ಶುಕ್ರವಾರ, ಡಿಸೆಂಬರ್ 6, 2019
17 °C
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ಸೌಲಭ್ಯ ಕುರಿತಂತೆ ರೋಗಿಗಳಿಂದ ಮಾಹಿತಿ ಪಡೆದರು

ಸಚಿವರಿಂದ ವೈದ್ಯಾಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವರಿಂದ ವೈದ್ಯಾಧಿಕಾರಿಗಳಿಗೆ ತರಾಟೆ

ಚಾಮರಾಜನಗರ: ನಗರದ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಗೆ ಭಾನುವಾರ ರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು, ಆಸ್ಪತ್ರೆಯಲ್ಲಿ ಅಶುಚಿತ್ವ, ಸೌಲಭ್ಯಗಳ ಅಲಭ್ಯತೆಗೆ ಸಂಬಂಧಿಸಿ ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಶೌಚಾಲಯಗಳ ದುಸ್ಥಿತಿ ಮತ್ತು ಕೆಳಮಹಡಿಯಲ್ಲಿ ನೀರು ನಿಂತು ಆಗಿರುವ ಅವ್ಯವಸ್ಥೆಗಳನ್ನು ಕಂಡು ದಂಗಾದ ಸಚಿವರು, ಅವುಗಳನ್ನು ಕೂಡಲೇ ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

ಹಳೆಯ ಮತ್ತು ಹೊಸ ಕಟ್ಟಡಗಳಲ್ಲಿ ರೋಗಿಗಳ ಬಳಿ ತೆರಳಿ ಚಿಕಿತ್ಸೆ ಮತ್ತು ಔಷಧೋಪಚಾರಗಳು ಸರಿಯಾಗಿ ದೊರೆಯುತ್ತಿವೆಯೇ? ಔಷಧ ಎಲ್ಲಿಂದ ತರಿಸುತ್ತಿದ್ದಾರೆ? ದುಡ್ಡು ಕೊಡುತ್ತಿದ್ದೀರಾ? ಎಂದು ವಿಚಾರಿಸಿದರು. ಡೆಂಗಿ ಶಂಕೆ ಇರುವ ರೋಗಿಗಳ ಆರೋಗ್ಯದ ಮಾಹಿತಿಯನ್ನು ವೈದ್ಯರಿಂದ ಪಡೆದರು.

ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯದಷ್ಟೇ ಮುಖ್ಯವಾಗಿ ಕೌನ್ಸೆಲಿಂಗ್ ದೊರಕಬೇಕು. ಅವರಲ್ಲಿ ಮೊದಲು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ವೈದ್ಯರು ಇರುವುದಿಲ್ಲ:  ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸಂಜೆ ವೈದ್ಯರು ಇರುವುದಿಲ್ಲ ಎಂದು ಕೆಲವರು ದೂರಿದರು.

ಸಂಜೆ ಹಾಗೂ ರಾತ್ರಿ ಪಾಳಿಯಲ್ಲಿಯೂ ವೈದ್ಯರು ಲಭ್ಯವಿರಬೇಕು. ಯಾವುದೇ ಸಮಯದಲ್ಲಿ ವೈದ್ಯರ ಸೇವೆಗೆ ಕೊರತೆಯಾಗಬಾರದು. ಅದಕ್ಕೆ ಅನುಗುಣವಾಗಿ ವೇಳಾಪಟ್ಟಿ ಸಿದ್ಧಪಡಿಸುವಂತೆ ಸಚಿವರು ಸೂಚಿಸಿದರು.

ಪ್ಲೇಟ್‌ಲೆಟ್ಸ್‌ ಇಲ್ಲಿಯೇ ಸಿಗಬೇಕು: ಕೆಲವು ರೋಗಿಗಳಲ್ಲಿ ಪ್ಲೇಟ್‌ಲೆಟ್ಸ್‌ ಪ್ರಮಾಣ ತೀರಾ ಕಡಿಮೆ ಇರುವುದನ್ನು ಗಮನಿಸಿದ ಖಾದರ್‌, ಜಿಲ್ಲಾಸ್ಪತ್ರೆಯಲ್ಲಿ ಪ್ಲೇಟ್‌ಲೆಟ್ಸ್‌ ಲಭ್ಯವಿಲ್ಲದಿರುವುದರ ಕುರಿತು ಆಶ್ಚರ್ಯ ವ್ಯಕ್ತಪಡಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿ ಪ್ಲೇಟ್‌ಲೆಟ್ಸ್‌ ಲಭ್ಯವಿರುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿಲ್ಲ ಎಂದರೆ ಹೇಗೆ? ರೋಗಿಗಳ ಸ್ಥಿತಿ ಏನಾಗಬೇಕು? ಎಂದು ಅಧಿಕಾರಿಗಳನ್ನು ಕೇಳಿದರು.

‘ಇಲ್ಲಿ ರೋಗಿಗಳ ಆರೋಗ್ಯ ತೀರಾ ಹದಗೆಟ್ಟ ಬಳಿಕ ಮೈಸೂರಿಗೆ ಹೋಗಿ ಎಂದು ಕಳುಹಿಸುತ್ತೀರಾ. ಸುತ್ತಮುತ್ತಲಿನ ಎಲ್ಲ ಜಿಲ್ಲೆಗಳಿಂದಲೂ ಅಲ್ಲಿಗೆ ರೋಗಿಗಳು ಹೋದರೆ ಅವರನ್ನು ನಿಭಾಯಿಸುವುದು ಹೇಗೆ? ಅವರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ಹೇಗೆ ಭರಿಸುತ್ತಾರೆ? ಅವಶ್ಯವಿದ್ದಾಗ ಅಲ್ಲಿಂದ ಪ್ಲೇಟ್‌ಲೆಟ್ಸ್‌ಗಳನ್ನು ತರಿಸಿ ಕೊಳ್ಳುವ ಬದಲು, ಒಂದಷ್ಟು ಪ್ರಮಾಣ ದಲ್ಲಿ ಇಲ್ಲಿನ ಶೈತ್ಯಾಗಾರದಲ್ಲಿ ಸಂಗ್ರಹಿಸಿ ಟ್ಟುಕೊಳ್ಳಿ’ ಎಂದು ಸಲಹೆ ನೀಡಿದರು.

ಏನಿದು ಅವ್ಯವಸ್ಥೆ?: ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದ ಸಚಿವರನ್ನು, ಶೌಚಾಲಯದ ದುಃಸ್ಥಿತಿ ನೋಡುವಂತೆ ಮಾಧ್ಯಮದವರು ಗಮನಸೆಳೆದರು. ಅಲ್ಲಿನ ಸ್ಥಿತಿ ಕಂಡು ಕೋಪಗೊಂಡರು.

‘ಇದೇನು ನಾನ್‌ಸೆನ್ಸ್‌? ಇವುಗಳನ್ನು ಏಕೆ ಕ್ಲೀನ್ ಮಾಡಿಲ್ಲ’ ಎಂದು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.

‘ಇಷ್ಟು ಕೆಟ್ಟ ವಾಸನೆ ಬರುತ್ತಿದೆ. ಹೀಗೆ ಇದ್ದರೆ ಇಲ್ಲಿ ರೋಗಿಗಳು ಇರು ವುದಾದರೂ ಹೇಗೆ’ ಎಂದು ಕಿಡಿಕಾರಿದರು. ಈ ಸಮಸ್ಯೆಗಳನ್ನು ತಕ್ಷಣ ಸರಿ ಪಡಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ. ರಾಮಚಂದ್ರ, ಪ್ರಭಾರ ಜಿಲ್ಲಾಧಿಕಾರಿ ಕೆ. ಹರೀಶ್‌ ಕುಮಾರ್, ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕ ಸಂಜೀವರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ. ಕೆ.ಎಚ್. ಪ್ರಸಾದ್ ಹಾಗೂ ಇತರ ಅಧಿಕಾರಿಗಳು ಇದ್ದರು.

***

ಏನಮ್ಮಾ  ಹುಷಾರಿಲ್ಲವಾ... ಇಂಜೆಕ್ಷನ್‌ ಕೊಡಲೇ?

ಚಾಮರಾಜನಗರ: ‘ಏನಮ್ಮಾ ಹುಷಾರಿಲ್ಲವಾ? ನಾನೊಂದು ಇಂಜೆಕ್ಷನ್‌ ಕೊಡಲಾ ನಿಮಗೆ?’ ಎಂದು ಖಾದರ್‌ ವೃದ್ಧೆಯೊಬ್ಬರ ಬಳಿ ತಮಾಷೆ ಮಾಡಿದರು. ಕೌಂಟರ್‌ ಬಳಿ ನಿಂತಿದ್ದ ರೋಗಿಗಳ ಸಂಬಂಧಿಗಳ ಬಳಿ ಸಹ ಇದೇ ರೀತಿ ಕೇಳಿ ನಗುವಿನ ಅಲೆ ಎಬ್ಬಿಸಿದರು.

‘ನಿಮಗೆ ಶುಗರ್ ಉಂಟಾ? ಸ್ವೀಟು ಜಾಸ್ತಿ ತಿಂತೀರಿ ಅನಿಸುತ್ತೆ’ ಎಂದು ಮಹಿಳೆಯೊಬ್ಬರಿಗೆ ಕೇಳಿದರು. ಗುಣಮುಖರಾಗಿದ್ದ 87 ವರ್ಷದ ವೃದ್ಧರ ಕೈಕುಲುಕಿ, ‘ನಾವೆಲ್ಲ ನಿಮ್ಮಷ್ಟು ವಯಸ್ಸಿನವರೆಗೆ ಇರ್ಲಿಕ್ಕಿಲ್ಲ’ ಎಂದು ನಕ್ಕರು.

‘ಇಷ್ಟು ಉದ್ದ ಕೂದಲು ಬಿಟ್ಟರೆ ಜ್ವರ ಬರದೆ ಇನ್ನೇನಾಗುತ್ತದೆ. ಮೊದಲು ಕಟಿಂಗ್ ಮಾಡಿಸಿಕೋ ಮಾರಾಯ’ ಎಂದು ಯುವಕನೊಬ್ಬನಿಗೆ ಸಲಹೆ ನೀಡಿದರು.

***

ಅಧಿಕಾರಿಗಳ ಜತೆ ಸಭೆ

ಚಾಮರಾಜನಗರ:  ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವ ಯು.ಟಿ. ಖಾದರ್, ಸಾಂಕ್ರಾಮಿಕ ರೋಗ ಪ್ರಕರಣಗಳು ಮತ್ತು ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದರು.

ವೈದ್ಯರ ಸೇವೆಗೆ ಕೊರತೆ ಆಗದಂತೆ ನೋಡಿಕೊಳ್ಳಬೇಕು. ದಾಖಲಾಗುವ ರೋಗಿಗಳು, ಅವರಿಗೆ ನೀಡುತ್ತಿರುವ ಚಿಕಿತ್ಸಾ ಸೌಲಭ್ಯ ಮತ್ತು ನೆರವು, ಲಭ್ಯವಿರುವ ಸಿಬ್ಬಂದಿ ಸೇರಿದಂತೆ ಎಲ್ಲ ಬಗೆಯ ವರದಿಯನ್ನು ಪ್ರತಿನಿತ್ಯ ನೀಡಬೇಕು ಎಂದು ಸೂಚಿಸಿದರು.

ಸಕಾಲಕ್ಕೆ ರೋಗಿಗಳ ರಕ್ತ ಮಾದರಿ ಪರೀಕ್ಷೆ ನಡೆಸಿ ಶೀಘ್ರವೇ ವರದಿ ಪಡೆದುಕೊಳ್ಳಬೇಕು. ಯಾವ ಕಾರಣಕ್ಕೂ ದೂರುಗಳು ಬಾರದಂತೆ ಸ್ಪಂದಿಸಬೇಕು. ಲೋಪ ಸಹಿಸುವು ದಿಲ್ಲ ಎಂದು ಎಚ್ಚರಿಸಿದರು.

***

ಆಸ್ಪತ್ರೆಯನ್ನು ಪರಿಶೀಲಿಸಿದ್ದೇನೆ. ಇಲ್ಲಿನ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕ್ಕೆ ಸೂಚಿಸಲಾಗುವುದು

ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ

ಪ್ರತಿಕ್ರಿಯಿಸಿ (+)