ಶುಕ್ರವಾರ, ಡಿಸೆಂಬರ್ 6, 2019
17 °C
ಈ ಬಾರಿಯೂ 4 ಲಕ್ಷ ಟನ್‌ ಖೋತಾ ಸಾಧ್ಯತೆ

ಬರ: ಭತ್ತದ ಬೆಳೆಗೂ ಕುತ್ತು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಬರ: ಭತ್ತದ ಬೆಳೆಗೂ ಕುತ್ತು

ಶಿವಮೊಗ್ಗ:  ಮಳೆಕೊರತೆ ಕಾರಣ ಪ್ರಮುಖ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಾರದೇ ಮಳೆಗಾಲದ ಭತ್ತದ ಬೆಳೆಗೂ ಸಂಕಷ್ಟ ಎದುರಾಗಿದೆ.

ಭದ್ರಾ, ತುಂಗಾ ಜಲಾಶಯಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕಳೆದ ಬೇಸಿಗೆಯಲ್ಲೂ 5 ಲಕ್ಷ ಟನ್‌ ಭತ್ತದ ಬೆಳೆ ನಷ್ಟವಾಗಿತ್ತು. ಈ ಬಾರಿಯೂ ಮಲೆನಾಡು ಭಾಗದಲ್ಲಿ ಮುಂಗಾರು ವಿಫಲವಾಗಿದೆ. ವಾಡಿಕೆಗಿಂತ ಶೇ 40ರಷ್ಟು ಮಳೆ ಕಡಿಮೆಯಾಗಿದೆ. ಜಲಾಶಯಗಳ ನೀರಿನಮಟ್ಟ ಏರಿಕೆಯಾಗದ ಕಾರಣ ಅಚ್ಚುಕಟ್ಟು ಭಾಗದ ರೈತರು ಭತ್ತದ ಸಸಿಮಡಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.  ಶೇ 90ರಷ್ಟು ರೈತರು ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ.

ಭದ್ರಾ ಜಲಶಯದಲ್ಲಿ ಪ್ರಸ್ತುತ 18.244 ಟಿಎಂಸಿ ಅಡಿ ನೀರಿದೆ (125.70 ಅಡಿ). ಅದರಲ್ಲಿ 13.832 ಟಿಎಂಸಿ ಅಡಿ ನೀರು ಬಳಕೆ ಮಾಡಲು ಸಾಧ್ಯವಿಲ್ಲ (116 ಅಡಿಗಿಂತ ಕೆಳಗಿದ್ದರೆ ನಾಲೆಗಳಿಗೆ ನೀರು ಹರಿಯುವುದಿಲ್ಲ). ಉಳಿದ ನೀರು ಕೇವಲ 4,412 ಟಿಎಂಸಿ ಅಡಿ ಮಾತ್ರ. ಇದರಲ್ಲೂ ಕುಡಿಯಲು ಮತ್ತು ಕೈಗಾರಿಕಾ ಉದ್ದೇಶಕ್ಕೆ  ಮೀಸಲಿಡಬೇಕಿದೆ. 

75 ಸಾವಿರ ಹೆಕ್ಟೇರ್ ಭತ್ತದ ಬೆಳೆ:  ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ 75 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತದೆ. ಶಿವಮೊಗ್ಗ 10 ಸಾವಿರ, ದಾವಣಗೆರೆ 60 ಸಾವಿರ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 5 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶ. ತುಂಗಾ ಜಲಾಶಯದ ವ್ಯಾಪ್ತಿಯಲ್ಲಿ ಶಿವಮೊಗ್ಗ, ದಾವಣಗೆರೆ, ಹಾವೇರಿ  ಜಿಲ್ಲೆಗಳ 60,800 ಹೆಕ್ಟೇರ್‌ ಅಚ್ಚುಕಟ್ಟು ಬರುತ್ತದೆ. 

ಅಚ್ಚುಕಟ್ಟು ವ್ಯಾಪ್ತಿಯ ಅತಿದೊಡ್ಡ ಸೂಳೆಕೆರೆ ಸೇರಿದಂತೆ ಬಹುತೇಕ ಕೆರೆ ಕಟ್ಟೆಗಳು, ಪಿಕ್‌ಅಪ್‌ಗಳು ಜಲಾಶಯದ ನಾಲೆಯ ನೀರನ್ನೇ ಅವಲಂಬಿಸಿವೆ. ಸೂಳೆಕೆರೆ ನೀರು ಬಳಸಿಕೊಂಡು ಪ್ರತಿ ವರ್ಷ 2,800 ಹೆಕ್ಟೇರ್ ಭತ್ತ ಬೆಳೆಯಲಾಗುತ್ತಿದೆ. ಆದರೆ,  ಯಾವ ಕೆರೆಕಟ್ಟೆಗಳಲ್ಲೂ ಭತ್ತ ಬೆಳೆಯಲು ಅಗತ್ಯ ಇರುವಷ್ಟು ನೀರಿಲ್ಲ.

ವಿಳಂಬವಾದರೆ ಇಳುವರಿ ಕುಠಿತ:  ಭತ್ತದ ನಾಟಿಗೆ ಅಗತ್ಯವಾದ ಸಸಿಮಡಿ ಮಾಡುವ ಕೆಲಸ ಜೂನ್‌ನಿಂದಲೇ ಆರಂಭವಾಗುತ್ತದೆ. ಬೀಜ ಚೆಲ್ಲಿದ ನಂತರ 20ರಿಂದ 25 ದಿನದ ಸಸಿಗಳನ್ನು ನಾಟಿ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಆಗಸ್ಟ್‌ ಮೊದಲ ವಾರದವರೆಗೂ ಈ ಪ್ರಕ್ರಿಯೆ ನಡೆಯುತ್ತದೆ. ಆಗಸ್ಟ್‌ ಮೊದಲ ವಾರದ ಒಳಗೆ ನಾಟಿ ಮುಗಿಯಬೇಕಾದರೆ ಜುಲೈ 15ರ ಒಳಗೆ ಸಸಿಮಡಿ ಮಾಡಲೇಬೇಕು. ‘ಪ್ರಸ್ತುತ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಸಸಿಮಡಿ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ನಾಟಿಗೆ ಸಿದ್ಧತೆ ಮಾಡಿಕೊಂಡವರಿಗೆ ನೀರು ಲಭ್ಯವಿಲ್ಲ. 25 ದಿನಗಳ ನಂತರದ ಸಸಿ ನಾಟಿ ಮಾಡಿದರೆ ಇಳುವರಿ ಕುಂಠಿತವಾಗುತ್ತದೆ. ಎಲ್ಲ ಭತ್ತದ ತಳಿಗಳೂ 90ರಿಂದ 110 ದಿನದ ಅವಧಿಯ ಬೆಳೆ. ವಿಳಂಬವಾದರೆ ಭತ್ತದ ತೆನೆಗೆ ಬಿಳಿಮೊಟ್ಟೆ ಬಾಧೆ ಆವರಿಸಿ, ಬೆಳೆನಷ್ಟವಾಗುತ್ತದೆ. ಹಾಗಾಗಿ, ಬಹುತೇಕ ರೈತರು ಭತ್ತದ ಬದಲು ಮೆಕ್ಕೆಜೋಳ, ರಾಗಿ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಾರಿಯೂ 4 ಲಕ್ಷ ಟನ್‌ ಭತ್ತ ಖೋತಾ ಆಗುವ ಆತಂಕ ಎದುರಾಗಿದೆ’ ಎನ್ನುತ್ತಾರೆ ನೀರಾವರಿ ಸಲಹಾ ಸಮಿತಿ ಸದಸ್ಯ ತೇಜಸ್ವಿ ವಿ. ಪಟೇಲ್‌.

ಹೊರಗಿನ ಭತ್ತ ಖರೀದಿ ಅನಿವಾರ್ಯ: ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ ಭಾಗದಲ್ಲಿ ಬೆಳೆಯುವ ಸಣ್ಣ ಭತ್ತಕ್ಕೆ (ಐಆರ್‌–64, ಎಂಪಿಯು–1001 ತಳಿ) ಸಾಕಷ್ಟು ಬೇಡಿಕೆ ಇದೆ. ಮಲೆನಾಡಿನ ಬಹುತೇಕ ಜನರು ಊಟಕ್ಕೆ ಇದೇ ಭತ್ತ ಬಳಸುತ್ತಾರೆ. ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಬೆಳೆಯುವ ಜ್ಯೋತಿ ತಳಿಯ ಕೆಂಪು ಭತ್ತ ಕೇರಳಕ್ಕೆ ರವಾನೆಯಾಗುತ್ತಿತ್ತು. ಆದರೆ, ಕಳೆದ ಬೇಸಿಗೆಯಲ್ಲಿ ಭತ್ತದ ಬೆಳೆ ಕೈಬಿಟ್ಟ ಕಾರಣ ಹೊರ ಜಿಲ್ಲೆಗಳಿಂದ ಭತ್ತ ಖರೀದಿಸಲಾಗಿತ್ತು. ಈ ಮಳೆಗಾಲದ ಬೆಳೆಯೂ ಅದೇ ಹಾದಿಯಲ್ಲಿ ಸಾಗಿರುವುದು ಮಲೆನಾಡಿಗರ ಆತಂಕ ಹೆಚ್ಚಿಸಿದೆ.

ಡಿಎಸ್‌ಆರ್ ಪದ್ಧತಿಗೆ ಪ್ರೋತ್ಸಾಹ ಧನ

ಮಳೆ ಕೊರತೆಯ ಕಾರಣ ಈ ಬಾರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಅರೆ ನೀರಾವರಿ ಬೆಳೆ ಬೆಳೆಯಲು ಸಲಹೆ ನೀಡಲಾಗಿದೆ. ಭತ್ತ ನಾಟಿ ಬದಲು ಅತ್ಯಂತ ಕಡಿಮೆ ನೀರು ಬಯಸುವ ಭತ್ತದ ಬೀಜ ನೇರ ಬಿತ್ತನೆ (ಡಿಎಸ್‌ಆರ್) ಪದ್ಧತಿ ಅನುಸರಿಸುವ ರೈತರಿಗೆ ಸರ್ಕಾರ ಪ್ರತಿ ಎಕರೆಗೆ

₹ 1,600 ಪ್ರೋತ್ಸಾಹಧನ ನೀಡುತ್ತಿದೆ. ಕಡಿಮೆ ಮಳೆಗೆ ಅಧಿಕ ಇಳುವರಿ ಪಡೆಯುವ ಈ ಪದ್ಧತಿ ರಾಯಚೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ಈ ಬಾರಿ 900 ಎಕರೆಯಲ್ಲಿ ಯಂತ್ರಗಳ ಮೂಲಕ ನೇರಬಿತ್ತನೆ ಮಾಡ ಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್‌ ವಿವರ ನೀಡಿದರು.

* 15 ದಿನ ಹಿಂದೆ ಭತ್ತದ ಸಸಿಮಡಿ ಮಾಡಿದ್ದೇವೆ. ವಾರದ ಒಳಗೆ ನಾಲೆಯಲ್ಲಿ ನೀರು ಹರಿಸದಿದ್ದರೆ ಸಸಿಗಳು ಬಲಿತು ನಾಟಿ ಮಾಡಲು ಸಾಧ್ಯವಾಗುವುದಿಲ್ಲ.

- ಗೋವಿಂದಪ್ಪ,  ರೈತ, ತ್ಯಾವರಚಟ್ನಹಳ್ಳಿ

ಪ್ರತಿಕ್ರಿಯಿಸಿ (+)