ಶನಿವಾರ, ಡಿಸೆಂಬರ್ 7, 2019
24 °C

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಪ್ರಚೋದನೆ: ಟಿ.ಬಿ.ಜಯಚಂದ್ರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಪ್ರಚೋದನೆ: ಟಿ.ಬಿ.ಜಯಚಂದ್ರ ಆರೋಪ

ತುಮಕೂರು: ‘ನಾಲ್ಕು ವರ್ಷದಲ್ಲಿ ಕಾನೂನು ಸುವ್ಯವಸ್ಥೆಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬಂದಿದೆ. ಈಗ ಚುನಾವಣೆ ಬರುತ್ತಿರುವುದರಿಂದ ಬಿಜೆಪಿಯವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಂಗಳೂರಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಆರೋಪಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಯವರಿಗೆ ಕಾಂಗ್ರೆಸ್ ಸರ್ಕಾರದ ಆಡಳಿತ ಸಹಿಸಲು ಆಗುತ್ತಿಲ್ಲ. ಅವರಿಗೆ ಅತ್ಯಂತ ಬೇಗ ಚುನಾವಣೆ ಆಗಬೇಕಾಗಿದೆ. ಹೀಗಾಗಿ, ಏನಾದರೊಂದು ಮಾಡುತ್ತಿರುತ್ತಾರೆ. ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸ್ಥಿತಿ ಬಂದಾಗ ಶಾಂತಿ ಸ್ಥಾಪಿಸಲು ಎಲ್ಲ ರಾಜಕೀಯ ಪಕ್ಷಗಳು ಕೆಲಸ ಮಾಡಬೇಕು. ಅದರೆ, ಬಿಜೆಪಿಯವರು ಪ್ರಚೋದನಕಾರಿ ಹೇಳಿಕೆ ನೀಡಿ ಶಾಂತಿ ಕದಡುತ್ತಿದ್ದಾರೆ’ ಎಂದು ಆರೋಪಿಸಿದರು.

ಯಾವಾಗಲೂ ಕಲ್ಲಡ್ಕದಲ್ಲಿಯೇ ಗಲಾಟೆ ಆಗುತ್ತದೆ ಏಕೆ ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಮಂಗಳೂರು ಅತ್ಯಂತ ಶಾಂತಿಯ ತೋಟವಿದ್ದಂತೆ. ಅಲ್ಲಿನ ಜನರೂ ಬುದ್ಧಿವಂತರು. ಅಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ. ಪೊಲೀಸರು ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.

ಏಪ್ರಿಲ್‌ನಲ್ಲಿ ಚುನಾವಣೆ: 2018ರ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹಗರಣ ಮುಕ್ತ ನಮ್ಮ ಸರ್ಕಾರ ಸಾಧನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಹಿಂದೆ ಬಿಜೆಪಿ ಸರ್ಕಾರದಲ್ಲಿ ಶ್ರೀಕೃಷ್ಣ ಜನ್ಮಸ್ಥಳಕ್ಕೆ ಹೋಗಿಬಂದವರು ಹೇಗೆ ಆಡಳಿತ ನಡೆಸಿದರು ಮತ್ತು ನಮ್ಮ ಸರ್ಕಾರ ಹೇಗೆ ಆಡಳಿತ ನಡೆಸಿದೆ ಎಂಬುದನ್ನು ಜನರು ತಾಳೆ ಹಾಕಿ ನೋಡಿ ಮತ ಹಾಕಲಿದ್ದಾರೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)