ಶುಕ್ರವಾರ, ಡಿಸೆಂಬರ್ 6, 2019
18 °C

31ರವರೆಗೆ ಅಡಿಕೆ ಬೆಳೆ ವಿಮೆ ಅವಧಿ ವಿಸ್ತರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

31ರವರೆಗೆ ಅಡಿಕೆ ಬೆಳೆ ವಿಮೆ ಅವಧಿ ವಿಸ್ತರಿಸಿ

ದಾವಣಗೆರೆ: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಪ್ರಚಾರ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ದೂರಿದರು. ಸಂಸದರ ಕಚೇರಿಯಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತರಿಗೆ ಬೆಳೆ ವಿಮೆ ನೀಡುವ ಮೂಲಕ ಅವರನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಯನ್ನು ಜಾರಿಗೊಳಿಸಿದರು. ಆದರೆ, ರಾಜ್ಯ ಸರ್ಕಾರದ ಪ್ರಚಾರದ ಕೊರತೆಯಿಂದಾಗಿ ಅರ್ಹ ರೈತರಿಗೆ ಯೋಜನೆಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಜೂನ್‌ 30ರೊಳಗೆ ರೈತರಿಗೆ ಬೆಳೆ ವಿಮೆ ಮಾಡಿಸಲು ಸೂಚಿಸಲಾಗಿತ್ತು. ಈ ಬಗ್ಗೆ ಸಾಕಷ್ಟು ರೈತರಿಗೆ ಮಾಹಿತಿ ಇರಲಿಲ್ಲ.

ನಂತರ ರಾಜ್ಯ ಸರ್ಕಾರವು ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ ಮತ್ತು ವೀಳ್ಯದೆಲೆ ಬೆಳೆಗಳಿಗೆ ಜುಲೈ 15ರೊಳಗೆ ವಿಮೆ ಮಾಡಿಸುವಂತೆ ಅಧಿಸೂಚನೆ ಹೊರಡಿಸಿ, ಅಡಿಕೆ ಬೆಳೆಯನ್ನು ಕೈಬಿಟ್ಟಿದೆ. ಇದು ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದ್ದು, ಬೆಳೆ ವಿಮೆ ಕಂತು ತುಂಬಲು ಬೆಳೆಗಾರರಿಗೆ ಜುಲೈ 31ರವರೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ಅಡಿಕೆ ಬೆಳೆಯನ್ನು ಅಧಿಸೂಚನೆಯಲ್ಲಿ ಸೇರಿಸುವ ಮೂಲಕ ವಿಮಾ ಅವಧಿಯನ್ನು ವಿಸ್ತರಿಸಬೇಕು ಎಂದು ಈ ಹಿಂದೆ ರಾಜ್ಯ ತೋಟಗಾರಿಕೆ ಕಾರ್ಯದರ್ಶಿ ಮಹೇಶ್ವರರಾವ್‌ ಹಾಗೂ ನಿರ್ದೇಶಕ ಪಿ.ಸಿ.ರಾಯ್‌ ಅವರೊಂದಿಗೆ ಚರ್ಚಿಸಲಾಗಿತ್ತು.

ಆದರೆ, ಅವರು, ಹಿಂಗಾರು ಹಂಗಾಮಿನಲ್ಲಿ ಅಡಿಕೆ ಬೆಳೆಯನ್ನು ವಿಮಾ ಯೋಜನೆ ಅಡಿ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದ್ದರು. ಅಡಿಕೆ ಬೆಳೆಗೂ ಹಿಂಗಾರು ಹಂಗಾಮಿಗೂ ಸಂಬಂಧವಿಲ್ಲ. ಕೂಡಲೇ ಅಡಿಕೆ ಬೆಳೆಯನ್ನು ಅಧಿಸೂಚನೆಯಡಿ ಸೇರಿಸಿ ರೈತರಿಗೆ ಬೆಳೆ ವಿಮೆ ಕಂತು ತುಂಬಲು ಜುಲೈ 31ರವರೆಗೆ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ತೆಂಗು ಬೆಳೆಯನ್ನೂ ಸೇರಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬ್ಯಾಂಕ್‌ ಅಧಿಕಾರಿಗಳು ಬೆಳೆ ಸಾಲ ಪಡೆದ ಹಾಗೂ ಪಡೆಯದೇ ಇರುವ ರೈತರಿಗೂ  ವಿಮಾ ಕಂತು ತುಂಬಲು ಅವಕಾಶ ನೀಡಬೇಕು. ಅನಗತ್ಯವಾಗಿ ರೈತರನ್ನು ಅಲೆದಾಡಿಸಬಾರದು ಎಂದು ಸೂಚಿಸಿದರು.

ಅಣಜಿ ಗ್ರಾಮದ ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕರು ರೈತ ರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಗ್ರಾಮದ ರೈತರೊಬ್ಬರು ಸಂಸದರಲ್ಲಿ ದೂರಿದರು. ತಕ್ಷಣ ಬ್ಯಾಂಕ್‌ ಅಧಿಕಾರಿಗೆ ಕರೆ ಮಾಡಿದ ಸಂಸದರು, ‘ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಿರ್ಲಕ್ಷಿಸಿ ದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗುತ್ತದೆ’ ಎಂದು ಎಚ್ಚರಿಸಿದರು.

₹ 5 ಲಕ್ಷ ಅನುದಾನ: ಹೊನ್ನಾಳಿ ತಾಲ್ಲೂಕಿನ ಬಲಮುರಿ ಗ್ರಾಮದಲ್ಲಿ ಸಂಸದರ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದ್ದು, ಸ್ನಾನಗೃಹ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿ ನಡೆಯಬೇಕಿದೆ. ₹ 5 ಲಕ್ಷ ಅನುದಾನ ನೀಡಬೇಕು ಎಂದು ಬಲ ಮುರಿ ಗ್ರಾಮಸ್ಥರು ಸಂಸದರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)