ಶನಿವಾರ, ಡಿಸೆಂಬರ್ 7, 2019
16 °C
ಗುತ್ತಿಗೆ ಪಡೆಯಲು ಭ್ರಷ್ಟಾಚಾರ ನಡೆಸಿದ ಅಮೆರಿಕದ ಕಂಪೆನಿ

ಭಾರತದ ಅಧಿಕಾರಿಗಳಿಗೆ ಲಂಚ

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತದ ಅಧಿಕಾರಿಗಳಿಗೆ ಲಂಚ

ವಾಷಿಂಗ್ಟನ್: ‘ಭಾರತದಲ್ಲಿ ಹೆದ್ದಾರಿ ವಿನ್ಯಾಸ ಮತ್ತು ನಿರ್ಮಾಣ ಯೋಜನೆಗಳ ಗುತ್ತಿಗೆ ಪಡೆಯುವ ಸಲುವಾಗಿ ಅಮೆರಿಕದ ನಿರ್ಮಾಣ ಕಂಪೆನಿಯೊಂದರ ಅಧಿಕಾರಿಗಳು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳಿಗೆ ಸುಮಾರು ₹ 7.7 ಕೋಟಿ (11.8 ಲಕ್ಷ ಡಾಲರ್) ಲಂಚ ನೀಡಿದ್ದಾರೆ’ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಆರೋಪಿಸಿದೆ.

ನ್ಯಾಯಾಂಗ ಇಲಾಖೆ ಜೂನ್‌ 21ರಂದೇ ಈ ವಿಷಯವನ್ನು ಬಹಿರಂಗಪಡಿಸಿದೆ. ಗೋವಾದಲ್ಲಿ ನೀರಾವರಿ ಯೋಜನೆ ಒಂದರ ಗುತ್ತಿಗೆ ಪಡೆಯಲೂ ಸರ್ಕಾರಿ ಅಧಿಕಾರಿಗಳಿಗೆ ₹ 16.5 ಲಕ್ಷ (25,000 ಡಾಲರ್‌) ಲಂಚ ನೀಡಲಾಗಿದೆ ಎಂದು ಅದು ಆರೋಪಿಸಿದೆ.

‘2011–2015ರ ಅವಧಿಯಲ್ಲಿ, ಅಮೆರಿಕದ ಸಿಡಿಎಂ ಸ್ಮಿತ್ ಕಂಪೆನಿಯ ಅಧಿಕಾರಿಗಳು, ಭಾರತದ ತುಂಡು ಗುತ್ತಿಗೆದಾರರ ಮೂಲಕ ಎನ್‌ಎಚ್‌ಎಐ ಅಧಿಕಾರಿಗಳಿಗೆ ಲಂಚ ತಲುಪಿಸಿದ್ದಾರೆ. ಇದು ತಪ್ಪು ಎಂದು ತಿಳಿದಿದ್ದೂ, ಅಕ್ರಮ ಎಸಗಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.

ಇದಕ್ಕೆ ಪರಿಹಾರವಾಗಿ ಆ ಯೋಜನೆಗಳಲ್ಲಿ ಬಂದ ಸುಮಾರು ₹ 26 ಕೋಟಿ ( 40 ಲಕ್ಷ ಡಾಲರ್) ಲಾಭವನ್ನು ಅಮೆರಿಕ ಸರ್ಕಾರಕ್ಕೆ ನೀಡಲು ಕಂಪೆನಿ ಒಪ್ಪಿಕೊಂಡಿದೆ. ಹೀಗಾಗಿ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ’ ಎಂದು ಪತ್ರದಲ್ಲಿ  ನ್ಯಾಯಾಂಗ ಇಲಾಖೆ ಉಲ್ಲೇಖಿಸಿದೆ.

ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎನ್‌ಎಚ್ಎಐ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.

ಅಂಕಿ ಅಂಶ

₹ 7.7ಕೋಟಿ

ಹೆದ್ದಾರಿ ಯೋಜನೆ ಗುತ್ತಿಗೆ ಪಡೆಯಲು ನೀಡಿದ ಲಂಚ

₹16.5ಲಕ್ಷ

ನೀರಾವರಿ ಯೋಜನೆ ಗುತ್ತಿಗೆ ಪಡೆಯಲು ನೀಡಿದ ಲಂಚ

ಪ್ರತಿಕ್ರಿಯಿಸಿ (+)