ಭಾನುವಾರ, ಡಿಸೆಂಬರ್ 15, 2019
23 °C

ಕತೆಯ ಸುರುಳಿಯೊಳಗಿನ ಸುಳಿ

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಕತೆಯ ಸುರುಳಿಯೊಳಗಿನ ಸುಳಿ

ಕನ್ನಡ ಚಿತ್ರರಂಗದಲ್ಲಿ ಪತ್ತೇದಾರಿ ಕತೆಯ ಸಿನಿಮಾಗಳು ಗೆಲುವು ಸಾಧಿಸಿದ ಉದಾಹರಣೆಗಳು ಸಾಕಷ್ಟಿವೆ. ಇಂಥದ್ದೇ ಕುತೂಹಲ ಹಾಗೂ ಪತ್ತೇದಾರಿ ಕತೆಯ ಕಿರುಚಿತ್ರ ‘ಮೈ ಡೆತ್‌ ನೋಟ್‌’ ಅನ್ನು ನಿರ್ದೇಶಕ ಎಂ.ಸುಭಾಷ್‌ ಚಂದ್ರ ನಿರ್ಮಿಸಿದ್ದಾರೆ.

ಒಬ್ಬ ಮನುಷ್ಯನಿಗೆ ಪದೇ ಪದೇ ನೋವು ಕೊಟ್ಟರೆ ಪರಿಣಾಮ ಹೇಗಿರಬಹುದು ಎಂಬ ಎಳೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಜೀವನದಲ್ಲಿ ಪ್ರೀತಿ, ಸ್ನೇಹದ ಮಹತ್ವ, ಭಾವನೆಗಳು, ಸಸ್ಪೆನ್ಸ್‌ ಎಲ್ಲಾ ಈ ಕಿರುಚಿತ್ರದಲ್ಲಿದೆ.

26 ನಿಮಿಷದ ಈ ಚಿತ್ರದಲ್ಲಿ ನಾಯಕನಾಗಿ ಅಭಯ್‌ಸೂರ್ಯ, ನಾಯಕಿಯಾಗಿ ಶ್ರುತಿ ರಾಯ್ಕರ್‌ ಹಾಗೂ ಸ್ನೇಹಿತರಾಗಿ ಪ್ರಭು, ಶಿವ, ಮೋಹನಗೌಡ ನಟಿಸಿದ್ದಾರೆ.

ಚಿತ್ರದ ಕತೆಯಲ್ಲಿ ಹೊಸದೇನಿಲ್ಲ. ಆದರೆ ಈ ಹಿಂದೆ ಏನಾಗಿರಬಹುದು ಎಂಬ ಕುತೂಹಲ ಪ್ರೇಕ್ಷಕನನ್ನು ಸಿನಿಮಾ ನೋಡುವಂತೆ ಹಿಡಿದಿಟ್ಟುಕೊಳ್ಳುತ್ತದೆ. ಚಿತ್ರದ ನಿರೂಪಣೆಯಲ್ಲಿ ಹೊಸತನ ಕಾಣಬಹುದು.

ಸಿನಿಮಾ ಆರಂಭವಾಗುವುದೇ ನಾಯಕನ ಆತ್ಮಹತ್ಯೆಯಿಂದ. ನಾಯಕ ಬರೆದಿಟ್ಟ ಡೆತ್‌ನೋಟ್‌ ಆತನ ಸ್ನೇಹಿತನ ಕೈ ಸೇರುತ್ತದೆ. ಪೊಲೀಸ್‌ ತನಿಖೆ ಮುಂದುವರಿದಂತೆ ಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದು ನೋಡುಗರಲ್ಲಿ ಮುಂದೇನು ಎಂಬ ಕುತೂಹಲವನ್ನು ಮೂಡಿಸುತ್ತಾ ಹೋಗುತ್ತದೆ. ಕೊನೆಯವರೆಗೂ ನಾಯಕನ ಕೊಲೆ ಪ್ರಕರಣವನ್ನು ಭೇದಿಸಲಾಗುವುದಿಲ್ಲ. ಸಿನಿಮಾದ ಅಂತ್ಯದಲ್ಲಿ ಒಂದೇ ನಿಮಿಷದ ದೃಶ್ಯದಲ್ಲಿ ಪ್ರೇಕ್ಷಕನ ಕುತೂಹಲವನ್ನು ತಣಿಸುತ್ತಾರೆ ನಿರ್ದೇಶಕ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನವನ್ನು ಉಂಟುಮಾಡುವಂತೆ ನಿರ್ದೇಶಕರು ಕತೆ ಹೆಣೆದಿದ್ದಾರೆ.

ನಾಯಕನಾಗಿ ನಟಿಸಿರುವ ಅಭಯ್‌ಸೂರ್ಯ ‘ಕೃಷ್ಣನ ಲವ್‌ ಸ್ಟೋರಿ’, ‘ಸಿದ್ಧಾರ್ಥ’ ಸಿನಿಮಾದಲ್ಲಿ ನಟಿಸಿದ್ದಾರೆ. ಅದ್ವೈತ, ಮೈತ್ರಿ, ಜಟ್ಟ, ನವಿಲಾದವರು ಸಿನಿಮಾಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸದ್ಯ ನಟ ಕಿಶೋರ್‌ ಕುಮಾರ್‌ ಮುಖ್ಯಪಾತ್ರದ ಲ್ಲಿರುವ ‘ತುಂಡು ಹೈಕ್ಳ ಸಹವಾಸ’ ಚಿತ್ರದಲ್ಲಿ ನಟಿಸಿದ್ದಾರೆ.

‘ರನ್ನ’ ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ದುಡಿದ ಶಿವು ಅವರ ಕ್ಯಾಮೆರಾ ಕೈಚಳಕ ಇಲ್ಲಿ ಕೆಲಸ ಮಾಡಿದೆ. ಚಿತ್ರೀಕರಣಕ್ಕೆ ಕ್ಯಾನನ್‌ 5ಜಿ ಕ್ಯಾಮೆರಾ ಬಳಸಲಾಗಿದೆ. ಸಿನಿಮಾದಂತೆಯೇ ಈ ಚಿತ್ರವನ್ನೂ ಚಿತ್ರೀಕರಿಸಿದ್ದು, ಚಿತ್ರತಂಡ ಗುಣಮಟ್ಟದಲ್ಲಿ ಎಲ್ಲೂ ರಾಜಿಯಾಗಿಲ್ಲ ಎಂಬುದನ್ನು ದೃಶ್ಯಗಳು ತಿಳಿಸುತ್ತವೆ.

‘ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಹೊರವಲಯದ ಮುದ್ದಯ್ಯನಪಾಳ್ಯ ಎಂಬ ಊರಿನಲ್ಲಿ 15 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ’ ಎಂದು ಅಭಯ್‌ಸೂರ್ಯ ತಿಳಿಸುತ್ತಾರೆ.

ಚಿತ್ರದ ಕೆಲ ಕಡೆಗಳಲ್ಲಿ ದೃಶ್ಯದಿಂದ ದೃಶ್ಯಕ್ಕೆ ಕೊಂಡಿ ಇಲ್ಲ. ನಾಯಕ ನಾಯಕಿ ಒಟ್ಟಿಗೆ ನಗುತ್ತಾ ಮಾತನಾಡುತ್ತಿರುತ್ತಾರೆ. ಆದರೆ ಮರುಕ್ಷಣದಲ್ಲಿ ನಾಯಕ ಪ್ರೀತಿ ದೂರವಾಯಿತು ಎಂದು ಅಳುತ್ತಿರುತ್ತಾನೆ. ಅವನ ಸಂಭಾಷಣೆ ಮೂಲಕವೇ ಅವರಿಬ್ಬರಿಗೆ ಜಗಳವಾಗಿದೆ ಎಂದು ಗೊತ್ತಾಗಬೇಕು. ಇಂತಹ ದೃಶ್ಯಗಳು ಚಿತ್ರದಲ್ಲಿ ನಾಲ್ಕೈದು ಕಡೆಗಳಲ್ಲಿವೆ.

ನಟನೆ ವಿಷಯಕ್ಕೆ ಬಂದರೆ ಎಲ್ಲರೂ ಹೊಸಬರಾಗಿರುವುದರಿಂದ ಸಂಭಾಷಣೆ, ನಟನೆ ಎರಡರಲ್ಲೂ ಇನ್ನಷ್ಟು ಪಕ್ವತೆ ಬೇಕಾಗಿದೆ.

‘ಚಿತ್ರನಿರ್ಮಾಣಕ್ಕೆ 2.50 ಲಕ್ಷ ಖರ್ಚಾಗಿದೆ. ಸಿನಿಮಾಕ್ಷೇತ್ರಕ್ಕೆ ಪ್ರವೇಶಿಸಲು, ಉತ್ತಮ ಅವಕಾಶ ಪಡೆಯಲು ನಟನಾಕೌಶಲ್ಯವನ್ನು ತೋರಿಸಬೇಕಿತ್ತು. ಹಾಗಾಗಿ ಹೆಚ್ಚು ಬಂಡವಾಳ ಹಾಕಿ ಚಿತ್ರ ಮಾಡಿದ್ದೇವೆ’ ಎಂದು ವಿವರಿಸುತ್ತಾರೆ ಅಭಯ್‌ ಸೂರ್ಯ.

ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದವರು ಸುರೇಶ್‌ ರಾಜ್‌. ಚಿತ್ರದಲ್ಲಿ ಹಾಡುಗಳಿಲ್ಲ, ಆದರೆ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಪೂರಕವಾಗಿದೆ.

ಕಿರುದಾರಿ

ಕಿರುಚಿತ್ರ: ‘ಮೈ ಡೆತ್‌ ನೋಟ್‌’

ನಿರ್ದೇಶನ: ಸುಭಾಷ್‌ ಚಂದ್ರ. ಎಂ

ಸಂಕಲನ: ಸುನಿಲ್‌ ಎಲ್‌ಎಸ್‌ಆರ್‌

ಛಾಯಾಗ್ರಹಣ:ಶಿವು

ಸಂಗೀತ: ಸುರೇಶ್‌ ರಾಜ್‌

ಕಲಾವಿದರು: ಅಭಯ್‌ ಸೂರ್ಯ, ಶ್ರುತಿ ರಾಯ್ಕರ್‌, ಪ್ರಭು, ಶಿವ, ಮೋಹನಗೌಡ, ಅಮಿತ್‌, ಪ್ರೇಮ್‌ಕುಮಾರ್‌

ಬಳಸಿದ ಕ್ಯಾಮೆರಾ: ಕ್ಯಾನನ್‌ 5ಜಿ

ಇ–ಮೇಲ್: abhay.surya1105@gmail.com

ಕೊಂಡಿ: http://bit.ly/2uFusmW

ಪ್ರತಿಕ್ರಿಯಿಸಿ (+)