ಶುಕ್ರವಾರ, ಡಿಸೆಂಬರ್ 6, 2019
17 °C

ಷರತ್ತುಬದ್ಧ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷರತ್ತುಬದ್ಧ ಅನುಮತಿ

ಬೆಂಗಳೂರು: ಸೂಕ್ಷ್ಮ ಪರಿಸರ ವ್ಯವಸ್ಥೆಯ ಪಶ್ಚಿಮಘಟ್ಟ ಸಾಲಿನ ನಡುವೆ ಹಾದುಹೋಗಲಿರುವ  ಹುಬ್ಬಳ್ಳಿ –ಅಂಕೋಲಾ  ರೈಲು ಮಾರ್ಗಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ಷರತ್ತುಬದ್ಧ ಅನುಮತಿ ನೀಡಿದೆ.

ಸೋಮವಾರ ಇಲ್ಲಿ ನಡೆದ 19ನೇ ಸಭೆಯಲ್ಲಿ ಆರ್ಇಸಿಯು  ಐದು ಷರತ್ತುಗಳನ್ನು ವಿಧಿಸಿ ಯೋಜನೆಗೆ ಮೊದಲ ಹಂತದ ಅನುಮತಿ ನೀಡಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಿಂದ ರಾಜ್ಯದ ಪ್ರಮುಖ ಬಂದರುಗಳಿಗೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿರುವ  ಈ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)  2016ರ ಫೆಬ್ರುವರಿ 10ರಂದು ಹಸಿರು ನಿಶಾನೆ ತೋರಿತ್ತು.  ‘1980ರ ಅರಣ್ಯ (ಸಂರಕ್ಷಣೆ) ಕಾಯ್ದೆಯ ಸೆಕ್ಷನ್‌ 2ರ ಪ್ರಕಾರ, ರಾಜ್ಯ ಸರ್ಕಾರ  ಭೂಪರಿವರ್ತನೆಗೆ ಆದೇಶ ಹೊರಡಿಸಬಹುದು. ಆದರೆ, ಅದಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು’ ಎಂದು  ಎನ್‌ಜಿಟಿ ಹೇಳಿತ್ತು.

ಕಾರವಾರ, ಯಲ್ಲಾಪುರ ಹಾಗೂ ಧಾರವಾಡ ವಿಭಾಗಗಳಲ್ಲಿ ಒಟ್ಟು 595.64 ಹೆಕ್ಟೇರ್‌ ಅರಣ್ಯ ಭೂಮಿಯನ್ನು ರೈಲ್ವೆ ಹಳಿ ನಿರ್ಮಾಣಕ್ಕೆ ಬಳಸಲು ಅವಕಾಶ ನೀಡುವಂತೆ ಕೋರಿ    ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ರಾಜ್ಯ ಸರ್ಕಾರ 2016ರ ಅಕ್ಟೋಬರ್‌ 24ರಂದು ಪ್ರಸ್ತಾವ ಸಲ್ಲಿಸಿತ್ತು. 2017ರ ಏಪ್ರಿಲ್‌ 19ರಂದು  ಆರ್‌ಇಸಿ ಪ್ರಾದೇಶಿಕ ಕಚೇರಿಯು ಸ್ಥಳ ಪರಿಶೀಲನೆಗಾಗಿ ತಜ್ಞರ ಸಮಿತಿಯನ್ನು ರಚಿಸಿತ್ತು.

‘ಈ ಯೋಜನೆಯಿಂದ  ಇಡೀ ಪರಿಸರ ವ್ಯವಸ್ಥೆಗೆ ಭಾರಿ ಧಕ್ಕೆ ಉಂಟಾಗಲಿದೆ. ವನ್ಯಜೀವಿಗಳಿಗೂ ಅಪಾಯವಿದೆ’ ಎಂದು ಅಭಿಪ್ರಾಯಪಟ್ಟಿದ್ದ ಸಮಿತಿ,  ಸರ್ಕಾರದಿಂದ ಕೆಲವು ಸ್ಪಷ್ಟೀಕರಣಗಳನ್ನು ಕೇಳಿತ್ತು.

‘ಈ ರೈಲು ಮಾರ್ಗ ನಿರ್ಮಿಸಲು ಅರಣ್ಯವೇ ಹೆಚ್ಚಾಗಿರುವ ಸ್ಥಳವನ್ನು ಆಯ್ಕೆ ಮಾಡಿಕೊಂಡ ಉದ್ದೇಶವನ್ನು ಸ್ಪಷ್ಟಪಡಿಸಬೇಕು.  ಯೋಜನೆಯ ವೆಚ್ಚ ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತ ವಿಸ್ತೃತ  ವಿಶ್ಲೇಷಣೆ ನಡೆಸಬೇಕು.  ಪರ್ಯಾಯ ಮಾರ್ಗಗಳನ್ನು ನಿರ್ಮಿಸುವ ಸಾಧ್ಯತೆ ಹಾಗೂ ಅವುಗಳಿಗೆ ತಗಲುವ ವೆಚ್ಚ, ಪರ್ಯಾಯ ಸಾರಿಗೆ ಬಳಸುವ ಸಾಧ್ಯತೆಗಳನ್ನು  ತುಲನೆ ಮಾಡಬೇಕು’ ಎಂದೂ ಸಮಿತಿ ಹೇಳಿತ್ತು.

ಈ ಯೋಜನೆಯ ತಾಂತ್ರಿಕ, ಆರ್ಥಿಕ ಹಾಗೂ  ಪರಿಸರ ಸಂಬಂಧಿಸಿದ ಮಾಹಿತಿಗಳೊಂದಿಗೆ ರಾಜ್ಯ ಸರ್ಕಾರವು  ಸಮಿತಿಗೆ ವಿವರಣೆ ನೀಡಿತ್ತು. ಪರಿಸರದ ಮೇಲಿನ ಪರಿಣಾಮ ಅಧ್ಯಯನ ವರದಿಯನ್ನೂ ಸರ್ಕಾರ ಸಲ್ಲಿಸಿತ್ತು.

  ಆರ್‌ಇಸಿ ವಿಧಿಸಿರುವ ಷರತ್ತುಗಳು

* ಈ ಮಾರ್ಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುರಂಗಗಳ ಸಂಖ್ಯೆಯನ್ನು ಹಾಗೂ ವಯಡಕ್ಟ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. (ಈಗಿನ ಯೋಜನೆ ಪ್ರಕಾರ ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ಒಟ್ಟು 34 ಸುರಂಗಗಳನ್ನು  ನಿರ್ಮಿಸಲು ಉದ್ದೇಶಿಸಿದೆ) 

* ಅರಣ್ಯದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಕಡಿಮೆ ಮಾಡುವ ಸಲುವಾಗಿ ರೂಪಿಸಿರುವ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕು. ಅರಣ್ಯ ಇಲಾಖೆ ಜೊತೆ ಸಮಾಲೋಚನೆ ನಡೆಸಿ ಈ ಬಗ್ಗೆ ಕ್ರಮಕೈಗೊಳ್ಳಬೇಕು.  ಅಂಡರ್‌ಪಾಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

*  ಬೇಡ್ತಿ ಸಂರಕ್ಷಣಾ ಮೀಸಲು, ಮಳೆಹಕ್ಕಿ (ಹಾರ್ನ್‌ಬಿಲ್‌) ಸಂರಕ್ಷಣಾ ಮೀಸಲು, ಅಣಶಿ ಮತ್ತು ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶಗಳ ಮೀಸಲು  ವಲಯಗಳು ಆನೆ ಕಾರಿಡಾರ್‌ಗಳ ಮೀಸಲು ಪ್ರದೇಶಗಳು ಒಂದಕ್ಕೊಂದು ಸೇರಿಕೊಳ್ಳುವ ಜಾಗಗಳ ಮೂಲಕ ರೈಲು ಮಾರ್ಗ ಹಾದುಹೋಗಲಿದೆ. ಇಲ್ಲಿನ ವನ್ಯಜೀವಿಗಳ ಮೇಲೆ ಪರಿಣಾಮ ಉಂಟಾಗುವುದನ್ನು ತಡೆಯುವ ಬಗ್ಗೆ  ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿಸಮಿತಿಗೆ  ಪ್ರಸ್ತಾವ ಸಲ್ಲಿಸಬೇಕು.

*  ಈ ಯೋಜನೆಗೆ ಕಡಿಯಬೇಕಾಗುವ ಮರಗಳ ಪಟ್ಟಿ ಯನ್ನು ಅರಣ್ಯ ಇಲಾಖೆ ಸಿದ್ಧಪಡಿಸುವಾಗ, ಅವುಗಳ ಪ್ರಭೇದ,  ಸುತ್ತಳತೆಗಳ ವಿವರಗಳನ್ನು ನಮೂದಿಸಬೇಕು.

* ಕಾಡು ಬೆಳೆಸುವುದಕ್ಕೆ ಮಾನವ ಚಟುವಟಿಕೆಯಿಂದ ಮೂಲಸ್ವರೂಪ ಕಳೆದುಕೊಂಡ ಪ್ರದೇಶವನ್ನು ಬಳಸಲಾಗುತ್ತದೆಯೇ ಅಥವಾ ಕುದುರೆಮುಖ ಯೋಜನೆಯವರು ಹಿಂತಿರುಗಿಸಿರುವ ಕಂದಾಯ ಭೂಮಿಯನ್ನು ಬಳಸಿ ಕೊಳ್ಳಲಾಗುತ್ತದೆಯೇ  ಎಂಬುದನ್ನು ಸ್ಪಷ್ಟಪಡಿಸಿಕೊಂಡು ವಿಸ್ತೃತ  ಯೋಜನೆ  ರೂಪಿಸಬೇಕು.

ಪ್ರತಿಕ್ರಿಯಿಸಿ (+)