಪಕ್ಷ ಹಾಳಾಗುತ್ತಿದೆ. ಹಾಗಾಗಿ, ದುದ್ದ ಹೋಬಳಿಯ ಸಮರ್ಥ ನಾಯಕರಿಗೆ ಪಕ್ಷದಿಂದ ಟಿಕೆಟ್‌ ನೀಡಿ’ಎಂದು ದುದ್ದ ಹೋಬಳಿಯ ಕಾರ್ಯಕರ್ತರು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಿ: ‘ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಪಿಎಸ್‌ಎಸ್‌ಕೆ) ಕೂಡಲೇ ಆರಂಭಿಸಲು ಕ್ರಮವಹಿಸಿ’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ದಿನೇಶ್ ಗುಂಡೂರಾವ್‌ ಅವರನ್ನು ಒತ್ತಾಯಿಸಿದರು.

***

6 ತಿಂಗಳು ಮುಂಚಿತವಾಗಿ ಅಭ್ಯರ್ಥಿ ಆಯ್ಕೆ: ದಿನೇಶ್‌

ಪಾಂಡವಪುರ:  ‘ವಿಧಾನಸಭೆ ಚುನಾವಣೆಗೆ 6 ತಿಂಗಳ ಮುಂಚಿತವಾಗೇ ಸ್ಥಳೀಯವಾಗಿ  ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಕರೆದು ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ಸೋಮವಾರ ಬ್ಲಾಕ್‌ ಕಾಂಗ್ರೆಸ್ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಮೇಲುಕೋಟೆ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಮುಂಚಿತವಾಗೇ ಆಯ್ಕೆಮಾಡಿ ಪಕ್ಷವನ್ನು ಸಂಘಟಿಸಲಾಗುವುದು. ಎಲ್ಲ ಕಾರ್ಯಕರ್ತರು ಒಪ್ಪುವ ವ್ಯಕ್ತಿಯನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗುವುದು. ಯಾರೇ ಅಭ್ಯರ್ಥಿಯಾಗಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸಮಾಡಬೇಕು’ ಎಂದರು.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ:  ಎಐಸಿಸಿ ಕಾರ್ಯದರ್ಶಿ ವಿಶ್ವನಾಥನ್‌ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರಸ್‌ ಮತ್ತೆ ಅಧಿಕಾರಕ್ಕೆ ಬರುವ ಎಲ್ಲ ಸೂಚನೆಗಳು ಕಂಡುಬರುತ್ತಿವೆ. ಕಾಂಗ್ರೆಸ್‌ ಪ್ರನಾಳಿಕೆಯಲ್ಲಿ ಘೋಷಿಸಿದ್ದ ಶೇ 90ರಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ನೂರಾರು ಜನಪರ ಕಾರ್ಯಕ್ರಮಗಳು ಸೇರಿದಂತೆ ಸಾಲಮನ್ನಾ ಮಾಡಿರುವುದು ಕಾಂಗ್ರೆಸ್‌ ಪಕ್ಷದ ಹೆಗ್ಗಳಿಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತೆರಳಿ ಜನರಿಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಾಗಿದೆ’ ಎಂದು ಹೇಳಿದರು.

ಕಾರ್ಯಕರ್ತರು ದಿಕ್ಕುತಪ್ಪಿದರು: ಕೆಪಿಸಿಸಿ ಸದಸ್ಯ ಎಲ್.ಡಿ.ರವಿ ಮಾತನಾಡಿ, ‘ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕಾರ್ಯಕರ್ತರು ಸ್ಥಳೀಯವಾಗಿ ರಾಜಕೀಯ ಗೊಂದಲ ಉಂಟು ಮಾಡಿಕೊಂಡು ಬೇರೊಂದು ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣರಾದರು. ಹೀಗಾಗಿ, ಹೀನಾಯವಾಗಿ ಸೋಲಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶ್ಯಾಮಲಗೌಡ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು, ಕೆಪಿಸಿಸಿ ಸದಸ್ಯ ಗಂಗಾಧರ್, ಪಿಎಸ್ಎಸ್‌ಕೆ ಅಧ್ಯಕ್ಷ ನಂಜುಂಡೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಲ್.ಸಿ.ಮಂಜುನಾಥ್ ಇದ್ದರು.

***

ಮಂಗಳೂರು ಕೋಮುಗಲಭೆಗೆ ಬಿಜೆಪಿಯೇ ನೇರ ಹೊಣೆ

ಪಾಂಡವಪುರ: ‘ಬಿಜೆಪಿ ಕೋಮುಗಲಭೆಯನ್ನು ಸೃಷ್ಟಿಸುವುದು ಮತ್ತು ಪರಸ್ಪರ ಧರ್ಮಗಳಲ್ಲಿ ದ್ವೇಷ ಹುಟ್ಟುಹಾಕುವ ಕೆಲಸದಲ್ಲಿ ತೊಡಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕರಾವಳಿಯ ಅಶಾಂತಿಗೆ ಬಿಜೆಪಿ ನೇರ ಹೊಣೆಯಾಗಿದೆ. ಕೋಮು ಸಾಮರಸ್ಯ ಕಾಪಾಡುವ ಕಾಂಗ್ರೆಸ್ ಪಕ್ಷದ ಮೇಲೆ ವಿನಾ ಕಾರಣ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇಂತಹ ದ್ವೇಷದ ರಾಜಕಾರಣವನ್ನು ಬಿಜೆಪಿ ನಿಲ್ಲಿಸಬೇಕು. ಕೇವಲ ರಾಜಕೀಯ ಲಾಭಕ್ಕಾಗಿ ಮುಗ್ದ ಹಿಂದೂ–ಮುಸ್ಲಿಂ ಯುವಕರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು’ ಎಂದರು.

ಪ್ರತಿಕ್ರಿಯಿಸಿ (+)