ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಕಾರುಣ್ಯಸಿಂಧು

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ಅಂತರಂಗದ ಅರಿವನ್ನು ಜಾಗೃತ­ಗೊಳಿಸಿ­ಕೊಂಡು ಜೀವಿಗಳ ಉದ್ಧಾರ­ವನ್ನೇ ಕಾಯಕವಾಗಿಸಿಕೊಂಡ ಗುರು ಕರುಣಾಮೂರ್ತಿ. ಅವನೆಂದೂ ಆಶೆ-ಆಮಿಷಕ್ಕೊಳಗಾದವನಲ್ಲ. ತನ್ನ ಅನುಭಾವದ ಮೂಲಕ ಶಿಷ್ಯನ ಮನದ ಮಾಲಿನ್ಯವನ್ನು ತೊಳೆವ ಅವನು ಶ್ರೇಷ್ಠ ಅನುಭಾವಿ. ಅಂತೆಯೇ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನ­ವನ್ನು ಕಲ್ಪಿಸಲಾಗಿದೆ. ‘ನ ಗುರೋ­ರಧಿಕಂ ನಗುರೋರಧಿಕಂ ಎಂದು ಶೃತಿಗಳು ಸಾರಿದರೆ ಗುರುದೈವಾತ್ಪರಂ’ ನಾಸ್ತಿ ಗುರುವಿಗಿಂತಲೂ ಶ್ರೇಷ್ಠರಾದವರು ಯಾರೂ ಇಲ್ಲ ಎಂದು ನಮ್ಮ ಹಿರಿಯರು ಹೇಳುತ್ತ ಬಂದಿದ್ದಾರೆ.


ಶಿವಪಥದಲ್ಲಿ ಮುನ್ನಡೆದು ಶಿವ­ನೊಡನೆ ಸಾಮರಸ್ಯವನ್ನು ಸಾಧಿಸುವ ಅಧ್ಯಾತ್ಮ ಸಾಧಕರು ಗುರುವನ್ನು ಆಶ್ರಯಿಸ­ಲೇಬೇಕು. ಶಿವಪಥನರಿವೊಡೆ ಗುರುಪಥ ಮೊದಲು ಎಂಬುದು ಬಸ­ವಣ್ಣನವರ ಆಪ್ತ ಸಂದೇಶ. ಭಗವಂತನು ನಿರಾಕಾರ ಮತ್ತು ನಿರ್ಗುಣ ಸ್ವರೂಪನು, ಅನುಭಾವವೇದ್ಯನು. ಅಗೋಚರ ಶಕ್ತಿ­ಯಾಗಿರುವ ಅವನನ್ನು ಗುರು­ವನ್ನಾಶ್ರಯಿಸದೆ ಕಾಣುವೆನೆಂಬುದು ಭ್ರಮೆಯ ಮಾತಾದೀತು. ಕಾಣುವ ಗುರು­ವನ್ನೇ ಭಗವಂತನೆಂದು ಕಂಡು ಸೇವಿಸಿದ ಶಿಷ್ಯನ ಅನುಭಾವಕ್ಕೆ ಭಗವಂತನು ನಿಲುಕದೇ ಇರಲಾರನು. ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣುದದ ಕಾಣಬಹುದು ಎನ್ನುತ್ತಾರೆ ಅಲ್ಲಮರು.
ಗುರು ಕಾರುಣ್ಯಸಿಂಧು. ಅವನು ತನ್ನ ಕರುಣಾಜಲದಿಂದ ಶಿಷ್ಯನ ಅಂಗ ಮನ ಪ್ರಾಣಗಳನ್ನು ಪರಿಶುದ್ಧಗೊಳಿಸುವನು; ಜ್ಞಾನೋಪದೇಶದ ಮೂಲಕ ಶಿಷ್ಯನ ಮನದ ಕತ್ತಲೆಯನ್ನು ಕಳೆದು ಅವನಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗಿಸುವನು.

ಶ್ರೀ ಗುರು ವಚನು­ಪದೇಶ­ವನಾಲಿಸಿದಾಗಳಹುದು ನರರಿಗೆ ಮುಕುತಿ ಎನ್ನುವ ಅನುಭಾವಿ ನಿಜಗುಣರು ಗುರುವಿನ ಉಪದೇಶ ಮಾತ್ರದಿಂದಲೇ ಮನುಷ್ಯರು ಮುಕ್ತಿಗೆ ಅರ್ಹರಾಗುವರೆಂಬ ವಾಸ್ತವವನ್ನು ನಮ್ಮ ಮುಂದಿರಿಸಿದ್ದಾರೆ.
ನಿಜವನರಿದು ನಿಶ್ಚಿಂತನಾಗಿರುವ ಗುರು ಮಹಾಜ್ಞಾನಿ. ಅವನ ವಚನೋ­ಪದೇಶದಲ್ಲಿ ಅದ್ಭುತವಾದ ಶಕ್ತಿಯಿದೆ. ನರಜನ್ಮವನ್ನು ಹರಜನ್ಮವಾಗಿಸುವ, ಭವಬಂಧನವನ್ನು ಬಿಡಿಸಿ ಪರಮಸುಖ ತೋರುವ, ಅಷ್ಟೇ ಏಕೆ, ಭಗವಂತನನ್ನೇ ಕರಗತ ಮಾಡಿಕೊಡುವ ಶಕ್ತಿ ಗುರುವಿಗಿದೆ ಎನ್ನುತ್ತಾಳೆ ಅಕ್ಕಮಹಾದೇವಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT