ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗತಕಾಲದ ಒಪ್ಪಂದ ಪರಿಗಣಿಸಬೇಡಿ’

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ 2007ರ ಫೆಬ್ರುವರಿ 5ರಂದು ಐತೀರ್ಪು ನೀಡಿರುವ ಕಾವೇರಿ ಜಲವಿವಾದ ನ್ಯಾಯಮಂಡಳಿಯು ಮುಖ್ಯವಾಗಿ 1892 ಮತ್ತು 1924ರಲ್ಲಿ ಉಭಯ ರಾಜ್ಯಗಳ ನಡುವೆ ಆಗಿದ್ದ ಒಪ್ಪಂದ ಗಳನ್ನು ಪರಿಗಣಿಸಿದೆ. ಆ ಒಪ್ಪಂದಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹೊಸದಾಗಿ ನೀರು ಹಂಚಿಕೆ ಮಾಡಬೇಕು ಎಂದು ಕರ್ನಾಟಕವು ಸುಪ್ರೀಂ ಕೋರ್ಟ್‌ ಎದುರು ಪ್ರತಿಪಾದಿಸಿದೆ.
ಐತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ರಾಜ್ಯಗಳು ಸಲ್ಲಿಸಿರುವ ಸಿವಿಲ್‌ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಆರಂಭಿಸಿದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದೆದುರು ಕರ್ನಾಟಕ ಪರ ವಕೀಲ ಫಾಲಿ ನಾರಿಮನ್‌ ವಾದ ಮಂಡಿಸಿದರು.

ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ರಾಜ್ಯಗಳ ನಡುವೆ 1892ರಲ್ಲಿ ಹಾಗೂ 1924ರಲ್ಲಿ ಒಪ್ಪಂದ ಏರ್ಪಟ್ಟಿದೆ. ಆ ಒಪ್ಪಂದವು ಈಗ ಅಪ್ರಸ್ತುತ. ಭಾರತದ ಸಂವಿಧಾನ ರಚನೆ ನಂತರ ಈ ಒಪ್ಪಂದಗಳು ಅರ್ಥಹೀನವಾಗಿದೆ. ಅಲ್ಲದೆ, ಈ ಒಪ್ಪಂದಗಳನ್ನು 1947ರ ಭಾರತೀಯ ಸ್ವಾತಂತ್ರ್ಯ ಕಾಯ್ದೆ ಪ್ರಕಾರ ಬ್ರಿಟಿಷ್ ಸಂಸತ್ತು ಅನೂರ್ಜಿತಗೊಳಿಸಿದೆ.  ಆ ಒಪ್ಪಂದಗಳಲ್ಲಿ ಅಡಕವಾಗಿರುವ ಅಂಶಗಳನ್ನು ಪರಿಗಣಿಸದೇ ಈಗಿನ ಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಕಣಿವೆ ವ್ಯಾಪ್ತಿಯ ನಾಲ್ಕೂ ರಾಜ್ಯಗಳಿಗೆ ನೀರನ್ನು ಹಂಚಬೇಕು ಎಂದು ಅವರು ಕೋರಿದರು.
ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಈಗ ವಾರ್ಷಿಕ ಸುರಿಯುವ ಮಳೆಯ ಪ್ರಮಾಣ, ಆಯಾ ರಾಜ್ಯಗಳ ಜನಸಂಖ್ಯೆ, ಭೌಗೋಳಿಕ ಅಂಶ, ನೀರಿನ ಅಗತ್ಯವನ್ನು ಗಮನಿಸುವ ಮೂಲಕ ನೀರು ಹಂಚಿಕೆಯಾಗಬೇಕಿದೆ. ಶತಮಾನದ ಹಿಂದೆ ಬ್ರಿಟಿಷ್‌ ಆಡಳಿತ ಹಾಗೂ ಮೈಸೂರು ಸಂಸ್ಥಾನಗಳು ಮಾಡಿಕೊಂಡ ಒಪ್ಪಂದವು ಈಗ ಅನ್ವಯವಾಗದು ಎಂದು ಅವರು ತಮ್ಮ ವಾದದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟರು.

ನೈಸರ್ಗಿಕ ಹರಿವನ್ನು ಆಧರಿಸಿ ನೀರು ಹಂಚಿಕೆ ಒಡಂಬಡಿಕೆಯನ್ನು ಮಾಡಿಸಿರುವ ಬ್ರಿಟಿಷ್‌ ಅಧಿಕಾರಿಗಳು ಮೈಸೂರು ಸಂಸ್ಥಾನ ಮತ್ತು ಮದ್ರಾಸ್‌ ಪ್ರಾಂತ್ಯ
ಗಳನ್ನು ಸಮಾನವಾಗಿ ಪರಿಗಣಿಸಿಲ್ಲ. ಆ ಒಪ್ಪಂದದ ಮೂಲದಲ್ಲೇ ತಾರತಮ್ಯ ಇರುವುದು ಎದ್ದುಕಾಣುತ್ತದೆ. 1892
ರಲ್ಲಿ ಮೈಸೂರಿನಲ್ಲಿದ್ದ ಬ್ರಿಟಿಷ್‌ ಆಡಳಿತಶಾಹಿಯ ಒತ್ತಾಸೆಗೆ ಕಟ್ಟುಬಿದ್ದ ಮೈಸೂರು ಸಂಸ್ಥಾನವು ಮದ್ರಾಸ್ ಪ್ರಾಂತ್ಯದ ಅಗತ್ಯದ ಮೇರೆಗೆ ತಿಳಿವಳಿಕೆ ಪತ್ರ ಮತ್ತು ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರುವ ಸಾಧ್ಯತೆಯೂ ಇದೆ. ಇದು ವಿಧ್ಯುಕ್ತವಾದ ಒಪ್ಪಂದ ಆಗಿರಲಿಕ್ಕೂ ಸಾಧ್ಯವಿಲ್ಲ ಎಂದು ನಾರಿಮನ್‌ ಅಭಿಪ್ರಾಯಪಟ್ಟರು.
ನ್ಯಾಯಮಂಡಳಿಯು ಆ ಒಪ್ಪಂದಗಳನ್ನು ಪರಿಗಣಿಸಿಯೇ ಐತೀರ್ಪು ನೀಡಿದೆ. ಇದರಿಂದ ಕರ್ನಾಟಕದ ಹಿತಕ್ಕೆ ಧಕ್ಕೆಯಾಗಿದೆ ಎಂದರು.
ಮೊದಲ ದಿನ ಕರ್ನಾಟಕದ ವಾದವನ್ನು ಆಲಿಸುವ ಮೂಲಕ ವಿಚಾರಣೆ ಆರಂಭಿಸಿದ ನ್ಯಾಯಪೀಠವು, ಬುಧವಾರವೂ ರಾಜ್ಯದ ವಾದವನ್ನು ಆಲಿಸಲಿದೆ. ಎರಡು ಅಥವಾ ಮೂರು ವಾರಗಳ ಕಾಲ ವಿಚಾರಣೆ ನಡೆಸಿ ನಿರ್ಣಯ ಪ್ರಕಟಿಸುವ ಇಂಗಿತವನ್ನೂ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT