ಬುಧವಾರ, ಡಿಸೆಂಬರ್ 2, 2020
25 °C

ಮನೆ ಬಾಗಿಲಿಗೆ ಸಂಡಿಗೆ, ಹಪ್ಪಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆ ಬಾಗಿಲಿಗೆ ಸಂಡಿಗೆ, ಹಪ್ಪಳ

ರುಚಿ, ಶುಚಿಯಾದ ಕುರುಕಲು ತಿಂಡಿಗಳು ಎಲ್ಲರಿಗೂ ಇಷ್ಟ. ಕೆಲವರಿಗಂತೂ ಊಟದ ಜತೆ ಉಪ್ಪಿನಕಾಯಿ ಕಡ್ಡಾಯವಾಗಿ ಇರುವಂತೆ ಹಪ್ಪಳ, ಸಂಡಿಗೆಗಳೂ ಬೇಕೆ ಬೇಕು. ಸಂಜೆ ಹೊತ್ತಿನಲ್ಲಿ ಚಹ – ಕಾಫಿ ಗುಟುಕರಿಸುವಾಗ ಚಕ್ಕುಳಿ, ಕೋಡುಬಳೆ ಇರದಿದ್ದರೆ ಚಡಪಡಿಸುತ್ತಾರೆ. ಗೃಹಿಣಿಯರು ಮನೆಯಲ್ಲಿಯೇ ತಯಾರಿಸುವ ಇವುಗಳ ರುಚಿ, ಸ್ವಾದ ಮಾರುಕಟ್ಟೆಯಲ್ಲಿ ಸಿಗುವ ಇಂತಹ ಉತ್ಪನ್ನಗಳಲ್ಲಿ ಸಿಗಲಾರದು. ಮನೆಯಿಂದ ದೂರ ಇರುವವರಿಗಂತೂ ಮನೆ ರುಚಿಯ ಚಟ್ನಿ, ಉಪ್ಪಿನಕಾಯಿ, ಕುರುಕಲು ತಿಂಡಿಗಳು ಬೇಕೆಂದಾಗಲ್ಲೆಲ್ಲ ದೊರೆಯಲಾರವು. ಅವುಗಳನ್ನು ಹುಡುಕಿಕೊಂಡು ಅಂಗಡಿ – ಮಳಿಗೆಗಳಿಗೆ ಎಡತಾಕಬೇಕಾಗುತ್ತದೆ. ಮನೆ ಬಾಗಿಲಲ್ಲೇ ಇಂತಹ ಗುಣಮಟ್ಟದ, ಶುದ್ಧ ಸಸ್ಯಾಹಾರದ ಸರಕು ಸಿಗುವಂತಿದ್ದರೆ ಎನ್ನುವ ಅನೇಕರ ಹಂಬಲವನ್ನು ಬೆಂಗಳೂರಿನ ‘ಸಂಡಿಗೆಆ್ಯಟ್‌ಡೋರ್‌ಡಾಟ್‌ಕಾಂ’ (sandigeatdoors.com) ಯಶಸ್ವಿಯಾಗಿ ಪೂರೈಸುತ್ತಿದೆ.

ನಾಲ್ವರು ಎಂಜಿನಿಯರುಗಳು ಸೇರಿಕೊಂಡು ಕುರುಕಲು ತಿಂಡಿ, ಸಿಹಿ ತಿನಿಸುಗಳನ್ನು ತಯಾರಿಸುವ ಕುಟುಂಬದ ಉದ್ಯಮವನ್ನೇ ಕಾಲಕ್ಕೆ ತಕ್ಕಂತೆ ಹೊಸ ಎತ್ತರಕ್ಕೆ ಕೊಂಡೊಯ್ಯಲು ಈ ಸಾಹಸಕ್ಕೆ ಕೈಹಾಕಿದ್ದಾರೆ. ಯಶಸ್ಸಿನ ಒಂದೊಂದೇ ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾದ ಭೂಷಣ್‌, ಸಂಧ್ಯಾ, ರಂಜನ್‌ ಮತ್ತು ರವಿ ಈ ಸಂಸ್ಥೆಯ ಸಹ ಸ್ಥಾಪಕರಾಗಿದ್ದಾರೆ. ಕಾಲೇಜ್‌ ಸ್ನೇಹಿತರಾದ ಇವರು ಎಂಜಿನಿಯರಿಂಗ್‌ ಪದವಿ ಮುಗಿಸುತ್ತಿದ್ದಂತೆ ಕನೆಕ್ಟ್‌ ಸೊಲುಷನ್ಸ್‌ (www.e-connectsolutions.in) ಸಂಸ್ಥೆ ಸ್ಥಾಪಿಸಿ ಅಂತರ್ಜಾಲ ತಾಣ, ಮೊಬೈಲ್‌ ಕಿರುತಂತ್ರಾಂಶ ಅಭಿವೃದ್ಧಿಯಂತಹ ಸೇವೆಗಳನ್ನು ಒದಗಿಸುತ್ತಿದ್ದರು.

‘ಈ ಸಾಫ್ಟ್‌ವೇರ್‌ ಸ್ಟಾರ್ಟ್‌ಅಪ್‌ ಆರಂಭಿಸಿ ಸಮಯದ ಪರಿವೆ ಇಲ್ಲದೇ ಕೆಲಸ ಮಾಡುವಾಗ ಕಚೇರಿಯಲ್ಲಿನ ಪುಟ್ಟ ಅಡುಗೆ ಮನೆಯಲ್ಲಿ ಊಟ ತಿಂಡಿ ತಯಾರಿಸುತ್ತಿದ್ದೇವು. ಸಾರಿನ ಪುಡಿ, ಉಪ್ಪಿನಕಾಯಿ ಬೇಕಾದಾಗಲ್ಲೆಲ್ಲ ಅಂಗಡಿಗಳಿಗೆ ಎಡತಾಕಬೇಕಾಗುತ್ತಿತ್ತು. ನಮ್ಮಿಷ್ಟದ ಸರಕು ಇರದಿದ್ದಾಗ, ಅಲ್ಲಿ ಲಭ್ಯ ಇದ್ದ ಸರಕನ್ನೇ ಖರೀದಿಸುವ ಅನಿವಾರ್ಯತೆ ಎದುರಾಗುತ್ತಿತ್ತು. ಮನೆ ಬಾಗಿಲಲ್ಲೇ ನಮ್ಮಿಷ್ಟದ ಸರಕು ದೊರೆಯುವಂತಾದರೆ ಚೆನ್ನಾಗಿರುತ್ತದೆ ಎಂಬ ಆಲೋಚನೆ ಮೊಳಕೆ ಒಡೆಯಿತು. ಆ ಚಿಂತನೆ ಸಾಕಾರಗೊಳಿಸಲು ಈ ವಹಿವಾಟು ಆರಂಭಿಸಲಾಯಿತು’ ಎಂದು ಈ ಸ್ಟಾರ್ಟ್‌ಅಪ್‌ನ ಸ್ಥಾಪಕರಲ್ಲಿ ಒಬ್ಬರಾಗಿರುವ ಭೂಷಣ್‌ ಹೇಳುತ್ತಾರೆ.

ಚಿಕ್ಕಪ್ಪ 40 ವರ್ಷಗಳಿಂದ ನಿರ್ವಹಿಸಿಕೊಂಡು ಬಂದಿದ್ದ ಆರ್‌. ವಿ. ಟೇಸ್ಟಿ ಬ್ರ್ಯಾಂಡ್‌ನ ವಹಿವಾಟನ್ನು ಈಗಿನ ಸಂದರ್ಭದಲ್ಲಿ ಇನ್ನಷ್ಟು ವಿಸ್ತರಿಸಿ, ವ್ಯವಸ್ಥಿತವಾಗಿ ವಹಿವಾಟು ನಡೆಸಿ, ಅಚ್ಚುಕಟ್ಟಾಗಿ ಪ್ಯಾಕ್‌ ಮಾಡಿ, ಬಳಕೆದಾರರ ಮನೆ ಬಾಗಿಲಿಗೆ ತಲುಪಿಸಲು ಭೂಷಣ್ ಅವರು ಒಂದು ವರ್ಷದ ಹಿಂದೆ ಈ ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಿದ್ದರು.

ಗ್ರಾಹಕರಿಂದ ಗ್ರಾಹಕರಿಗೆ ಬಾಯಿ ಮಾತಿನ ಪ್ರಚಾರದಿಂದಲೇ ಒಂದು ವರ್ಷದ ಅವಧಿಯಲ್ಲಿ ವಹಿವಾಟು ಸಾಕಷ್ಟು ಪ್ರಗತಿ ಕಂಡಿದೆ. ಈಗ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು, ಹೊಸ ಮಾರುಕಟ್ಟೆ ಕಂಡುಕೊಳ್ಳಲು, ಹೊಸ ಗ್ರಾಹಕರನ್ನು ತಲುಪಲು ಈ ಯುವ ಉದ್ಯಮಿಗಳು ಉತ್ಸಾಹದಿಂದ ಮುನ್ನುಗ್ಗುತ್ತಿದ್ದಾರೆ.

ವರ್ಷದ ಹಿಂದೆ 30 ಉತ್ಪನ್ನಗಳಿಂದ ಸಣ್ಣಗೆ ಚಾಲನೆ ನೀಡಿದ್ದ ವಹಿವಾಟಿನಲ್ಲಿ ಈಗ ಉತ್ಪನ್ನಗಳ ಸಂಖ್ಯೆ 80ಕ್ಕೆ ಹೆಚ್ಚಳಗೊಂಡಿದೆ.ಕ್ರಮೇಣ ಇನ್‌ಸ್ಟಂಟ್‌ ಫುಡ್‌ ತಯಾರಿಕೆಗೂ ಇಳಿಯುವ ಆಲೋಚನೆ ಈ ಹೊಸ ಉದ್ಯಮಶೀಲರಿಗೆ ಇದೆ.

ಸಂಸ್ಥೆಯ ಉತ್ಪನ್ನಗಳನ್ನು ಬಳಕೆದಾರರು ತಮ್ಮಿಷ್ಟದಂತೆ ಹಪ್ಪಳ, ಸಂಡಿಗೆ ಮತ್ತಿತರ ಕುರುಕಲು ತಿಂಡಿಗಳನ್ನು ಎಣ್ಣೆಯಲ್ಲಿ ಕರಿದು ಇಲ್ಲವೆ ಮೈಕ್ರೊವೇವ್‌ನಲ್ಲಿ ಬೇಯಿಸಿ ಸೇವಿಸಬಹುದು. ಆವಿಯಲ್ಲಿ ಬೇಯಿಸಿ, ಡ್ರಯರ್‌ನಲ್ಲಿ ಒಣಗಿಸಿ ತಯಾರಿಸುವುದರಿಂದ ಇವು ಸಂಪೂರ್ಣವಾಗಿ ದೂಳಿನಿಂದ ಮುಕ್ತವಾಗಿರುತ್ತವೆ.

‘ಅರಳು ಸಂಡಿಗೆ, ಹುರಿ ಅರಳು ಸಂಡಿಗೆಗಳೂ ಇಲ್ಲಿ ದೊರೆಯುತ್ತವೆ. ಮೊಸರು ಹಪ್ಪಳ ನಮ್ಮ ಅಪರೂಪದ ಉತ್ಪನ್ನವಾಗಿದೆ. ಸ್ವಲ್ಪ ಖಾರ, ಸ್ವಲ್ಪ ಹುಳಿ ಇರಬೇಕು ಎನ್ನುವವರಿಗೆ ಇದು ತುಂಬ ಇಷ್ಟವಾಗುತ್ತದೆ. ಬಾಳಕಾವನ್ನೂ (ಮಜ್ಜಿಗೆ ಮೆಣಸಿನಕಾಯಿ) ಪೂರೈಸಲಾಗುವುದು’ ಎಂದು ಭೂಷಣ್‌ ಹೇಳುತ್ತಾರೆ.

‘ಇತ್ತೀಚೆಗೆ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚುತ್ತಿದೆ. ಸಸ್ಯಾಹಾರವೂ ಜನಪ್ರಿಯವಾಗುತ್ತಿದೆ. ಆದಕ್ಕೆ ಪೂರಕವಾಗಿ ನಮ್ಮ ಉತ್ಪನ್ನಗಳನ್ನು ತಯಾರಿಸಿ ಮಾರುತ್ತಿದ್ದೇವೆ. ‘₹ 500 ಕ್ಕಿಂತ ಕಡಿಮೆ ಬೆಲೆಯ ಸರಕು ಬೇಕೆಂದರೆ ಹೆಚ್ಚುವರಿಯಾಗಿ ₹ 50 ಪಾವತಿಸಬೇಕು. ₹ 500 ಮತ್ತು ಅದಕ್ಕಿಂತ ಹೆಚ್ಚಿನ ಸರಕನ್ನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚುವರಿ ಶುಲ್ಕ ಇಲ್ಲದೆ ಮನೆ ಬಾಗಿಲಿಗೆ ತಲುಪಿಸಲಾಗುವುದು. ಅಂಚೆ ಕಚೇರಿಯ ಕೊರಿಯರ್‌ ಮೂಲಕ ದೇಶದ ಯಾವುದೇ ಭಾಗಕ್ಕೂ ಸರಕನ್ನು ತಲುಪಿಸಲಾಗುವುದು. ‘ಗ್ರಾಹಕರ ಮನವಿ ಮೇರೆಗೆ ಸಿಹಿ ತಿಂಡಿಗಳನ್ನೂ ತಯಾರಿಸಿ ಕೊಡಲಾಗುವುದು. ಸಾಂಪ್ರದಾಯಿಕವಾಗಿ ತಯಾರಿಸುವ ಕೊಬ್ಬರಿ ಮಿಠಾಯಿ, ಶಂಕರ ಪೋಳಿ, ಕಜ್ಜಾಯಳೂ ಇಲ್ಲಿ ಲಭ್ಯಇವೆ. ಗ್ರಾಹಕರು ಇಷ್ಟ ಪಡುವ ಖಾದ್ಯ ತೈಲದಲ್ಲಿಯೇ ಉತ್ಪನ್ನ ತಯಾರಿಸಲಾಗುವುದು.

‘ಒಂದು ವರ್ಷದಲ್ಲಿ ವಹಿವಾಟು ಲಾಭದಾಯಕವಾಗಿ ಮುನ್ನಡೆದಿದೆ. 10 ಗ್ರಾಹಕರು ಹೊಸದಾಗಿ ನಮ್ಮ ಉತ್ಪನ್ನಗಳನ್ನು ಖರೀದಿಸಿದರೆ ಅವರಲ್ಲಿ 8 ಜನರಾದರೂ ಮುಂದುವರೆಯುತ್ತಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಉತ್ಪನ್ನಗಳನ್ನು ವಿಮರ್ಶಿಸಲೂ ಅವಕಾಶ ಇದೆ’ ಎಂದು ಸಹ ಸ್ಥಾಪಕ ರಂಜನ್‌ ಭಾರದ್ವಾಜ್‌ ಹೇಳುತ್ತಾರೆ.

‘ರಾಗಿ ಹುರಿ ಹಿಟ್ಟು, ರಾಗಿ ದೋಸೆಯನ್ನೂ ಪೂರೈಸಲು ಸಂಸ್ಥೆ ಸದ್ಯದಲ್ಲೇ ಮುಂದಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರಿಗೆ ಮತ್ತು ಮಧುಮೇಹಿಗಳಿಗೆ ಕರಿಬೇವು ಸೊಪ್ಪಿನ ಚಟ್ನಿ ಪುಡಿ, ಮೆಂತೆ ಹಿಟ್ಟನ್ನೂ ತಯಾರಿಸಿ ಪೂರೈಸಲಾಗುವುದು.

‘ಸಂಸ್ಥೆಯು ಗ್ರಾಹಕರಿಗೆ ಅವರಿಷ್ಟದ ತಿಂಡಿ – ತಿನಿಸುಗಳನ್ನು ಪೂರೈಸುವಂತೆ (ಬಿಟುಸಿ), ವರ್ತಕರು ಮತ್ತು ಮಾರಾಟ ಮಳಿಗೆಗಳ ಮೂಲಕವೂ (ಬಿಟುಬಿ) ವ್ಯಾಪಾರ ನಡೆಸುತ್ತಿದೆ. ಗುಣಮಟ್ಟದ ಸರಕುಗಳನ್ನಷ್ಟೇ ಮಾರಾಟ ಮಾಡುವವರ ಮಳಿಗೆಗಳಲ್ಲಿ ಮಾತ್ರ ನಮ್ಮ ಈ ಉತ್ಪನ್ನಗಳು ದೊರೆಯಲಿವೆ’ ಎಂದು ರಂಜನ್‌ ಹೇಳುತ್ತಾರೆ.

‘ದುಬೈ, ಅಮೆರಿಕ, ಮಲೇಷ್ಯಾ, ಬ್ರಿಟನ್‌ಗೆ ಕೂಡ ಈ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ಚಿಣ್ಣರಿಗೆ ಇಷ್ಟವಾಗುವ ಆಕಾರಗಳಲ್ಲಿ ಮೆಕ್ಕೆಜೋಳ ಮತ್ತು ಸಬ್ಬಕ್ಕಿ ಬಳಸಿ ಪ್ರತ್ಯೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಈ ಉತ್ಪನ್ನಗಳನ್ನು 30 ಸೆಕೆಂಡ್ಸ್‌ಗಳ ಕಾಲ ಮೈಕ್ರೊವೇವ್‌ನಲ್ಲಿಟ್ಟು ಮಕ್ಕಳಿಗೆ ತಿನ್ನಲು ಕೊಡಬಹುದು. ‘ಬ್ರ್ಯಾಂಡೆಡ್‌ ಉತ್ಪನ್ನಗಳಿಗೆ ಹೋಲಿಸಿದರೆ ನಮ್ಮ ಸರಕುಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗುತ್ತವೆ’ ಎಂದು ಹೇಳುತ್ತಾರೆ.

ಪುಳಿಯೋಗರೆ, ಬೇಸನ್‌ ಲಾಡು, ಕೊಬ್ಬರಿ ಮಿಠಾಯಿಗಳನ್ನು ಕನಿಷ್ಠ ಅರ್ಧ ಕೆ.ಜಿ ಗಳಷ್ಟು ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸಿದರೆ ಬೆಂಗಳೂರಿನ ಯಾವ ಮೂಲೆಯಲ್ಲಿದ್ದರೂ 24 ಗಂಟೆಗಳಲ್ಲಿ ಮನೆಗೆ ತಲುಪಿಸಲಾಗುತ್ತಿದೆ. ಮದುವೆ ಮತ್ತಿತರ ಸಭೆ ಸಮಾರಂಭಗಳಿಗೆ ರಿಯಾಯ್ತಿ ದರದಲ್ಲಿ ಸಿಹಿ ಪದಾರ್ಥಗಳನ್ನು ಪೂರೈಸಲಾಗುವುದು.

ಹಪ್ಪಳ, ಸಂಡಿಗೆಗಳು ಹೆಚ್ಚು ದಿನ ಬಳಕೆಗೆ ಬರುವ ಉದ್ದೇಶಕ್ಕೆ ತಯಾರಿಕೆಯಲ್ಲಿ ಸಂರಕ್ಷಕಗಳನ್ನು (preservatives) ಬಳಸುವುದಿಲ್ಲ. ಹೀಗಾಗಿ ಈ ಉತ್ಪನ್ನಗಳ ಬಾಳಿಕೆ 12 ತಿಂಗಳಿಗೆ ಸೀಮಿತವಾಗಿರುತ್ತದೆ. ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಸರಕು ಬಂದಾಗ ನಗದು ಇಲ್ಲವೆ ಪೇಟಿಎಂ ಮೂಲಕ ಹಣ ಪಾವತಿಸಬಹುದು. ಬೆಂಗಳೂರಿನ ಹೊರಗಿನವರು ಮುಂಚಿತವಾಗಿಯೇ ಹಣ ಪಾವತಿಸಬೇಕು.

‘ಉದ್ದಿಮೆಗೆ ಹಾಕಿದ ದುಡ್ಡು ಕ್ರಮೇಣ ಮರಳಿ ಬರ್ತಾ ಇದೆ. ಈಗ ಮಾರುಕಟ್ಟೆ ವಿಸ್ತರಣೆಗೆ ಗಮನ ನೀಡಲಾಗುತ್ತಿದೆ. ಬೇಡಿಕೆ ಹೆಚ್ಚಿದರೆ ಹೊಸ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಲು ಈ ಉತ್ಸಾಹಿ ಉದ್ಯಮಿಗಳು ನಿರ್ಧರಿಸಿದ್ದಾರೆ. ನಾಲ್ವರೂ ಪರಸ್ಪರ ತಿಳಿವಳಿಕೆಯಿಂದ ಕೆಲಸ ಹಂಚಿಕೊಂಡು ಮುನ್ನಡೆಯುತ್ತಿದ್ದಾರೆ.

‘ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಎಸ್‌ಎಂಎಸ್‌, ಫೋನ್‌ , ವಾಟ್ಸ್‌ಆ್ಯಪ್‌ ಮತ್ತು ಅಂತರ್ಜಾಲ ತಾಣದ ಮೂಲಕ ತಮಗೆ ಬೇಕಾದ ಸರಕಿಗೆ ಬೇಡಿಕೆ ಸಲ್ಲಿಸಬಹುದು. ಸಂಕ್ರಾಂತಿ, ಗಣೇಶೋತ್ಸವ ಸಂದರ್ಭದಲ್ಲಿ ಕ್ರಮವಾಗಿ ಎಳ್ಳು ಅಚ್ಚು, ಕರಿಗಡಬು ತಯಾರಿಸಿ ಕೊಡಲಾಗುವುದು.

‘ಬೆಂಗಳೂರಿನಲ್ಲಿ ಸದ್ಯಕ್ಕೆ ಉತ್ತರ ಕರ್ನಾಟಕ, ಮಂಗಳೂರು ಶೈಲಿಯ ತಿನಿಸುಗಳು ಗಮನಾರ್ಹವಾಗಿ ಸಿಗುತ್ತಿವೆ. ಆದರೆ, ಮೈಸೂರು – ಬೆಂಗಳೂರಿನ ಶೈಲಿಯಲ್ಲಿ ತಯಾರಿಸಿದ ಉತ್ಪನ್ನಗಳ ಕೊರತೆ ಇದೆ. ಆ ಕಂದರವನ್ನು ನಾವು ತುಂಬಿಕೊಡುತ್ತಿದ್ದೇವೆ’ ಎನ್ನುವ ಭರವಸೆಯೊಂದಿಗೆ ಈ ತಂಡ ಯಶಸ್ಸಿನ ಹೆಜ್ಜೆ ಇಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.