ಬುಧವಾರ, ಡಿಸೆಂಬರ್ 11, 2019
19 °C

ಗುಂಡಿಗೆ ಜಗ್ಗದೆ ಮುನ್ನಡೆದ ಯಾತ್ರೆ

ಪಿಟಿಐ Updated:

ಅಕ್ಷರ ಗಾತ್ರ : | |

ಗುಂಡಿಗೆ ಜಗ್ಗದೆ ಮುನ್ನಡೆದ ಯಾತ್ರೆ

ಶ್ರೀನಗರ : ಸೋಮವಾರ ರಾತ್ರಿ  ಭಯೋತ್ಪಾದಕರು ನಡೆಸಿದ ದಾಳಿಯು ಅಮರನಾಥ ಯಾತ್ರಿಕರ ಧೈರ್ಯವನ್ನು ಕುಂದಿಸಿಲ್ಲ. ಹಿಮಲಿಂಗ ದರ್ಶನಕ್ಕಾಗಿ 22,633 ಭಕ್ತರು ಮಂಗಳವಾರ ಯಾತ್ರೆ ಆರಂಭಿಸಿದ್ದಾರೆ.

ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಮತ್ತು ಪೊಲೀಸ್‌ ಸಿಬ್ಬಂದಿಯ ಬೆಂಗಾವಲಿನಲ್ಲಿ 3,289 ಯಾತ್ರಾರ್ಥಿಗಳಿದ್ದ ತಂಡವು ಜಮ್ಮುವಿನಿಂದ ಬಲ್ತಾಲ್‌ ಮತ್ತು ಪಹಲ್ಗಾಮ್‌ ಮೂಲ ಶಿಬಿರಗಳಿಗೆ 68 ವಾಹನಗಳಲ್ಲಿ ತೆರಳಿತು. ಈ ಯಾತ್ರಿಕರ ತಂಡದಲ್ಲಿ 2,283 ಪುರುಷರು, 756 ಮಹಿಳೆಯರು ಮತ್ತು 250 ಸಾಧುಗಳು  ಹಾಗೂ ಸಾಧ್ವಿಗಳಿದ್ದಾರೆ.

‘ಯಾತ್ರಿಕರಿರುವ ವಾಹನಗಳ ಸಂಚಾರಕ್ಕಾಗಿ ಅತ್ಯಂತ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಜಮ್ಮು ವಲಯದ ವಿಭಾಗೀಯ ಕಮಿಷನರ್‌ ಮನ್‌ದೀಪ್‌ ಭಂಡಾರಿ ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ 10.30ರ ಹೊತ್ತಿಗೆ, ಚಂದನ್ವರಿ, ಶೇಷನಾಗ್‌, ಪಂಜತರಿಣಿ ಮತ್ತು ಬಲ್ತಾಲ್‌ ಯಾತ್ರಾ ಶಿಬಿರಗಳಿಂದ 18,833 ಯಾತ್ರಿಗಳು ಅಮರನಾಥ ಗುಹೆಯತ್ತ ತೆರಳಿದ್ದಾರೆ ಎಂದು ಶ್ರೀ ಅಮರನಾಥಜೀ ದೇವಾಲಯ ಮಂಡಳಿಯ (ಎಸ್‌ಎಎಸ್‌ಬಿ) ಅಧ್ಯಕ್ಷ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್‌.ಎನ್‌. ವೊಹ್ರಾ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೂನ್‌ 19ರಂದು 40 ದಿನಗಳ ಅಮರನಾಥ ಯಾತ್ರೆ ಆರಂಭವಾದ ನಂತರ ಇದುವರೆಗೆ 1.47 ಲಕ್ಷ ಯಾತ್ರಿಕರು ಹಿಮಲಿಂಗದ ದರ್ಶನ ಮಾಡಿದ್ದಾರೆ.

ಬಿಗಿ ಭದ್ರತೆ: ಈ ಮಧ್ಯೆ, ಪಹಲ್ಗಾಮ್‌ ಮತ್ತು ಬಲ್ತಾಲ್‌ ಮೂಲ ಶಿಬಿರಗಳನ್ನು ಸಂಪರ್ಕಿಸುವ ಎಲ್ಲ ಮಾರ್ಗಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿ ಗೊಳಿಸಲಾಗಿದೆ.

ಅಮರನಾಥ ಗುಹೆಗೆ ಹೋಗುವ ದಾರಿಯುದ್ದಕ್ಕೂ ಭದ್ರತೆಗಾಗಿ ಅರೆಸೇನಾ ಪಡೆಯ 21 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

‘ಸೋಮವಾರ ರಾತ್ರಿ ನಡೆದಿರುವ ದಾಳಿ ಸಂಬಂಧ ತನಿಖೆ ಆರಂಭಿಸಲಾಗಿದೆ. ವಿಚಾರಣೆಗಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಮ್ಮು ಬಂದ್‌: ಯಾತ್ರಿಗಳ ಮೇಲೆ ನಡೆದಿರುವ ದಾಳಿಯನ್ನು  ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ ಸಂಪೂರ್ಣ ಬಂದ್‌ ಆಚರಿಸಲಾಯಿತು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಉಗ್ರರ ಕೃತ್ಯವನ್ನು ಖಂಡಿಸಿದವು. ನಗರದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಪ್ರತಿಭಟನೆ:  ಶ್ರೀನಗರದಲ್ಲೂ ಸಂಘಟನೆಗಳ ಸದಸ್ಯರು, ವ್ಯಾಪಾರಿಗಳು, ಪ್ರವಾಸೋದ್ಯಮ ಸಂಸ್ಥೆಗಳು ಪ್ರತಿಭಟನೆ ನಡೆಸಿದವು. ಈ ದಾಳಿ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ.

ಸಂತ್ರಸ್ತರ ಕುಟುಂಬಗಳಿಗೆ ₹28 ಲಕ್ಷ ಪರಿಹಾರ

ದಾಳಿಯಲ್ಲಿ ಮೃತಪಟ್ಟ ಏಳು ಅಮರನಾಥ ಯಾತ್ರಿಕರ ಕುಟುಂಬಗಳಿಗೆ   ಗುಜರಾತ್‌ ಸರ್ಕಾರ ತಲಾ ₹10 ಲಕ್ಷ, ಕೇಂದ್ರ ಸರ್ಕಾರ ತಲಾ ₹7 ಲಕ್ಷ, ಜಮ್ಮು ಮತ್ತು ಕಾಶ್ಮೀರ ಸರ್ಕಾರ ತಲಾ ₹ 6 ಲಕ್ಷ ಮತ್ತು ಶ್ರೀ ಅಮರನಾಥಜೀ ದೇವಾಲಯ ಆಡಳಿತ ಮಂಡಳಿ (ಎಸ್‌ಎಎಸ್‌ಬಿ) ತಲಾ ₹ 5 ಲಕ್ಷ ಪರಿಹಾರ ಘೋಷಿಸಿವೆ.

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ₹ 2 ಲಕ್ಷ, ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ ₹ 1 ಲಕ್ಷ ನೀಡಲಿದೆ.

ಎಸ್‌ಎಎಸ್‌ಬಿಯು ಗಂಭೀರವಾಗಿ ಗಾಯಗೊಂಡವರಿಗೆ ₹1.5 ಲಕ್ಷ, ಸಣ್ಣಪುಟ್ಟ ಗಾಯಗಳಾಗಿರುವವರಿಗೆ ₹75 ಸಾವಿರ ಪರಿಹಾರ ಘೋಷಿಸಿದೆ.

ಗುಜರಾತ್‌ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಗಾಯಗೊಂಡಿರುವವರಿಗೆ ಕ್ರಮವಾಗಿ ತಲಾ ₹ 2 ಲಕ್ಷ ಮತ್ತು ₹1ಲಕ್ಷ ಪರಿಹಾರ ನೀಡಲಿವೆ.

ಬಸ್‌ ಮೇಲೆ 2 ಬಾರಿ ದಾಳಿ: ರಾಜ್ಯ ಸರ್ಕಾರ

ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್‌ನ ಮೇಲೆ ಸೋಮವಾರ ರಾತ್ರಿ ಎರಡು ಬಾರಿ ಉಗ್ರರು ದಾಳಿ ನಡೆಸಿದ್ದರು.

ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ಎರಡು ಪುಟಗಳ ವರದಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ವಿಷಯ ಉಲ್ಲೇಖಿಸಿದೆ.

ಶ್ರೀನಗರದಿಂದ ಜಮ್ಮುವಿನತ್ತ ಪ್ರಯಾಣಿಸುವಾಗ ಅನಂತನಾಗ್‌ ಜಿಲ್ಲೆಯ ಸಂಗಮ್‌ ಎಂಬಲ್ಲಿ ಬಸ್‌ನ ಚಕ್ರ ಪಂಕ್ಚರ್‌ ಆಗಿತ್ತು. ಬಸ್‌ ನಿಲ್ಲಿಸಿ ಚಕ್ರ ಬದಲಿಸಬೇಕಾಯಿತು. ಹಾಗಾಗಿ ಯಾತ್ರಿಕರ ಪ್ರಯಾಣ ಒಂದು ಗಂಟೆಯಷ್ಟು ವಿಳಂಬವಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.

ಅಲ್ಲಿಂದ ಪ್ರಯಾಣ ಆರಂಭಿಸಿದ ನಂತರ  8.17ರ ಸುಮಾರಿಗೆ ಖನ್ನಬಲ್‌ ಬಳಿ ಭಯೋತ್ಪಾದಕರ ಗುಂಪೊಂದು ಬಸ್‌ ಮೇಲೆ ಮೊದಲ ಸಲ ದಾಳಿ ನಡೆಸಿತು. ಆದರೆ, ಚಾಲಕ ಸಲೀಂ ಶೇಖ್‌, ಚಾಲನೆ ಮುಂದುವರಿಸಿದ್ದರು. 75 ಮೀಟರ್‌ ದಾಟುವಷ್ಟರಲ್ಲಿ ಮತ್ತೊಂದು ಉಗ್ರರ ತಂಡ ಬಸ್‌ ಮೇಲೆ ಗುಂಡಿನ  ದಾಳಿ ನಡೆಸಿತು ಎಂದು ವರದಿಯಲ್ಲಿ ವಿವರಿಸಲಾಗಿದೆ. ವರದಿಯ ಪ್ರಕಾರ ಬಹುತೇಕ ಯಾತ್ರಿಕರ ಕಾಲುಗಳಿಗೆ, ಮೂಗು ಮತ್ತು ಭುಜಗಳಿಗೆ ಗಾಯಗಳಾಗಿವೆ.

ಲಷ್ಕರ್‌ ಉಗ್ರ ಅಬು ಇಸ್ಮಾಯಿಲ್‌ ಕೃತ್ಯ

ನವದೆಹಲಿ: ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯ ಉಗ್ರ ಅಬು ಇಸ್ಮಾಯಿಲ್‌ ಈ ದಾಳಿಯ ರೂವಾರಿ ಎಂದು ಶಂಕಿಸಲಾಗಿದೆ.

ಪಾಂಪೋರೆಯಲ್ಲಿ ಆಶ್ರಯ ಪಡೆದಿರುವ 24 ವರ್ಷದ ಇಸ್ಮಾಯಿಲ್‌ ಬಗ್ಗೆ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನವನ್ನು ಭದ್ರತಾ ಸಂಸ್ಥೆಗಳು ಈಗಾಗಲೇ ಘೋಷಿಸಿವೆ.

ಇತರ ಮೂವರೊಂದಿಗೆ ಸೇರಿ ಇಸ್ಮಾಯಿಲ್‌ ಬಸ್‌ ಮೇಲೆ ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಭದ್ರತಾ ಬೆಂಗಾವಲಿನ ರಕ್ಷಣೆಯಲ್ಲಿ ಬಸ್‌ ಇರಲಿಲ್ಲ. ಜೊತೆಗೆ ಸೂಕ್ಷ್ಮ ಪ್ರದೇಶವಾದ ಅನಂತನಾಗ್‌ಗೆ ಅದು ರಾತ್ರಿ ತಲುಪಿದ್ದರಿಂದ ದಾಳಿಗೆ ಸುಲಭ ತುತ್ತಾಯಿತು.

ಪಾಂಪೋರೆಯಲ್ಲಿ ಏಪ್ರಿಲ್‌ನಲ್ಲಿ ನಡೆದ ಗ್ರಾಮವೊಂದರ ಮುಖ್ಯಸ್ಥನ ಹತ್ಯೆಯಲ್ಲಿ ಅಬು ಇಸ್ಮಾಯಿಲ್‌ ಭಾಗಿಯಾಗಿರುವ ಶಂಕೆ ಇದೆ. ಅಲ್ಲದೇ ಇತ್ತೀಚಿನ ತಿಂಗಳುಗಳಲ್ಲಿ ಹಲವು ಬ್ಯಾಂಕುಗಳ ದರೋಡೆ ನಡೆಸಿದ ಎಲ್‌ಇಟಿ ತಂಡದ ಸದಸ್ಯರಲ್ಲಿ ಇವನೂ ಒಬ್ಬ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಳೆದ ವರ್ಷ ಪಾಕಿಸ್ತಾನದಿಂದ ಭಾರತದೊಳಕ್ಕೆ ನುಸುಳಿರುವ ಈ ಉಗ್ರ, ಕಾಶ್ಮೀರ ಕಣಿವೆಯಲ್ಲಿ ಲಷ್ಕರ್‌ ಕಮಾಂಡರ್‌ ಆಗಿರುವ ಅಬು ದುಜನನ ಸಹಚರ ಎಂದು ನಂಬಲಾಗಿದೆ.

ಪ್ರತಿಕ್ರಿಯಿಸಿ (+)