ಶನಿವಾರ, ಡಿಸೆಂಬರ್ 7, 2019
25 °C
ಜಿಲ್ಲಾ ಪಂಚಾಯಿತಿ ಸಮಿತಿಯ ಸಭೆ; ಉದ್ಯೋಗಖಾತ್ರಿ ಪ್ರಗತಿ ವಿಚಾರ, ಸಂಸದ ಶ್ರೀರಾಮುಲು ಅಸಮಾಧಾನ

ಅಂಕಿ–ಅಂಶ ಚೆನ್ನಾಗಿದೆ: ಕೆಲಸ ಅತೃಪ್ತಿಕರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕಿ–ಅಂಶ ಚೆನ್ನಾಗಿದೆ: ಕೆಲಸ ಅತೃಪ್ತಿಕರ!

ಬಳ್ಳಾರಿ: ‘ಉದ್ಯೋಗಖಾತ್ರಿ ಯೋಜನೆ ಅಡಿ 2016–17ನೇ ಸಾಲಿನಲ್ಲಿ ಆಗಿರುವ ಪ್ರಗತಿ ಕುರಿತು ನೀವು ಕೊಟ್ಟಿರುವ ಅಂಕಿ–ಅಂಶಗಳೇನೋ ಚೆನ್ನಾಗಿವೆ. ಆದರೆ ಆಗಿರುವ ಕೆಲಸ ತೃಪ್ತಿ ತರುವಂತಿಲ್ಲ’ ಎಂದು ಸಂಸದ ಹಾಗೂ ಜಿಲ್ಲಾ ಅಭಿವೃದ್ಧಿ, ಸಹಕಾರ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಬಿ.ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಒಂದು ಲಕ್ಷ ಕುಟುಂಬಗಳು ಉದ್ಯೋಗ ಚೀಟಿ ಹೊಂದಿವೆ ಎಂದು ಹೇಳುತ್ತೀರಿ. ಪ್ರತಿ ಮನೆಯಿಂದ ಕನಿಷ್ಠ ಐವರು ನೂರು ದಿನ ಉದ್ಯೋಗಕ್ಕೆ ಬಂದರೂ ಒಂದು ಕೋಟಿ ಮಾನವ ದಿನಗಳು ಸೃಜನೆಯಾಗಬೇಕು. ಆದರೆ ಆಗಿರುವುದು ನಲವತ್ತೆರಡು ಲಕ್ಷ ಮಾತ್ರ. ಇದು ಹೇಗೆ ಸಾಧನೆಯಾಗುತ್ತದೆ’ ಎಂದು ಕೇಳಿದರು.

‘ನೂರು ದಿನ ಮತ್ತು ನೂರೈವತ್ತು ದಿನ ಪೂರೈಸಿದ ಕುಟುಂಬಗಳ ಸಂಖ್ಯೆ ಇನ್ನೂರು ಮುಟ್ಟಿಲ್ಲ.  ನೂರರಿಂದ ನೂರೈವತ್ತು ದಿನ ಕೆಲಸ ಮಾಡಿದ ಕುಟುಂಬಗಳ ಸಂಖ್ಯೆ ಹತ್ತು ಸಾವಿರವನ್ನು ದಾಟಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಾನವದಿನಗಳ ಸೃಜನೆ ನಲವತ್ತು ಲಕ್ಷ ದಾಟಿದೆ ಎಂಬುದು ಹೆಮ್ಮೆಯ ವಿಷಯವೇನಲ್ಲ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿ ಜಿಲ್ಲಾ ಪಂಚಾ ಯಿತಿ ಉಪಕಾರ್ಯದರ್ಶಿ ಎ.ಚನ್ನಪ್ಪ, ‘ಯೋಜನೆ ಅಡಿ ನಿಗದಿ ಮಾಡಿದ್ದ ಗುರಿಯನ್ನು ಸರ್ಕಾರ ಎರಡು ಬಾರಿ ವಿಸ್ತರಿಸಿತ್ತು. ಆ ಗುರಿ ಮೀರಿ ಸಾಧನೆ ಮಾಡಲಾಗಿದೆ’ ಎಂದು ಪ್ರತಿಪಾದಿಸಿದರು.

1 ಕೋಟಿಯಾಗಲಿ:  ‘ಸರ್ಕಾರ ನೀಡಿರುವ ಗುರಿ ಇರಲಿ. ಆದರೆ ಎಲ್ಲ ಕಾರ್ಡುದಾರರು ನೂರು ದಿನ ಪೂರೈಸಿದರೆ ಒಂದು ಕೋಟಿ ಮಾನವ ದಿನಗಳು ಸೃಜನೆಯಾಗುತ್ತವೆ. ಆ ಕಡೆಗೆ ಏಕೆ ಗಮನ ಹರಿಸುತ್ತಿಲ್ಲ’ ಎಂದು ಸಂಸದರು ಪ್ರಶ್ನಿಸಿದರು.

ಅವರಿಗೆ ಸಮಜಾಯಿಷಿ ನೀಡಿದ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ. ರಾಜೇಂದ್ರ, ‘ಒಂದು ಕೋಟಿ ಮಾನವ ದಿನಗಳನ್ನು ಸೃಜಿಸಲು ಆಂದೋಲನ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ಮಾಹಿತಿ ನೀಡಿಲ್ಲ: ‘2015–16 ಹಾಗೂ 2016–17ನೇ ಸಾಲಿನಲ್ಲಿ ಕೆರೆ, ಗೋಕಟ್ಟೆ, ಕಲ್ಯಾಣಿ, ಚೆಕ್‌ ಡ್ಯಾಂನಲ್ಲಿ ಹೂಳು ತೆಗೆದಿರುವ ಕುರಿತ ಅಂಕಿ–ಅಂಶವನ್ನು ಪರಿಶೀಲಿಸಿದ ಸಂಸದರು, ಹಿಂದಿನ ವರ್ಷದ ಸಭೆಗಳಲ್ಲಿ ಈ ಮಾಹಿತಿಗಳನ್ನು ನೀಡಿಲ್ಲ. ಈಗ ದಿಢೀರನೆ ಸೇರ್ಪಡೆ ಮಾಡಿದ್ದೀರಿ. ಬರ ಪರಿಸ್ಥಿತಿ ನಿರ್ವಹಣೆ ಸಲುವಾಗಿ ಕೈಗೊಂಡ ಅಂಕಿ ಅಂಶಗಳೆಂದು ನೀಡಿರುವ ಪ್ರತ್ಯೇಕ ಪಟ್ಟಿಗೂ, ಈ ಪಟ್ಟಿಗೂ ಹೊಂದಿಕೆಯೇ ಆಗುತ್ತಿಲ್ಲ’ ಎಂದು ಆಕ್ಷೇಪಿಸಿದರು.

ಅದಕ್ಕೆ ಉತ್ತರಿಸಿದ ಡಾ.ರಾಜೇಂದ್ರ, ‘ಪ್ರದೇಶ ಮತ್ತು ಕಾಲದ ಅಗತ್ಯಕ್ಕೆ ತಕ್ಕಂತೆ ಕೆಲವು ಕಾಮಗಾರಿಗಳು ನಡೆದಿರುತ್ತವೆ. ಈ ಬಾರಿ ಈ ಮಾಹಿತಿಯ ಹಾಳೆಯನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ’ ಎಂದರು.

ಕಾಮಗಾರಿಗಳನ್ನು ನಿಗದಿತ ವರ್ಷ ದಲ್ಲೇ ಪೂರೈಸದೆ ಮುಂದಿನ ವರ್ಷಕ್ಕೆ ಮುಂದುವರಿಸಬಾರದು ಎಂದು ಸಂಸದರು ತಾಕೀತು ಮಾಡಿದರು.

ಹೂಳೆತ್ತಲು ಖನಿಜ ನಿಧಿ ಬಳಸಿ: ‘ತುಂಗಾಭದ್ರಾ ಅಣೆಕಟ್ಟೆಯಲ್ಲಿ ತುಂಬಿರುವ ಹೂಳನ್ನು ತೆಗೆಯಲು ಜಿಲ್ಲಾ ಖನಿಜ ನಿಧಿ ಬಳಸಿ ರೈತರಿಗೆ ನೆರವಾಗ ಬೇಕು’ ಎಂದು ಸಂಸದ ರಾದ ಬಳ್ಳಾರಿಯ ಬಿ.ಶ್ರೀರಾಮುಲು ಮತ್ತು ಕೊಪ್ಪಳದ ಕರಡಿ ಸಂಗಣ್ಣ ಜಿಲ್ಲಾಧಿಕಾರಿಗೆ ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಡಾ.ರಾಮ್‌ಪ್ರಸಾದ್ ಮನೋಹರ್, ‘ನಿಧಿಯನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಲು ಸುಪ್ರೀಂಕೋರ್ಟ್ ಸೂಚಿಸಿದೆ. ನಿಧಿ ಬಳಸುವ ಸಲುವಾ ಗಿಯೇ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮವನ್ನು ಸರ್ಕಾರ ರಚಿಸಿದೆ. ಮುಖ್ಯಕಾರ್ಯದರ್ಶಿ ನಿಗಮದ ಮುಖ್ಯಸ್ಥರು, ಜಿಲ್ಲಾಧಿ ಕಾರಿ ಸದಸ್ಯರಷ್ಟೇ.ಹೂಳು ತೆರವು ಕುರಿತು ಮುಖ್ಯಸ್ಥರ ಗಮನಕ್ಕೆ ತರಲಾಗುವುದು’ ಎಂದರು.  ಕೊಪ್ಪಳ ಸಂಸದ ಕರಡಿ ಸಂಗಣ್ಣ ಮತ್ತು ಜಿಪಂ ಹಂಗಾಮಿ ಅಧ್ಯಕ್ಷ ಪಿ.ದೀನಾ ಇದ್ದರು.

***

‘ತೋಟಗಾರಿಕೆ ಪ್ರಗತಿ ಕುಂಠಿತ‘

ನೀರಿನ ಕೊರತೆಯಿಂದಾಗಿ ತೋಟಗಾರಿಕೆ ಚಟುವಟಿಕೆ ನಡೆಸಲು ರೈತರು ಹಿಂಜರಿಯುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚಿದಾನಂದ ಅವರು ಸಭೆಯಲ್ಲಿ ಗಮನ ಸೆಳೆದರು.

ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸಂಸದರು, ಮಿತ ನೀರಿನಲ್ಲಿ ಚಟುವಟಿಕೆ ನಡೆಸುವಂತೆ ರೈತರನ್ನು ಉತ್ತೇಜಿಸಬೇಕು ಎಂದರು.

ಆಗ ಎದ್ದು ನಿಂತ ಬಳ್ಳಾರಿ ತಾಲ್ಲೂಕಿನ ಬಾದನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತರೆಡ್ಡಿ, ‘ಅಂಜೂರದ ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡುವಂತೆ ಕೋರಿ ಹಿಂದಿನ ವರ್ಷ ಸಲ್ಲಿಸಿದ್ದ 23 ಮಂದಿಯ ಅರ್ಜಿಗೆ ಇಲಾಖೆ ಸ್ಪಂದಿಸಿಲ್ಲ. ಈ ಬಾರಿ ಮತ್ತೆ ಅರ್ಜಿಗಳನ್ನು ಸಲ್ಲಿಸಲಾಗಿದೆ’ ಎಂದು ದೂರಿದರು. ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.

‘ಖಾತ್ರಿ ಯೋಜನೆ ಅಡಿ ಗುರಿ ಮುಟ್ಟಲು ಸಿಬ್ಬಂದಿ ಕೊರತೆ ಇದೆ’ ಎಂದ ಕೂಡ್ಲಿಗಿ ಕಾರ್ಯನಿರ್ವಹಣಾ ಧಿಕಾರಿ ಕೃಷ್ಣಾನಾಯ್ಕ ಅವರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ‘ಹಿಂದಿನ ವರ್ಷವೂ ಸಿಬ್ಬಂದಿ ಕೊರತೆ ನಡುವೆಯೇ ಕೆಲಸ ಮಾಡಿದ್ದೀರಿ. ಆ ಬಗ್ಗೆ ಮಾತನಾಡಬೇಡಿ’ ಎಂದರು.

ಪ್ರತಿಕ್ರಿಯಿಸಿ (+)