ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದರೂ 50ಕ್ಕೂ ಹೆಚ್ಚು ಅಮರನಾಥ ಯಾತ್ರಿಕರ ಜೀವ ಉಳಿಸಿದ ಚಾಲಕ

Last Updated 11 ಜುಲೈ 2017, 12:31 IST
ಅಕ್ಷರ ಗಾತ್ರ

ಶ್ರೀನಗರ: ರಾತ್ರಿ ಕತ್ತಲು, ತಮ್ಮ ಬಸ್‌ನಲ್ಲಿದ್ದ ಪ್ರಯಾಣಿಕರು ನಿದ್ರೆಗೆ ಜಾರಿದ್ದಾರೆ. ಇದ್ದಕ್ಕಿದ್ದಂತೆ ಗುಂಡಿನ ದಾಳಿಯ ಸದ್ದು, ಎಚ್ಚರಗೊಂಡ ಪ್ರಯಾಣಿಕರ ಚೀರಾಟ... ಇಂತಹ ಸಂದಿಗ್ಧ ಸ್ಥಿತಿಯಲ್ಲಿದ್ದ ಬಸ್‌ನ ಚಾಲಕ ತನ್ನ ಜೀವದ ಹಂಗು ತೊರೆದು ಬಸ್‌ಅನ್ನು ಮತ್ತಷ್ಟು ವೇಗವಾಗಿ ಓಡಿಸಿ 50ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಾರೆ.

ಭಯೋತ್ಪಾದಕರು ದಾಳಿ ನಡೆಸಿದ ಅಮರನಾಥ ಯಾತ್ರಿಕರಿದ್ದ ಬಸ್‌ನ ಚಾಲಕ, ಗುಜರಾತ್‌ನ ಶೇಕ್‌ ಸಲೀಂ ಗಫೂರ್ ಈ ಸಾಹಸ ಮೆರೆದ ವ್ಯಕ್ತಿ. ತನ್ನ ಜೀವವನ್ನೂ ಲೆಕ್ಕಿಸದೆ, ಬಸ್‌ನ ಮುಂದಿನ ಗಾಜು ಪುಡಿಯಾಗಿದ್ದರೂ ಅದರಲ್ಲಿಯೇ ಬಸ್‌ ಅನ್ನು ಎರಡು ಕಿ.ಮೀ. ವರೆಗೆ ವೇಗವಾಗಿ ಚಾಲನೆ ಮಾಡಿದ್ದಾರೆ. ಹಲವು ಮಂದಿಯ ಜೀವ ಉಳಿಸಿ ಮೆಚ್ಚುಗೆಯನ್ನೂ ಪಡೆದಿದ್ದಾರೆ.

ಶೇಕ್‌ ಸಲೀಂ ಗಫೂರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅವರಿಗೆ ₹3 ಲಕ್ಷ ನಗದು ಬಹುಮಾನ ಘೋಷಿಸಿದೆ ಹಾಗೂ ಶ್ರೀ ಅಮರಾನಾಥ್‌ಜಿ ಶ್ರೈನ್‌ ಬೋರ್ಡ್‌(ಎಸ್‌ಎಎಸ್‌ಬಿ) ₹2 ಲಕ್ಷ ಬಹುಮಾನ ಪ್ರಕಟಿಸಿದೆ.

ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರು ಇದ್ದ ಬಸ್‌ನ ಮೇಲೆ ಸೋಮವಾರ ರಾತ್ರಿ 8.20ರ ಸುಮಾರಿಗೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗುಜರಾತ್‌ನ ಏಳು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

ಯಾತ್ರಿಕರು ಅಮರನಾಥ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದರು. ರಾತ್ರಿ 8.20ರ ಸುಮಾರಿಗೆ ಬಸ್‌ ಅಡ್ಡಗಟ್ಟಿರುವ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ನಿದ್ರೆಯಲ್ಲಿದ್ದ ಪ್ರಯಾಣಿಕರು ಪ್ರಾಣ ಭೀತಿಯಿಂದ ಕೂಗಾಡಿದ್ದಾರೆ. ಈ ಘಟನೆ ಸಂಭವಿಸಿದಾಗ ಚಾಲಕ ವಿಚಲಿತರಾಗದೆ ಬಸ್‌ಅನ್ನು ಇನ್ನಷ್ಟು ವೇಗವಾಗಿ ಚಾಲನೆ ಮಾಡಿ ಎರಡು ಕಿ.ಮೀ. ಮುಂದಕ್ಕೆ ಬಂದಿದ್ದಾರೆ. ಸೇನಾ ಕ್ಯಾಂಪ್‌ ಬಳಿ ಬಂದು ಬಸ್‌ ನಿಲ್ಲಿಸಿದ್ದಾರೆ. ಬಸ್‌ಅನ್ನು ಓಡಿಸಿಕೊಂಡು ಬರದೆ ಅಲ್ಲಿಯೇ ನಿಲ್ಲಿಸಿದ್ದರೆ ಇನ್ನಷ್ಟು ಜೀವಗಳು ಬಲಿಯಾಗುತ್ತಿದ್ದವು. ಆದರೆ, ಚಾಲಕನ ಧೈರ್ಯದಿಂದಾಗಿ 50ಕ್ಕೂ ಹೆಚ್ಚು ಜನ ಬದುಕುಳಿದಿದ್ದಾರೆ.

'ನಿರಂತರವಾಗಿ ಗುಂಡಿನ ದಾಳಿ ನಡೆಯುತ್ತಲೇ ಇತ್ತು. ನಾನು ಬಸ್‌ ನಿಲ್ಲಿಸಲಿಲ್ಲ, ಬಸ್‌ಅನ್ನು ಚಲಿಸುತ್ತಲೇ ಇದ್ದೆ; ಆ ದೇವರು ನನಗೆ ಬಸ್‌ ಚಲಿಸುವ ಶಕ್ತಿ ನೀಡಿದ್ದರಿಂದ ನಾನು ಬಸ್‌ ನಿಲ್ಲಿಸಲೇ ಇಲ್ಲ' ಎಂದು ಬಸ್‌ನ ಚಾಲಕ ಶೇಕ್‌ ಸಲೀಂ ಗಫೂರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT