ಶನಿವಾರ, ಡಿಸೆಂಬರ್ 14, 2019
25 °C

ಚಾಲಕನ ಸಮಯಪ್ರಜ್ಞೆಗೆ ಸರ್ವತ್ರ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಚಾಲಕನ ಸಮಯಪ್ರಜ್ಞೆಗೆ ಸರ್ವತ್ರ ಮೆಚ್ಚುಗೆ

ಮುಂಬೈ/ಸೂರತ್‌/ಶ್ರೀನಗರ : ಮೂರು ದಿಕ್ಕುಗಳಿಂದ ಗುಂಡಿನ ಸುರಿಮಳೆಯಾಗುತ್ತಿದ್ದರೂ ಎದೆಗುಂದದೆ, ಸಮಯಪ್ರಜ್ಞೆ ತೋರಿ ಸುರಕ್ಷಿತ ಸ್ಥಳದವರೆಗೆ ಬಸ್‌ ಚಲಾಯಿಸಿ 40ಕ್ಕೂ ಹೆಚ್ಚು ಯಾತ್ರಿಕರ ಜೀವ ಉಳಿಸಿದ ಬಸ್‌ ಚಾಲಕನ ಸಾಹಸಕ್ಕೆ ಎಲ್ಲೆಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

ಗುಜರಾತ್‌ ಮತ್ತು ಮಹಾರಾಷ್ಟ್ರದ 51 ಯಾತ್ರಿಕರಿದ್ದ ಗುಜರಾತ್‌ನ ವಲ್ಸದ್‌ ಪಟ್ಟಣದ ಓಂ ಟ್ರಾವೆಲ್ಸ್‌ಗೆ ಸೇರಿದ್ದ ಬಸ್‌ ಅನ್ನು ಸಲೀಂ ಶೇಖ್‌ ಗಫೂರ್‌ ಚಲಾಯಿಸುತ್ತಿದ್ದರು. ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದರೂ ಸಲೀಂ ಬಸ್‌ ನಿಲ್ಲಿಸಲಿಲ್ಲ.

ಸುರಿಮಳೆಯಂತೆ ಗುಂಡುಗಳು ತೂರಿ ಬರುತ್ತಿದ್ದರೂ ಕತ್ತಲೆಯಲ್ಲಿ ಬಸ್ಸನ್ನು ಸುಮಾರು 2 ಕಿ.ಮೀ ದೂರ ಚಲಾಯಿಸಿ, ಸೇನಾ ಶಿಬಿರ ತಲುಪಿದ ನಂತರವೇ ಬ್ರೇಕ್‌ ಒತ್ತಿದರು.  ಇದರಿಂದಾಗಿ ಹೆಚ್ಚು ಯಾತ್ರಿಕರ ಪ್ರಾಣ ಉಳಿಯಿತು ಎಂದು ದಾಳಿಯಲ್ಲಿ ಬದುಕುಳಿದ ಯಾತ್ರಿಕರೊಬ್ಬರು ಹೇಳಿದ್ದಾರೆ.

ಅಮರನಾಥ ಯಾತ್ರೆ ಮುಗಿಸಿಕೊಂಡು ಶ್ರೀನಗರದಿಂದ ಜಮ್ಮುವಿನತ್ತ ಹೋಗುತ್ತಿದ್ದ ಜಿಜೆ09 ಝಡ್‌9976 ನೋಂದಣಿ ಸಂಖ್ಯೆಯ ಬಸ್‌ ಮೇಲೆ ಸೋಮವಾರ ರಾತ್ರಿ 8.20ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಖನ್ನಬಲ್‌ ಬಳಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ  ಏಳು ಯಾತ್ರಿಕರು ಮೃತಪಟ್ಟು, 19 ಜನ ಗಾಯಗೊಂಡಿದ್ದರು. ಪ್ರಾಣ ಕಳೆದುಕೊಂಡವರಲ್ಲಿ ಆರು ಮಂದಿ ಮಹಿಳೆಯರು.

‘ಎಲ್ಲ ಕಡೆಯಿಂದಲೂ ನಮ್ಮ ಬಸ್‌ನತ್ತ ಗುಂಡಿನ ದಾಳಿ ನಡೆಯಿತು. ಆದರೆ, ನಮ್ಮ ಚಾಲಕ ಬಸ್‌ ನಿಲ್ಲಿಸಲಿಲ್ಲ’ ಎಂದು ಗಾಯಗೊಂಡ ಮಹಿಳೆಯೊಬ್ಬರು   ಹೇಳಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ  ಇತರ ಯಾತ್ರಿಕರು ಕೂಡ ಸಲೀಂಗೆ ಧನ್ಯವಾದ ಸಲ್ಲಿಸಿದ್ದಾರೆ.

‘ಚಾಲಕ ಬಸ್‌ ನಿಲ್ಲಿಸುತ್ತಿದ್ದರೆ, ಇನ್ನಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು’ ಎಂದು ಮುಂಬೈನ ಮಹಿಳೆಯೊಬ್ಬರು ಹೇಳಿದ್ದಾರೆ.

ದೇವರು ಶಕ್ತಿ ಕೊಟ್ಟ: ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿಯ ಭಯಾನಕ ಘಟನೆಯನ್ನು ವಿವರಿಸಿರುವ ಸಲೀಂ, ‘ಅವರ ಜೀವವನ್ನು ಉಳಿಸಲು ದೇವರು ನನಗೆ ಶಕ್ತಿ ಕೊಟ್ಟ. ನಿನ್ನೆ ರಾತ್ರಿ 8 ಗಂಟೆ ಹೊತ್ತಿಗೆ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದರು. ಬಸ್‌ನ ಎದುರಿನಿಂದ ನಿರಂತರವಾಗಿ ಗುಂಡಿಕ್ಕುತ್ತಲೇ ಇದ್ದರು’ ಎಂದು ಹೇಳಿದ್ದಾರೆ.

‘ಹಾಗಿದ್ದರೂ ಬಸ್‌ ಚಾಲನೆಯನ್ನು ಮುಂದುವರಿಸಲು ನಿರ್ಧರಿಸಿದೆ. ನನಗೆ ಗುಂಡು ತಗಲುವುದನ್ನು ತಪ್ಪಿಸಲು ಎದುರಿಗೆ ಬಾಗಿದೆ. ಸುರಕ್ಷಿತ ಸ್ಥಳ ಸಿಗುವವರೆಗೂ ಬಸ್‌ ಚಲಾಯಿಸಿದೆ’ ಎಂದು ಅವರು ವಿವರಿಸಿದ್ದಾರೆ.

ಮುಂದಕ್ಕೆ ಬಾಗಿ ಗುಂಡೇಟು ತಗಲುವುದನ್ನು ಸಲೀಂ ತಪ್ಪಿಸಿಕೊಂಡರಾದರೂ, ಇನ್ನೊಂದು ಬದಿ ಕುಳಿತಿದ್ದ ಬಸ್‌ ಮಾಲೀಕ ಹರ್ಷ ದೇಸಾಯಿ ಅವರಿಗೆ ಮೂರು ಗುಂಡುಗಳು ತಗುಲಿದವು. ಹಾಗಿದ್ದರೂ ಸಲೀಂ ಹೆದರಲಿಲ್ಲ.

‘ನಾವು ಬರುತ್ತಿರುವಾಗ, ಗುಂಡಿನ ಶಬ್ದ ಕೇಳಿತು. ಯಾರೋ ಪಟಾಕಿ ಸಿಡಿಸುತ್ತಿದ್ದಾರೆ ಅಂದುಕೊಂಡಿದ್ದೆವು. ಆದರೆ, ಅದು ಭಯೋತ್ಪಾದಕ ದಾಳಿ ಎಂದು ನಂತರ ಮನವರಿಕೆಯಾಯಿತು. ಸೇನಾ ಶಿಬಿರ ತಲುಪುವವರೆಗೆ ಬಸ್‌ ಚಲಾಯಿಸು ಎಂದು ಸಲೀಂಗೆ ನಾನು ಹೇಳಿದೆ. 2 ಕಿ.ಮೀ ದೂರದವರೆಗೆ ಅವನು ಬಸ್‌ ಚಲಾಯಿಸಿದ.

ಇದರಿಂದಾಗಿ ಹಲವು ಜೀವಗಳನ್ನು ರಕ್ಷಿಸಲು ನಮಗೆ ಸಾಧ್ಯವಾಯಿತು’ ಎಂದು ದೇಸಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶ್ಲಾಘನೆ: ಸಮಯಪ್ರಜ್ಞೆ ಮೆರೆದು ಧೈರ್ಯ ಪ್ರದರ್ಶಿಸಿದ ಸಲೀಂ ಶೇಖ್‌ ಮತ್ತು ಹರ್ಷ ದೇಸಾಯಿ ಅವರನ್ನು ಶ್ಲಾಘಿಸಿರುವ ಗುಜರಾತ್‌ ಮುಖ್ಯಮಂತ್ರಿ ವಿಜಯ ರೂಪಾನಿ, ಶೌರ್ಯ ಪ್ರಶಸ್ತಿಗಾಗಿ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)