ಭಾನುವಾರ, ಡಿಸೆಂಬರ್ 8, 2019
21 °C

‘ಸಿಕ್ಕಿಂ ಗಡಿ ಬಿಕ್ಕಟ್ಟು ಮುಂದುವರಿಕೆಗೆ ಕಾರಣಗಳಿಲ್ಲ’

ಪಿಟಿಐ Updated:

ಅಕ್ಷರ ಗಾತ್ರ : | |

‘ಸಿಕ್ಕಿಂ ಗಡಿ ಬಿಕ್ಕಟ್ಟು ಮುಂದುವರಿಕೆಗೆ ಕಾರಣಗಳಿಲ್ಲ’

ಸಿಂಗಪುರ: ಭಾರತ ಮತ್ತು ಚೀನಾ ನಡುವಣ ಗಡಿ ವಿವಾದಗಳನ್ನು ಹಿಂದೆ ಬಗೆಹರಿಸಿಕೊಳ್ಳಲಾಗಿದೆ. ಆದರೆ ಈ ಬಾರಿಯ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಹೇಳಿದ್ದಾರೆ.

‘ಭಾರತ–ಚೀನಾ ನಡುವೆ ಬಹಳ ಉದ್ದದ ಗಡಿ ಇದೆ. ಈ ಗಡಿಯನ್ನು ನಿರ್ದಿಷ್ಟವಾಗಿ ಎಲ್ಲಿಯೂ ಗುರುತಿಸಲಾಗಿಲ್ಲ. ಹಾಗಾಗಿ ಆಗಾಗ ಭಿನ್ನಾಭಿಪ್ರಾಯ ಎದುರಾಗುತ್ತದೆ’ ಎಂದು ಗಡಿ ಸಂಘರ್ಷದ ಕುರಿತು ಪ್ರತಿಕ್ರಿಯೆ ನೀಡಿದ ಜೈಶಂಕರ್‌ ತಿಳಿಸಿದರು.

ಸಿಂಗಪುರದ ಲೀ ಕುವಾನ್‌ ಯೆವ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಪಾಲಿಸಿ ಮತ್ತು ಭಾರತದ ಹೈಕಮಿಷನ್‌ ಜಂಟಿಯಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಕಳೆದ ಮೂರು ವಾರಗಳಿಂದ ಸಂಘರ್ಷ ನಡೆಯುತ್ತಿದೆ. ಗಡಿಯಲ್ಲಿ ಚೀನಾ ರಸ್ತೆ ನಿರ್ಮಿಸಲು ಮುಂದಾದದ್ದನ್ನು ಭಾರತದ ಯೋಧರು ತಡೆದದ್ದು ಬಿಕ್ಕಟ್ಟಿಗೆ ಕಾರಣ.

ಅಮೆರಿಕ ಪ್ರತಿಕ್ರಿಯೆ ಇಲ್ಲ: ಭಾರತ ಮತ್ತು ಚೀನಾ  ಗಡಿ ಸಂಘರ್ಷಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಮೆರಿಕ ಹೇಳಿದೆ.

‘ಭಾರತ–ಚೀನಾ ಗಡಿಯಲ್ಲಿ ಬಿಕ್ಕಟ್ಟು ಇದೆ ಎಂಬ ವರದಿಗಳನ್ನು ನೋಡಿದ್ದೇವೆ. ಈ ಬಗ್ಗೆ ನೀವು ಭಾರತ ಮತ್ತು ಚೀನಾ ಸರ್ಕಾರವನ್ನೇ ಕೇಳಬೇಕು’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಪ್ರತಿಕ್ರಿಯಿಸಿ (+)