ಸೋಮವಾರ, ಡಿಸೆಂಬರ್ 9, 2019
26 °C

ತಲೆ ಮೊಟ್ಟೆಯಾದ ಕಥೆ!

Published:
Updated:
ತಲೆ ಮೊಟ್ಟೆಯಾದ ಕಥೆ!

* ತಲೆಗೆ ಯಾವ ಹುಳ ಬಿಟ್ಕೊಂಡಿದ್ದೀರಿ ಕೂದಲು ತಿಂದ್ಬಿಟ್ಟಿದೆ!

19ನೇ ವಯಸ್ಸಿಗೇ ಕೂದಲು ಉದುರಲು ಶುರುವಾಗಿತ್ತು. ಕಾಲೇಜಿನಲ್ಲಿ ಜಗಳ, ‘ಒನ್‌ ವೇ’ ಪ್ರೀತಿ ಹೀಗೆ ಹಲವಾರು ಹುಳಗಳು ನನ್ನ ಕೂದಲನ್ನು ತಿಂದುಹಾಕಿದವು. ಕೂದಲು ಉದುರುವ ಆರಂಭದಲ್ಲಿ ಗೆಳೆಯರು ಹೇಳ್ತಿದ್ರು, ‘ದಿನ ಕಳೆದಂತೆ ನಿನ್ನ ತಲೆ ಕೂದಲು ಕಡಿಮೆಯಾಗುತ್ತಿದೆ’ ಅಂತ. ಆದರೂ ನಾನೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಅದಕ್ಕಾಗಿ ಏನೂ ಮಾಡಲಿಲ್ಲ. ಯಾಕೆಂದರೆ ಇದು ನನ್ನ ಅಪ್ಪನಿಂದ ಬಂದ ಆಸ್ತಿ.

* ನಿಜ ಜೀವನದಲ್ಲೂ ನಿಮ್ಮನು ಮೊಟ್ಟೆ ಅಂತಲೇ ಕರೀತಾರಾ?

ಮೊಟ್ಟೆ ಅಂತ ಕರೆದಿಲ್ಲ, ಅದನ್ನು ಬಿಟ್ಟು ಬಾಲ್ಡಿ, ಬಾಣಲಿ ಹೀಗೆ ಮೊಟ್ಟೆಗಿಂತ ಚೆನ್ನಾಗಿರೋ, ಚೆನ್ನಾಗಿ ಇಲ್ಲದೆ ಇರೋ ಹಲವು ಪದಗಳಲ್ಲಿ ಕರೀತಾರೆ.

* ಹೀರೊ ಆಗುವವರು ಸುಂದರವಾಗಿರಬೇಕು ಎನ್ನುವ ಸಿದ್ಧಮಾದರಿ ಇದೆಯಲ್ಲ...

ಸುಂದರವಾದ ಹೀರೊಗಳನ್ನು ನೋಡಬೇಕಾದರೆ ಜನರಿಗೆ ನಾನೂ ಹೀಗೆ ಇರಬೇಕಿತ್ತು ಎನಿಸುತ್ತದೆ. ನನ್ನನ್ನು ನೋಡಿದರೆ ನಾನು ಹೀಗೆ ಇರಬೇಕಿತ್ತು ಎನಿಸುವುದಿಲ್ಲ. ಇವನಿಗಿಂತ ನಾನು ಉತ್ತಮ ಎನಿಸುತ್ತದೆ! ನೂರರಲ್ಲಿ ಒಬ್ಬರು ಮಾತ್ರ ಹೀರೊ ಆಗುತ್ತಾರೆ. ನಾನು ಸಾಮಾನ್ಯರಲ್ಲಿ ಸಾಮಾನ್ಯರ ಹೀರೊ. ನಾನು ಅವರ ಬದುಕಿಗೆ ಹತ್ತಿರವಾದ ಪ್ರತಿಮೆ.

* ತುಂಬಾ ಸಣ್ಣಗಿದ್ದೀರಾ, ನಿಮ್ಮ ಡಯಟ್ ಬಗ್ಗೆ ಹೇಳಿ..

ಸರ್‍ರೀ ತಿನ್ತೀನಿ ಮಾರ್ರೆ.. ಮೂರು ಹೊತ್ತು ಮೀನು.. ಮೀನು.. ಮೀನು.. ಇಂಥದ್ದೇ ಬೇಕು ಅಂತ ಏನಿಲ್ಲ. ಹೊಟ್ಟೆ ತುಂಬಾ ಊಟ ಮಾಡುವುದೇ ನನ್ನ ಡಯಟ್.

* ಹುಡುಗಿಯರಿಗಾಗಿ ಸಿನಿಮಾದಲ್ಲಿ ಜಿಮ್‌ಗೆ ಹೋಗಿದ್ದೀರಿ, ನಿಜ ಜೀವನದಲ್ಲಿ ಏನು ಕಸರತ್ತು ಮಾಡುತ್ತೀರಿ..

ಜಿಮ್‌ಗೆಲ್ಲಾ ಹೋಗಲ್ಲ, ಅವಳನ್ನು ತುಂಬಾ ಸ್ಪೆಷಲ್ ಆಗಿ ನೋಡ್ಕೋತೀನಿ. ಮಾತನಾಡುವುದಕ್ಕಿಂತ ಬರೆದು ನನ್ನ ಪ್ರೀತಿ ಅಭಿವ್ಯಕ್ತಿ ಮಾಡ್ತೀನಿ. ರೊಮ್ಯಾಂಟಿಕ್‌ ಆಗಿ ಮಾತನಾಡಿದ್ರೆ ಇಂದಿನ ಹುಡುಗಿಯರು ನಕಲಿ ಅಂದುಕೊಳ್ತಾರೆ. ಹುಡುಗರು ಅಂದರೆ ಮಾನಸಿಕವಾಗಿ ಗಟ್ಟಿಮುಟ್ಟಾಗಿರಬೇಕು, ಭಾವುಕರಾಗಿರಬಾರದು ಎನ್ನುತ್ತಾರೆ. ನಾನು ಅನಿಸಿದನ್ನು ಹೇಳಿಬಿಡ್ತೀನಿ. ಉದಾಹರಣೆಗೆ ಗರ್ಲ್‌ಫ್ರೆಂಡ್ ಜೊತೆ ಮಾತನಾಡುವಾಗ ಮಧ್ಯೆ ಕರೆ ಕಡಿತಗೊಂಡರೆ ಹೇಳಬೇಕು ಎನಿಸಿದ್ದೆಲ್ಲವನ್ನು ದೊಡ್ಡ ಮೆಸೇಜ್ ಬರೆದು ಕಳಿಸುತ್ತೇನೆ. ಇನ್ನೂ ದೊಡ್ಡದಾಗಿ ಮೆಸೇಜ್ ಬರೀಬೇಕು ಎನಿಸಿದರೆ ಇಮೇಲ್‌ ಮಾಡುತ್ತೇನೆ.

* ದಪ್ಪ ಇರೋ ಹುಡುಗಿಯನ್ನು ಕೈಬಿಡ್ತೀರಲ್ಲಾ?

ಸಿನಿಮಾದಲ್ಲಿ ಅಷ್ಟೆ, ನಿಜವಾಗಿ ನನಗೆ ದಪ್ಪ ಇರೋ ಹುಡುಗೀನೇ ಚಂದ ಅನಿಸೋದು, ಡುಮ್ಮುಡುಮ್ಮು ಮುದ್ದಾಗಿ ಇರ್ತಾರೆ ಅಲ್ವಾ ಅದಕ್ಕೆ.

* ಮುಂದಿನ ಸಿನಿಮಾದಲ್ಲಿ ತಲೆ ತುಂಬಾ ಕೂದಲು ಇರುವಂತಹ ಪಾತ್ರ ಸಿಕ್ಕಿದರೆ..

ಪಾತ್ರಕ್ಕೆ ಅಗತ್ಯವಾದರೆ ಕೂದಲಿಗಾಗಿ ಏನಾದ್ರೂ ಮಾಡೇ ಮಾಡ್ತೀನಿ. ಇಲ್ಲ ಅಂದ್ರೆ ನಾನು ನಾನಾಗೇ ಇರಲು ಆಸೆಪಡ್ತೀನಿ. ‘ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲೂ ಇದನ್ನೇ ಹೇಳಲು ಪ್ರಯತ್ನಿಸಿರೋದು– ನೀವು ನೀವಾಗಿರಿ ಅಂತ. ನನಗೆ ಹೀರೊ ಪಾತ್ರನೇ ಮಾಡಬೇಕು ಎಂಬ ಹಂಬಲವೇನಿಲ್ಲ.

* ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ..

ನಿಮ್ಮ ಹಾಗೇ ಮಂಗಳೂರು ಮಹಾನಗರ ಪಾಲಿಕೆಯವರಿಗೂ ನನ್ನ ಧ್ವನಿ ಇಷ್ಟವಾಗಿ ಕಸ ತೆಗಿಯೋ ವಾಹನದಲ್ಲಿ ಬರುವ ಪ್ರಕಟಣೆಯಲ್ಲಿ ನನ್ನ ಕಂಠಸಿರಿ ಬಳಸಿಕೊಂಡಿದ್ದಾರೆ. ನಾನು ಮೊದಲು ಮಂಗಳೂರಿನಲ್ಲಿ ರೇಡಿಯೊ ಜಾಕಿಯಾಗಿದ್ದೆ. ರಾತ್ರಿ ಹೊತ್ತು ಭಗ್ನ ಪ್ರೇಮಿಗಳಿಗೆ ಸಮಾಧಾನ ಮಾಡೋ ಕಾರ್ಯಕ್ರಮ ಅದು. ಹೀಗೆ ರೇಡಿಯೊದಿಂದ ಕಸ ತೆಗಿಯೋ ಪ್ರಕಟಣೆವರೆಗೂ ನನ್ನ ಧ್ವನಿ ಹೆಸರುವಾಸಿ.

ಪ್ರತಿಕ್ರಿಯಿಸಿ (+)