ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗತ್ಯ ವಸ್ತುಗಳಿಗೆ ಗರಿಷ್ಠ ತೆರಿಗೆ ವಿಧಿಸಿಲ್ಲ’

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಅಗತ್ಯ ವಸ್ತುಗಳಿಗೆ ಗರಿಷ್ಠ ತೆರಿಗೆ ದರ  ನಿಗದಿ ಮಾಡಲಾಗಿದೆ ಎನ್ನುವ ಭಾವನೆ ಸರಿಯಲ್ಲ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಹೃತ್ವಿಕ್‌ ಪಾಂಡೆ ಅವರು ತಿಳಿಸಿದ್ದಾರೆ.

‘ಈ  ಹಿಂದೆ ವಿಧಿಸಲಾಗುತ್ತಿದ್ದ ಕೇಂದ್ರ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆಗೆ (ವ್ಯಾಟ್) ಹತ್ತಿರದ  ದರವನ್ನೇ ಜಿಎಸ್‌ಟಿಯಲ್ಲಿ ನಿಗದಿ ಮಾಡಲಾಗಿದೆ’  ಎಂದು ಅವರು ‘ಪ್ರಜಾವಾಣಿ’ಗೆ  ತಿಳಿಸಿದರು.

‘ಜಿಎಸ್‌ಟಿಯಲ್ಲಿ ಅಲ್ಯುಮಿನಿಯಂ ಪಾತ್ರೆಗಳಿಗೆ ಶೇ 12 ರಷ್ಟು ತೆರಿಗೆ ನಿಗದಿಮಾಡಲಾಗಿದೆ. ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ಶೇ 11 ರಷ್ಟು ತೆರಿಗೆ ಇತ್ತು. (ಕೇಂದ್ರ ಅಬಕಾರಿ ಸುಂಕ ಶೇ 6 ಮತ್ತು ವ್ಯಾಟ್‌ ಶೇ 5 ರಷ್ಟು ಸೇರಿಸಿ) ಇದಕ್ಕೆ ಹೋಲಿಸಿದರೆ ಈಗ ಶೇ 1 ರಷ್ಟು ತೆರಿಗೆ ಕಡಿಮೆ ಆಗಿದೆ’ ಎಂದು ಅವರು ವಿವರಿಸಿದ್ದಾರೆ.

‘ನಿರ್ದಿಷ್ಟವಾಗಿ ಕರ್ನಾಟಕದ ಬಗ್ಗೆ ಮಾತನಾಡುವುದಾದರೆ, 2016–17ನೇ ಬಜೆಟ್‌ನಲ್ಲಿ ಅಲ್ಯುಮಿನಿಯಂ ಪಾತ್ರಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಈ ಕಾರಣಕ್ಕೆ ಜಿಎಸ್‌ಟಿಯಲ್ಲಿ ಸದ್ಯ ನಿಗದಿ ಮಾಡಿರುವ ಶೇ 12 ರಷ್ಟು ತೆರಿಗೆ ಹೆಚ್ಚು ಎನ್ನುವ ಭಾವನೆ ಮೂಡುವುದು ಸಹಜ.    ಜಿಎಸ್‌ಟಿ ಮಂಡಳಿಯು ಇಡೀ ದೇಶವನ್ನು ಗಮನದಲ್ಲಿ ಇಟ್ಟುಕೊಂಡು ತೆರಿಗೆ ದರ ನಿಗದಿ ಮಾಡಿದೆ. ಇದರಿಂದ ರಾಜ್ಯದಲ್ಲಿ ವಿನಾಯಿತಿ ನೀಡುವುದು ಸಾಧ್ಯವಾಗಿಲ್ಲ.

‘ಇದು ಕರ್ನಾಟಕಕ್ಕೆ ಮಾತ್ರ ಎಂದು ಭಾವಿಸುವ ಅಗತ್ಯವಿಲ್ಲ. ಬೇರೆ ಯಾವುದೇ ರಾಜ್ಯದಲ್ಲಿ ಹಳೆಯ ತೆರಿಗೆ ವ್ಯವಸ್ಥೆಯಡಿ ಒಂದು ನಿರ್ದಿಷ್ಟ ವಸ್ತುವಿಗೆ ತೆರಿಗೆ ವಿನಾಯ್ತಿ ನೀಡಿದ್ದರೂ ಜಿಎಸ್‌ಟಿ ವ್ಯಾಪ್ತಿಗೆ ಬಂದಾಗ ಅದಕ್ಕೆ ಏಕರೂಪದ ತೆರಿಗೆ ನಿಗದಿಯಾಗಿದೆ.

‘ಕೇಂದ್ರ ಅಬಕಾರಿ ಸುಂಕವು ಸರಕಿನ ಬೆಲೆಯಲ್ಲಿ ಸೇರಿಕೊಂಡಿರುತ್ತದೆ. ಬಿಲ್‌ನಲ್ಲಿ ಕೇವಲ ವ್ಯಾಟ್ ಪ್ರಮಾಣ ಮಾತ್ರ ಪ್ರತ್ಯೇಕವಾಗಿ ನಮೂದಾಗಿರುತ್ತದೆ. ಜಿಎಸ್‌ಟಿ ಒಂದೇ ತೆರಿಗೆ ಆಗಿರುವುದರಿಂದ ಪಾರದರ್ಶಕತೆ ಇರುತ್ತದೆ. ಹಿಂದೆ ಎಷ್ಟು ತೆರಿಗೆ ಇತ್ತು, ಈಗ ಎಷ್ಟು ಕಟ್ಟುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿ ಅನುಭವಕ್ಕೆ ಬರುವವರೆಗೂ ತೆರಿಗೆ ಹೊರೆಯಾಗುತ್ತಿದೆ ಎನ್ನುವ ಭಾವನೆ ಮೂಡುವ ಸಾಧ್ಯತೆ ಇದೆ. 

‘ಒಂದು  ಸರಕಿಗೆ ಹಿಂದೆ ಇದ್ದ ತೆರಿಗೆ ದರ ಮತ್ತು ಜಿಎಸ್‌ಟಿಯಲ್ಲಿ ನಿಗದಿ ಮಾಡಿರುವ ತೆರಿಗೆ ದರದ ಬಗ್ಗೆ ಕೇಂದ್ರ ಸರ್ಕಾರವು  ಜಾಹೀರಾತುಗಳ
ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಕ್ರಮೇಣ ಎಲ್ಲಾ ಗೊಂದಲಗಳು ಬಗೆಹರಿಯಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT