ಶನಿವಾರ, ಡಿಸೆಂಬರ್ 7, 2019
25 °C

ಗಲಭೆ ಪ್ರದೇಶಕ್ಕೆ ತೆರಳದಿರುವುದು ಹೊಣೆಗೇಡಿತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲಭೆ ಪ್ರದೇಶಕ್ಕೆ ತೆರಳದಿರುವುದು  ಹೊಣೆಗೇಡಿತನ

ಹೊಸನಗರ: ‘ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೌಜನ್ಯಕ್ಕೂ ತೆರಳದೇ ಇರುವುದು ರಾಜ್ಯ ಸರ್ಕಾರದ ಹೊಣೆಗೇಡಿತನ ತೋರಿಸುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದರು.

ತಾಲ್ಲೂಕಿನ ಕೋಡೂರು ಗ್ರಾಮದ ದಲಿತರ ಕೇರಿ, ಕುಂಬಾರಕೇರಿ, ಕೋಟೆಕೇರಿ, ಕೋಡೂರು ಗ್ರಾಮದ 131 ಹಾಗೂ 2ನೇ ಬೂತ್‌ಗಳಿಗೆ ಪಕ್ಷದ ವಿಸ್ತಾರಕ ಯೋಜನೆಯಡಿ ಮಂಗಳ ವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೋಮು ದಳ್ಳುರಿಯಿಂದ ಉರಿಯುತ್ತಿರುವ ಪ್ರದೇಶಗಳಿಗೆ ಸಾಂತ್ವನ ಹೇಳಲು ಹೋಗಬೇಕಾಗಿದ್ದ ಮುಖ್ಯಮಂತ್ರಿ, ತಮ್ಮ ಪರವಾಗಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಕಳುಹಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನಿರ್ದೇಶನದಂತೆ ಎರಡು ದಿನಗಳಲ್ಲಿ ಮಂಗಳೂರಿಗೆ ತೆರಳಿ ಪರಿಶೀಲಿಸಿ, ಪ್ರಕರಣ ಕುರಿತ ವಾಸ್ತವ ವರದಿಯನ್ನು ಅವರಿಗೆ ಕಳುಹಿಸಿ ಕೊಡಲಾಗುವುದು’ ಎಂದು ಯಡಿಯೂರಪ್ಪ ಹೇಳಿದರು.

ಶ್ವೇತಪತ್ರಕ್ಕೆ ಆಗ್ರಹ:‘ನಾಲ್ಕು ವರ್ಷಗಳ ಅವಧಿಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ರಾಜ್ಯ ಸರ್ಕಾರ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುದಕ್ಕೆ ಶ್ವೇತಪತ್ರ ಹೊರಡಿಸಬೇಕು’ ಎಂದು ಅವರು ಸವಾಲು ಹಾಕಿದರು.

‘ರಾಜ್ಯ 16 ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಈ ಕುರಿತು ವಿಸ್ತ್ರತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದರೆ, ಸಂಸದನಾಗಿ ಹೆಚ್ಚಿನ ಪ್ರಮಾಣದ ಪರಿಹಾರ ಕೊಡಿಸಲು ಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಬಸ್‌ ದರ ಇಳಿಕೆಗೆ ಆಗ್ರಹ: ‘ಜಿಎಸ್‌ಟಿ ಜಾರಿಗೊಂಡಿದ್ದರಿಂದ ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಇಳಿದಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ದರ ಇಳಿಸುವ ಮೂಲಕ ಜಿಎಸ್‌ಟಿ ಲಾಭ ಪ್ರಯಾಣಿಕರಿಗೆ ಲಭಿಸುವಂತೆ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಗ್ರಾಮಸ್ಥರ ಅಹವಾಲು: ‘ಕಿರಾಣಿ ಅಂಗಡಿಗಳಲ್ಲಿ ಹೆಂಡ ಮಾರಾಟ ಮಾಡಲಾಗುತ್ತಿದೆ. ಮದ್ಯದ ಅಂಗಡಿ ಬಂದ್‌ ಮಾಡಿ’, ‘ಉಜ್ವಲ ಯೋಜನೆ ಯಡಿ ಗ್ಯಾಸ್ ಕಿಟ್ ವಿತರಣೆಗೆ ಏಜೆನ್ಸಿ ಯವರು ಹೆಚ್ಚಿನ ಹಣ ಕೇಳುತ್ತಿದ್ದಾರೆ’, ‘10 ವರ್ಷಗಳಿಂದ ಮನೆಮಂಜೂರು ಮಾಡುವಂತೆ ಮನವಿ ಮಾಡಿದ್ದರೂ ಮನೆ ನಿರ್ಮಿಸಿಲ್ಲ’, ‘ಪಡಿತರ ಚೀಟಿಗೆ ಅಕ್ಕಿ ಬಿಟ್ಟರೆ ಮತ್ತೇನನ್ನೂ ಕೊಡುತ್ತಿಲ್ಲ. ಚಿಮಣಿ ಬುಡ್ಡಿ ಉರಿಸಲು ಸೀಮೆ ಎಣ್ಣೆ ಕೊಡಿ’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ, ಮುಖಂಡರಾದ ಗೋಪಾಲ ಕೃಷ್ಣ ಬೇಳೂರು, ಬಿ.ಸ್ವಾಮಿ ರಾವ್, ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ ಸ್ವಾಮಿ ರಾವ್, ಪ್ರಮುಖರಾದ ಜಯಪ್ರಕಾಶ ಶೆಟ್ಟಿ, ಎ.ವಿ. ಮಲ್ಲಿಕಾರ್ಜುನ, ದೇವಾ ನಂದ್, ಗುರು ಭಟ್, ರಾಘವೇಂದ್ರ, ಬಿ.ಯುವರಾಜ, ಮಾಧ್ಯಮ ಪ್ರಮುಖ್ ತೀರ್ಥೇಶ ಅವರೂ ಹಾಜರಿದ್ದರು.

* * 

ಶಾಂತಿ ಸಂಧಾನಕ್ಕೆ ಮುಂದಾಗ ಬೇಕಿದ್ದ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್‌ ಕೋಮು ಗಲಭೆಯ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ

ಬಿ.ಎಸ್‌.ಯಡಿಯೂರಪ್ಪ,

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)