ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಎಸ್‌.ದೊರೆಸ್ವಾಮಿ ಸೇರಿ ನಾಲ್ವರಿಗೆ ಪ್ರಶಸ್ತಿ ಪ್ರದಾನ

‘ಎಂ.ಪಿ.ಪ್ರಕಾಶ್ 77’ ಸ್ಮರಣೆ ಕಾರ್ಯಕ್ರಮ
Last Updated 11 ಜುಲೈ 2017, 19:18 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ಎಂ.ಪಿ.ಪ್ರಕಾಶ್‌ ಪ್ರತಿಷ್ಠಾನದಿಂದ  ‘ಎಂ.ಪಿ.ಪ್ರಕಾಶ್‌ ರಾಷ್ಟ್ರೀಯ ಸೇವಾ ಸಿರಿ ಪ್ರಶಸ್ತಿ’ ನೀಡಿ ಇಲ್ಲಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಂಗಳವಾರ ಗೌರವಿಸಲಾಯಿತು.

‘ಎಂ.ಪಿ.ಪ್ರಕಾಶ್ 77’ ಸ್ಮರಣೆ ಕಾರ್ಯಕ್ರಮದಲ್ಲಿ ಒಂದು ಲಕ್ಷ ನಗದು ಪುರಸ್ಕಾರ ಮತ್ತು ಗೌತಮ ಬುದ್ಧನ ಶಿಲ್ಪ ಕಲಾಕೃತಿ ಒಳಗೊಂಡ ಪ್ರಶಸ್ತಿಯನ್ನು ಸುತ್ತೂರು ಮಠದ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ಎಡೆಯೂರು ಗದಗ–ಡಂಬಳ ಸಂಸ್ಥಾನ ಮಠದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಪ್ರದಾನ ಮಾಡಿದರು.

‍ಪ್ರತಿಷ್ಠಾನದಿಂದ ಚಿಂತಕ ಗೊ.ರು.ಚನ್ನಬಸಪ್ಪ ಅವರಿಗೆ ‘ಎಂ.ಪಿ.ಪ್ರಕಾಶ್‌ ಸಾಹಿತ್ಯ ಸೇವಾ ಸಿರಿ ಪ್ರಶಸ್ತಿ’, ಮ.ಮ.ಪಾಟೀಲ ಪ್ರತಿಷ್ಠಾನದಿಂದ ಕೊಪ್ಪಳದ ಸಾಮರ್ಥ್ಯ ಅಂಗವಿಕಲರ ಪುನಶ್ಚೇತನ ಸೇವಾ ಸಂಸ್ಥೆಯ ಮುಖ್ಯಸ್ಥ ಹಂಪಣ್ಣ ಅವರಿಗೆ ‘ಮ.ಮ.ಪಾಟೀಲ ಜನಸೇವಕ ಪ್ರಶಸ್ತಿ’ ಹಾಗೂ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್‌ ಅವರಿಗೆ ‘ಎಂ.ಪಿ.ಕೊಟ್ರಗೌಡ ಕಲಾರಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮೂರೂ ಪ್ರಶಸ್ತಿಗಳು ತಲಾ ₹50 ಸಾವಿರ ನಗದು ಪುರಸ್ಕಾರ ಒಳಗೊಂಡಿವೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೊರೆಸ್ವಾಮಿ, ‘ನನಗಿಂತಲೂ 22 ವರ್ಷ ಕಿರಿಯವರಾದ ಎಂ.ಪಿ.ಪ್ರಕಾಶ್‌ ಅವರಿಗೆ ಇನ್ನೂ ಸಾಕಷ್ಟು ಸಾಧಿಸುವ, ಸಮಾಜ ಮತ್ತು ಸಂಸ್ಕೃತಿ ಕಟ್ಟುವ ಸಾಮರ್ಥ್ಯ ಇತ್ತು. ಅವರ ಒಡನಾಡಿಯಾಗಿದ್ದ ನನಗೆ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಲು ಒಂದು ಕಡೆ ಸಂತೋಷವಾದರೆ, ಅವರ ಅಗಲಿಕೆ ದುಃಖ ಉಂಟು ಮಾಡುತ್ತಿದೆ’ ಎಂದರು.

ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ‘ಎಂ.ಪಿ.ಪ್ರಕಾಶ್‌ ನಡೆದಾಡುವ ವಿಶ್ವಕೋಶದಂತಿದ್ದರು. ಅವರ ಮಾರ್ಗದರ್ಶನದಲ್ಲಿ ರಾಜಕೀಯ ಬದುಕು ರೂಪಿಸಿಕೊಂಡಿದ್ದೇನೆ. ಕಿರಿಯರಿಗೆ ಮಾರ್ಗದರ್ಶಿಯಾಗಿದ್ದರು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT