ಬುಧವಾರ, ಡಿಸೆಂಬರ್ 11, 2019
21 °C
ಮಿಥಾಲಿ, ಸ್ಮೃತಿ ಮಂದಾನ ಭರವಸೆ

ಭಾರತಕ್ಕೆ ಆಸ್ಟ್ರೇಲಿಯಾ ಸವಾಲು

Published:
Updated:
ಭಾರತಕ್ಕೆ  ಆಸ್ಟ್ರೇಲಿಯಾ ಸವಾಲು

ಬ್ರಿಸ್ಟಲ್: ಮಹಿಳೆಯರ ಕ್ರಿಕೆಟ್‌ನಲ್ಲಿಯೇ ಅತ್ಯಂತ ಶಿಸ್ತಿನ ತಂಡ ಎಂದು ಕರೆಸಿಕೊಳ್ಳುವ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಎದುರು ಭಾರತ ತಂಡ ಮಂಗಳವಾರ  ವಿಶ್ವಕಪ್‌ನ ಮಹತ್ವದ ಪಂದ್ಯ ಆಡಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿರುವ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು  ಅನಿವಾರ್ಯವಾಗಿದೆ.

ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರು ಸೋಲು ಅನುಭವಿಸಿತು. ಆಸ್ಟ್ರೇಲಿಯಾ  ಕೂಡ ನಾಲ್ಕು ಪಂದ್ಯಗಳ ಜಯದ ಬಳಿಕ  ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದೆ. ಎರಡೂ ತಂಡಗಳಿಗೂ ಸೆಮಿಫೈನಲ್‌ ತಲುಪಲು ಇದು ಮಹತ್ವದ ಪಂದ್ಯ ಎನಿಸಿದೆ.

ಭಾರತಕ್ಕಿಂತ ಆಸ್ಟ್ರೇಲಿಯಾ  ಹೆಚ್ಚು ರನ್‌ರೇಟ್ ಹೊಂದಿರುವ ಕಾರಣ ಉತ್ತಮ ಸ್ಥಿತಿಯಲ್ಲಿದೆ. ಈ ತಂಡ ಇಂಗ್ಲೆಂಡ್ ಎದುರು ಕೇವಲ ಮೂರು ರನ್‌ಗಳಿಂದ ಸೋತಿದೆ. ಆದರೆ ಭಾರತ 115 ರನ್‌ನಿಂದ ಸೋಲು ಅನುಭವಿಸಿದೆ.

ಇಲ್ಲಿಯವರೆಗೂ ಆಸ್ಟ್ರೇಲಿಯಾದ ವಿರುದ್ಧ ಆಡಿರುವ ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತ ವನಿತೆಯರು ನಿರಾಸೆ ಕಂಡಿದ್ದೇ ಹೆಚ್ಚು.

ಪ್ರತಿಭಾನ್ವಿತ ಆಟಗಾರ್ತಿಯರ ದೊಡ್ಡ ಪಡೆ ಈ ತಂಡದಲ್ಲಿದೆ. ನಾಯಕಿ ಮೆಗ್ ಲ್ಯಾನಿಂಗ್ ಪ್ರಮುಖ ಬ್ಯಾಟಿಂಗ್‌ ಶಕ್ತಿ. ಈ ಬಾರಿ ವಿಶ್ವಕಪ್‌ನಲ್ಲಿ ತಂಡದ ಪರ ಹೆಚ್ಚು ರನ್ ಗಳಿಸಿದ ಖ್ಯಾತಿ ಇವರ ಪಾಲಿಗೆ ಸೇರುತ್ತದೆ. ಐದು ಪಂದ್ಯಗಳಿಂದ ಅವರು 252 ರನ್ ಕಲೆಹಾಕಿದ್ದಾರೆ.

ಆರಂಭಿಕ ಆಟಗಾರ್ತಿ ನಿಕೋಲ್ ಬೋಲ್ಟನ್‌ ಮೊದಲ ಪಂದ್ಯದಲ್ಲಿಯೇ ವೆಸ್ಟ್‌ಇಂಡೀಸ್ ವಿರುದ್ಧ (107) ಶತಕ ದಾಖಲಿಸಿ ಮಿಂಚಿದ್ದರು. ಶ್ರೀಲಂಕಾ ಎದುರಿನ ಪಂದ್ಯದಲ್ಲೂ 60 ರನ್ ಗಳಿಸಿದ್ದರು. ಇವರಿಗೆ ಬೆತ್ ಮೂನಿ ಕೂಡ ಉತ್ತಮ ಜತೆ ನೀಡಿದ್ದಾರೆ. ಆದರೆ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಈ ಜೋಡಿ ಮೋಡಿ ಮಾಡಿಲ್ಲ.

ಆಸ್ಟ್ರೇಲಿಯಾ ಬಳಗದ ಎರಡನೇ ಅತ್ಯುತ್ತಮ ಬ್ಯಾಟ್ಸ್‌ವುಮನ್ ಎಲಿಸ್ ಪೆರೆ (251) ಕೂಡ ಅಪಾಯಕಾರಿ ಎನಿಸಬಲ್ಲರು.

ಭಾರತದ ಸ್ಪಿನ್ ಶಕ್ತಿ ಏಕ್ತಾ ಬಿಷ್ಠ್‌ ಈ ಬಾರಿಯ ವಿಶ್ವಕಪ್‌ನ ಉತ್ತಮ ಬೌಲರ್‌ಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಸ್ಪಿನ್ ಮೋಡಿಗೆ 5 ಪಂದ್ಯಗಳಿಂದ 9 ವಿಕೆಟ್‌ ಉರುಳಿವೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕ್ತಾ 10 ಓವರ್‌ಗಳಲ್ಲಿ 2 ಮೇಡನ್ , 18 ರನ್ ಹಾಗೂ 5 ವಿಕೆಟ್ ಗಳಿಸಿದ್ದರು.

ಇದುವರೆಗೂ 7 ವಿಕೆಟ್ ಪಡೆದಿರುವ ದೀಪ್ತಿ ಶರ್ಮಾ ಕೂಡ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ವುಮನ್‌ಗಳನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ.

ಪ್ರಬಲ ತಂಡ ಆಸ್ಟ್ರೇಲಿಯಾದ ಎದುರು ಭಾರತ ಸಂಘಟಿತವಾಗಿ ಆಡಬೇಕಿದೆ. ಇದಕ್ಕಾಗಿ ಪೂನಮ್ ಯಾದವ್, ಶಿಖಾ ಪಾಂಡೆ, ಹರ್ಮನ್‌ಪ್ರೀತ್ ಕೌರ್ ಬೌಲಿಂಗ್‌ನಲ್ಲಿ ತಮ್ಮ ಗತಿ ಬದಲಿಸಿಕೊಳ್ಳಬೇಕಿದೆ.

ಮಂದಾನ ಭರವಸೆ: ಆರಂಭಿಕ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಸಾಮರ್ಥ್ಯ ತೋರಿದ್ದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 273ರನ್‌ಗಳ ಸವಾಲಿನ ಮೊತ್ತ ಬೆನ್ನಟ್ಟುವಲ್ಲಿ ವಿಫಲವಾಗಿತ್ತು.

ಸ್ಮೃತಿ ಮಂದಾನ ಅವರ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಒತ್ತಡದ ನಡುವೆಯೂ ರನ್ ಕಲೆ ಹಾಕುವ ಗುಣ ಹೊಂದಿರುವ ನಾಯಕಿ ಮಿಥಾಲಿ ರಾಜ್ ದಕ್ಷಿಣ ಆಫ್ರಿಕಾ ವಿರುದ್ಧ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದರು.

ಪೂನಮ್ ರಾವುತ್ ಒಂದೆರಡು ಪಂದ್ಯಗಳಲ್ಲಿ ಮಿಂಚಿ ಮರೆಯಾಗಿದ್ದಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಸಿಕ್ಕ ಎರಡು ಅವಕಾಶಗಳನ್ನು ಬಳಸಿಕೊಂಡಿಲ್ಲ. ಮಹತ್ವದ ಪಂದ್ಯದ ಆಡುವ ಬಳಗದಲ್ಲಿ ಅವರಿಗೆ ಸ್ಥಾನ ಸಿಗುವುದು ಅನುಮಾನ.

* ಇಂಗ್ಲೆಂಡ್ ವಿರುದ್ಧ ನಾವು ಸಂಘಟಿತವಾಗಿ ಆಡಿಲ್ಲ. ಆದರೆ ಭಾರತದ ಎದುರು ತಪ್ಪುಗಳನ್ನು ತಿದ್ದಿಕೊಂಡು ಆಡಲಿದ್ದೇವೆ.

- ಮೆಗ್‌ ಲ್ಯಾನಿಂಗ್‌, ಆಸ್ಟ್ರೇಲಿಯಾ ತಂಡದ ನಾಯಕಿ

ಆಸ್ಟ್ರೇಲಿಯಾದ ಎದುರು ನಾವು ಆಕ್ರಮಣಕಾರಿಯಾಗಿ ಆಡಬೇಕು.ಎಲ್ಲಾ ವಿಭಾಗಗಳಲ್ಲೂ ಸಂಘಟಿತವಾಗಿ ಆಡಿದರೆ ಖಂಡಿತವಾಗಿ ಗೆಲುವು ಸಾಧ್ಯ

- ಶಿಖಾ ಪಾಂಡೆ, ಭಾರತ ತಂಡದ ಆಟಗಾರ್ತಿ

ಮುಖಾಮುಖಿ ಸಾಧನೆ

41 ಪಂದ್ಯ

8 ಭಾರತ ಜಯ

33 ಸೋಲು

* ಮೆಕ್‌ ಲ್ಯಾನಿಂಗ್‌ ಏಕದಿನ ಸಾಧನೆ

61 ಪಂದ್ಯ / 61 ಇನಿಂಗ್ಸ್‌

2923 ರನ್ - 4 ನಾಟೌಟ್‌

152* ಗರಿಷ್ಠ

54.12 ಸರಾಸರಿ

11 ಶತಕ/ 10 ಅರ್ಧಶತಕ

35 ಕ್ಯಾಚ್‌

ಪ್ರತಿಕ್ರಿಯಿಸಿ (+)