ಭಾನುವಾರ, ಡಿಸೆಂಬರ್ 8, 2019
21 °C

ಸಂತ್ರಸ್ತೆಯ ಮೇಲ್ಮನವಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತ್ರಸ್ತೆಯ ಮೇಲ್ಮನವಿಗೆ ವಿರೋಧ

ಬೆಂಗಳೂರು: ‘ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿರುವ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸುವ ಹಕ್ಕು ಸಂತ್ರಸ್ತೆಗೆ ಇಲ್ಲ’ ಎಂದು ಶ್ರೀಗಳ ಪರ ವಕೀಲರು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.

‘ಈ ಕುರಿತಂತೆ ರಾಮಕಥಾ ಗಾಯಕಿ ಸಲ್ಲಿಸಿರುವ ಕ್ರಿಮಿನಲ್‌ ಪುನರ್ ಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಬಾರದು’ ಎಂದು ಶ್ರೀಗಳ  ವಕೀಲ ಅರುಣ್‌ ಶ್ಯಾಮ್‌ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಮಂಗಳವಾರ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

‘ಈಗಾಗಲೇ ಪ್ರಾಸಿಕ್ಯೂಷನ್‌ ಪರವಾಗಿ ಸಿಐಡಿ ಪೊಲೀಸರು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಹೀಗಿರುವಾಗ ಸಂತ್ರಸ್ತೆ, ಈ ಮೇಲ್ಮನವಿಗೆ ಪೂರಕವಾಗಿ ಪ್ರಾಸಿಕ್ಯೂಷನ್‌ಗೆ ಕೈಲಾದಷ್ಟು ನೆರವಾಗಬಹುದೇ ವಿನಾ, ಅವರೇ ಖುದ್ದಾಗಿ ಪ್ರತ್ಯೇಕವಾದ ಸ್ವತಂತ್ರ ಮೇಲ್ಮನವಿ ಸಲ್ಲಿಸಲು ಕಾನೂನು ಅವಕಾಶ ನೀಡುವುದಿಲ್ಲ’ ಎಂದು ಅರುಣ್ ಶ್ಯಾಮ್‌ ಪ್ರತಿಪಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆ ಪರ  ಹಿರಿಯ ವಕೀಲ ಎಂ.ಟಿ.ನಾಣಯ್ಯ, ‘ಸಂತ್ರಸ್ತೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂಬುದೇನೋ ನಿಜ. ಆದರೆ, ಈ ಕುರಿತಂತೆ ಇದೇ ಹೈಕೋರ್ಟ್‌ ನೀಡಿರುವ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲಾಗಿದೆ. ಅದಿನ್ನೂ ಇತ್ಯರ್ಥಗೊಂಡಿಲ್ಲ’ ಎಂದರು.

ಇದಕ್ಕೆ ಅರುಣ್ ಶ್ಯಾಮ್‌, ‘ವಿಭಾಗೀಯ ಪೀಠದ ಅರ್ಜಿ ಇತ್ಯರ್ಥವಾದ ಮೇಲೆಯೇ ಈ ಅರ್ಜಿಯ  ವಿಚಾರಣೆ ನಡೆಸಬಹುದು. ಸದ್ಯಕ್ಕೇನೂ ಅವಸರವಿಲ್ಲ’ ಎಂದು ಹೇಳಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಜುಲೈ ಮೂರನೇ ವಾರಕ್ಕೆ ವಿಚಾರಣೆ ಮುಂದೂಡಿತು.

ಸೆಷನ್ಸ್‌ ಕೋರ್ಟ್‌ ಆದೇಶ: ರಾಮಕಥಾ ಗಾಯಕಿ ಮೇಲೆ 169 ಬಾರಿ ಅತ್ಯಾಚಾರ ನಡೆಸಿದ ಆರೋಪದಿಂದ ಶ್ರೀಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ ದೋಷಾರೋಪ ಹೊರಿಸುವ ಪೂರ್ವದಲ್ಲೇ ಬಿಡುಗಡೆ ಮಾಡಿತ್ತು. 

‘ಶ್ರೀಗಳ ವಿರುದ್ಧದ ಆರೋಪಗಳಿಗೆ ನಂಬಲರ್ಹ ಸಾಕ್ಷ್ಯಗಳಿಲ್ಲ’ ಎಂದು ನ್ಯಾಯಾಧೀಶ ಮುದಿಗೌಡರ್‌  ಅಭಿಪ್ರಾಯಪಟ್ಟಿದ್ದರು.

ಪ್ರಕರಣದಲ್ಲಿ ಶ್ರೀಗಳನ್ನು  ಆರೋಪ ಮುಕ್ತಗೊಳಿಸಿ ಕಳೆದ ವರ್ಷದ ಮಾರ್ಚ್‌ 31ರಂದು ಆದೇಶಿಸಿದ್ದರು.

ಪುನಃ ನೋಟಿಸ್ ಜಾರಿಗೆ ಆದೇಶ

‘ರಾಘವೇಶ್ವರ ಭಾರತೀ ಶ್ರೀಗಳನ್ನು ಪೀಠದಿಂದ ಕೆಳಗಿಳಿಸಬೇಕು ಎಂಬ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಸಿ. ಖುಂಟಿಆ ನೀಡಿರುವ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿರುವ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಇಬ್ಬರು ಪ್ರತಿವಾದಿಗಳಿಗೆ ಈ ಹಿಂದೆ ಜಾರಿ ಮಾಡಲಾದ ನೋಟಿಸ್ ತಲುಪದ ಕಾರಣ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಶ್ರೀಗಳು ಹಾಗೂ ರಾಮಚಂದ್ರಾಪುರ ಮಠದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಎದುರ್ಕುಳ ಈಶ್ವರ ಭಟ್‌ ಮತ್ತು ಎ.ಕೆ.ಜಯಕೃಷ್ಣ ಅವರಿಗೆ ಈ ಹಿಂದಿನ ನೋಟಿಸ್ ಜಾರಿಯಾಗಿಲ್ಲ.

ಪ್ರತಿಕ್ರಿಯಿಸಿ (+)