ಶನಿವಾರ, ಡಿಸೆಂಬರ್ 7, 2019
25 °C

ಮೈಸೂರಿನಲ್ಲಿರುವ ವಿಪ್ರೊ ಕಾರ್ಖಾನೆಗೆ ಬೀಗಮುದ್ರೆ

Published:
Updated:
ಮೈಸೂರಿನಲ್ಲಿರುವ ವಿಪ್ರೊ ಕಾರ್ಖಾನೆಗೆ ಬೀಗಮುದ್ರೆ

ಮೈಸೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿಗಳಲ್ಲಿ ಒಂದಾದ ವಿಪ್ರೊಗೆ ಸೇರಿದ ‘ವಿಪ್ರೊ ಕನ್ಸುಮರ್ ಕೇರ್‌ ಆ್ಯಂಡ್‌ ಲೈಟಿಂಗ್‌ ಲಿಮಿಟೆಡ್‌ ಸಂಸ್ಥೆ’ಗೆ ಸೋಮವಾರ ರಾತ್ರಿ ಬೀಗಮುದ್ರೆ ಬಿದ್ದಿದೆ.

ನಷ್ಟದ ಕಾರಣ ಹೇಳಿ ಕಾರ್ಖಾನೆ ಕಾರ್ಮಿಕರನ್ನು ಏಕಾಏಕಿ ಹೊರ ಕಳುಹಿಸಲಾಗಿದೆ. ಶುಕ್ರವಾರ ಸಂಜೆಯೇ ತಯಾರಿಕಾ ಕಾರ್ಯ ನಿಂತಿದೆ. ಶನಿವಾರದಿಂದಲೇ ಕಾರ್ಖಾನೆಯಲ್ಲಿದ್ದ ದಾಸ್ತಾನುಗಳನ್ನು ತುಮಕೂರಿನ ಗೋದಾಮಿಗೆ ಸ್ಥಳಾಂತರಿಲಾಗಿದೆ.

ಕಾರ್ಮಿಕರು ವೇತನ ಹೆಚ್ಚಿಸುವಂತೆ ಕೋರಿ ಆಡಳಿತ ಮಂಡಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರು. 2012ರಲ್ಲಿ ವೇತನ ಹೆಚ್ಚಳ ಮಾಡಿರುವುದನ್ನು ಬಿಟ್ಟರೆ ಮತ್ತೆ ಏರಿಕೆ ಆಗಿರಲಿಲ್ಲ. ವೇತನ ಹೆಚ್ಚಳ ಸಂಬಂಧ ನಾಲ್ಕು ತಿಂಗಳಿಂದ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ 4 ಸಭೆಗಳು ನಡೆದಿದ್ದರೂ ಯಾವುದೇ ಒಪ್ಪಂದಕ್ಕೆ ಬಂದಿರಲಿಲ್ಲ.

ಸೋಮವಾರ ಕಾರ್ಮಿಕರು– ಆಡಳಿತ ಮಂಡಳಿ ಮಧ್ಯೆ ಸಭೆ ನಡೆದಿದೆ. ‘ಕಾರ್ಖಾನೆ ನಷ್ಟದಲ್ಲಿದ್ದು, ಬೀಗಮುದ್ರೆ ಹಾಕಲಾಗುತ್ತಿದೆ. ಕಾರ್ಮಿಕರು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವ ಅಗತ್ಯವಿಲ್ಲ’ ಎಂದು ಆಡಳಿತ ಮಂಡಳಿ ಸೂಚಿಸಿದೆ.

ವಿವಾದ: ‘1999ರಲ್ಲಿ ಮೈಸೂರಿನಲ್ಲಿ ಕಾರ್ಖಾನೆ ಆರಂಭವಾಗಿದ್ದು, ಈ ಘಟಕದ ಕಾರ್ಮಿಕರಿಗೆ 4 ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಮಾಡಲಾಗಿದೆ. ಆರಂಭದಲ್ಲಿ ₹ 960, ನಂತರ ₹ 1,550 ಹಾಗೂ ಕೊನೆಯದಾಗಿ 2012ರಲ್ಲಿ ವೇತನದಲ್ಲಿ ₹ 2,400  ಏರಿಕೆಯಾಗಿತ್ತು.  ನಂತರ ವೇತನ ಏರಿಕೆಯಾಗಿಲ್ಲ’ ಎಂದು ಕಾರ್ಮಿಕರು ಆರೋಪಿಸಿದರು.

ಮೈಸೂರಿನಲ್ಲಿ ಸಿಎಫ್‌ಎಲ್‌, ಎಲ್‌ಇಡಿ, ಟ್ಯೂಬ್‌ಲೈಟ್‌ ಹಾಗೂ ಸಾಂಪ್ರದಾಯಿಕ ಬಲ್ಬುಗಳು ತಯಾರಾಗುತ್ತಿದ್ದವು.

ಮೈಸೂರಿನ ಮೇಟಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿ ವಿಪ್ರೊ ಸಂಸ್ಥೆಯ ಸಾಫ್ಟ್‌ವೇರ್‌ ಘಟಕ ಕಾರ್ಯನಿರ್ವಹಿಸುತ್ತಿದೆ. ಈಚಿನ ದಿನಗಳಲ್ಲಿ ಮೈಸೂರಿನಲ್ಲಿ ನಷ್ಟದಿಂದಾಗಿ ಮುಚ್ಚಿರುವ ಎರಡನೇ ಕಾರ್ಖಾನೆ ಇದಾಗಿದೆ. ಈ ಹಿಂದೆ ‘ಫಾಲ್ಕನ್‌’ ಕಾರ್ಖಾನೆ ಮುಚ್ಚಿತ್ತು.

* ಕಾರ್ಖಾನೆಯನ್ನು ಸೋಮವಾರ ಸಂಜೆಯಿಂದಲೇ ಮುಚ್ಚಿದ್ದೇವೆ. ಕಾರಣ ತಿಳಿಸಲು ಸಾಧ್ಯವಿಲ್ಲ

- ಸುಶೀಲ್ ಕುಮಾರ್ ರೈನಾ, ಕಾರ್ಖಾನೆ ವ್ಯವಸ್ಥಾಪಕ

* ಈ ವಿಚಾರ ಗಮನಕ್ಕೆ ಬಂದಿಲ್ಲ. ದೂರು ಬಂದರೆ ಕೈಗಾರಿಕಾ ವಿವಾದಗಳ ಕಾಯ್ದೆ 1947ರ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು

- ಎಸ್‌.ಬಿ.ಶ್ರೀಪಾದ್‌, ಉಪ ಕಾರ್ಮಿಕ ಆಯುಕ್ತ, ಬೆಂಗಳೂರು

ಪ್ರತಿಕ್ರಿಯಿಸಿ (+)