ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌ಗೆ 10 ಮರಗಳ ಬಲಿ

Last Updated 11 ಜುಲೈ 2017, 19:29 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜನರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆಯ ಕೆಲಸಗಳು ವಾರ್ಡ್‌ಗಳಲ್ಲಿ ಭರದಿಂದ ಸಾಗಿವೆ. ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸಲು ಕೆಲವು ವಾರ್ಡ್‌ಗಳಲ್ಲಿ ಮರಗಳನ್ನು ಕಡಿಯಲಾಗಿದೆ. ಇನ್ನೂ ಕೆಲವೆಡೆ ಮರ ತೆರವುಗೊಳಿಸಲು ಅನುಮತಿ ನೀಡಲಾಗಿದೆ.

ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಲು ದಕ್ಷಿಣ ವಲಯದ 8 ಮರಗಳು ಧರೆಗೆ ಉರುಳುತ್ತಿವೆ. ಅದರಲ್ಲಿ ಜಯನಗರ 4, ಜೆ.ಸಿ.ರಸ್ತೆಯ 1, ಕೆ.ಆರ್‌. ರಸ್ತೆಯ 1, ವಿಜಯನಗರದ 1 ಮತ್ತು ಕೋರಮಂಗಲದ 1 ಮರಗಳು ಸೇರಿವೆ. ಇದರಲ್ಲಿ ಗುಲ್‌ಮೊಹರ್‌, ರೈನ್‌ ಟ್ರೀ ಜಾತಿಯ ಮರಗಳು ಇವೆ.

ಮಹದೇವಪುರ ವಲಯದ ಹೂಡಿಯಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕಾಗಿ 2 ಹುಣಸೆಮರಗಳನ್ನು ಕಡಿಯಲು ಅನುಮತಿ ಕೋರಿ ಅರ್ಜಿಗಳು ಬಂದಿವೆ. ಪಾಲಿಕೆಯ ಅರಣ್ಯ ವಿಭಾಗ ಇನ್ನೂ ಅನುಮತಿ ನೀಡಿಲ್ಲ.

ದೊಮ್ಮಲೂರಿನ ಜೊಗ್ಗೆರ್‌ ಉದ್ಯಾನದಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಮರವನ್ನು ಕಡಿದು, ಸಾಗಿಸಲಾಗಿದೆ.

‘ಮರದ ಕಾಂಡ ಹುಳು ಹಿಡಿದಿತ್ತು. ಗಾಳಿ–ಮಳೆಗೆ ಮರ ಬಿದ್ದರೆ,  ಜೀವ ಹಾಗೂ ಆಸ್ತಿ ಹಾನಿಯಾಗುವ ಸಾಧ್ಯತೆ ಇತ್ತು. ಹಾಗಾಗಿ ಮರವನ್ನು ತೆರವುಗೊಳಿಸಿದ್ದೇವೆ’ ಎಂದು ದೊಮ್ಮಲೂರು ವಾರ್ಡ್‌ನ ಪಾಲಿಕೆ ಸದಸ್ಯ  ಸಿ.ಆರ್.ಲಕ್ಷ್ಮಿನಾರಾಯಣ ಪ್ರತಿಕ್ರಿಯೆ ನೀಡಿದರು.

‘ಈ ಪ್ರದೇಶದ ಸುತ್ತಮುತ್ತ ಕಡುಬಡವರ ಕಾಲೊನಿಗಳಿವೆ. ಹತ್ತಿರದಲ್ಲಿಯೇ ಬಸ್‌ ತಂಗುದಾಣವಿದೆ. ಜನರಿಗೆ ಸುಲಭಕ್ಕೆ ಕಾಣಸಿಗಲಿ ಎಂದು ಈ ಉದ್ಯಾನದಲ್ಲಿ ಕ್ಯಾಂಟೀನ್‌ ಆರಂಭಿಸುತ್ತಿದ್ದೇವೆ. ನೆಲಸಮ ಮಾಡಿರುವ ಒಂದು ಮರದ ಬದಲಾಗಿ ಹತ್ತಾರು ಸಸಿಗಳನ್ನು ನೆಡುತ್ತಿದ್ದೇವೆ’ ಎಂದು ದೊಮ್ಮಲೂರಿನ ಕ್ಯಾಂಟೀನ್‌ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದರು.

‘ನಿಮಗ್ಯಾಕೆ ಮಾಹಿತಿ, ಇಡ್ರಿ ಫೋನು’

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಎಷ್ಟು ಮರಗಳನ್ನು ತೆರವುಗೊಳಿಸುತ್ತಿದ್ದಿರಾ ಎಂದು ವಿಚಾರಿಸಿದಾಗ, ‘ಮರಗಳನ್ನು ಕಡಿಯೋದು ಆಫೀಸ್‌ ಸಮಾಚಾರ. ಎಷ್ಟು ಕಡಿಯುತ್ತೇವೆಂದು ನಿಮಗ್ಯಾಕೆ ಹೇಳಬೇಕು. ನಿಮಗ್ಯಾಕೆ ಬೇಕು ಮಾಹಿತಿ, ಇಡ್ರಿ ಫೋನು’ ಎಂದು ವಲಯದ ಅರಣ್ಯ ಅಧಿಕಾರಿ ಗೋಪಾಲ್‌ ಕಿಡಿಕಾರಿದರು.

‘ಊಟದೊಂದಿಗೆ ಶುದ್ಧಗಾಳಿ ಸಿಗುತ್ತದೆ’
‘ಮರಗಳಿದ್ದರೆ ಜನರಿಗೆ ಕಡಿಮೆ ಬೆಲೆಯ ಊಟದೊಂದಿಗೆ ಶುದ್ಧಗಾಳಿಯೂ ಸಿಗುತ್ತದೆ. ಕ್ಯಾಂಟೀನ್‌ ವಾತಾವರಣವೂ ತಂಪಾಗಿರುತ್ತದೆ. ಹಸಿರು ಕಣ್ಣಿಗೆ ತಂಪು ನೀಡುತ್ತದೆ, ಪಕ್ಷಿಗಳನ್ನು ಆಕರ್ಷಿಸುತ್ತದೆ. ಮರಗಳನ್ನು ಉಳಿಸಿಕೊಂಡು ಕ್ಯಾಂಟೀನ್‌ಗಳನ್ನು ನಿರ್ಮಿಸಿದರೆ ಒಳಿತು’ ಎಂದು ನಿವೃತ್ತ ಅರಣ್ಯ ಅಧಿಕಾರಿ (ಐಎಫ್ಎಸ್‌) ಎಸ್‌.ಜಿ.ನೇಗಿನಹಾಳ್ ತಿಳಿಸಿದರು.

ಮರ ಕಡಿದ ಆರೋಪ: ಕಾರ್ಪೊರೇಟರ್ ವಿರುದ್ಧ ದೂರು

ಬಿಟಿಎಂ ಲೇಔಟ್‌ನ ನಂದಿನಿ ಉದ್ಯಾನದಲ್ಲಿ ಜೂ.17ರಂದು ಪಾಲಿಕೆ ಸದಸ್ಯ ಕೆ.ದೇವದಾಸ್ ಹಾಗೂ ಬೆಂಬಲಿಗರು ಮರ ಕತ್ತರಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯರೊಬ್ಬರು ಮೈಕೊ ಲೇಔಟ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಉದ್ಯಾನದಲ್ಲಿದ್ದ ಮೂರು ಸಿಲ್ವರ್‌ವುಡ್ ಮರ ಸೇರಿ ಒಟ್ಟು ಐದು ಮರಗಳನ್ನು ಕತ್ತರಿಸಿ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿ ನಾರಾಯಣ ದೂರಿನಲ್ಲಿ   ಉಲ್ಲೇಖಿಸಿದ್ದಾರೆ   ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

‘ಮರಗಳನ್ನು ದೇವದಾಸ್ ಕಡಿಸಿದ್ದಾರೆಯೇ ಅಥವಾ ಅರಣ್ಯ ಇಲಾಖೆಯವರು ಕಡಿದಿದ್ದಾರೆಯೇ ಎಂಬ ಬಗ್ಗೆ ಗೊಂದಲವಿದೆ. ಈ ಬಗ್ಗೆ ಸ್ಪಷ್ಟನೆ ಕೋರಿ ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

* ಪಾಲಿಕೆಯು ಕ್ಯಾಂಟೀನ್‌ ನಿರ್ಮಾಣದ ಸ್ಥಳ ಬದಲಿಸಿದ್ದರೆ ಅಥವಾ ಅಲ್ಪ ನಕ್ಷೆ ಬದಲಿಸಿದ್ದರೇ ಮರವನ್ನು ಉಳಿಸಬಹುದಿತ್ತು

– ಸುರೇಶ್‌, ಉದ್ಯಾನ ಕಾರ್ಮಿಕ, ದೊಮ್ಮಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT