ಶನಿವಾರ, ಡಿಸೆಂಬರ್ 14, 2019
25 °C

ಮೆಟ್ರೊ ನಿಲ್ದಾಣ ಸಂಪರ್ಕಕ್ಕೆ ಕ್ಷಿಪ್ರ ಸಾರಿಗೆ ಸೇವೆ: ಸ್ಕೈವೇ ಕಂಪೆನಿ ಆಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಟ್ರೊ ನಿಲ್ದಾಣ ಸಂಪರ್ಕಕ್ಕೆ ಕ್ಷಿಪ್ರ ಸಾರಿಗೆ ಸೇವೆ: ಸ್ಕೈವೇ ಕಂಪೆನಿ ಆಸಕ್ತಿ

ಬೆಂಗಳೂರು: ಮೆಟ್ರೊ ರೈಲು  ನಿಲ್ದಾಣಗಳಿಗೆ ಕೊನೆ ಮೈಲಿಯಿಂದ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸುವ ಮತ್ತು ಸಂಚಾರ ದಟ್ಟಣೆ ನಿವಾರಿಸುವ ಪಾಡ್‌ ಟ್ಯಾಕ್ಸಿ ಸೇವೆ ಮಾದರಿಯಲ್ಲೇ ‘ಕ್ಷಿಪ್ರ ಸಾರಿಗೆ ಸೇವೆ’ ಒದಗಿಸಲು ಬೆಲಾರಸ್‌ ದೇಶದ ಸ್ಕೈವೇ ಕಂಪೆನಿ ಆಸಕ್ತಿ ತೋರಿದೆ.

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರನ್ನು ಸ್ಕೈವೇ ಕಂಪೆನಿ ಪ್ರತಿನಿಧಿಗಳು ಮಂಗಳವಾರ ನಗರದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಕಂಪೆನಿ ಪ್ರತಿನಿಧಿಗಳು ಯೋಜನೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿ ನೀಡಿದರು. ಬೆಲಾರಸ್‌ ದೇಶದಲ್ಲಿ ಸ್ಕೈವೇ ಕಂಪೆನಿ ಜಾರಿಗೊಳಿಸಿರುವ ಸ್ಕೈವೇ ಟ್ಯಾಕ್ಸಿ ಸೇವೆಯ ಕಾರ್ಯನಿರ್ವಹಣೆಯನ್ನು ಹತ್ತಿರದಿಂದ ಕಾಣಲು ನಿಯೋಗ ಬರುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಆಹ್ವಾನ ನೀಡಿದರು. ಸ್ಕೈವೇ ಕಂಪೆನಿಯು ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಪಾಡ್‌ ಟ್ಯಾಕ್ಸಿ ಸೇವೆ (Personalised Rapid Transport System) ಒದಗಿಸಲು ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

‘ಕಂಪೆನಿ ಪ್ರತಿನಿಧಿಗಳು ಆಕಾಶಮಾರ್ಗದಲ್ಲಿ ಶರವೇಗದ ಟ್ಯಾಕ್ಸಿ ಸೇವೆ ಒದಗಿಸುವ ಪಾಡ್‌ ಕಾರ್‌ ಮಾದರಿಯ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಬೇಕಾಗುವ ಒಟ್ಟು ವೆಚ್ಚ ಮತ್ತು ಯೋಜನೆಯ ಕಾರ್ಯನಿರ್ವಹಣೆ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ, ಪ್ರಸ್ತಾವ ಸಲ್ಲಿಸಲು ತಿಳಿಸಿದ್ದೇವೆ. ಯೋಜನೆ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)