ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯ ಕೋಮು ವೈಷಮ್ಯ ಸೌಹಾರ್ದ ಪರಂಪರೆಗೆ ಕಳಂಕ

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಕೆಲವು ವಾರಗಳಿಂದ ಸಲ್ಲದ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದೆ. ಚೂರಿ ಇರಿತ, ಕೊಲೆ, ಪ್ರತಿಭಟನೆ, ವಾಹನಗಳ ಜಖಂ, ಗುಂಪು ಘರ್ಷಣೆ, ಕೋಮು ವೈಷಮ್ಯದ ಘಟನೆಗಳು ತಾಲ್ಲೂಕಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು ವ್ಯಾಪಾರ ವಹಿವಾಟುಗಳಿಗೆ ತೀವ್ರ ಹಾನಿ ಉಂಟುಮಾಡಿದೆ. ಈ ಹಿಂಸಾತ್ಮಕ ಘಟನೆಗಳು ಜಿಲ್ಲೆಯಾದ್ಯಂತ ಪ್ರತಿಧ್ವನಿಸಿ ಜನರಲ್ಲಿ ತಲ್ಲಣ ಉಂಟುಮಾಡಿವೆ. ಯಾರೋ ಕೆಲವು ದುಷ್ಕರ್ಮಿಗಳು ನಡೆಸುತ್ತಿರುವ ಪುಂಡಾಟಿಕೆಗಳಿಂದಾಗಿ ಇಡೀ ಜಿಲ್ಲೆಗೆ ಕೆಟ್ಟ ಹೆಸರು ಬಂದು, ಶಾಂತಿಪ್ರಿಯ ಜನರು ತಲೆತಗ್ಗಿಸುವಂತಾಗಿದೆ. ‘ಬುದ್ಧಿವಂತರ ಜಿಲ್ಲೆ’ ಎಂದು ಹೆಸರು ಪಡೆದಿದ್ದ ದಕ್ಷಿಣ ಕನ್ನಡದ ಪ್ರತಿಷ್ಠೆಗೆ, ಸತತವಾಗಿ ನಡೆಯುತ್ತಿರುವ ಇಂತಹ ಹಿಂಸಾಕೃತ್ಯಗಳು ಕಳಂಕ ತರುತ್ತಿವೆ. ರಾಜ್ಯದ ಪ್ರಮುಖ ಬಂದರನ್ನು ಹೊಂದಿರುವ, ಹಲವು ವಾಣಿಜ್ಯ ಬ್ಯಾಂಕ್‌ಗಳನ್ನು ಆರಂಭಿಸಿ ದೇಶದಲ್ಲೇ ಮಾದರಿಯಾಗಿರುವ, ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿ ದೇಶದ ಎಲ್ಲೆಡೆಯಿಂದ  ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಕರಾವಳಿಯ ಈ ಹೆಮ್ಮೆಯ ಜಿಲ್ಲೆ, ಹೀಗೆ ಕ್ಷುಲ್ಲಕ ಕಾರಣಗಳಿಗಾಗಿ ಸುದ್ದಿ ಮಾಡುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಕೋಮು ವೈಷಮ್ಯಕ್ಕೆ  ಒಂದು ತಿಂಗಳಲ್ಲಿ ಮೂವರು ಅಮಾಯಕ ಯುವಕರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ತಕ್ಷಣದ ಪ್ರಚೋದನೆಗೆ ಒಳಗಾಗಿ ಹಿಂಸಾಕೃತ್ಯಗಳಲ್ಲಿ ತೊಡಗಿದ ಹಲವಾರು ಯುವಕರು ಜೈಲುಪಾಲಾಗಿದ್ದಾರೆ. ಕೋಮು ವೈಷಮ್ಯದಿಂದಾಗಿ ಜನರು ಮಾನಸಿಕವಾಗಿ ವಿಭಜನೆಗೊಂಡಿದ್ದಾರೆ. ಇಡೀ ಜಿಲ್ಲೆಯ ಸೌಹಾರ್ದ ಪರಂಪರೆಗೆ ಕಪ್ಪುಮಸಿ ಬಳಿದಂತಾಗಿದೆ. ಕ್ಷಣಿಕ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಉದ್ರೇಕಕಾರಿ ಭಾಷಣಗಳನ್ನು ಮಾಡಿ, ಹೇಳಿಕೆಗಳನ್ನು ನೀಡಿ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುತ್ತಿರುವುದು ತರವಲ್ಲ.

ಹಣ, ಆಸ್ತಿ ಅಥವಾ ವೈಯಕ್ತಿಕ ಸೇಡಿನಿಂದ ಕೊಲೆಗಳು ನಡೆಯುವುದು ಹೊಸತೇನಲ್ಲ. ಆದರೆ ಇಡೀ ಜನಸಮುದಾಯ ಸಮೂಹ ಸನ್ನಿಗೆ ಒಳಗಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿಕೊಂಡು ಬೀದಿಗೆ ಇಳಿದು, ಕೊಲೆಗಡುಕ ಸಂಸ್ಕೃತಿಯನ್ನು ಹರಡುವುದು ನಾಗರಿಕ ಸಮಾಜಕ್ಕೆ ಅಳಿಸಲಾಗದ ಕಳಂಕ ತರುತ್ತದೆ. ಕರಾವಳಿಯಲ್ಲಿ ಗಾಳಿಸುದ್ದಿಗಳು ಅಂತಹ ಕೆಟ್ಟ ವಾತಾವರಣಕ್ಕೆ ಪೂರಕವಾಗಿ ಹರಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ವೈಷಮ್ಯ ಹೆಚ್ಚಿಸುವ ಬರಹಗಳು, ಸುಳ್ಳುಸುದ್ದಿಗಳು ಪ್ರಕಟವಾಗಿ ಸಾಮಾಜಿಕ ಶಾಂತಿಯನ್ನು ಕದಡುತ್ತಿವೆ. ಕರಾವಳಿಯ ಜಿಲ್ಲೆಗಳು ಇಡೀ ರಾಜ್ಯದಲ್ಲೇ ಅತ್ಯಂತ ಹೆಚ್ಚು ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರಗಳನ್ನು ಹೊಂದಿವೆ. ಧಾರ್ಮಿಕ ಕಾರಣಗಳಿಗಾಗಿ ಜನರ ನಡುವೆ ಅಶಾಂತಿ ಹಬ್ಬಿಸುವ ಕೆಲಸ ನಡೆಯುತ್ತಿರುವಾಗ ಕರಾವಳಿಯ ಧಾರ್ಮಿಕ ಮುಖಂಡರು, ಮಠಾಧೀಶರು ಕೈಕಟ್ಟಿ ಕುಳಿತುಕೊಳ್ಳುವುದು ಎಳ್ಳಷ್ಟೂ ತರವಲ್ಲ. ಜನರ ನಡುವೆ ಒಗ್ಗಟ್ಟಾಗಿ ತೆರಳಿ ತಮ್ಮ ಧರ್ಮದ ನೈಜ ತಿರುಳನ್ನು ಪಸರಿಸಿ, ಸಾಮಾಜಿಕ ಶಾಂತಿಯನ್ನು ಉಂಟು ಮಾಡಲು ಶ್ರಮಿಸುವುದು ಅವರ ನೈತಿಕ ಕರ್ತವ್ಯವೂ ಹೌದು. ಅದನ್ನು ಮಾಡದಿದ್ದಲ್ಲಿ ಅವರು ತಮ್ಮ ಧರ್ಮಗಳಿಗೇ ಅವಮಾನ ಉಂಟು ಮಾಡುತ್ತಿದ್ದಾರೆ ಎಂದರ್ಥ. ಜಿಲ್ಲೆಯ ಬುದ್ಧಿಜೀವಿಗಳು, ಸಾಮಾಜಿಕ ನೇತಾರರು, ಔದ್ಯಮಿಕ ಗಣ್ಯರು ಕೂಡಾ ಸೌಹಾರ್ದ ಪರಂಪರೆಯನ್ನು ಕಾಯ್ದುಕೊಳ್ಳುವಲ್ಲಿ ನೆರವಾಗಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಯಾವ ಒತ್ತಡಕ್ಕೂ ಮಣಿಯದೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲಿ ಸರ್ಕಾರದ ಹಸ್ತಕ್ಷೇಪವಿರಬಾರದು.  ಆದರೆ ಪೊಲೀಸ್‌ ವ್ಯವಸ್ಥೆಯ ಒಳಗೇ ಕೋಮುಭಾವನೆಗಳು ಹರಡಿದ್ದರೆ ಅದು ಮುಂದೆ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಮುಖ್ಯವಾಗಿ ರಾಜಕೀಯ ನಾಯಕರು ಇಂತಹ ಸಂದರ್ಭಗಳಲ್ಲಿ ಹೆಚ್ಚು ಸಂಯಮದಿಂದ ಪ್ರತಿಕ್ರಿಯೆ ನೀಡುವುದನ್ನು ಕಲಿತುಕೊಳ್ಳಬೇಕು. ಪೊಲೀಸರ ಮೇಲೆ ಆರೋಪಗಳನ್ನು ಹೊರಿಸಿ ಅವರ ನೈತಿಕ ಸ್ಥೈರ್ಯವನ್ನು ಕುಂದಿಸುವ ಕೆಲಸ ಸರಿಯಲ್ಲ.

ಸರ್ಕಾರ ಎಲ್ಲರದ್ದೂ ಹೌದು; ಹಾಗೆಯೇ ಸಂಸದ, ಶಾಸಕರಂತಹ ಜನಪ್ರತಿನಿಧಿಗಳು ಎಲ್ಲ ಧರ್ಮಗಳ ಜನರನ್ನೂ  ಪ್ರತಿನಿಧಿಸುತ್ತಾರೆ ಎನ್ನುವುದನ್ನು ಮರೆಯಬಾರದು. ಸರ್ಕಾರವಾಗಲೀ, ಸಚಿವರಾಗಲೀ, ಸಂಸದರಾಗಲೀ ಒಂದು ಕೋಮಿನ ವಕ್ತಾರರಂತೆ ವರ್ತಿಸುವುದು ಸಂವಿಧಾನಕ್ಕೆ ಬಗೆಯುವ ಅಪಚಾರವಾಗುತ್ತದೆ. ಇದು ಅಕ್ಷಮ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT