ಶನಿವಾರ, ಡಿಸೆಂಬರ್ 14, 2019
25 °C

ಸದ್ಯಕ್ಕೆ ವಿದ್ಯುತ್‌ ಅಭಾವ ಇಲ್ಲ: ನಾಯ್ಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದ್ಯಕ್ಕೆ ವಿದ್ಯುತ್‌ ಅಭಾವ ಇಲ್ಲ: ನಾಯ್ಕ್

ಬೆಂಗಳೂರು: ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಜಲ ವಿದ್ಯುತ್‌ ಉತ್ಪಾದನೆ ಕುಸಿದಿದ್ದರೂ ವಿದ್ಯುತ್‌ ಅಭಾವ ಉಂಟಾಗುವುದಿಲ್ಲ ಎಂದು ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ. ಕುಮಾರ್‌ ನಾಯ್ಕ್ ತಿಳಿಸಿದ್ದಾರೆ.

ಪ್ರಮುಖ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರಗಳ ಪೈಕಿ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳಲ್ಲಿ ಸಾಕಷ್ಟು ನೀರು ಇಲ್ಲದೆ  ವಿದ್ಯುತ್‌  ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಉಳಿದ ಕೇಂದ್ರಗಳಲ್ಲಿ ಮಾಮೂಲಿನಂತೆ  ಉತ್ಪಾದನೆ ನಡೆಯುತ್ತಿದೆ ಎಂದಿದ್ದಾರೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ವಿದ್ಯುತ್‌ ಬೇಡಿಕೆ  ಕುಸಿತವಾಗುವುದರಿಂದ ಇರುವುದರಿಂದ ಸಹಜವಾಗಿ ಉತ್ಪಾದನೆಯೂ ಕಡಿಮೆ ಆಗುತ್ತದೆ.  ಮಳೆ ಕಡಿಮೆ ಆಗಿರುವುದರಿಂದ   ವಿದ್ಯುತ್‌ ಅಭಾವ ಉಂಟಾಗಬಹುದು ಎಂದು ಆತಂಕಪಡುವ ಅಗತ್ಯವಿಲ್ಲ.  ಆಗಸ್ಟ್‌ ಕೊನೆಯಲ್ಲಿ ಜಲಾಶಯಗಳಲ್ಲಿ ಇರುವ ನೀರಿನ ಲಭ್ಯತೆ ಗಣನೆಗೆ ತೆಗೆದುಕೊಂಡು ಜಲ ವಿದ್ಯುತ್‌ ಉತ್ಪಾದನೆ  ಅಂದಾಜು ಮಾಡಲಾಗುತ್ತದೆ ಎಂದು ಕುಮಾರ್‌ ನಾಯ್ಕ್‌  ತಿಳಿಸಿದರು.

ರಾಜ್ಯದ ಎಲ್ಲ ಜಲ ವಿದ್ಯುತ್‌ ಘಟಕಗಳಲ್ಲಿ ಈ ವರ್ಷ  (ಏಪ್ರಿಲ್‌ನಿಂದ ಜುಲೈ) 160.7 ಕೋಟಿ ಯುನಿಟ್‌ಗಳಷ್ಟು ವಿದ್ಯುತ್‌ ಉತ್ಪಾದನೆ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 169.4 ಕೋಟಿ ಯುನಿಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗಿತ್ತು. ಒಟ್ಟು 8.7  ಕೋಟಿ ಯುನಿಟ್‌ಗಳಷ್ಟು ಉತ್ಪಾದನೆಯಲ್ಲಿ ಕೊರತೆ ಆಗಿದೆ ಎಂದು ಕೆಪಿಸಿಎಲ್‌ ಮೂಲಗಳು ತಿಳಿಸಿವೆ. ಪ್ರತಿ ನಿತ್ಯ ಸರಾಸರಿ 18.1 ಕೋಟಿ ಯುನಿಟ್‌ಗಳಷ್ಟು ವಿದ್ಯುತ್‌ ಬಳಕೆ ಆಗುತ್ತಿದೆ ಎಂದು ಮೂಲಗಳು ಹೇಳಿವೆ.

ಕೊರತೆ ಇಲ್ಲ: ‘ಕೆಪಿಸಿಎಲ್ ಎಷ್ಟು ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಿ ನಮಗೆ ನೀಡಲು ಸಾಧ್ಯ ಎಂಬುದರ ಆಧಾರದ ಮೇಲೆ ವಿದ್ಯುತ್‌ ಕೊರತೆ ಆಗುತ್ತದೆಯೇ  ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ಕೆಪಿಟಿಸಿಎಲ್‌ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಪವನ ವಿದ್ಯುತ್‌ ಮೂಲದಿಂದ 2400 ಮೆ.ವಾ.ವರೆಗೆ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಇದರಲ್ಲೂ ಏರಿಳಿತ ಆಗುತ್ತಿದೆ. ಗಾಳಿ ಚೆನ್ನಾಗಿದ್ದಾಗ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಆಗಿದೆ ಎಂದರು.

ಪ್ರತಿಕ್ರಿಯಿಸಿ (+)