ಬುಧವಾರ, ಡಿಸೆಂಬರ್ 11, 2019
25 °C

ತವರಿಗೆ ಮರಳಲಿದೆಯೇ ಏರ್‌ ಇಂಡಿಯಾ?

Published:
Updated:
ತವರಿಗೆ ಮರಳಲಿದೆಯೇ ಏರ್‌ ಇಂಡಿಯಾ?

ಏರ್‌ ಇಂಡಿಯಾ ಕಂಪೆನಿಯನ್ನು ಮಾರಾಟ ಮಾಡಲು ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದ ನಂತರ, ಟಾಟಾ ಸಮೂಹವು ಈ ಕಂಪೆನಿಯನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎನ್ನುವ ಸುದ್ದಿ ದೇಶದೆಲ್ಲೆಡೆ ಹರ್ಷ ಮೂಡಿಸಿತು. ತನಗೆ ಜನ್ಮ ನೀಡಿದ, ತನ್ನನ್ನು ಬೆಳೆಸಿದ ಸಮೂಹದ ತೆಕ್ಕೆಗೆ ಮರಳುವುದು ಈಗ ಆರ್ಥಿಕವಾಗಿ ದುರ್ಬಲಗೊಂಡಿರುವ ಈ ಮಹಾನ್ ವಿಮಾನಯಾನ ಕಂಪೆನಿಯ ಪಾಲಿಗೆ ಸೂಕ್ತವೇ ಆಗಿದೆ.‌

ಸರ್ಕಾರವು ಯಾರಿಂದ ಬೇಕಿದ್ದರೂ ಅಮೂಲ್ಯವಾದ ವಸ್ತುವೊಂದನ್ನು ಕಿತ್ತುಕೊಳ್ಳಬಹುದು. ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಬಹುದು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಕೆಲವೇ ವರ್ಷಗಳ ನಂತರದಲ್ಲಿ ಸರ್ಕಾರ ಏರ್‌ ಇಂಡಿಯಾ ಕಂಪೆನಿಯ ರಾಷ್ಟ್ರೀಕರಣದ ಮೂಲಕ ಮಾಡಿದ್ದು ಇದನ್ನೇ. ಆಗ ಈ ಕಂಪೆನಿಯು ಟಾಟಾ ಸಮೂಹದ ಒಡೆತನದಲ್ಲಿ ಇತ್ತು. ಆದರೆ ಅದೇ ಸರ್ಕಾರವು ಏರ್‌ ಇಂಡಿಯಾ ಕಂಪೆನಿಯನ್ನು ಟಾಟಾ ಸಮೂಹಕ್ಕೆ ಒಂದು ಬೆಲೆಗೆ ಏಕಪಕ್ಷೀಯವಾಗಿ ಹಸ್ತಾಂತರ ಮಾಡಲು ಅವಕಾಶವಿಲ್ಲ. ತಮ್ಮಿಂದ ಕಸಿದುಕೊಂಡು ಹೋಗಿದ್ದನ್ನು ಮರಳಿ ಪಡೆಯಲು ಟಾಟಾ ಸಮೂಹವು ಹರಾಜಿನಲ್ಲಿ ಪಾಲ್ಗೊಳ್ಳಬೇಕು. ಇದೊಂದು ಕ್ರೂರ ವ್ಯಂಗ್ಯ. ಆದರೆ ಅದೇ ವಾಸ್ತವ.

ಆಕರ್ಷಕ ವ್ಯಕ್ತಿತ್ವ, ನಾಯಕತ್ವದ ಗುಣಗಳನ್ನು ಹೊಂದಿದ್ದ ಜೆಆರ್‌ಡಿ ಟಾಟಾ ಅವರು ಟಾಟಾ ಸಮೂಹವನ್ನು ವಿಶ್ವಮಾನ್ಯ ವಾಣಿಜ್ಯೋದ್ಯಮ ಸಂಸ್ಥೆಯನ್ನಾಗಿ ಬೆಳೆಸಿದರು. ಅವರು ದೂರದೃಷ್ಟಿ ಹೊಂದಿದ್ದ ವಾಣಿಜ್ಯೋದ್ಯಮಿಯೂ ಹೌದು. ಟಾಟಾ ಟ್ರಸ್ಟ್ಸ್‌ ಮೂಲಕ ಅವರು ನಡೆಸಿದ ಸಾಮಾಜಿಕ ಕಾರ್ಯಗಳು ಅವರ ಪಾಲಿಗೆ ಗೌರವ ತಂದುಕೊಟ್ಟಿವೆ. ಇಷ್ಟೆಲ್ಲದರ ನಡುವೆಯೇ ಜೆಆರ್‌ಡಿ ಟಾಟಾ ಅವರು ಒಬ್ಬ ದಿಟ್ಟ ವಿಮಾನಯಾನಿ, ಪೈಲಟ್ ಕೂಡ ಆಗಿದ್ದರು. ಅವರ ಅವಧಿಯಲ್ಲಿ ಏರ್‌ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡಬೇಕು ಎಂದು ಈ ಕ್ಷೇತ್ರದ ಜನ ಹಂಬಲಿಸುತ್ತಿದ್ದರು. ಅಲ್ಲಿ ಕೆಲಸ ಮಾಡುವುದು ಪ್ರತಿಷ್ಠೆಯ ಸಂಕೇತವೂ ಆಗಿತ್ತು.

ಪರವಾನಗಿ ಪಡೆದ ಭಾರತದ ಮೊದಲ ಪೈಲಟ್ ಅವರು. ದೇಶದ ಮೊದಲ ವಾಣಿಜ್ಯ ಉದ್ದೇಶದ ವಿಮಾನಯಾನ ನಡೆದಿದ್ದು ಕರಾಚಿ- ಚೆನ್ನೈ ನಡುವೆ 1932ರಲ್ಲಿ. ಮೂರು ಆಸನಗಳ, ಒಂದು ಎಂಜಿನ್ ಹೊಂದಿದ್ದ ಈ ವಿಮಾನ ಅಹಮದಾಬಾದ್, ಬಾಂಬೆ (ಈಗ ಮುಂಬೈ), ಪುಣೆ, ಕೊಲ್ಹಾಪುರ, ಬಳ್ಳಾರಿ, ಬೆಂಗಳೂರು ಮಾರ್ಗವಾಗಿ ಸಾಗಿತ್ತು. ಅದರ ಪೈಲಟ್ ಆಗಿದ್ದವರು ಜೆಆರ್‌ಡಿ ಟಾಟಾ.

ಮೊದಲಿನ ಆಕರ್ಷಣೆ ಕಳೆದುಕೊಂಡಿದ್ದರೂ, ಆರ್ಥಿಕವಾಗಿ ದುರ್ಬಲಗೊಂಡಿದ್ದರೂ ಏರ್‌ ಇಂಡಿಯಾ ಕಂಪೆನಿಯು ಇಂದಿಗೂ ಒಂದು ಬೆಲೆಬಾಳುವ ಆಸ್ತಿ. ಸರ್ಕಾರ ಕೆಲವು ತೀರ್ಮಾನಗಳನ್ನು ಅಳೆದು-ತೂಗಿ ತೆಗೆದುಕೊಂಡರೆ, ವಿವೇಕಯುತವಾಗಿ ಹಾಗೂ ಪಾರದರ್ಶಕವಾಗಿ ಕೆಲವು ಕ್ರಮಗಳನ್ನು ಕೈಗೊಂಡರೆ ಈ ಕಂಪೆನಿಯ ನೈಜ ಸಾಮರ್ಥ್ಯ ಗೊತ್ತಾಗುತ್ತದೆ. ಕಂಪೆನಿಯ ಷೇರುಗಳನ್ನು ಬಿಡ್ಡಿಂಗ್‌ಗೆ ಮುಕ್ತಗೊಳಿಸಿ, ಉತ್ತಮ ಲಾಭ ಪಡೆಯುವ ಅವಕಾಶ ಸರ್ಕಾರಕ್ಕಿದೆ.

ಮೊದಲು ಬಿಡ್ಡಿಂಗ್ ಪ್ರಕ್ರಿಯೆ ಕುರಿತು ಚರ್ಚಿಸೋಣ. ಇದು ವಿಶ್ವಮಟ್ಟದಲ್ಲಿ, ಮುಕ್ತವಾಗಿ, ಪಾರದರ್ಶಕವಾಗಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಯಬೇಕು. ಹೆಸರು ಅಂತಿಮಗೊಳಿಸಲಾದ ಬಿಡ್ಡರ್‌ಗಳು ಮೀಸಲು ಮೊತ್ತವನ್ನು ಮೊದಲು ಠೇವಣಿ ರೂಪದಲ್ಲಿ ಇರಿಸಬೇಕು. ಬಿಡ್‌ ಆರಂಭದಿಂದ ಕೊನೆಗೊಳ್ಳುವವರೆಗಿನ ಸಮಯ ಆರರಿಂದ ಎಂಟು ತಾಸು ಮಾತ್ರ ಇರಬೇಕು. ಸರ್ಕಾರದಲ್ಲಿ ಈಗಲೂ ಜಾರಿಯಲ್ಲಿ ಇರುವ ಮುಚ್ಚಿದ ಲಕೋಟೆಯಲ್ಲಿ ಹೆಸರು ಕಳುಹಿಸುವ ಬಿಡ್ಡಿಂಗ್ ಪ್ರಕ್ರಿಯೆಯನ್ನು ಇಲ್ಲಿ ಅನುಸರಿಸಬಾರದು. ಈ ಪದ್ಧತಿಯ ಬಗ್ಗೆ ಬಹಳಷ್ಟು ತಕರಾರುಗಳಿವೆ, ಇದರಲ್ಲಿ ಅವ್ಯವಹಾರ ನಡೆಯುವ ಸಾಧ್ಯತೆಗಳು ಇರುತ್ತವೆ. ಬಿಡ್ಡಿಂಗ್ ಪ್ರಕ್ರಿಯೆ ಮುಕ್ತವಾಗಿರಬೇಕು. ಎದುರಾಳಿ ಹೇಳುತ್ತಿರುವ ಮೊತ್ತವನ್ನು ಗಮನಿಸಿ, ತನ್ನ ಮೊತ್ತವನ್ನು ಹೆಚ್ಚಿಸುವ ಅವಕಾಶ ಪ್ರತಿ ಬಿಡ್ಡರ್‌ಗೂ ಇರಬೇಕು. ಟಾಟಾ ಸಮೂಹವು ಕೋರಸ್ ಉಕ್ಕು ಕಂಪೆನಿಯನ್ನು ಸ್ವಾಧೀನಕ್ಕೆ ಪಡೆದಿದ್ದು ಇದೇ ಮಾದರಿಯ ಬಿಡ್ಡಿಂಗ್ ಮೂಲಕ. ಏರ್‌ ಇಂಡಿಯಾವು ಷೇರು ಮಾರುಕಟ್ಟೆಯಲ್ಲಿ ಹೆಸರು ನೋಂದಾಯಿಸಿದ ಕಂಪೆನಿ ಅಲ್ಲದ ಕಾರಣ, ಕಂಪೆನಿಯ ಮೌಲ್ಯವನ್ನು ನಿಜ ಅರ್ಥದಲ್ಲಿ ಕಂಡುಕೊಳ್ಳಲು ಇದು ಅತ್ಯುತ್ತಮ ಮಾರ್ಗ.

ಸಮಸ್ಯೆಗೆ ಸಿಲುಕಿರುವ ವಿಮಾನಯಾನ ಕಂಪೆನಿಗೆ ಅತ್ಯುತ್ತಮ ಮೌಲ್ಯ ನಿಗದಿ ಮಾಡಲು ಸರ್ಕಾರವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ವಿಶ್ವ ಮಟ್ಟದಲ್ಲಿ ಗೌರವ ಸಂಪಾದಿಸಿರುವ ಸಮಾಲೋಚಕರ ನೆರವು ಪಡೆದು ಟೆಂಡರ್ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಕೆಲಸಕ್ಕೆ ಸಾಕಷ್ಟು ಸಮಯ ನೀಡಬೇಕು. ಬಿಡ್ಡಿಂಗ್‌ಗೆ ಹೆಸರು ಅಂತಿಮಗೊಂಡಿರುವ ಕಂಪೆನಿಗಳ ಪ್ರತಿನಿಧಿಗಳ ಜೊತೆ ಟೆಂಡರ್‌ಪೂರ್ವ ಸಭೆ ನಡೆಸಿ, ಅವರ ಆತಂಕಗಳು ಏನು ಎಂಬುದನ್ನು ಅರಿತುಕೊಳ್ಳಬೇಕು. ಕಂಪೆನಿಗೆ ಅತ್ಯುತ್ತಮ ಮೌಲ್ಯ ನಿಗದಿ ಮಾಡಲು ಇವು ಪ್ರಮುಖ ಕ್ರಮಗಳು. ಮಾರಾಟದ ಷರತ್ತುಗಳು ಹಾಗೂ ವಿಮಾನಯಾನಕ್ಕೆ ಸಂಬಂಧಿಸಿದ ನೀತಿಗಳನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟರೆ ಮಾತ್ರ, ಶ್ರೀಮಂತ ವ್ಯಕ್ತಿಯೊಬ್ಬ ಏರ್ ಇಂಡಿಯಾ ಕಂಪೆನಿಗೆ ಅತಿಹೆಚ್ಚಿನ ಮೌಲ್ಯ ನಿಗದಿ ಮಾಡಿ ಖರೀದಿಸುತ್ತಾನೆ.

ಸರ್ಕಾರವು ಏರ್‌ ಇಂಡಿಯಾವನ್ನು ಋಣಮುಕ್ತ ಕಂಪೆನಿಯನ್ನಾಗಿ ಮಾಡಿದರೆ, ಆದಾಯ ತರುವ ಆಸ್ತಿಗಳನ್ನು ಮಾತ್ರ ಮಾರಾಟ ಮಾಡಿದರೆ, ಖರೀದಿಸಲು ಮುಂದೆ ಬರುವವರಿಗೆ ಶೇಕಡ 51ರಷ್ಟು ಪಾಲು ನೀಡಿದರೆ, ಈ ಕಂಪೆನಿಯಿಂದ ತಾನು ಹಿಂದೆ ಸರಿಯುವವರೆಗೆ ರಾಜಕಾರಣಿಗಳಿಂದ ಹಾಗೂ ಅಧಿಕಾರಿಗಳಿಂದ ಹಸ್ತಕ್ಷೇಪ ನಡೆಯದಂತೆ ನೋಡಿಕೊಳ್ಳುವ ಭರವಸೆ ನೀಡಿದರೆ ಕಂಪೆನಿಯು ಖರೀದಿದಾರನ ಮಕುಟದ ಮಣಿಯಾಗಲಿದೆ. ಇದರ ಜೊತೆಯಲ್ಲೇ ಕೇಂದ್ರವು ಕಾರ್ಪೊರೇಟ್ ಆಡಳಿತ ವ್ಯವಸ್ಥೆಗೆ ಅವಕಾಶ ಕೊಡಬೇಕು, ವಿಮಾನವೊಂದಕ್ಕೆ ಅಗತ್ಯವಿರುವ ಕನಿಷ್ಠ ಸಂಖ್ಯೆಯ ಸಿಬ್ಬಂದಿಯನ್ನು ಮಾತ್ರ ಉಳಿಸಿಕೊಳ್ಳಲು ಖರೀದಿದಾರರಿಗೆ ಅವಕಾಶ ಕೊಡಬೇಕು, ಕೆಲಸ ಕಳೆದುಕೊಳ್ಳುವ ಪ್ರತಿ ನೌಕರನಿಗೂ ತಾನೇ ಪರಿಹಾರ ನೀಡುವ ಭರವಸೆ ನೀಡಬೇಕು.

ವಿಶ್ವದ ಪ್ರಮುಖ ನಗರಗಳಿಗೆ ಹಾರಾಟ ನಡೆಸುವ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತನ್ನದೇ ಆದ ಸ್ಥಳ ಹೊಂದಿರುವ, ಎಂಜಿನಿಯರ್‌ಗಳ ತಂಡ ಹಾಗೂ ಮೂಲಸೌಕರ್ಯ ಇರುವ, ತರಬೇತಿ ಪಡೆದ ವಿಮಾನ ಸಿಬ್ಬಂದಿ ಇರುವ, ಬೇರೆ ಬೇರೆ ದೇಶಗಳಿಗೆ ವಿಮಾನ ಪ್ರಯಾಣದ ಸೌಲಭ್ಯ ಕಲ್ಪಿಸುವ ಹಕ್ಕುಗಳು, ಆ ಹಕ್ಕುಗಳನ್ನು ರಕ್ಷಿಸುವ ಭರವಸೆ, ₹ 26 ಸಾವಿರ ಕೋಟಿ ಆದಾಯ ಇರುವ ಏರ್‌ ಇಂಡಿಯಾದ ಮೌಲ್ಯವನ್ನು ₹50 ಸಾವಿರ ಕೋಟಿ ಎಂದು ನಿಗದಿ ಮಾಡಲು ಅವಕಾಶಗಳಿವೆ. ಈ ಮೊತ್ತ ಈಗ ಏರ್‌ ಇಂಡಿಯಾ ಹೊಂದಿರುವ ಸಾಲದ ಮೊತ್ತಕ್ಕೆ ಸಮನಾಗಿದೆ.

ಎಮಿರೇಟ್ಸ್‌, ಎತಿಹಾದ್ ಅಥವಾ ಬ್ರಿಟಿಷ್ ಏರ್‌ವೇಸ್‌ನಂತಹ ವಿಶ್ವದ ಬಲಿಷ್ಠ ಕಂಪೆನಿಗಳ ಜೊತೆ ಸೆಣಸಿ, ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಏರ್‌ ಇಂಡಿಯಾವನ್ನು ಗೆದ್ದುಕೊಳ್ಳುವ ಸಾಮರ್ಥ್ಯ ಇರುವುದು ಟಾಟಾ ಸಮೂಹಕ್ಕೆ ಮಾತ್ರವೇ ಎಂದು ಅನಿಸುತ್ತದೆ. ಅಲ್ಲದೆ, ಟಾಟಾ ಸಮೂಹಕ್ಕೆ ದೂರದರ್ಶಿತ್ವ, ನಾಯಕತ್ವ, ನಿರ್ವಹಣಾ ಕೌಶಲ, ಆರ್ಥಿಕ ಶಕ್ತಿ, ದೊಡ್ಡ ಮೊತ್ತದ ಬಂಡವಾಳ ಸಂಗ್ರಹಿಸುವ ತಾಕತ್ತು ಕೂಡ ಇದೆ. ಈಗ ರತನ್‌ ಟಾಟಾ ಅವರೇ ಸಮೂಹದ ಮುಖ್ಯ ಸ್ಥಾನದಲ್ಲಿ ಇರುವುದರಿಂದಾಗಿ, ಏರ್‌ ಇಂಡಿಯಾ ಕಂಪೆನಿಯು ಪುನಃ  ಟಾಟಾ ತೆಕ್ಕೆಗೆ ಹೋಗಲು ಸಂದರ್ಭ ಕೂಡಿಬಂದಿದೆ. ರತನ್‌ ಅವರೂ ಒಬ್ಬ ಪೈಲಟ್. ಅವರಿಗೆ ವೈಮಾನಿಕ ಕ್ಷೇತ್ರದಲ್ಲಿ ಆಸಕ್ತಿಯೂ ಇದೆ. ಏರ್‌ ಇಂಡಿಯಾ ಕಂಪೆನಿ ಟಾಟಾ ತೆಕ್ಕೆಗೆ ಬಂದರೆ ಕಂಪೆನಿಗೆ, ಅಲ್ಲಿನ ಉದ್ಯೋಗಿಗಳಿಗೆ ಹಾಗೂ ಅದರ ಗ್ರಾಹಕರಿಗೆ ಒಳಿತಾಗಲಿದೆ. ಆಗ ಸರ್ಕಾರಕ್ಕೆ ಕೂಡ ತಾನು ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಆಗುತ್ತದೆ. ಜೆಆರ್‌ಡಿ ಟಾಟಾ ಅವರಿಗೆ ಸೂಕ್ತ ಗೌರವ ನೀಡಿದಂತೆಯೂ ಆಗುತ್ತದೆ. ಅವರು ಆಗ ಸ್ವರ್ಗದಿಂದಲೇ ಮುಗುಳ್ನಗುತ್ತಾರೆ.

ಪ್ರತಿಕ್ರಿಯಿಸಿ (+)