ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕೇಕ್‌... ಕಣ್ಣಿಗೂ, ಆರೋಗ್ಯಕ್ಕೂ ಹಿತ

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ಕೇಕ್‌ ಕಣ್ಣಿಗಷ್ಟೇ ಅಲ್ಲ, ದೇಹಕ್ಕೂ ರುಚಿಸಬೇಕು ಎಂಬ ಅಂಶವನ್ನೇ ಗಮನದಲ್ಲಿಟ್ಟುಕೊಂಡು ಏಳು ವರ್ಷಗಳಿಂದ ಕೇಕ್‌ ಮೇಕಿಂಗ್‌ ಪ್ರಯೋಗಗಳಲ್ಲಿ ತೊಡಗಿದ್ದಾರೆ ಬನ್ನೇರುಘಟ್ಟ ರಸ್ತೆಯ ಲಕ್ಷ್ಮಿ.

ಕಾಲಕ್ಕೆ ತಕ್ಕಂತೆ ಕೇಕ್‌ಗಳಲ್ಲಿ ರುಚಿ, ವಿನ್ಯಾಸಗಳನ್ನು ಬದಲಾಯಿಸುವುದು ಲಕ್ಷ್ಮೀ ಅವರ ಹವ್ಯಾಸವೇ ಆಗಿದೆ. ಸಂದರ್ಭಕ್ಕೆ ತಕ್ಕಂತೆ ನವೀನ ಬಗೆಯ ಕೇಕ್‌ಗಳನ್ನೂ ವಿನ್ಯಾಸ ಮಾಡುತ್ತಾರೆ. ಹಾಗಂತ ಅವರು ಯಾವುದೇ ತರಬೇತಿ ಪಡೆದಿಲ್ಲ. ಸ್ವಪ್ರಯೋಗದ ಮೂಲಕವೇ ತರಹೇವಾರಿ ವಿನ್ಯಾಸದ ಕೇಕ್‌ಗಳನ್ನು ರೂಪಿಸುತ್ತಾರೆ.

ಕಾರ್ಪೊರೇಟ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಅವರಿಗೆ ಅಡುಗೆ ಮಾಡುವುದು ಬಲು ಇಷ್ಟದ ಕೆಲಸ. ಬಿಡುವು ಸಿಕ್ಕಾಗಲೆಲ್ಲಾ ಕೇಕ್‌ ಮಾಡಿ ಖುಷಿ ಕಂಡುಕೊಳ್ಳುತ್ತಿದ್ದರು. ಕೇಕ್‌ ವಿನ್ಯಾಸವನ್ನು ಕಲೆ ಎಂದು ನಂಬಿದವರು ಇವರು.

‘ಹೆರಿಗೆಯಾದ ನಂತರ ಕೆಲಸ ಬಿಡುವುದು ಅನಿವಾರ್ಯವಾಯಿತು. ಮನೆಯಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಬೇಕಿಂಗ್‌ ಮಾಡುವ ಯೋಚನೆ ಬಂತು. ಮನೆಯವರಿಗಾಗಿ ಕೇಕ್‌ ತಯಾರಿಸುತ್ತಿದ್ದೆ. ಆರ್ಡರ್‌ ಕೂಡ ಬರಲು ಪ್ರಾರಂಭವಾಯಿತು. ಈ ಕಾರಣಕ್ಕೆ ಕೇಕ್‌ ಮಾಡುವುದನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿಸಿಕೊಂಡೆ’ ಎನ್ನುತ್ತಾರೆ ಇವರು.

‘ವಾರದಲ್ಲಿ ಕಡಿಮೆಯೆಂದರೂ ಐದು ಆರ್ಡರ್‌ ಬರುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಕೇಕ್‌ ವಿನ್ಯಾಸ ಮಾಡುತ್ತೇನೆ. ಕೇಕ್‌ ಆರ್ಟ್‌ಗೆ ತೊಡಗಿಕೊಳ್ಳುವ ಮೊದಲು ನಾನು ಸಾಕಷ್ಟು ಸಂಶೋಧನೆ ನಡೆಸಿಕೇಕ್‌ ಕಲೆಯ ರೂಪಕ್ಕಿಳಿಸುತ್ತೇನೆ. ಹೆಚ್ಚಿನ ಎಲ್ಲಾ ಪರಿಕಲ್ಪನೆಗಳನ್ನು ಗ್ರಾಹಕರೇ ನೀಡುತ್ತಾರೆ’ ಎನ್ನುತ್ತಾರೆ.

ಮದುವೆಗಾದರೆ ಉಡುಗೆಯ ಬಣ್ಣ, ವೇದಿಕೆ ಅಲಂಕಾರಕ್ಕೆ ತಕ್ಕಂತೆ ವಿನ್ಯಾಸ ಮಾಡುತ್ತಾರೆ. ಮಕ್ಕಳಿಗಾಗಿ ಮಿಕ್ಕಿ ಮೌಸ್‌, ಚೋಟಾಭೀಮ್, ಪೋಕಿಮನ್‌, ಸೂಪರ್‌ ಹೀರೊಗಳು ಕಾರ್ಟೂನ್‌ಗಳ ಪಾತ್ರಗಳು ಇವರ ಕೇಕ್‌ನಲ್ಲಿ ಮೈದಳೆಯುತ್ತವೆ.

‘ಕೇಕ್‌ ಮೇಕಿಂಗ್‌ನಲ್ಲಿ ಕ್ರಿಯಾಶೀಲತೆ ತುಂಬಾ ಮುಖ್ಯ. ಗ್ರಾಹಕರ ಅಭಿರುಚಿಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಕೇಕ್‌ಗಳನ್ನು ವಿನ್ಯಾಸ ಮಾಡುವುದರಲ್ಲಿ ಕ್ರಿಯಾಶೀಲತೆ ಅಡಗಿದೆ. ಕೇಕ್‌ಗೆ ಬಳಸುವ ಸಾಮಗ್ರಿಗಳ ಪ್ರಮಾಣವನ್ನು ಹದದಲ್ಲಿ ಸೇರಿಸಬೇಕು. ಎಚ್ಚರ ತಪ್ಪಿದರೂ ರುಚಿ ಕೆಡುತ್ತದೆ’ ಎಂದು ಕೇಕ್‌ ವಿನ್ಯಾಸದ ಸೂಕ್ಷ್ಮತೆ ವಿವರಿಸುತ್ತಾರೆ ಲಕ್ಷ್ಮಿ.

‘ಕೇಕ್‌ ಉತ್ಪನ್ನದಲ್ಲಿ ಮಾರುಕಟ್ಟೆಗೂ ಮನೆಯಲ್ಲಿ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಕೇಕ್‌ ಮಾಡುವಾಗ ಸಾಮಾನ್ಯವಾಗಿ ಡಾಲ್ಡಾ ಹೆಚ್ಚು ಬಳಸುತ್ತಾರೆ. ಮನೆಯಲ್ಲಾದರೆ ಬೆಣ್ಣೆ, ಕೋಕೊ ಸೇರಿದಂತೆ ಆದಷ್ಟು ನೈಸರ್ಗಿಕ ಸಾಮಗ್ರಿಗಳನ್ನು ಬಳಸಲಾಗುತ್ತದೆ’ ಎಂಬುದು ಅವರ ವಿವರಣೆ.
ವಿನ್ಯಾಸಕ್ಕೆ ಆದ್ಯತೆ ನೀಡಿದ ಮಾತ್ರಕ್ಕೆ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂಬುದು ಲಕ್ಷ್ಮೀ ಅವರ ಶಿಸ್ತು. ಈ ಕಾರಣಕ್ಕೆ ಮಕ್ಕಳಿಗಾಗಿ ಮಾಡುವ ಕೇಕನ್ನು ಬೆಲ್ಲದಿಂದ ತಯಾರಿಸುತ್ತಾರೆ. ಬೀಟ್‌ರೂಟ್‌, ಕ್ಯಾರೆಟ್‌ ಬಳಸಿ ಸಹಜ ಬಣ್ಣಕ್ಕೆ ಮಹತ್ವ ನೀಡುತ್ತಾರಂತೆ.

‘ವೆಲ್ವೇಟ್‌’, ‘ವೆನಿಲಾ ಸ್ಪಾಂಜ್‌’, ‘ಚಾಕೊಲೇಟ್ ಕೇಕ್’, ‘ಕಪ್‌ ಕೇಕ್’, ‘ಕ್ಯಾರೆಟ್‌ ಕೇಕ್’, ‘ಫ್ಲೋರಲ್‌ ಥೀಮ್‌ ಕೇಕ್’, ‘ಲೇಯರ್ಡ್‌ ಕೇಕ್‌’, ‘ಚೀಸ್‌ ಕೇಕ್‌’, ‘ಕಸ್ಟಮೈಸ್ಡ್‌ ಡಿಸೈನರ್‌’ ಹೀಗೆ ಯಾವುದೇ ವಿನ್ಯಾಸವಾದರೂ ಸೈ ಅನ್ನುತ್ತಾರೆ.

‘ಹಿಂದೆಲ್ಲ ಜನರಿಗೆ ಕೇಕ್‌ಗಳ ಬಗ್ಗೆ ಅಷ್ಟು ತಿಳಿವಳಿಕೆ ಇರಲಿಲ್ಲ. ಆದರೆ ಈಗ ಜನರು ಕೇಕ್‌ ಬಗ್ಗೆ ಸಾಕಷ್ಟು ವಿಷಯ ತಿಳಿದುಕೊಂಡಿರುತ್ತಾರೆ. ವಿಶೇಷವಾದ ವಿನ್ಯಾಸಬೇಕು ಎನ್ನುತ್ತಾರೆ. ಕಾಲಕ್ಕೆ ತಕ್ಕಂತೆ ವಿನ್ಯಾಸದಲ್ಲಿಯೂ ಬದಲಾವಣೆ ಮಾಡಿಕೊಳ್ಳುವುದು ಸವಾಲು’ ಎನ್ನುವುದು ಇವರ ಅನುಭವದ ಮಾತು.
ದಿ ಮ್ಯಾಚಿಕ್‌ ಒವೆನ್‌ (the magic oven) ಎಂಬ ಇವರ ಫೇಸ್‌ಬುಕ್‌ ಪೇಜ್‌ನಿಂದ ವಿನ್ಯಾಸ ಆಯ್ಕೆ ಮಾಡಿ ಆರ್ಡರ್‌ ಕೊಡಬಹುದು.

ಸಂಪರ್ಕಕ್ಕೆ: 99804 56142

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT